ಆಧುನಿಕ ಶೈಲಿಯಲ್ಲಿ ಡ್ರಮ್‌ ಮತ್ತು ಗಿಟಾರ್‌ ಬಳಸಿಕೊಂಡು ಈ ಹಾಡನ್ನು ವಿನ್ಯಾಸಗೊಳಿಸಲಾಗಿದೆ. ಯುವಜನರು ಇಷ್ಟಪಡುವಂತೆ ರೂಪಿಸಿದ್ದು ಈ ವಿಡಿಯೋ ಹಾಡಿನ ವಿಶೇಷ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಮೂರು ಭಾಷೆಯಲ್ಲೂ ಈ ವಿಡಿಯೋ ಹಾಡು ಸಿದ್ಧವಾಗಿದೆ. ಕನ್ನಡದಲ್ಲಿ ಮತ್ತೊಮ್ಮೆ ಮೋದಿ ಎಂದಿದ್ದರೆ, ಹಿಂದಿಯಲ್ಲಿ ಪುಕಾರ್‌ ದಿಲ್‌ ಸೇ ಮೋದಿ ಮೋದಿ ಎಂಬ ಸಾಹಿತ್ಯ ಇದೆ. ಈ ಹಾಡನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಬಿಡುಗಡೆ ಮಾಡಿದ್ದಾರೆ. ಈ ತಿಂಗಳಾಂತ್ಯಕ್ಕೆ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಈ ಹಾಡು ಪ್ರಸಾರವಾಗಲಿದೆ. ಅಲ್ಲಿಯ ತನಕ ಯೂ ಟ್ಯೂಬ್‌ ಮತ್ತು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ಕೇಳಬಹುದು ಮತ್ತು ನೋಡಿ ಸವಿಯಬಹುದು.

ಈ ವಿಡಿಯೋ ಹಾಡನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ರಾಕ್‌ಶೋದಲ್ಲಿ ಇರುವ ಹಾಗೆ ಸ್ಟೇಜ್‌ ತುಂಬಾ ಹೊಗೆಯು ತುಂಬಿಕೊಂಡಿರುತ್ತದೆ. ಪ್ರಜ್ವಲಿಸುವ ಬೆಳಕಿನ ಮಧ್ಯೆ ಸಾಂಪ್ರದಾಯಿಕ ಉಡುಗೆ ತೊಟ್ಟಪ್ರಶಾಂತ್‌ ಸಂಬರಗಿ ಈ ಹಾಡನ್ನು ಪ್ರೀತಿ ಮತ್ತು ಭಾರಿ ಅಭಿಮಾನದಿಂದ ಹಾಡುವುದನ್ನು ನೀವು ನೋಡಬಹುದು.

‘ನಾನೇನು ಬಿಜೆಪಿ ಕಾರ್ಯಕರ್ತನಲ್ಲ. ಆದರೆ ನರೇಂದ್ರ ಮೋದಿಯವರ ಭಾರಿ ದೊಡ್ಡ ಅಭಿಮಾನಿ. ಆ ಅಭಿಮಾನದಿಂದಲೇ ನಾನೇ ಖರ್ಚು ಮಾಡಿಕೊಂಡು ಈ ವಿಡಿಯೋ ನಿರ್ಮಾಣ ಮಾಡಿದ್ದೇನೆ ಮತ್ತು ಹಾಡಿದ್ದೇನೆ. ನಮ್ಮ ದೇಶದ ಯುವಜನರಿಗೆ ನರೇಂದ್ರ ಮೋದಿಯವರು ಈ ದೇಶಕ್ಕೆ ಎಷ್ಟುಮುಖ್ಯ ಅನ್ನುವುದನ್ನು ಅರ್ಥ ಮಾಡಿಸುವ ಪ್ರಯತ್ನ ಇದು. ಈ ಹಾಡನ್ನು ನೋಡಿದವರು, ಕೇಳಿದವರು ಭಾರಿ ಖುಷಿ ಪಟ್ಟಿದ್ದಾರೆ. ಸಂತೋಷದ ವಿಷಯವೆಂದರೆ ಕೆಲವು ಸಂಗೀತ ನಿರ್ದೇಶಕರು ನನಗೆ ಅವರ ಸಿನಿಮಾದಲ್ಲಿ ಹಾಡಲು ಆಫರ್‌ ನೀಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ಹಾಡಿದ್ದೇನೆ ಮತ್ತು ಇದು ನನಗೆ ಸಾರ್ಥಕ ಭಾವ ನೀಡಿದೆ. ಮೋದಿಯವರ ಅದ್ಭುತ ಕೆಲಸಗಳೇ ನನ್ನನ್ನು ಈ ರೀತಿ ಮಾಡಲು ಪ್ರೇರೇಪಿಸಿದೆ’ ಎನ್ನುತ್ತಾರೆ ಪ್ರಶಾಂತ್‌ ಸಂಬರಗಿ.

ಮತ್ತೊಮ್ಮೆ ಮೋದಿ ಹಾಡಿನ ಕೆಲವು ಸಾಲುಗಳು ಇಲ್ಲಿವೆ:

ಮತ್ತೊಮ್ಮೆ ಮೋದಿ

ಭಾರತಾಂಬೆ ವರಪುತ್ರ

ಬಡವ ಬಲ್ಲಿದರಾ ಮಿತ್ರ

ಒಡೆದ ಮನಸುಗಳ ಚಿತ್ರ

ಮತ್ತೆ ಜೋಡಿಸಿದಾ ಮಿತ್ರ