ಪೊಲೀಸ್ ಪಾತ್ರದಲ್ಲಿ ನಟಿಸಲು ಅಪ್ಪನೇ ಸ್ಫೂರ್ತಿ: ಪ್ರಜ್ವಲ್ ದೇವರಾಜ್

Prajwal Devraj takes inspiration from father for Police role
Highlights

ಅಪ್ಪ ಖಾಕಿ ಬಟ್ಟೆ ತೊಟ್ಟು ಮಾಡಿದ ಸಿನಿಮಾಗಳನ್ನು ನೋಡಿದ್ದೇನೆ. ಅವರ ಆ ಖಾಕಿ ಚಿತ್ರಗಳೇ ನನಗೆ ಪ್ರೇರಣೆಯಾಗಿ ಕಂಡವು...

- ಹೀಗೆ ಹೇಳಿಕೊಂಡಿದ್ದು ಪ್ರಜ್ವಲ್ ದೇವರಾಜ್. ಅದಕ್ಕೆ ಕಾರಣ ‘ಇನ್‌ಸ್ಪೆಕ್ಟರ್ ವಿಕ್ರಂ’.

ಚಿತ್ರರಂಗದಲ್ಲಿ ಖಡಕ್ ಪೊಲೀಸ್ ಅಂದ್ರೆ ಎಲ್ಲರಿಗೂ ಬಹು ಬೇಗ ನೆನಪಾಗುವ ಹೆಸರು ದೇವರಾಜ್. ಹೀಗಾಗಿ ಅವರ ಪುತ್ರ ಕೂಡ ಖಾಕಿ ತೊಟ್ಟು ನಟಿಸುತ್ತಿರುವ ಹೊತ್ತಿನಲ್ಲಿ ತಮ್ಮ ತಂದೆಯೇ ಆ ದಿನಗಳ ಪೊಲೀಸ್ ಸಿನಿಮಾಗಳನ್ನು ನೆನಪಿಸಿಕೊಂಡರು. ಅದು ಇತ್ತೀಚೆಗಷ್ಟೆ ನಡೆದ ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರದ ಟೀಸರ್ ಬಿಡುಗಡೆಯ ಕಾರ್ಯಕ್ರಮ. ಪ್ರಜ್ವಲ್ ಹುಟ್ಟು ಹಬ್ಬದ ನೆನಪಿನಲ್ಲಿ ಒಂದು ದಿನ ಮೊದಲೇ ಅನಾವರಣಗೊಂಡ ಟೀಸರ್ನಲ್ಲಿ ಪ್ರಜ್ವಲ್, ರಗಡ್ ಆಗಿ ಕಾಣಿಸುತ್ತಿದ್ದಾರೆ. ಜತೆಗೆ ಗಾಂಧಿನಗರ ಪೊಲೀಸ್ ಸ್ಟೇಷನ್‌ಗೆ ಹೊಸ ಖಾಕಿ ಬಂದಷ್ಟು ಹೊಸತನ ಇದೆ. ಚಿತ್ರದ ಟೀಸರ್ ಬಿಡುಗಡೆ, ಪ್ರಜ್ವಲ್ ಹುಟ್ಟು ಹಬ್ಬ ಈ ಎಲ್ಲ ಕಾರಣಗಳೊಂದಿಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಆಗ ಮಾತಿಗೆ ನಿಂತವರು ಪ್ರಜ್ವಲ್.

‘ನನ್ನ ತಂದೆ ಸಾಕಷ್ಟು ಸಿನಿಮಾಗಳಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಖಡಕ್ ಪೊಲೀಸ್ ಅಂದರೆ ನೆನಪಾಗುವುದು ಅವರ ಹೆಸರೇ. ನಾನು ಕೂಡ ಪೊಲೀಸ್ ಪಾತ್ರ ಮಾಡುವುದಕ್ಕೆ ನನ್ನ ತಂದೆಯೇ ಸ್ಫೂರ್ತಿ. ಹೀಗಾಗಿ ನನ್ನ ಪಾತ್ರ ಮತ್ತು ಈ ಚಿತ್ರದ ಮೇಲೆ ಅವರ ಆಶೀರ್ವಾದ ಇರುತ್ತದೆ’ ಎನ್ನುವ ಭರವಸೆ ವ್ಯಕ್ತಪಡಿಸಿದರು ಪ್ರಜ್ವಲ್ ದೇವರಾಜ್. ಈ ಚಿತ್ರಕ್ಕೆ ಸಂಗೀತ ನೀಡಿರುವ ಅನೂಪ್ ಸೀಳಿನ್, ಭಿನ್ನ ರೀತಿಯ ಪ್ರಯತ್ನದ ಸಿನಿಮಾ ಇದು ಎಂದರು.

ಎಆರ್ ವಿಖ್ಯಾತ್ ತಂಡ ನಿರ್ಮಾಣದ ಈ ಚಿತ್ರಕ್ಕೆ ನರಸಿಂಹ ನಿರ್ದೇಶಕರು. ಇವರು ಕಾಶಿನಾಥ್ ಬಳಿ ಕೆಲಸ ಮಾಡಿದವರು. ವೇದಿಕೆ ಮೇಲೆ ಮಾತನಾಡಲು ಬಂದ ನರಸಿಂಹ ಗುರುಗಳನ್ನು ನೆನೆದು ಒಂದು ಕ್ಷಣ ಭಾವುಕರಾದರು. ‘ಇದೊಂದು ಮಾಸ್ ಮನರಂಜನೆಯ ಸಿನಿಮಾ. ಈ ಚಿತ್ರಕ್ಕೂ ಶಿವರಾಜ್ ಕುಮಾರ್ ಅವರ ಆ ವಿಕ್ರಂ ಪೊಲೀಸ್‌ಗೂ ಯಾವುದೇ ಸಂಬಂಧವಿಲ್ಲ. ಪ್ರಜ್ವಲ್ ದೇವರಾಜ್ ಈ ಜನರೇಷನ್ನ ಪೊಲೀಸ್. ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕತೆ ಹೊಸ ರೀತಿಯಲ್ಲಿದೆ. ಪ್ರಜ್ವಲ್ ಹಾಗೂ ಭಾವನಾ ಜೋಡಿ ಕತೆಗೆ ಸೂಕ್ತವಾಗಿದೆ’ ಎಂದರು ನರಸಿಂಹ. ಬೆಂಗಳೂರು ಮತ್ತು ಗೋಕರ್ಣದಲ್ಲೇ ಚಿತ್ರದ ಅರ್ಧ ಭಾಗ ಶೂಟಿಂಗ್ ಮುಗಿದಿದ್ದು, ನವೀನ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ?

loader