Asianet Suvarna News Asianet Suvarna News

ಕನ್ನಡದಲ್ಲೇ ಮನರಂಜನೆ ಕನ್ನಡದಿಂದಲೇ ಉದರ ಪೋಷಣೆ

ಕನ್ನಡ ಕಿರುತೆರೆ ಒಂದರಿಂದ ಎರಡು ಸಾವಿರದಷ್ಟು ಕನ್ನಡಿಗರಿಗೆ ಕೆಲಸ ಕೊಟ್ಟಿದೆ. ಇವತ್ತು ಸಿನಿಮಾಕ್ಕೂ ಮೀರಿದ ಮನರಂಜನೆ, ಆಕರ್ಷಣೆ ಕಿರುತೆರೆಯಲ್ಲಿ ಸಿಕ್ಕಿದೆ. ಅದರ ಹಿಂದೆ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುವ ಕನ್ನಡದ ಮನಸ್ಸಿದೆ .

Many fetch bread and butter from kannada soaps
Author
Bengaluru, First Published Nov 1, 2018, 3:27 PM IST

-ಏನು ಓದಿದ್ದು?

-ಬಿಎ

-ಏನ್ ಕೆಲಸ?

-ರೈಟರ್ ಆಗಿದ್ದೀನಿ

-ಕಾಫಿ ಎಸ್ಟೇಟಲ್ಲಾ?!

-ಏನ್ ಮಾಡ್ಕೊಂಡಿದ್ದೀರಿ?

ಪತ್ರಕರ್ತನಾಗಿದ್ದೀನಿ!

ಅದ್ಸರಿ, ಜೀವನೋಪಾಯಕ್ಕೆ ಏನು ಮಾಡ್ಕೊಂಡಿದ್ದೀರಿ ಅಂತ ಕೇಳ್ದೆ!

-ಹೀಗೆ ಒಂದು ಕಾಲದಲ್ಲಿ ಬರಹಗಾರರೋ, ಪತ್ರಕರ್ತರೋ ಎದುರಿಸುತ್ತಿದ್ದ ಸಾಮಾನ್ಯ ಪ್ರಶ್ನೆಗಳು. ಯಥಾವತ್ತಾಗಿ ಇದೇ ಥರದ ಮಾತು ಎದುರಿಸದೇ ಹೋದರೂ, ಇದು ಒಂದು ಜೋಕಿನಂತೆ ಹುಟ್ಟಿಕೊಂಡಿದ್ದರೂ ಈ ಥರದ ಪ್ರತಿಕ್ರಿಯೆಯನ್ನಂತೂ ಎದುರಿಸಿಯೇ ಇದ್ದರು. ಅದಕ್ಕೆ ಕಾರಣ ಸಾಫ್ಟ್‌ವೇರ್, ವೈದ್ಯ ಇತ್ಯಾದಿ ವೃತ್ತಿಗಳು ಮಾತ್ರ ವೃತ್ತಿಯಾಗಿ, ಫ್ಯಾನ್ಸಿ ಕೆಲಸವಾಗಿ ಜನ ಸಾಮಾನ್ಯರ ಮನಸ್ಸಲ್ಲಿ ಬೇರೂರಿತ್ತು. ಆದರೆ ಅದು ಈ ಹತ್ತು ವರ್ಷಗಳಲ್ಲಿ ಸಂಪೂರ್ಣ ಬದಲಾಗಿದೆ. ಇವತ್ತು ಒಬ್ಬ ಬರಹಗಾರನಿಗೆ ಸಿಗುವ ಗೌರವ, ಮರ್ಯಾದೆ, ಅವರನ್ನು ಕಂಡಾಗ ಮೂಡುವ ಅಚ್ಚರಿ ಬೇರೆ ವೃತ್ತಿಗಳಲ್ಲಿ ಕೊಂಚ ಇಳಿಮುಖವಾಗಿದೆ.

ಅದಕ್ಕಾಗಿ ಮನರಂಜನಾ ಮಾಧ್ಯಮಕ್ಕೆ ಕೃತಜ್ಞತೆ ಹೇಳಲೇಬೇಕು.

ಕನ್ನಡದಲ್ಲೇ ಬರೆಯುವವ, ಕನ್ನಡ ನಾಡಲ್ಲೇ ಹುಟ್ಟಿ ಬೆಳೆದವ ಇವತ್ತು ತನ್ನ ಅನ್ನವನ್ನು ಈ ನೆಲದಲ್ಲೇ, ತನ್ನ ತಾಯ್ನುಡಿಯಲ್ಲೇ ಕಂಡುಕೊಳ್ಳುವ ಒಂದು ಧೈರ್ಯವನ್ನು ಕೊಟ್ಟಿದೆ. ಪ್ರತಿ ಮನೆಗಳಲ್ಲೂ ಬಿಗ್‌ಬಾಸ್ ಅಂತ ರಾತ್ರಿ ಎಂಟಕ್ಕೆ ಸದ್ದು ಕೇಳುತ್ತದೆ, ಅಗ್ನಿಸಾಕ್ಷಿ ಅಂತ ಎಲ್ಲರೂ ಕತೆ ಹಂಚಿಕೊಳ್ಳುತ್ತಾರೆ, ಪುಟ್ಟಗೌರಿ ಅಂತ ಪ್ರೀತಿಸುತ್ತಾರೆ, ಲಚ್ಚಿ, ಚಿನ್ನು, ಗೊಂಬೆ, ಸನ್ನಿಧಿ, ತುಳಸಿ, ಮೈಥಿಲಿ, ಜಾನಕಿ ಅಂತ ಎಲ್ಲರೂ ಪ್ರೀತಿಯಿಂದ ಕನ್ನಡದ ಪಾತ್ರವನ್ನು ಎದೆಗವಚಿಕೊಳ್ಳುತ್ತಾರೆ. ಮನರಂಜನೆಯ ಮೂಲಕವೇ ಎಲ್ಲವೂ ವ್ಯಕ್ತವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅದೆಲ್ಲದಕ್ಕೂ ಕನ್ನಡ ಅಕ್ಷರವೇ ಬುನಾದಿಯಾಗುತ್ತಿದೆ, ಬರಹಗಾರನೇ ಅದಕ್ಕೆಲ್ಲಾ ಕಾರಣೀಕರ್ತನಾಗಿದ್ದಾನೆ.

ಅಕ್ಷರ ಅಗುಳಾಗುವ ಪರಿನಾವು ಬಹಳಷ್ಟು ಸಲ ಕನ್ನಡಕ್ಕೆ ಆತಂಕ ಒದಗಿದೆ, ಮುಂದಿನ ತಲೆಮಾರು ಕನ್ನಡ ಎಲ್ಲಿ ಮಾತಾಡುತ್ತದೆ, ಕನ್ನಡ ಎಲ್ಲಿ ಅನ್ನದ ಭಾಷೆಯಾಗುತ್ತದೆ ಅಂತ ಚರ್ಚೆ ಮಾಡುತ್ತಾ ಇರುತ್ತೇವೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಂತೂ ಇನ್ನು ಹತ್ತು ವರ್ಷದ ನಂತರ ಕನ್ನಡದ ಪರಿಸ್ಥಿತಿ ಏನು ಅಂತ ಚಿಂತಿಸಿದ್ದನ್ನೂ ನಾವು ಕೇಳಿದ್ದೇವೆ. ಆದರೆ ಈ ಹತ್ತು ವರ್ಷಗಳಲ್ಲಿ ಜಾಗತೀಕರಣದ ಪ್ರಭಾವ ಅತ್ಯಂತ ಹೆಚ್ಚು ದಟ್ಟವಾಗಿ ಕನ್ನಡದ ಮೇಲೆ ಆಯಿತು. ಅದರಲ್ಲೂ ಹಿಂದೆಂದೂ ಕಂಡಿರದಷ್ಟು ಮನರಂಜನೆ ಪ್ರೇಕ್ಷಕರಿಗೆ ಸಿಕ್ಕಿತು.

ಸಿನಿಮಾ ಮಾತ್ರವೇ ದೊಡ್ಡ ಮನರಂಜನೆ ಆಗಿದ್ದದ್ದು, ಕ್ರಮೇಣ ಧಾರಾವಾಹಿಯೂ, ಕಿರುತೆರೆಯೂ ಅತ್ಯಂತ ದೊಡ್ಡ ಮನರಂಜನೆಯ ವೇದಿಕೆ ಅಂತ ಆಯಿತು. ಕನ್ನಡಕ್ಕೆ ಬೇರೆ ಬೇರೆ ಚಾನಲ್‌ಗಳು ಬಂದವು. ಬೇರೆ ಬೇರೆ ಥರದ ಕತೆಗಳು ಬಂದವು, ಇರುವ ಕಥೆಗಳನ್ನೇ ಇನ್ನೂ ಅದ್ದೂರಿಯಾಗಿ, ವೈಭವಪೂರ್ಣವಾಗಿ ತೋರಿಸುವ ಪರಿಪಾಠ ಬಂತು. ಬಿಗ್ ಬಾಸ್ ಥರದ ಫಾರ್ಮ್ಯಾಟ್ ಕನ್ನಡಕ್ಕೆ ಬಹಳ ಸರಿಯಾಗಿ ಒಗ್ಗಿಕೊಂಡಿತು. ಕನ್ನಡದ್ದೇ ಫಾರ್ಮ್ಯಾಟ್‌ಗಳೂ ಬಂದವು. ಸಿನಿಮಾಕ್ಕೆ ನಾಯಕಿಯರನ್ನು ಹುಡುಕಲೂ ಕಷ್ಟಪಡಬೇಕಾಗಿದ್ದಾಗ ಕನ್ನಡದ ಧಾರಾವಾಹಿಗಳಿಗೆ ಸುಲಭವಾಗಿ ಸುಂದರಿಯರು, ಅಭಿನಯ ಸಾಮರ್ಥ್ಯ ಇದ್ದವರು ಸಿಕ್ಕಿದರು.

ಎಲ್ಲೋ ರಾಯಚೂರಿನ ಮೂಲೆಯಲ್ಲಿ ಕನ್ನಡ ಮಾತ್ರ ಗೊತ್ತಿರುವ ಹುಡುಗನೊಳಗೆ ಹುಟ್ಟಿದ ಕತೆಗೆ ಇಡೀ ಕರ್ನಾಟಕವೇ ತಲೆದೂಗುವಂಥ ಪವಾಡವನ್ನು ಮನರಂಜನೆಯ ಈ ಕಾಲಘಟ್ಟ ಒದಗಿಸಿತು. ಕನ್ನಡದಲ್ಲಿ ಮಾತ್ರ ಯೋಚನೆ ಮಾಡುವ ಶಕ್ತಿ ಇದ್ದವನು, ಅವನ ವಿಶಿಷ್ಟ ಕಥೆ ಕಟ್ಟುವ ಸಾಮರ್ಥ್ಯದಿಂದಾಗಿ ಕೆಲಸ ಪಡೆದುಕೊಂಡ.

ಇವತ್ತು ಇಡೀ ಕನ್ನಡ ಕಿರುತೆರೆ ಹೆಚ್ಚುಕಡಿಮೆ ಒಂದರಿಂದ ಎರಡು ಸಾವಿರದಷ್ಟು ಕನ್ನಡಿಗರಿಗೆ ಕೆಲಸ ಕೊಟ್ಟಿದೆ. ಬರವಣಿಗೆಯಿಂದ ನಿರ್ದೇಶನದ ತನಕ, ಹಿನ್ನೆಲೆ ಧ್ವನಿಯಿಂದ ಆಡಿಯೋಗ್ರಫಿತನಕ, ಲೈಟ್ ಬಾಯ್‌ನಿಂದ, ಕೆಮರಾಮನ್ ತನಕ ಬೇರೆ ಬೇರೆ ಪ್ರತಿಭಾಶಾಲಿಗಳಿಗೆ ಈ ನೆಲದಲ್ಲೇ ಕೆಲಸ ಕೊಟ್ಟಿದೆ. ಅವನ ಭಾಷೆಯಲ್ಲೇ ಎಲ್ಲವನ್ನೂ ಅಭಿವ್ಯಕ್ತಿಗೊಳಿಸಬಹುದು. ಇವತ್ತು ಸಿನಿಮಾಕ್ಕೂ ಮೀರಿದ ಮನರಂಜನೆ, ಆಕರ್ಷಣೆ ಕಿರುತೆರೆಯಲ್ಲಿ ಸಿಕ್ಕಿದೆ ಎಂದರೆ ಅದರ ಹಿಂದೆ ಬೇರೆ ಬೇರೆ ವಿಭಾಗಗಳಲ್ಲಿ ಕನ್ನಡದ ಮನಸ್ಸಿದೆ ಎಂಬಲ್ಲಿಗೆ ಕನ್ನಡದ ಬೇರು ವರ್ಷಾನುವರ್ಷ ಹೆಚ್ಚೆಚ್ಚು ಬಲವಾಗಿರುವುದು ನಿಸ್ಸಂಶಯ.

Follow Us:
Download App:
  • android
  • ios