ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಆದರೆ ಅವರ ಪತ್ನಿ ಸುರೇಖಾ ಬಗ್ಗೆ ಹಲವು ಅಚ್ಚರಿಯ ವಿಚಾರಗಳು ಹೊರಬರುತ್ತಿವೆ. ನಾದಿನಿಯರು ಹಾಗೂ ಮೈದುನರ ಜೊತೆ ಸುರೇಖಾ ಅವರ ಒಡನಾಟ ಹೇಗಿದೆ ಮತ್ತು ಕೋಕಾಪೇಟೆ ಜಮೀನಿನ ಬಗ್ಗೆ ಚಿರು ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ತಮ್ಮ ನಟನೆ ಹಾಗೂ ವ್ಯಕ್ತಿತ್ವದಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಬದುಕಿನಲ್ಲೂ ಕುಟುಂಬಕ್ಕೆ ಹೆಚ್ಚು ಬೆಲೆ ಕೊಡುವ ಅವರು, ಇಡೀ ಫ್ಯಾಮಿಲಿಯನ್ನು ಚಿತ್ರರಂಗದಲ್ಲಿ ಬೆಳೆಸಿದ್ದಾರೆ. ಟಾಲಿವುಡ್‌ನ ಹಿರಿಯಣ್ಣನಾಗಿರುವ ಚಿರು, ಯಾರಿಗೇ ಕಷ್ಟ ಬಂದರೂ ನಾನಿದ್ದೇನೆ ಎಂದು ಮುಂದೆ ನಿಲ್ಲುತ್ತಾರೆ.

ಮಧ್ಯಮ ವರ್ಗದಿಂದ ಬಂದ ಚಿರಂಜೀವಿ, ಸಿನಿಮಾ ಹಾಗೂ ಬ್ಯುಸಿನೆಸ್ ಮೂಲಕ ಸಾವಿರಾರು ಕೋಟಿ ಆಸ್ತಿ ಗಳಿಸಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೋಕಾಪೇಟೆಯಲ್ಲಿರುವ ತಮ್ಮ ಜಮೀನು ಹಾಗೂ ಕೌಟುಂಬಿಕ ಆಸ್ತಿ ಬಗ್ಗೆ ಹೇಳಿದ ಮಾತುಗಳು ಎಲ್ಲರ ಗಮನ ಸೆಳೆದಿವೆ. ವೇದಿಕೆ ಮೇಲೆ ಪತ್ನಿ ಸುರೇಖಾ ಹಾಗೂ ಇಬ್ಬರು ತಂಗಿಯರ ಬಗ್ಗೆ ಅವರು ಹಂಚಿಕೊಂಡ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಕೋಕಾಪೇಟೆ ಜಮೀನಿನ ಬಗ್ಗೆ ಚಿರು ಹೇಳಿದ ಮಾತುಗಳು ಅಭಿಮಾನಿಗಳ ಮನಮುಟ್ಟಿವೆ.

ಚಿರಂಜೀವಿ ಹೇಳುವಂತೆ, ಹೈದರಾಬಾದ್‌ನ ಕೋಕಾಪೇಟೆ ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೆ ಅವರು ಕೆಲವು ಎಕರೆ ಜಮೀನು ಖರೀದಿಸಿದ್ದರು. "ಮುಂದೆಂದಾದರೂ ನೆಮ್ಮದಿಯಾಗಿ ಫಾರ್ಮ್‌ಹೌಸ್ ಕಟ್ಟಿಕೊಂಡು, ವ್ಯವಸಾಯ ಮಾಡಿಕೊಂಡು ಖುಷಿಯಾಗಿರೋಣ" ಎಂಬ ಉದ್ದೇಶದಿಂದ ಆ ಜಾಗವನ್ನು ತೆಗೆದುಕೊಂಡಿದ್ದರಂತೆ. ಆದರೆ ಕಾಲಕ್ರಮೇಣ ಆ ಪ್ರದೇಶ ಸಿಕ್ಕಾಪಟ್ಟೆ ಡೆವಲಪ್ ಆಗಿ, ಈಗ ಒಂದು ಎಕರೆ ಬೆಲೆ ಕೋಟ್ಯಂತರ ರೂಪಾಯಿಗೆ ಏರಿಕೆಯಾಗಿದೆ. ಪ್ರಸ್ತುತ ಆ ಜಮೀನಿನ ಬೆಲೆ ನೂರಾರು ಕೋಟಿ ದಾಟಿದೆ. ಇದೇ ಜಮೀನಿನ ವಿಚಾರದಲ್ಲಿ ನಡೆದ ಚರ್ಚೆಯ ಬಗ್ಗೆ ಚಿರು ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾರೆ.

ತಂಗಿಯರಿಗೆ ಆಸರೆಯಾದ ಚಿರಂಜೀವಿ

ಈ ಬಗ್ಗೆ ಮಾತನಾಡಿದ ಚಿರಂಜೀವಿ, "ನನ್ನಿಬ್ಬರು ತಂಗಿಯರಿಗೆ ಈಗಾಗಲೇ ಮನೆ ಕಟ್ಟಿಸಿಕೊಟ್ಟಿದ್ದೇನೆ. ಅವರ ಮಕ್ಕಳ ಭವಿಷ್ಯವನ್ನೂ ಹತ್ತಿರದಿಂದ ನೋಡಿಕೊಂಡಿದ್ದೇನೆ. ಸದ್ಯ ಅವರೆಲ್ಲರೂ ಸ್ವಂತ ಕಾಲಿನ ಮೇಲೆ ನಿಂತು, ಒಳ್ಳೆ ಮಟ್ಟದಲ್ಲಿ ಸೆಟಲ್ ಆಗಿದ್ದಾರೆ. ಇನ್ನು ಅವರಿಗೆ ನಾನು ಮಾಡುವುದೇನಿದೆ ಎಂಬ ಯೋಚನೆ ನನ್ನಲ್ಲಿತ್ತು. ಆದರೆ ಅದೇ ಸಮಯದಲ್ಲಿ ನನ್ನ ಪತ್ನಿ ಕೊಟ್ಟ ಸಲಹೆ ನನಗೆ ಅಚ್ಚರಿ ತರಿಸಿತು" ಎಂದಿದ್ದಾರೆ.

ಪತ್ನಿ ಸುರೇಖಾ ಕೊಟ್ಟ ಅಚ್ಚರಿಯ ಸಲಹೆ

ಕೋಕಾಪೇಟೆಯಲ್ಲಿ ಅಷ್ಟು ಬೆಲೆಬಾಳುವ ಜಮೀನಿನ ವಿಚಾರದಲ್ಲಿ ಚಿರಂಜೀವಿ ಪತ್ನಿ ಸುರೇಖಾ ನಡೆದುಕೊಂಡ ರೀತಿ ಹಲವರಿಗೆ ಮಾದರಿಯಾಗಿದೆ. ಸಾಮಾನ್ಯವಾಗಿ ಜಮೀನಿನ ಬೆಲೆ ಕೋಟಿಗಟ್ಟಲೆ ಏರಿದಾಗ ಯಾರಾದರೂ ತಮ್ಮ ಮಕ್ಕಳು, ಗಂಡನ ಭವಿಷ್ಯದ ಬಗ್ಗೆಯೇ ಯೋಚಿಸುತ್ತಾರೆ. ಆದರೆ ಸುರೇಖಾ ಮಾತ್ರ ಚಿರಂಜೀವಿ ಬಳಿ, "ಈ ಜಮೀನಿನ ಬೆಲೆ ತುಂಬಾ ಹೆಚ್ಚಾಗಿದೆ ಅಲ್ವಾ.. ನಾವು ನಿಮ್ಮ ತಂಗಿಯರಿಗೂ (ನಾದಿನಿಯರಿಗೆ) ಇದರಲ್ಲಿ ಒಂದಷ್ಟು ಪಾಲು ಕೊಟ್ಟರೆ ಚೆನ್ನಾಗಿರುತ್ತೆ ಅಲ್ವಾ" ಎಂದು ಸಲಹೆ ನೀಡಿದ್ದರಂತೆ. ಈ ಮಾತು ಕೇಳಿ ಚಿರಂಜೀವಿ ತುಂಬಾನೇ ಖುಷಿಪಟ್ಟಿದ್ದಾರೆ. ಸಹಜವಾಗಿ ಯಾವುದೇ ಮಹಿಳೆಯಾದರೂ ಮೊದಲು ತನ್ನ ಸಂಸಾರದ ಬಗ್ಗೆ ಯೋಚಿಸುತ್ತಾಳೆ, ಆದರೆ ತನ್ನ ತಂಗಿಯರ ಮೇಲೆ ಸುರೇಖಾ ತೋರಿದ ಪ್ರೀತಿ ಅವರಿಗೆ ಅಚ್ಚರಿ ತರಿಸಿದೆ. ಈ ವಿಚಾರವನ್ನು ಚಿರು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

ರಾಖಿ ಹಬ್ಬದ ದಿನ ಮೆಗಾ ಉಡುಗೊರೆ

ಸುರೇಖಾ ಕೊಟ್ಟ ಸಲಹೆಗೆ ಓಕೆ ಎಂದರೂ, ಆಮೇಲೆ ಚಿರಂಜೀವಿ ತಮ್ಮ ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿ ಆ ವಿಚಾರವನ್ನೇ ಮರೆತುಬಿಟ್ಟಿದ್ದರಂತೆ. ಆದರೆ ಸುರೇಖಾ ಮಾತ್ರ ಅದನ್ನು ಬಿಡಲಿಲ್ಲ. ಆಗಸ್ಟ್ 22ರಂದು ಚಿರಂಜೀವಿ ಹುಟ್ಟುಹಬ್ಬದ ದಿನವೇ ರಕ್ಷಾಬಂಧನ (ರಾಖಿ) ಹಬ್ಬವೂ ಬಂದಿತ್ತು. ಆ ಹಬ್ಬಕ್ಕೂ ಕೆಲವು ದಿನಗಳ ಮುಂಚೆಯೇ ಸುರೇಖಾ ಹತ್ತಿರವಿದ್ದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಚಿರಂಜೀವಿ ತಂಗಿಯರನ್ನು ಮನೆಗೆ ಕರೆಯಿಸಿ, ಆ ಜಮೀನಿಗೆ ಸಂಬಂಧಿಸಿದ ಪತ್ರಗಳನ್ನು (ಉಡುಗೊರೆ) ಅವರ ಕೈಗೆ ಸಿಗುವಂತೆ ಮಾಡಿದರು. ತಮ್ಮ ಕುಟುಂಬದಲ್ಲಿ ನಾದಿನಿಯರ ಮೇಲೆ ಪತ್ನಿ ಸುರೇಖಾ ತೋರಿದ ಪ್ರಾಮಾಣಿಕತೆ ಹಾಗೂ ಒಳ್ಳೆಯತನ ನೋಡಿ ತನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಮೆಗಾಸ್ಟಾರ್ ಚಿರಂಜೀವಿ ಖುಷಿಯಿಂದ ಹೇಳಿಕೊಂಡಿದ್ದಾರೆ.

ಅತ್ತಿಗೆ ಬಗ್ಗೆ ಮೆಗಾ ಬ್ರದರ್ಸ್ ಮಾತು..

ಮೆಗಾ ಕುಟುಂಬದಲ್ಲಿ ಚಿರಂಜೀವಿ ಪತ್ನಿ ಸುರೇಖಾ ಅವರಿಗೆ ಅಪಾರ ಗೌರವವಿದೆ. ಎಲ್ಲರನ್ನೂ ಸಮಾನವಾಗಿ, ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂಬ ಹೆಸರಿದೆ. ನಾದಿನಿಯರನ್ನು ಮಾತ್ರವಲ್ಲ, ಚಿರಂಜೀವಿ ತಮ್ಮಂದಿರಾದ ನಾಗಬಾಬು ಹಾಗೂ ಪವನ್ ಕಲ್ಯಾಣ್ ಅವರನ್ನು ಕೂಡ ಸುರೇಖಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿದ್ದಾರೆ. ಅಷ್ಟೇ ಅಲ್ಲ, ಪವನ್ ಕಲ್ಯಾಣ್ ಅವರನ್ನು ಹೀರೋ ಮಾಡಬೇಕೆಂಬ ಐಡಿಯಾ ಕೊಟ್ಟಿದ್ದೇ ಸುರೇಖಾ. ಹೆತ್ತ ತಾಯಿಯನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೋ, ಪವನ್ ಕಲ್ಯಾಣ್ ತಮ್ಮ ಅತ್ತಿಗೆ ಸುರೇಖಾ ಅವರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ನಾಗಬಾಬು ಕೂಡ ಹಲವು ಸಂದರ್ಶನಗಳಲ್ಲಿ ಸುರೇಖಾ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದ್ದಾರೆ.