Asianet Suvarna News Asianet Suvarna News

ಫೈರ್ ಸಂಸ್ಥೆಗೆ ಪ್ರಿಯಾಂಕಾ ಉಪೇಂದ್ರ ಗುಡ್‌ಬೈ, ಚೇತನ್‌ ಕಾರಣವಾ?

ಒಂದು ಕಡೆ ಮೀ ಟೂ ವಿಚಾರ ಸದ್ದು ಮಾಡುತ್ತಲೆ ಇದ್ದರೆ ಇತ್ತ ಫೈರ್ [ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ] ಯಿಂದ ಪ್ರಿಯಾಂಕಾ ಉಪೇಂದ್ರ ಹೊರಕ್ಕೆ ಬಂದಿದ್ದಾರೆ.

Me Too Row Priyanka Upendra resigns FIRE Sandalwood
Author
Bengaluru, First Published Oct 24, 2018, 5:45 PM IST

ಬೆಂಗಳೂರು[ಅ.24]  ಚೇತನ್‌ಗೆ ಸಮಸ್ಯೆ ಬಗೆಹರಿಸುವುದಕ್ಕಿಂತ ಸುದ್ದಿಯಾಗುವುದೇ ದೊಡ್ಡದಾಗಿದೆ. ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಒಂದು ದಾರಿ ಇರುತ್ತದೆ. ಮೊದಲು ಅದರ ಕಡೆ ಗಮನ ಕೊಡಬೇಕು. ಏಕಾಏಕಿ ಮಾಧ್ಯಮಗಳ ಮುಂದೆ ಹೋಗುವುದೋ, ಸೋಷಲ್ ಮೀಡಿಯಾಗಳಲ್ಲಿ ಹಾಕುವುದಲ್ಲ ಎಂದಿರುವ ಪ್ರಿಯಾಂಕಾ ಉಪೇಂದ್ರ ಫೈರ್ [ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ] ಯಿಂದ ಪ್ರಿಯಾಂಕಾ ಉಪೇಂದ್ರ ಹೊರಕ್ಕೆ ಬಂದಿದ್ದಾರೆ.

ನನ್ನ ಜತೆ ಬಂದ ವೀಣಾ ಸುಂದರ್, ರೇಖಾ ಎಲ್ಲರೂ ಫೈರ್‌ನಿಂದ ಆಚೆ ಬಂದಿದ್ದೇವೆ. ಚೇತನ್ ಅವರು ಅಂಬರೀಶ್ ಅವರ ಮುಂದೆಯೇ ದೊಡ್ಡ ದನಿಯಲ್ಲಿ ಮಾತನಾಡಿದ್ದರು. ನಮ್ಮ ಮನೆಯಲ್ಲಿ ಜಗಳ ಆದಾಗ ಅದನ್ನು ಸೋಷಲ್ ಮೀಡಿಯಾಗಳಲ್ಲಿ ಹಾಕುತ್ತೇವೆಯೇ? ಅಥವಾ ಮನೆಯ ಹಿರಿಯರ ಜತೆ ಕೂತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆಯೇ? ಚಿತ್ರರಂಗ ಕೂಡ ಒಂದು ಫ್ಯಾಮಿಲಿ ಅಲ್ವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಒಳ್ಳೆಯ ಉದ್ದೇಶಗಳ ಕನಸು ಕಟ್ಟಿಕೊಂಡು ರೂಪಿಸಿದ ಫೈರ್ ಸಂಸ್ಥೆಗೆ ಎರಡು ವರ್ಷಗಳ ಕಾಲ ನಾನೇ ಅಧ್ಯಕ್ಷೆ ಆಗಿದ್ದೆ. ಕನ್ನಡ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಮೇಲೆ ಯಾವುದೇ ರೀತಿಯ ಶೋಷಣೆ ನಡೆದಾಗ ಅವರ ಜತೆ ನಿಂತು ಧೈರ್ಯ ತುಂಬಿ ನ್ಯಾಯ ಕೊಡಿಸುವುದು, ಸಮಸ್ಯೆಗೆ ಪರಿಹಾರ ಹೇಳುವುದು ನಮ್ಮ ಉದ್ದೇಶವಾಗಿತ್ತು. ಇದು ಚಿತ್ರರಂಗದ ಹಿರಿಯರನ್ನು ಒಳಗೊಂಡಂತೆ ಆಗಬೇಕು. ಅದೂ ಕೂಡ ಆಗದಿದ್ದಾಗ ಕಾನೂನಿನ ಮೂಲಕ ನ್ಯಾಯ ಪಡೆಯಲಿಕ್ಕೆ ಫೈರ್ ಸಂಸ್ಥೆ ಬಾಧಿತರ ಬೆನ್ನಿಗೆ ನಿಲ್ಲಬೇಕು. ಈ ನಿಟ್ಟಿನಲ್ಲಿ ನಾನು, ಹಿರಿಯರಾದ ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಶ್ ಮುಂತಾದವರ ಜತೆಗೂ ಮಾತನಾಡಿದ್ದೆ. ಆದರೆ, ಈ ಸಂಸ್ಥೆಗೆ ಬಂದ ಚೇತನ್‌ಗೆ ಬೇರೆಯದೇ ಉದ್ದೇಶಗಳಿದ್ದವು. ಏಕಾಏಕಿ ಮೀಡಿಯಾಗಳ ಮುಂದೆ ಹೋಗುವುದು ಸೇರಿದಂತೆ ಅವರಿಗೆ ಸಮಸ್ಯೆ ಬಗೆಹರಿಸುವುದಕ್ಕಿಂತ ಸುದ್ದಿಯಾಗುವುದೇ ದೊಡ್ಡದಾಗಿತ್ತು. ನಮ್ಮ ಉದ್ದೇಶ ಹೀಗೆ ಸೂಕ್ಷ್ಮ ವಿಚಾರ- ಸಮಸ್ಯೆಗಳನ್ನು ಬೀದಿ ಜಗಳ ಮಾಡುವುದಲ್ಲ. ಹೀಗಾಗಿ ಆ ಸಂಸ್ಥೆಯ ಉದ್ದೇಶಗಳನ್ನೇ ಮರೆತು ನಡೆಯುತ್ತಿದ್ದಾಗ ನಾನೂ ಸೇರಿದಂತೆ ನನ್ನ ಜತೆ ಬಂದವರೆಲ್ಲ ಸಂಸ್ಥೆಯಿಂದ ಆಚೆ ಬಂದಿದ್ದಾರೆ. ನಾನು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವೆ ಎಂದು ತಿಳಸಿದ್ದಾರೆ.

ಏನಿದು ಫೈರ್ ಸಂಸ್ಥೆ? ಸಿನಿಮಾ ಇಂಡಸ್ಟ್ರಿಯಲ್ಲಿ ಏನು ಮಾಡುತ್ತೆ?

 ನನಗೂ ಮತ್ತು ಫೈರ್ ಸಂಸ್ಥೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಆರು ತಿಂಗಳ ಹಿಂದೆಯೇ ನನ್ನ ಮತ್ತು ಚೇತನ್ ನಡುವೆ ಭಿನ್ನಾಭಿಪ್ರಾಯಗಳು ಬಂದವು. ಈ ಬಗ್ಗೆ ಹೇಳಿದ್ದೆ. ನನ್ನ ಮಾತಿಗೆ ಬೆಲೆ ಸಿಗುತ್ತಿರಲಿಲ್ಲ. 

ನನ್ನ ಪ್ರಕಾರ ಆರೋಪಿಸುವವರು ಮತ್ತು ಆರೋಪಕ್ಕೆ ಗುರಿಯಾಗಿರುವವರು ಇಬ್ಬರಿಗೂ ಖಾಸಗಿತನ ಇರುತ್ತದೆ. ಹೀಗಾಗಿ ಆರೋಪ ಬಂದ ಕೂಡಲೇ ಹೆಸರು ಬಹಿರಂಗ ಮಾಡುವುದಲ್ಲ. ಬಂದಿರುವ ಅರೋಪದ ಸುತ್ತ ವಿಚಾರಣೆ ಮಾಡಬೇಕು. ಅದು ಸತ್ಯವೇ ಆಗಿದ್ದರೆ ಅವರಿಗೆ ಶಿಕ್ಷೆ ಆಗುವಂತೆ ಮಾಡಬೇಕು. ಆದರೆ, ಈಗೇನಾಗುತ್ತಿದೆ? ಹೆಣ್ಣು ಮಕ್ಕಳ ಹೋರಾಟದ  ಧ್ವನಿ ವಿವಾದಗಳ ಸುಳಿಗೆ ತಳ್ಳಿದ್ದಾರೆ. ಇದರಿಂದ ಏನು ಪ್ರಯೋಜನ? ಆರೋಪದ ಹೆಸರಿನಲ್ಲಿ ಯಾರೋ ಹೆಸರು ಹೇಳುತ್ತೇವೆ. ಅವರಿಗೂ ಕುಟುಂಬ ಇರುತ್ತದೆ, ಅಭಿಮಾನಿಗಳು ಇರುತ್ತಾರೆ. ವಿಷಯ ಗೊತ್ತಿಲ್ಲದೆ ಅವರು ಕೆಟ್ಟದಾಗಿ ಮಾತನಾಡುತ್ತಾರೆ. ಅದು ಗಲಾಟೆ ಆಗಿ ವಿವಾದಕ್ಕೆ ಗುರಿಯಾಗುತ್ತದೆ. ಒಳ್ಳೆಯ ಉದ್ದೇಶಕ್ಕೆ ಮುಂದೆ ಬಂದ ವೇದಿಕೆ ಅಥವಾ ಧ್ವನಿಗಳನ್ನು ಅನುಮಾನದಿಂದ ನೋಡುವಂತಾಗಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವುದು ಇದೆ. 

ಮೀ ಟೂ ಅಭಿಯಾನದ ಬಗ್ಗೆ ನನಗೆ ತಕರಾರು ಇಲ್ಲ. ಫೈರ್ ಸಂಸ್ಥೆಯ ಉದ್ದೇಶಗಳ ಬಗ್ಗೆಯೂ ಭಿನ್ನಾಭಿಪ್ರಾಯವಿಲ್ಲ. ಆದರೆ, ಅವರು ಹೋಗುತ್ತಿರುವ ರೀತಿ ಸರಿ ಇಲ್ಲ. ಉದ್ದೇಶ ಸರಿ ಇದ್ದರೆ ಸಾಲದು, ನಾವು ಹೋಗುವ ದಾರಿ ಕೂಡ ಸರಿಯಾಗಿರಬೇಕು. ಕನ್ನಡದ ಮಟ್ಟಿಗೆ ಆ ದಾರಿ ಹಲವು ಅನುಮಾನ, ವಿವಾದಗಳಿಂದ ಕೂಡಿದೆ.  ಇದರಿಂದ ಚಿತ್ರರಂಗದಲ್ಲಿ ಮಾನಸಿಕ ತೊಂದರೆಗಳು ಆಗುತ್ತಿವೆ ಹೊರತು, ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ ಎಂದು ಪ್ರಿಯಾಂಕಾ ಉಪೇಂದ್ರ ತಮ್ಮ ಮನದಾಳದ ನೋವು ಹೊರಹಾಕಿದ್ದಾರೆ.

Follow Us:
Download App:
  • android
  • ios