ಎಲ್ಲಿ ನೋಡಿದರಲ್ಲಿ ಪಾಪ ಪಾಂಡು
ಒಂದು ಕಾಲದಲ್ಲಿ ಕನ್ನಡದ ಟಿವಿ ನೋಡುಗರನ್ನು ನಕ್ಕು ನಲಿಸಿದ್ದ ಪಾಪ ಪಾಂಡು ಧಾರಾವಾಹಿ ಮತ್ತೆ ಶುರುವಾಗಿದೆ. ಜುಲೈ ೨ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ರಾತ್ರಿ ೧೦ ಗಂಟೆಗೆ ಕಲರ್ಸ್ ಸೂಪರ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ಈ ಪಾಪ ಪಾಂಡು ಮತ್ತೆ ಮನೆಮನೆಗೆ ಬರುತ್ತಿರುವ ಸಂದರ್ಭದಲ್ಲಿ ಕಲರ್ಸ್ ಸೂಪರ್ ವಾಹಿನಿ ಹೊಸ ಬಗೆಯ ಪ್ರಮೋಷನ್ ತಂತ್ರವನ್ನು ಅವಲಂಬಿ ಸಿತು. ಆ ಪ್ರಮೋಷನ್ ತಂತ್ರದ ಹೆಸರು ‘ಹ್ಯೂಮನ್ ಬ್ಯಾನರ್’. ಹೇಳಿಕೇಳಿ ಪಾಪ ಪಾಂಡು ಧಾರಾವಾಹಿಯ ಪಾಂಡು ಪತ್ನಿಯಿಂದ ಪೆಟ್ಟು ತನ್ನುವುದಕ್ಕೆ ಫೇಮಸ್ಸು. ಹೀಗಾಗಿ ಹಣೆಯಲ್ಲಿ ಗಾಯಗೊಂಡು ಬ್ಯಾಂಡೇಜ್ ಧರಿಸಿದ ಪಾಂಡುವಿನ ಮುಖವಾಡ ಧರಿಸಿದ ಮಂದಿ ಜನನಿಬಿಡ ಸ್ಥಳಗಳಲ್ಲಿ ಕಳೆದ ವಾರಾಂತ್ಯಕ್ಕೆ ಓಡಾಡುತ್ತಿದ್ದರು.
ರಾಜ್ಯದ ಸುಮಾರು ೨೦೪ ಕಡೆಗಳಲ್ಲಿ ಈ ಪಾಪ ಪಾಂಡು ಮುಖವಾಡಧಾರಿಗಳು ಕಾಣಿಸಿಕೊಂಡಿದ್ದರು. ಜನರು ಕುತೂಹಲದಿಂದ ಬಂದು ಈ ಡೂಪ್ಲಿಕೇಟ್ ಪಾಂಡುವಿನ ಜೊತೆ ನಿಂತು ಸೆಲ್ಫೀ ಹೊಡೆಸಿಕೊಂಡರು. ಕಷ್ಟಸುಖ ವಿಚಾರಿಸಿದರು. ಬಂದವರಿಗೆಲ್ಲಾ ಆತ ಪಾಪ ಪಾಂಡು ಧಾರಾವಾಹಿಯ ಬಗೆಗಿನ ಮಾಹಿತಿ ಇರುವ ಕರಪತ್ರ ಹಂಚುತ್ತಿದ್ದ. ಈ ವಿನೂತನ ಬಗೆಯ ಪ್ರಮೋಷನ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಧಾರಾವಾಹಿಯನ್ನು ಸಿಹಿಕಹಿ ಚಂದ್ರು ನಿರ್ದೇಶಿಸುತ್ತಿದ್ದಾರೆ. ಚಿದಾನಂದ, ಶಾಲಿನಿ, ಅಂಜನ್, ನಂದನ, ಕುಲಕರ್ಣಿ, ಶ್ರುತಿ ಅಭಿನಯಿಸುತ್ತಿದ್ದಾರೆ.