ಬೆಂಗಳೂರು (ಡಿ. 14): ಗಾನಕೋಗಿಲೆ ಲತಾ ಮಂಗೇಶ್ಕರ್  ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು ಇದನ್ನು ಸ್ವತಃ ಲತಾ ಮಂಗೇಶ್ಕರ್ ತಳ್ಳಿ ಹಾಕಿದ್ದಾರೆ. 

ಲತಾ ಮಂಗೇಶ್ಕರ್ ಅನಾರೋಗ್ಯಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಲತಾ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡುತ್ತಾ, ನಮಸ್ಕಾರ, ನನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ. ಅವನ್ನೆಲ್ಲಾ ನಂಬಬೇಡಿ. ನಾನು ನನ್ನ ಮನೆಯಲ್ಲಿ ಆರಾಮವಾಗಿದ್ದೇನೆ ಎಂದಿದ್ದಾರೆ. 

 

ಲತಾ ಮಂಗೇಶ್ಕರ್ ಬಗ್ಗೆ ವದಂತಿಗಳು ಹರಿದಾಡಿದ್ದು ಇದೇ ಮೊದಲ ಬಾರಿಯೇನಲ್ಲ. ಲತಾ ಹಾಡುವುದಕ್ಕೆ ವಿದಾಯ ಹೇಳಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ’ಆತಾ ವಿಸವ್ಯಾಚ ಕ್ಷಣ್.....’ ಎನ್ನುವ ಮರಾಠಿ ಹಾಡೊಂದನ್ನ ಹಾಡಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಹಾಡು ನಿಲ್ಲಿಸಿದ ಗಾನ ಕೋಗಿಲೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿತ್ತು. 
’ನನ್ನ ಕೊನೆ ಉಸಿರಿರುವ ತನಕ ಹಾಡುತ್ತಲೇ ಇರುತ್ತೇನೆ. ಸಂಗೀತವೇ ನನ್ನ ಉಸಿರು. ನಾವು ಮಂಗೇಶ್ಕರ್ ಫ್ಯಾಮಿಲಿಗೆ ಸಂಗೀತವೇ ಜೀವಾಳ. ಸಂಗೀತ ಇಲ್ಲದಿದ್ದರೆ ನಮ್ಮ ಜೀವವೇ ಇಲ್ಲ ಎಂದು ಈ ವದಂತಿಗೆ ತೆರೆ ಎಳೆದರು.