ವಾಷಿಂಗ್ಟನ್: ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಗೆಳೆಯ ಗಾಯಕ, ನಟ ನಿಕ್ ಜೊನಾಸ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ 36ನೇ ವರ್ಷಕ್ಕೆ ಕಾಲಿಟ್ಟ ಪ್ರಿಯಾಂಕಾ, ಅದೇ ಸಂದರ್ಭದಲ್ಲಿ ಲಂಡನ್‌ನಲ್ಲಿ ಅಮೆರಿಕ ಮೂಲದ ತನ್ನ ಗೆಳೆಯನ ಜೊತೆ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅಮೆರಿಕ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.

2017 ರ ಅಂತ್ಯದಲ್ಲಿ ಅಮೆರಿಕದಲ್ಲಿ ಪರಿಚಯದವರ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಮತ್ತು ನಿಕ್ ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಅವರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರೂ ಹಲವು ಕಡೆಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಅಲ್ಲದೆ ಪ್ರಿಯಾಂಕಾ ಇತ್ತೀಚೆಗೆ ನಿಕ್‌ರನ್ನು ಮುಂಬೈಗೆ ಕರೆತಂದು ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಕೂಡಾ ಮಾಡಿಸಿದ್ದರು. ಅದರ ಬೆನ್ನಲ್ಲೇ ಈ ಶುಭ ಸುದ್ದಿ ಹೊರಬಿದ್ದಿದೆ. ಆದರೆ ನಿಶ್ಚಿತಾರ್ಥದ ಕುರಿತು ಪ್ರಿಯಾಂಕಾ  ಅಥವಾ ನಿಕ್‌ರಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ವರ್ಷಾಂತ್ಯಕ್ಕೆ ಇಬ್ಬರ ವಿವಾಹ ನಡೆಯುವ ಸಾಧ್ಯತೆ ಇದೆ.