Asianet Suvarna News Asianet Suvarna News

’ಪ್ರೀಮಿಯರ್ ಪದ್ಮಿನಿ’ಯಲ್ಲಿ ಜಗ್ಗೇಶ್ ಹ್ಯಾಪಿ ಜರ್ನಿ!

50 ದಿನ ಯಶಸ್ವಿಯಾಗಿ ಪೂರೈಸಿದ ಪ್ರೀಮಿಯರ್ ಪದ್ಮಿನಿ | ಯಶಸ್ಸಿನ ಬಗ್ಗೆ ಜಗ್ಗೇಶ್ ಮಾತು | 

Premier Padmini kannada movie completes 50 days
Author
Bengaluru, First Published Jun 20, 2019, 10:34 AM IST

ಜಗ್ಗೇಶ್‌ ಅಭಿನಯ, ರಮೇಶ್‌ ಇಂದಿರಾ ನಿರ್ದೇಶನದ ‘ಪ್ರೀಮಿಯರ್‌ ಪದ್ಮಿನಿ’ ಚಿತ್ರ ಯಶಸ್ವಿ 50ನೇ ದಿನದ ಪ್ರದರ್ಶನ ಪೂರೈಸಿದೆ. ನಿರೀಕ್ಷೆಯಂತೆ ಪಕ್ಕಾ ಕೌಟುಂಬಿಕ ಚಿತ್ರವಾಗಿ ಇದು ಪ್ರೇಕ್ಷಕರ ಮನ ಗೆದ್ದಿದೆ. ಮಲ್ಟಿಪ್ಲೆಕ್ಸ್‌ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಈಗಲೂ ಅದರ ಯಶಸ್ಸಿನ ಓಟ ಮುಂದುವರೆದಿದೆ. ಚಿತ್ರದ ಯಶಸ್ಸಿನ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. 

 ಚಿತ್ರದ ಯಶಸ್ಸಿನ ಬಗ್ಗೆ ಏನು ಹೇಳ್ತೀರಿ?

ಇದರ ಕ್ರೆಡಿಟ್‌ ಕತೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಿಗೆ ಸಲ್ಲಬೇಕು. ಜೊತೆಗೆ ನಮ್ಮ ಇಡೀ ಪ್ರೇಕ್ಷಕ ವರ್ಗಕ್ಕೆ ಸಲ್ಲಬೇಕು. ನಮ್ಮ ಜನ ಒಳ್ಳೆಯದ್ದನ್ನು ಕೊಟ್ಟರೆ ಬ್ರಾಕೆಟ್‌ ತೆಗೆದು ನೋಡುತ್ತಾರೆ. ‘ಪ್ರೀಮಿಯರ್‌ ಪದ್ಮಿನಿ’ಯಲ್ಲಿ ಮಾನವೀಯ ಅಂಶಗಳು ಅಡಗಿವೆ. ಇದೇ ಕಾರಣಕ್ಕೆ ಕುಟುಂಬ ಸಮೇತರಾಗಿ ಎಲ್ಲಾ ರೀತಿಯ ಪ್ರೇಕ್ಷಕರು ಚಿತ್ರ ನೋಡಿದ್ದಾರೆ. ಮೊದ ಮೊದಲು ಹಲವಾರು ಥಿಯೇಟರ್‌ಗಳು ಒಂದೆರಡು ವಾರ ಕಳೆದ ನಂತರ ನಮ್ಮ ಚಿತ್ರವನ್ನು ತೆಗೆದು ಬೇರೆ ಚಿತ್ರಗಳನ್ನು ಹಾಕಿಕೊಂಡಿದ್ದರು. ಅದನ್ನು ಕೇಳಿ ನಮಗೂ ಬೇಸರವಾಗಿದ್ದು ನಿಜ. ಅದರೆ ಅದಾದ ಒಂದೇ ವಾರಕ್ಕೆ ಅದೇ ಥಿಯೇಟರ್‌ನವರು ನಮ್ಮ ಬಳಿಗೆ ಬಂದು ಮತ್ತೆ ಚಿತ್ರ ಬಿಡುಗಡೆಗೆ ಮುಂದಾದರು. ಇದು ನಮ್ಮ ಚಿತ್ರದ ತಾಕತ್ತು.

ಈ ರೀತಿಯ ಭಿನ್ನವಾದ ಪಾತ್ರ ಒಪ್ಪಿಕೊಳ್ಳಲು ಕಾರಣ?

ಚಿತ್ರದ ಕತೆಯನ್ನು ನಿರ್ದೇಶಕರು ರಾಘವೇಂದ್ರ ಹುಣಸೂರು ಅವರಿಗೆ ಹೇಳಿದಾಗ, ಈ ಪಾತ್ರಕ್ಕೆ ಜಗ್ಗೇಶ್‌ ಜೀವ ತುಂಬಬಲ್ಲರು ಎಂದು ಹೇಳಿದ್ದರಂತೆ. ತದ ನಂತರ ರಾಘವೇಂದ್ರ ಅವರೇ ನನ್ನೊಂದಿಗೆ ಈ ಪಾತ್ರ ಮಾಡಿ ಎಂದು ಹೇಳಿದ್ದರು. ತುಂಬಾ ಒಳ್ಳೆಯ ಕತೆ, ಪಾತ್ರ ಇದ್ದ ಕಾರಣ ಒಪ್ಪಿಕೊಂಡೆ.

ಪ್ರಾರಂಭದ ದಿನಗಳಿಂದಲೂ ನಾನು ಎಲ್ಲಾ ರೀತಿಯ ಪಾತ್ರಗಳು, ಚಿತ್ರಗಳನ್ನು ಮಾಡಿದ್ದೇನೆ. ನಮಗೆ ವಯಸ್ಸಾದ ಹಾಗೆ ನಮ್ಮ ಪಾತ್ರಗಳೂ ಬದಲಾಗಬೇಕು. ಎಲ್ಲರಿಂದಲೂ ಪ್ರೀತಿ ಗಳಿಸುವ ಪಾತ್ರ ಮಾಡಬೇಕು ಎನ್ನುವುದು ನನ್ನಾಸೆ. ‘ಪ್ರೀಮಿಯರ್‌ ಪದ್ಮಿನಿ’ ಚಿತ್ರ ಬಂದ ಮೇಲೆ ಸುಮಾರು 32 ಹೊಸ ಸ್ಕ್ರಿಪ್ಟ್ಗಳು ನನ್ನ ಬಳಿ ಬಂದಿವೆ. ಆದರೆ ಎಲ್ಲವನ್ನೂ ರಿಜೆಕ್ಟ್ ಮಾಡಿದ್ದೇನೆ. ನನ್ನ 38 ವರ್ಷದ ಸಿನಿ ಜರ್ನಿಯಲ್ಲಿ ಆಡಿಯನ್ಸ್‌ ನಾಡಿ ಮಿಡಿತ ಗೊತ್ತಾಗಿದೆ. ಅಪಾರ ಪ್ರಮಾಣದ ಸೋಷಲ್‌ ಮೀಡಿಯಾ ಸ್ನೇಹಿತರ ಮೂಲಕ ಅವರು ಏನು ಬಯಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತದೆ.

ನಿಮ್ಮ ಪಾತ್ರ ಎಲ್ಲಾ ರೀತಿಯ ಪ್ರೇಕ್ಷಕರನ್ನೂ ಸೆಳೆಯಿತು, ಇದರ ಬಗ್ಗೆ ಹೇಳುವುದಾದರೆ...

ನಾವು ಕಲಾವಿದರು ಎಲ್ಲಾ ವರ್ಗದ ಪ್ರೇಕ್ಷಕರನ್ನೂ ರಂಚಿಸಬೇಕು. ಕೆಲವರು ಕೆಲವು ವರ್ಗದ ಪ್ರೇಕ್ಷಕರಿಗೆ ಮಾತ್ರ ಸೀಮಿತವಾಗಿಬಿಡುತ್ತಾರೆ. ಆದರೆ ನನಗೆ ಮತ್ತು ಶಿವರಾಜ್‌ ಕುಮಾರ್‌ಗೆ ಮಾತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಹೊಂದುವ, ಅವರಿಗೆ ಇಷ್ಟವಾಗುವ ಪಾತ್ರಗಳನ್ನು ಮಾಡುವ ವಿಶೇಷವಾದ ಅವಕಾಶ ಸಿಕ್ಕಿದೆ.

ಇದು ನಮ್ಮ ಪುಣ್ಯ. ಒಮ್ಮೆ ಏನಾಯಿತು ಎಂದರೆ, ಯಾರೋ ಒಬ್ಬ ವಯಸ್ಸಾದವರು ನನ್ನ ಬಳಿ ಬಂದು ‘ಸರ್‌ ನಾನು 14 ವರ್ಷಗಳ ನಂತರ ಸಿನಿಮಾ ನೋಡಿದೆ. ತುಂಬಾ ಚೆನ್ನಾಗಿದೆ’ ಎಂದು ಹೇಳಿದರು. 40ರಿಂದ 70 ವರ್ಷ ವಯಸ್ಸಿನವರು ಸೀರಿಯಲ್‌ ಬಿಟ್ಟು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದರು. ಚಿತ್ರ ಫ್ಯಾಮಿಲಿಯನ್ನು ಸೆಳೆಯಿತು. ಸಿಂಗಲ್‌ ಥಿಯೇಟರ್‌ನಲ್ಲಿ ಚೆನ್ನಾಗಿ ಪ್ರದರ್ಶನ ಕಂಡಿತು. ಆದರೆ ಮಾಲ್‌ಗಳಲ್ಲಿ ಸ್ವಲ್ಪ ಕೈ ಕೊಟ್ಟಿದ್ದು ನಿಜ.

ನಿರ್ಮಾಪಕರು ಖುಷಿಯಾಗಿದ್ದಾರಾ?

ಖಂಡಿತಾ, ಪ್ರಾರಂಭದ ಒಂದೇ ವಾರದಲ್ಲಿ ಥಿಯೇಟರ್‌ನಿಂದ ನಮ್ಮ ಚಿತ್ರವನ್ನು ತೆಗೆದವರೇ ನಂತರ ಬಂದ ಒಳ್ಳೆಯ ಪ್ರತಿಕ್ರಿಯೆ ಕಂಡು ಮತ್ತೆ ಸಿನಿಮಾ ರನ್‌ ಮಾಡಿದರು. ನಮ್ಮ ಬಳಿ ಬಂದು ಮತ್ತೆ ಚಿತ್ರ ಪ್ರದರ್ಶನ ಮಾಡಲು ಅವಕಾಶ ಕೊಡಿ ಎಂದು ಕೇಳಿದಾಗ, ನೀವೇ ದುಡ್ಡು ಹಾಕಿ ಶೋ ಮಾಡುವುದಿದ್ದರೆ ಮಾಡಿ ಎಂದು ಹೇಳಿದಾಗಲೂ ಅವರೇ ದುಡ್ಡು ಹಾಕಿ ಪ್ರದರ್ಶನ ಮಾಡಿದರು. ಕಡಿಮೆ ಅವಧಿಯಲ್ಲಿಯೇ ನಿರ್ಮಾಪಕರು ಗೆದ್ದಿದ್ದಾರೆ.

ಇಲ್ಲಿ ನೀವು ಬಹುತೇಕ ಹೊಸಬರ ಜೊತೆ ಕೈ ಜೋಡಿಸಿದ್ದೀರಿ, ಈ ಬಗ್ಗೆ ನಿಮ್ಮ ಅಭಿಪ್ರಾಯ..

ಒಂದು ಮನೆತನ ಬೆಳೆಯಬೇಕು ಎಂದರೆ ತಂದೆ-ತಾಯಿಂದ ಮಾತ್ರ ಸಾಧ್ಯವಿಲ್ಲ. ಅಲ್ಲಿ ಮಕ್ಕಳು, ಮೊಮ್ಮಕ್ಕಳು ಎಲ್ಲಾ ಇರಬೇಕು. ಬದುಕು ಒಂಟಿ ಮರದ ಮೇಲೆ ಒಂಟಿ ಗೂಬೆ ಕೂತಹಾಗೆ ಆಗಬಾರದು. ಎಲ್ಲರೂ ಕೂಡಿ ಸಾಗಿದಾಗಲೇ ಸ್ವರ್ಗ. ನಮ್ಮ ಕಾಲದಲ್ಲಿ ಜನರು ಒಂದು ಬೌಂಡರಿ ಹಾಕಿಕೊಂಡಿದ್ದರು. ಅದರಂತೆಯೇ ಬದುಕು ಸಾಗುತ್ತಿತ್ತು. ಆದರೆ ಈಗ ಪ್ರಪಂಚ ತುಂಬಾ ವಿಸ್ತಾರವಾಗಿದೆ.

ಹೊಸ ಪೀಳಿಗೆಯಲ್ಲಿ ಹೊಸ ಚಿಂತನೆಗಳಿವೆ. ನಾವು ಅವರೊಂದಿಗೆ ಸಾಗಿದಾಗ ನಮ್ಮಲ್ಲೂ ಹೊಸತನ ಹುಟ್ಟಲು ಸಾಧ್ಯ. ನಮಗಿಂತ ಚಿಕ್ಕವರು ನಮಗೆ ಗುರುವಾಗುತ್ತಾರೆ. ಹೊಸದನ್ನು ಕಲಿಸುತ್ತಾರೆ. ಇದು ಯಾವಾಗ ಸಾಧ್ಯ ಎಂದರೆ ನಾವು ಹೊಸಬರೊಂದಿಗೆ ಬರೆತಾಗ. ಇಲ್ಲಿಯೂ ಹೊಸಬರು ಒಳ್ಳೆಯ ಪರಿಶ್ರಮ ಹಾಕಿದ್ದಾರೆ.

- ಕೆಂಡಪ್ರದಿ 

Follow Us:
Download App:
  • android
  • ios