ನಾನು ಯಾವ ಪಕ್ಷದ ಪರ ಅಲ್ಲ. ದೇಶದ ನಾಗರಿಕನಾಗಿ ಪ್ರಶ್ನಿಸುವ ಹಕ್ಕು ನನಗಿದೆ. ಎಲ್ಲ ಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ನಿಂದಿಸುವವರನ್ನು ಕೌಂಟರ್ ನೀಡುವುದಕ್ಕಾಗಿಯೇ ನೂರಾರು ಜನರಿಗೆ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದೆ.

ಬೆಂಗಳೂರು(ನ.12): ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನಿಲುವು ಮಂಡಿಸುತ್ತಿರುವ ಬಹುಭಾಷಾ ನಟ ಪ್ರಕಾಶ್ ರೈ ಇಂದು ಹಲವು ವಿಷಯಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಪ್ರೆಸ್'ಕ್ಲಬ್'ನಲ್ಲಿ ವರದಿಗಾರರ ಕೂಟ ಆಯೋಜಿಸಿದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯಕ್ಕೆ ಬರುವುದು ನನ್ನ ಜಂಡಾನೂ ಅಲ್ಲ ಅಜಂಡಾನೂ ಅಲ್ಲ. ಅಲ್ಲದೆ ಕಮಲ್ ಹಾಸನ್, ರಜಿನಿಕಾಂತ್, ಉಪೇಂದ್ರ, ಪವನ್ ಕಲ್ಯಾಣ್ ಯಾರೆ ಇರಲಿ ನಟರೆಂಬ ಒಂದೇ ಕಾರಣಕ್ಕೆ ರಾಜಕೀಯಕ್ಕೆ ಬರುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನಾನು ಅವರೆಲ್ಲರ ಅಭಿಮಾನಿ ಆದರೆ ರಾಜಕೀಯಕ್ಕೆ ಬಂದರೆ ಅವರ್ಯಾರಿಗೂ ಮತವನ್ನು ಹಾಕುವುದಿಲ್ಲ'. ಅವರಲ್ಲಿ ನಿಜವಾಗಿಯೂ ಬದಲಾವಣೆ ಆಗುತ್ತಾ ಎಂಬುದನ್ನು ತಿಳಿದುಕೊಂಡು ನಂತರ ಅವರ ಪರವಾಗಿ ನಿಲ್ಲುತ್ತೇನೆ' ಎಂದು ರಾಜಕೀಯದ ಬಗ್ಗೆ ಇರುವ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಎಲ್ಲವೂ ದೊರಕಿದೆಯೆಂದು ಆರಾಮದಾಯಕ ಬದುಕು ಸಲ್ಲ

ಪ್ರಕಾಶ್ ರೈ ರಂಗಭೂಮಿ ಕಲಾವಿದನಾಗಿ, ನಟನಾಗಿ, ಬಹುಭಾಷೆ ತಾರೆಯಾಗಿ ಸ್ವಲ್ಪ ಹಣ ಬಂದಮೇಲೆ ನಿರ್ಮಾಪಕನಾಗಿ,ನಿರ್ದೇಶಕನಾಗಿ,ಅಂಕಣಕಾರನಾಗಿ, ರೈತನಾಗಿ, ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದೇನೆ. ನನಗೆ ಎಲ್ಲವೂ ಬಂದ ಮೇಲೆ ಸರಕ್ಷಿತ ವಲಯಕ್ಕೆ ಹೋಗುವುದು ನಿಜವಾಗಿಯೂ ಬದುಕ್ಕಿದ್ದು ಸತ್ತಂತೆ. ನನಗೆ ಇಷ್ಟೆಲ್ಲವನ್ನು ನೀಡಿದ ಸಮಾಜಕ್ಕೆ ನಾನು ನೀಡಲೇಬೇಕು. ಅದು ನಮ್ಮ ಕರ್ತವ್ಯ.

ಬೇರೆಯವರನ್ನು ಮೆಚ್ಚಿಸಲು ನಾನು ಬದುಕುತ್ತಿಲ್ಲ

ನನಗೆ ನನ್ನ ಪ್ರಾಮಾಣಿಕತೆ ಮುಖ್ಯ ಬೇರೆಯವರನ್ನು ಮೆಚ್ಚಿಸಲು ಬದುಕುತ್ತಿಲ್ಲ.ನಿಮ್ಮನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಿಂದಿಸುವವರನ್ನು ಏಕೆ ಬ್ಲ್ಯಾಕ್ ಮಾಡಲ್ಲ' ಎಂದು ನನಗೆ ಆಪ್ತರಾದವರು ಕೇಳುತ್ತಾರೆ. ಕೇವಲ ನನ್ನನ್ನು ಇಷ್ಟಪಡುವವರನ್ನು, ಹೊಗಳುವವರು ಮಾತ್ರ ಜೊತೆಯಿದ್ದರೆ ಸಮಸ್ಯೆ ಅರ್ಥವಾಗುವುದಿಲ್ಲ. ಎಲ್ಲರ ಜೊತೆಯಿದ್ದರೆ ಸಮಸ್ಯೆ ಅರ್ಥವಾಗುತ್ತದೆ. ಸತ್ಯವನ್ನು ಹೇಳಲು, ಪ್ರಶ್ನೆ ಮಾಡಲು ನಾನು ಯಾರಿಗೂ ಹೆದರುವುದಿಲ್ಲ. ನಾನು ಯಾವ ಪಕ್ಷದ ಪರ ಅಲ್ಲ. ದೇಶದ ನಾಗರಿಕನಾಗಿ ಪ್ರಶ್ನಿಸುವ ಹಕ್ಕು ನನಗಿದೆ. ಎಲ್ಲ ಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ನಿಂದಿಸುವವರನ್ನು ಕೌಂಟರ್ ನೀಡುವುದಕ್ಕಾಗಿಯೇ ನೂರಾರು ಜನರಿಗೆ ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದೆ.

ಕಾವೇರಿ ಬಗ್ಗೆ ಮಾತು

ಕನ್ನಡಿಗರು ತಮಿಳರನ್ನು ಹೊಡೆಯುವುದು, ತಮಿಳರು ಕನ್ನಡಿಗರಿಗೆ ತೊಂದರೆ ಕೊಡುವುದರಿಂದ ಕಾವೇರಿ ವಿವಾದ ಬಗೆಹರಿಯುವುದಿಲ್ಲ. ರೈತರ್ಯಾರು ಸಾಮಾನ್ಯರಿಗೆ ತೊಂದರೆ ಕೊಡುವುದಿಲ್ಲ. ರೈತರಿಗೆ ನೀರಿನಿಂದ ಮಾತ್ರವಲ್ಲ ಅವರು ಬೆಳೆದ ಬೆಳೆಯಿಂದ ಹಿಡಿದು ಪ್ರತಿಯೊಂದು ಹಂತದಲ್ಲಿಯೂ ತೊಂದರೆಯಾಗುತ್ತಿದೆ. ಯಾವ ರಾಜಕಾರಣಿಗಳು ಇವರ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ನಿಜವಾಗಿ ಅವರು ಶೋಷಣೆಗೊಳಗಾಗುತ್ತಿದ್ದಾರೆ.

ಎಲ್ಲ ಸರ್ಕಾರಗಳಿಂದ ತೊಂದರೆಯಾಗಿದೆ

ಈಗ ಅಧಿಕಾರ ನಡೆಸುತ್ತಿರುವ ಸರ್ಕಾರ ಮಾತ್ರವಲ್ಲ ಹಿಂದೆ ಆಡಳಿತ ನಡೆಸಿದ ಸರ್ಕಾರಗಳಿಂದಲೂ ಜನರಿಗೆ ತೊಂದರೆಯಾಗಿದೆ. ಇದು ಗೊತ್ತಿರುವ ವಿಷಯ. ಆದರೆ ಈಗಿನ ಕೇಂದ್ರ ಸರ್ಕಾರದ ನಡೆಯಿಂದ ಭಯದ ವಾತವಾರಣ ನಿರ್ಮಾಣವಾಗುತ್ತಿದೆ. ಅಸಹಿಷ್ಣುತೆ ಹೆಚ್ಚಾಗುತ್ತಿದೆ.

ಕೊನೆ ಉಸಿರಿರುವರೆಗೂ ಸಿನಿಮಾ

ಸಿನಿಮಾ ನನ್ನ ಉಸಿರು. ಕೊನೆ ಉಸಿರಿರುವರೆಗೂ ಅದನ್ನು ನಿಲ್ಲಿಸುವುದಿಲ್ಲ. ಸಿನಿಮಾ ನನಗೆ ಎಲ್ಲವನ್ನು ಕೊಟ್ಟಿದೆ. ಮುಂದಿನ ದಿನಗಳಲ್ಲೂ ನಟಿಸುತ್ತೇನೆ, ನಿರ್ಮಿಸುತ್ತೇನೆ ಹಾಗೂ ನಿರ್ದೇಶಿಸುತ್ತೇನೆ.