ಪ್ಲೀಸ್ ಓಟ್ ದಾನೀಶ್ ಸೇಟ್ !

Please Vote Danish Sait
Highlights

ಹೆಸರಿನಿಂದ ಕೆಲಸ ಆಗಲ್ಲ, ಕೆಲಸದಿಂದ ಹೆಸರು ಆಗತ್ತೆ! ಅಷ್ಟು ಹೇಳಿ ಸುಮ್ಮನಾದರು ದಾನಿಶ್ ಸೇಟ್. ಅವರ ಹೆಸರು ಡ್ಯಾನಿಶ್ಶೋ ಡೇನಿಶ್ಶೋ ದಾನಿಶ್ಯೋ ಅಂತ ಇನ್ನೂ ಗುಮಾನಿ. ಎಸ್‌ಎಐಟಿ ಅನ್ನೋದನ್ನು ಶೇಟ್ ಅನ್ನಬೇಕಾ, ಶೇಠ್ ಅನ್ನಬೇಕಾ, ಸೇಟ್ ಅನ್ನಬೇಕಾ ಗುಮಾನಿ. ಈ ಹೆಸರಿನಿಂದಲೇ ನಮಗೆ ಸಾಕಷ್ಟು ಕೆಲಸ ಆಗಿದ್ದು ಸುಳ್ಳಲ್ಲ.

ಬೆಂಗಳೂರು (ಜ.12): ಹೆಸರಿನಿಂದ ಕೆಲಸ ಆಗಲ್ಲ, ಕೆಲಸದಿಂದ ಹೆಸರು ಆಗತ್ತೆ! ಅಷ್ಟು ಹೇಳಿ ಸುಮ್ಮನಾದರು ದಾನಿಶ್ ಸೇಟ್. ಅವರ ಹೆಸರು ಡ್ಯಾನಿಶ್ಶೋ ಡೇನಿಶ್ಶೋ ದಾನಿಶ್ಯೋ ಅಂತ ಇನ್ನೂ ಗುಮಾನಿ. ಎಸ್‌ಎಐಟಿ ಅನ್ನೋದನ್ನು ಶೇಟ್ ಅನ್ನಬೇಕಾ, ಶೇಠ್ ಅನ್ನಬೇಕಾ, ಸೇಟ್ ಅನ್ನಬೇಕಾ ಗುಮಾನಿ. ಈ ಹೆಸರಿನಿಂದಲೇ ನಮಗೆ ಸಾಕಷ್ಟು ಕೆಲಸ ಆಗಿದ್ದು ಸುಳ್ಳಲ್ಲ.

ಇದ್ದಕ್ಕಿದ್ದಂತೆ ಕನ್ನಡ ಚಿತ್ರೋದ್ಯಮದಲ್ಲಿ ಒಂದು ಸಣ್ಣ ಸಂಚಲನ ಮೂಡಿಸಿದವರು ದಾನಿಶ್ ಸೇಟ್. ಕೋಹ್ಲಿ ಮತ್ತು ಅನುಷ್ಕಾ ತಮ್ಮ  ಮದುವೆಗೆ ಮೋದಿಯನ್ನು ಕರೆಯುವ ಫೋಟೋವನ್ನು ದಾನಿಶ್ ಸೇಟ್ ಬದಲಾಯಿಸಿ ತಮಗೇ ಕೊಡುವಂತೆ ಹಾಕಿಕೊಂಡಾಗ, ಮಂದಿ ಇದ್ದರೂ ಇರಬಹುದೇನೋ ಅಂದುಕೊಂಡರು. ಅದು ಫೇಕ್ ಅಂತ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು. ದಾನಿಶ್ ಸೇಟ್ ಇದ್ದಕ್ಕಿದ್ದಂತೆ ಉದ್ಭವವಾದರೇನೂ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರ ಹವಾ ಬಹಳ ದಿನಗಳಿಂದಲೇ ಇತ್ತು. ಎಮ್ಸೀ, ಸ್ಟಾಂಡಪ್ ಕಾಮಿಡಿ, ಪ್ರಾಂಕ್ ಕಾಲ್, ಪೊಲಿಟಿಕಲ್ ಸಟೈರ್, ನಿರೂಪಣೆ ಇತ್ಯಾದಿ ಮಾಡಿಕೊಂಡು ಸುಖವಾಗಿದ್ದ ದಾನಿಶ್ ಸೇಟ್, ಸಿನಿಮಾದಲ್ಲಿ ನಟಿಸ್ತಾರಂತೆ ಅನ್ನೋ ಸುದ್ದಿಯಾದದ್ದು ವರುಷದ ಕೆಳಗೆ. ಅದಾದ ಮೇಲೆ ಮೊನ್ನೆ ಮೊನ್ನೆ ನೋಡಿದರೆ ಅವರು  ನಟಿಸುತ್ತಿರುವ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಚಿತ್ರದ ಟ್ರೇಲರ್ ಹತ್ತು ಲಕ್ಷ ಮಂದಿ ನೋಡಿದ್ದಾರೆಂಬುದು ಗೊತ್ತಾಯಿತು.

ಸೂಪರ್‌'ಸ್ಟಾರುಗಳೇ ಹತ್ತು ಲಕ್ಷಕ್ಕೆ ಪರದಾಡುತ್ತಿರುವ ಹೊತ್ತಲ್ಲಿ, ಈ ನೋಗರಾಜ್ ಅದ್ಹೆಂಗೆ ಹಿಂಗಾದರು ಅಂತ ಗಾಂಧೀನಗರ ತಲೆಕೆರೆದುಕೊಂಡಿರಬಹುದು! ದಾನಿಶ್ ಸೇಟ್ ಬುದ್ಧಿವಂತ. ಜಾಣತನದ ಜೊತೆ ತಮಾಷೆ ಬೆರೆತರೆ ಏನಾಗುತ್ತದೆ ಅನ್ನುವುದು ಅವರಿಗೂ ಚೆನ್ನಾಗಿ ಗೊತ್ತು. ಅವರು ಸೃಷ್ಟಿಮಾಡಿರೋ ನೋಗರಾಜ್ ಎಂಥಾ ತಮಾಷೆಯ ಮನುಷ್ಯನೆಂದರೆ  ವಡೆಯನ್ನು ಸೌತ್ ಇಂಡಿಯನ್ ಡೋನಟ್ ಅನ್ನುತ್ತಾನೆ. ಅಲ್ಲಿಗೆ ಮಲ್ಟಿಪ್ಲೆಕ್ಸ್  ಪ್ರೇಕ್ಷಕರಿಗೂ ನೋಗರಾಜ್ ಪ್ರಿಯನಾಗುತ್ತಾನೆ.

‘ನಮ್ಮಲ್ಲಿ ಆ್ಯಕ್ಟಿಂಗು, ಓವರ್ ಆ್ಯಕ್ಟಿಂಗು ಇಲ್ಲ. ಬರೀ ರಿಯಾಕ್ಟಿಂಗ್ ಮಾತ್ರ ಇರುತ್ತೆ. ಇದೊಂಥರ ಬೇರೆ ರೀತಿಯ ಕಾಮಿಡಿ. ಇಲ್ಲಿ ಕತೆ ಮುಖ್ಯ. ನಾನು ಮಾತಾಡುವ ಶೈಲಿಯಲ್ಲೋ, ವಕ್ರವಕ್ರವಾಗಿ ವರ್ತಿಸುವುದರಲ್ಲೋ ನಗು ಹುಟ್ಟಿಸಲು  ನೋಡುತ್ತಿಲ್ಲ. ಪರಿಸ್ಥಿತಿಯೇ ತಮಾಷೆಯಾಗಿರುತ್ತದೆ. ಡೆಲ್ಲಿಬೆಲ್ಲಿ ಥರದ ಕಾಮಿಡಿ ಇದು. ಗೋಲ್‌'ಮಾಲ್ ಶೈಲಿಯದ್ದಲ್ಲ. ಯಾಕೆಂದರೆ ನಾನು ನ್ಯೂಯಾರ್ಕ್ ಕಾಮಿಡಿ ಸ್ಕೂಲಲ್ಲಿ ಓದಿದವನು. ನಮ್ಮಲ್ಲಿ ಸಾಮಾನ್ಯವಾಗಿ ಐಡಿಯಾ ಚೆನ್ನಾಗಿರುತ್ತೆ, ಪ್ರೆಸೆಂಟೇಶನ್ ತೋಪಾಗುತ್ತೆ. ಪ್ರದರ್ಶನವೂ ತಮಾಷೆಯಾಗಿದ್ದಾಗಲೇ ಹಾಸ್ಯ ಗೆಲ್ಲೋದು.’ ಹೀಗೆ ಗಂಭೀರವಾಗಿ ಮಾತಾಡುತ್ತಲೇ ದಾನಿಶ್ ಸಿನಿಮಾದ ಕತೆಯನ್ನು ಒಂಚೂರು ತೆರೆದಿಡುತ್ತಾರೆ.

ಎರಡು ಪ್ಯಾರಲಲ್ ಜಗತ್ತಿಗೂ ಸಲ್ಲುವವನು ನೋಗರಾಜ್. ಪಾಪ್ ಸಂಸ್ಕೃತಿಯಲ್ಲಿ ನಾನು ಅವನನ್ನು ನಿಲ್ಲಿಸಲು ಯತ್ನಿಸಿದ್ದೇನೆ. ಪಾತ್ರಗಳಿಗಿಂತ ಬಲವಾದ ಕಂಟೆಂಟ್ ಇದ್ದಾಗಲೇ ಇಂಥ ಸಿನಿಮಾಗಳಿಗೆ ಅನುಕೂಲ. ಹಾಗೆ ನೋಡಿದರೆ ನೋಗರಾಜ್ ಒಂದು ಪೊಲಿಟಿಕಲ್ ಸಟೈರ್. ಅದೇ ಹೊತ್ತಿಗೆ ಅದು ಪೊಲಿಟಿಕಲೀ ರೈಟ್ ಕೂಡ. ಇಲ್ಲಿ ಯಾರನ್ನೂ ಬೈಯುವ ದೃಶ್ಯಗಳಿಲ್ಲ. ಆದರೆ ಮತದಾರರಿಗೆ ಒಂದು ಸೂಚನೆ ಇದೆ. ನಮ್ಮ ಜೀವನದಲ್ಲಿ ನಮಗೇನು ಬೇಕು ಅನ್ನೋದು ನಮಗೆ ಗೊತ್ತಿಲ್ಲದೇ ಹೋದರೂ ಚಿಂತೆಯಿಲ್ಲ. ನಮಗೇನು ಬೇಡ ಅನ್ನೋದು ಮಾತ್ರ ಸ್ಪಷ್ಟವಾಗಿ ಗೊತ್ತಿರಬೇಕು. ಇದು ದಾನಿಶ್ ಜೀವನದ ಸೂತ್ರ. ಸಿನಿಮಾದ ಸೂತ್ರವೂ ಅದೇ. ಮತದಾರನಿಗೆ ತಾನು ಯಾರಿಗೆ ಮತ ಹಾಕಬಾರದು ಅಂತ ಗೊತ್ತಿದ್ದರೆ ಸಾಕು. ನೋಗರಾಜ್ ಅಂಥದ್ದೊಂದು ಪಾತ್ರ. ಆತ ಖಳನಾಯಕ. ಆದರೆ ಪ್ರೇಕ್ಷಕರು ಚಿತ್ರದುದ್ದಕ್ಕೂ ಅವನ ಪರವಾಗಿಯೇ ಇರುತ್ತಾರೆ. ಕೊನೆಯಲ್ಲಿ ಅಯ್ಯೋ, ಎಂಥಾ ದುರುಳನನ್ನು ನಾವು ಬೆಂಬಲಿಸಿದೆವು ಅಂದ್ಕೋತಾರೆ. ನಿಜ ಜೀವನದ  ರಾಜಕಾರಣದಲ್ಲಿ ಆಗುತ್ತಿರುವುದೂ ಅದೇ ತಾನೇ!

ದಾನಿಶ್ ಸೇಟ್ ಯಾರು?: ನನ್ನದೇ ಶ್ರಮದ ಫಲ ಅಂತಾರೆ ಅವರು. ನನ್ನನ್ನು ಯಾರೋ  ಹುಟ್ಟುಹಾಕಿಲ್ಲ, ನಾನೇ ಕಷ್ಟಪಟ್ಟು ಬೆಳೆದವನು. ಪ್ರತಿಯೊಂದು ಸಿನಿಮಾದಲ್ಲೂ ಮೂರು ‘ಇ’  ಇರಬೇಕು. ಎನ್‌'ರಿಚ್, ಎಂಗೇಜ್, ಎಂಟರ್‌ಟೇನ್. ನಾನು ನೋಡೋದು ಅಂಥದ್ದನ್ನೇ. ಅದಕ್ಕೇ  ನಾನು ಡಾಕ್ಯುಮೆಂಟರಿ ನೋಡ್ತೀನಿ. ಮಾಮೂಲಿ ಲವ್‌ಸ್ಟೋರಿಗಳಲ್ಲಿ ನನಗೆ ಆಸಕ್ತಿಯೇ ಇಲ್ಲ  ಅನ್ನೋದು ದಾನಿಶ್ ಪಾಲಿಸಿ

ಕರ್ನಾಟಕ ಹೇಗಿದೆ!: ಚಿತ್ರೋದ್ಯಮಿಗೆ ಇದಕ್ಕಿಂತ ಒಳ್ಳೆಯ ಜಾಗವೇ ಇಲ್ಲ. ಇಲ್ಲಿರೋದು ಮುಕ್ತ  ಮಾರುಕಟ್ಟೆ. ಇಲ್ಲಿ ಸೂಪರ್‌ಸ್ಟಾರುಗಳ ಸಿನಿಮಾ ಗೆಲ್ಲುತ್ತೆ. ಹಾಗೆಯೇ ಬುದ್ಧಿವಂತ ಪ್ರೇಕ್ಷಕರೂ ಇದ್ದಾರೆ. ಹೀಗಾಗಿ ನಮ್ಮಂಥ ಹೊಸಬರಿಗೂ ಅವಕಾಶ ಉಂಟು. ಇಂಥ ಓಪನ್ ಸ್ಪೇಸ್ ಮತ್ತೆಲ್ಲೂ ಇಲ್ಲ ಅನ್ನೋದು ದಾನಿಶ್ ಜ್ಞಾನ!

ದಾನಿಶ್ ಸೇಟ್ ಟ್ರೈಲರ್ ಬಂದಾಗ ಬಾಲಿವುಡ್ ಸ್ಟಾರುಗಳೆಲ್ಲ ಟ್ವೀಟ್ ಮಾಡಿದರು. ಅದರಿಂದ ನೆರವಾಯಿತಾ?

ಆಗಿದೆ. ವಿರಾಟ್ ಕೋಹ್ಲಿ, ರಾಣಾ ದಗ್ಗುಬಾಟಿ- ಮುಂತಾದವರೆಲ್ಲ ಟ್ವೀಟ್ ಮಾಡಿದ್ದರಿಂದ ಒಂದಿಪ್ಪತ್ತು ಪರ್ಸೆಂಟ್ ಮಂದಿ ಹೆಚ್ಚು ನೋಡಿರಬಹುದು. ಆದರೆ ಟ್ರೇಲರ್‌ನ ಜನ ನೋಡಿದ್ದು ಅದರ ಕಂಟೆಂಟಿನಿಂದ. ಅವರೆಲ್ಲರಿಗೂ ನನ್ನ ಗೌರವಾರ್ಪಣೆ, ಆದರೆ ಮೆರಿಟ್ ಕೂಡ ಇದೆ ಅನ್ನೋದು ನನ್ನ ಅಭಿಪ್ರಾಯ. ಕಂಟೆಂಟು ಚೆನ್ನಾಗಿದ್ದಾಗಲೇ ಮಿಕ್ಕಿದ್ದೆಲ್ಲ ಕೆಲಸ ಮಾಡೋದು. ನಾವು ಯಾವುದನ್ನೂ ಹೈಪ್ ಮಾಡಿಲ್ಲ. ಪ್ರತಿಯೊಂದು ಲೈಕು ಮತ್ತು ವ್ಯೆ ಕೂಡ ಅಪ್ಪಟ ಆರ್ಗಾನಿಕ್ ಅನ್ನೋದು ದಾನಿಶ್ ಆತ್ಮ ವಿಶ್ವಾಸ. ನೋಗರಾಜ್ ಎದುರಿಸಿದ ತಮಾಷೆ ಪ್ರಸಂಗವೊಂದನ್ನು ದಾನಿಶ್ ನೆನಪಿಸಿಕೊಂಡರು. ಯಾವುದೋ ಒಂದು ಟಿವಿ ಷೋಗೆ ನೋಗರಾಜ್ ವೇಷದಲ್ಲೇ ದಾನಿಶ್ ಹೋಗಿದ್ದರಂತೆ. ಅವರನ್ನು ನೋಡುತ್ತಿದ್ದಂತೆ ಸೆಕ್ಯುರಿಟಿ ಸೆಲ್ಯೂಟ್ ಹೊಡೆದು ಒಳಗೆ ಕಳುಹಿಸಿಕೊಟ್ಟ. ಅದಾದ ನಂತರ, ಆ ವೇಷ ಕಳಚಿ ದಾನಿಶ್ ಆಗಿ ಹೋದಾಗ ಅವನು ಒಳಗೆ ಬಿಡೋಲ್ಲ ಅಂತ ಗಲಾಟೆ ಮಾಡಿದನಂತೆ. ನಾನೇ ಅವನು ಮಾರಾಯ ಅಂತ ಕನ್ವಿನ್ಸು ಮಾಡೋದರಲ್ಲಿ ಸಾಕಾಯಿತು. ಈ ರಾಜಕಾರಣಿ ವೇಷಕ್ಕೆ ವಿಪರೀತ ಮರ್ಯಾದೆ ಅಂತ ದಾನಿಶ್ ನಕ್ಕರು.

ಸಿನಿಮಾ ಮುಗಿಯುತ್ತಿದ್ದಂತೆ ಐಪಿಎಲ್ ಶುರು. ಅದಕ್ಕೂ ಮುಂಚೆ ಒಂದು ಹಾಲಿಡೇ. ಆಮೇಲೆ ಅವಕಾಶ ಸಿಕ್ಕರೆ ಒಂದು ಸಿನಿಮಾ. ನಿರ್ದೇಶನ ಮಾಡೋ ಆಸೆಯೇ ಇಲ್ಲ. ಜೀವನದಲ್ಲಿ ಮ್ಯಾರಾಥಾನ್ ಓಟಗಾರನೋ ಪರ್ವತಾರೋಹಿಯೋ ಇರೋ ಥರ ಇರೋ ಆಸೆ ಅವರಿಗೆ. ಯಾಕೆಂದರೆ ಎವರೆಸ್ಟ್ ಹತ್ತಿದಾಗ ಎಲ್ಲರಿಗೂ ಹತ್ತಿದೆವು ಅನ್ನೋ ಸಂತೋಷ ಇರುತ್ತೆ. ಅಲ್ಲಿ ಸೋಲು ಗೆಲುವು ಇರಲ್ಲ, ಬರೀ ಸಾರ್ಥಕತೆ. ಅದೇ ನೂರು ಮೀಟರ್ ಓಟದಲ್ಲಾದರೆ ಒಬ್ಬ ಗೆಲ್ಲುತ್ತಾನೆ ಮತ್ತೊಬ್ಬ ಸೋಲುತ್ತಾನೆ. ಹೀಗಾಗಿ ಮ್ಯಾರಥಾನ್ ಓಟದಲ್ಲೇ ಹೆಚ್ಚು ಆಸಕ್ತಿ. ಇದು ದಾನಿಶ್ ಸಿದ್ಧಾಂತ.

ಮುಂದೇನು ಮಾಡ್ತಾರೆ ದಾನಿಶ್: ಅವರ ರೋಲ್‌ಮಾಡೆಲ್ ಅಂದರೆ ಟೀಚರ್. ಮಕ್ಕಳಿಗೆ ಪಾಠ ಮಾಡೋ ಆಶೆಯಿದೆ. ನಿರ್ದೇಶನ ಯಾವತ್ತೂ ಇಷ್ಟವಿಲ್ಲ. ಸಂತೋಷವಾಗಿರೋದು ಮೊದಲ ಗುರಿ. ಡಾನಿಶ್ ತಮಾಷೆಯ ಗಾಂಭೀರ್ಯದ ಘನತೆಯ ಹುಡುಗಾಟಿಕೆಯ ಜೀವನೋತ್ಸಾಹದ 29 ರ ಹುಡುಗ. ನೋಗರಾಜ್ ಅವರೊಳಗಿನ ತರಲೆ ರಾಜಕಾರಣಿ. ಇಬ್ಬರಲ್ಲಿ ಯಾರು ಗೆದ್ದರೂ ದಾನಿಶ್‌ಗೆ ಗೆಲುವು.

-ಜೋಗಿ

 

loader