ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾದ ಕ್ರೇಜಿ ಅಪ್ಡೇಟ್ ವೈರಲ್ ಆಗಿದೆ. ಶೀಘ್ರದಲ್ಲೇ ಚಿತ್ರತಂಡ ಕೀನ್ಯಾಗೆ ಪ್ರಯಾಣ ಬೆಳೆಸಲಿದೆ. 

ಮಹೇಶ್ ಬಾಬು ನಾಯಕರಾಗಿ, ಎಸ್‌.ಎಸ್‌. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ SSMB 29. ಈ ಚಿತ್ರದ ಎರಡು ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಮೂರನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಜುಲೈ ಎರಡನೇ ವಾರದಿಂದ ಈ ಹಂತದ ಚಿತ್ರೀಕರಣ ಕೆನ್ಯಾದಲ್ಲಿ ಶುರುವಾಗಲಿದೆಯಂತೆ.

 ಕೆನ್ಯಾದಲ್ಲಿ ಒಂದು ತಿಂಗಳು 

ಈ ಹಂತದಲ್ಲಿ ರಾಜಮೌಳಿ ದೊಡ್ಡ ಆಕ್ಷನ್ ದೃಶ್ಯಗಳು ಮತ್ತು ಚೇಸ್ ಸೀಕ್ವೆನ್ಸ್‌ಗಳನ್ನು ಚಿತ್ರೀಕರಿಸಲಿದ್ದಾರಂತೆ. ಕೀನ್ಯಾದ ಸುಂದರ ಪ್ರಕೃತಿಯ ಮಡಿಲಲ್ಲಿ, ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳ ಕಾಲ ಈ ಹಂತದ ಚಿತ್ರೀಕರಣ ನಡೆಯಲಿದೆಯಂತೆ. ಹೀಗಾಗಿ ರಾಜಮೌಳಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇಡೀ ಚಿತ್ರತಂಡ ಶೀಘ್ರದಲ್ಲೇ ಕೆನ್ಯಾಗೆ ತೆರಳಲಿದೆ. 

ಅನುಮತಿ ಸಿಕ್ಕಿದೆ 

ಕೀನ್ಯಾದಲ್ಲಿ ಈ ಚಿತ್ರದ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಅನುಮತಿಗಳು ದೊರೆತಿವೆಯಂತೆ. ಕೆನ್ಯಾದ ವಿವಿಧ ಸ್ಥಳಗಳ ಜೊತೆಗೆ ಅಲ್ಲಿನ ಪ್ರಸಿದ್ಧ ಅಂಬೋಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಕೂಡ ರಾಜಮೌಳಿ ಕೆಲವು ಮುಖ್ಯ ದೃಶ್ಯಗಳನ್ನು ಚಿತ್ರೀಕರಿಸಲಿದ್ದಾರಂತೆ. ಭಾರತೀಯ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಡುವ ಗುರಿಯೊಂದಿಗೆ ರಾಜಮೌಳಿ ಈ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದಾರೆ.

ಈ ಚಿತ್ರಕ್ಕಾಗಿ ಮಹೇಶ್ ಬಾಬು ಸಂಪೂರ್ಣವಾಗಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ತಿಳಿದೇ ಇದೆ. ಅವರ ಫಿಟ್‌ನೆಸ್ ಮತ್ತು ಲುಕ್ಸ್ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿವೆ. ಪ್ರಪಂಚದಾದ್ಯಂತ ಪ್ರೇಕ್ಷಕರ ಮನ ಗೆಲ್ಲುವಂತೆ ಭಾರಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದು, ವಿಜಯೇಂದ್ರ ಪ್ರಸಾದ್ ಕಥೆ ಒದಗಿಸಿದ್ದಾರೆ. 1000 ಕೋಟಿ ಬಜೆಟ್‌ನಲ್ಲಿ ಕೆ.ಎಲ್. ನಾರಾಯಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.