ನಟಿ ಸೌಂದರ್ಯ ಮರಣ ಹೊಂದಿದ್ದು ಹೇಗೆ? ನಾಗವಲ್ಲಿ ಕಾಟದಿಂದ ಡಾ ವಿಷ್ಣುವರ್ಧನ್ ನಿಧನರಾಗಿದ್ದು ಹೇಗೆ? ಈ ಸಾವಿಗೂ ನಾಗವಲ್ಲಿಯೇ ಕಾರಣ. ಸೂಪರ್‌ಸ್ಟಾರ್ ರಜನಿಕಾಂತ್ ಆನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು? ಇದರಲ್ಲೂ ನಾಗವಲ್ಲಿಯ ಕೈವಾಡವಿದೆ.
 - ಇಂಥ ಮಾತುಗಳನ್ನು ನೀವು ಎಲ್ಲಿಯಾದರು ಕೇಳಿದ್ದೀರಾ? ಓದಿದ್ದೀರಾ? ಇರಲಿಕ್ಕಿಲ್ಲ. ಆದರೆ, ನಿರ್ದೇಶಕ ಶಂಕರ್ ಅರುಣ್‌ಗೆ ಮಾತ್ರ ಇವು ಅದ್ಹೇಗೆ ಗೊತ್ತಾಯಿತೋ ಗೊತ್ತಿಲ್ಲ. ಹೀಗಾಗಿ ಅವರು ನಾಗವಲ್ಲಿ ಅನ್ನೋ ಪ್ರೇತವೋ, ಆತ್ಮವೋ ಇದೆಯೋ ಇಲ್ಲವೋ ಎಂಬುದರ ಹುಡುಕಾಟಕ್ಕಿಳಿಯುತ್ತಾರೆ. ನಿರ್ದೇಶಕರ ಈ ಹುಡುಕಾಟದ ಹೆಸರೇ ‘ನಾಗವಲ್ಲಿ ವರ್ಸಸ್  ಆಪ್ತಮಿತ್ರರು’. ನಾಗವಲ್ಲಿ ಎನ್ನುವುದು ಸುಮ್ಮನೆ ಊಹೆ. ಅದೊಂದು ಕಾಲ್ಪನಿಕ ಕತೆಯ ಸಿನಿಮಾ ಪಾತ್ರ ಎಂಬುದು ಎಲ್ಲರಿಗೂ ಗೊತ್ತು. ಆದರೂ ಅಂಥ ಪಾತ್ರಗಳ ಬಗ್ಗೆ ಒಂಚೂರು ಕುತೂಹಲ ಇರುವುದು ಸಹಜ. ಆದರೆ, ಒಂದು ಆಟಕ್ಕೂ ಇಲ್ಲದ, ಲೆಕ್ಕಕ್ಕೂ ಇಲ್ಲದ ಗಾಸಿಪ್ ಅನ್ನೇ ಇಟ್ಟುಕೊಂಡು ಸಿನಿಮಾ ಮಾಡಿರುವ ನಿರ್ದೇಶಕರ ಈ  ಧೈರ್ಯದ ಮೇಲೆಯೇ ಬೇರೊಬ್ಬರು ಸಿನಿಮಾ ಮಾಡುವ ಅಪಾಯ ಎದುರಾಗದಿರಲಿ!

ಹೋಗಲಿ ಸಿನಿಮಾ ಹೇಗಿದೆ? ಕತೆ ಹೇಗೆ ಶುರುವಾಗುತ್ತದೆ? ಪಾತ್ರಧಾರಿಗಳ ನಟನೆ, ಸಂಗೀತ, ಕ್ಯಾಮೆರಾ, ಹಾಡು ಇಂಥ ಯಾವುದರ ಬಗ್ಗೆಯೂ ಇಲ್ಲಿ ಹೇಳದಿರುವುದೇ ವಾಸಿ. ಚಿತ್ರದ ಕೊನೆಯಲ್ಲಿ ಬರುವ ದೃಶ್ಯಗಳು ಹಾರರ್‌ನಿಂದ ಕೊಂಚ ಗಮನ ಸೆಳೆಯುತ್ತವೆ. ಆತ್ಮಗಳ ಇದೆಯೋ ಇಲ್ಲವೋ ಎನ್ನುವ ಸತ್ಯ ಶೋಧನೆಗಿಳಿಯುವ ಕತೆ ಇದಾಗಿದ್ದು, ಸೌಂದರ್ಯ ಹಾಗೂ ವಿಷ್ಣು ಸಾವಿಗೆ ನಾಗವಲ್ಲಿ ಕಾರಣ ಅಲ್ಲ ಎಂಬ ನಿರ್ಧಾರಕ್ಕೆ ಬರುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ. ಆದರೆ, ನಾಗವಲ್ಲಿ ಇಲ್ಲ, ಸುಗಂಧವಲ್ಲಿ ಇದ್ದಾಳೆ ಎನ್ನುವ ಮತ್ತೊಂದು ಭಯಾನಕ ಸತ್ಯವನ್ನು ನಿರ್ದೇಶಕರು ಹೊರಗೆಳೆಯುತ್ತಾರೆ! ನಾಗವಲ್ಲಿಗಿಂತ ಸುಗಂಧವಲ್ಲಿ ಪಾತ್ರ ಆಸಕ್ತಿಕರವಾಗಿದ್ದರೂ ಅದು ಕೇರಳದ ಕತೆ. ಅದು
ಕನ್ನಡಕ್ಕೆ ಹೇಗೆ ಸಂಬಂಧಿಸುತ್ತದೆ ಎಂಬುದು ಗೊತ್ತಿಲ್ಲ. ಆದರೂ ‘ಸುಗಂಧವಲ್ಲಿ ವರ್ಸಸ್ ಆಪ್ತಮಿತ್ರರು-2' ಬರಲಿದೆ ಎನ್ನುವಲ್ಲಿಗೆ ಸಿನಿಮಾ ಮುಗಿಸುತ್ತಾರೆ ನಿರ್ದೇಶಕರು.