ದರ್ಶನ್‌ಗೆ ಎರಡು ಪ್ರಶ್ನೆ ಕೇಳಲಾಯಿತು.

* ನಿಮ್ಮ ಪ್ರಕಾರ ಈಗ ಯಾವ ಪೌರಾಣಿಕ ಕತೆ ಸಿನಿಮಾ ಆಗಬೇಕು?

- ವೀರ ಮದಕರಿ ನಾಯಕರ ಕತೆ ಸಿನಿಮಾ ಆಗಬೇಕು.

* ಮೂರ್ನಾಲ್ಕು ದಶಕಗಳ ಹಿಂದ ಕುರುಕ್ಷೇತ್ರ ಸಿನಿಮಾ ಬಂದಿದ್ದರೆ ನಿಮ್ಮ ಪ್ರಕಾರ ಯಾರು ಸುಯೋಧನನ ಪಾತ್ರ ಮಾಡಬೇಕಿತ್ತು?

- ಇನ್ಯಾರಿಂದ ಆ ಪಾತ್ರ ಮಾಡಲು ಸಾಧ್ಯ. ನಮ್ಮ ಅಣ್ಣಾವ್ರು ಮಾಡಿದ್ದರೆ ಚೆನ್ನಾಗಿರೋದು.

ದರ್ಶನ್‌ ಹೀಗೆ ಉತ್ತರಿಸಿದ್ದು ‘ನನ್ನ ಪ್ರಕಾರ’ ಚಿತ್ರದ ಆಡಿಯೋ, ಟ್ರೇಲರ್‌ ಲಾಂಚ್‌ ಸಮಾರಂಭದಲ್ಲಿ. ಆ. 23ಕ್ಕೆ ಬಿಡುಗಡೆಗೆ ಸಿದ್ಧವಾಗಿರುವ ವಿನಯ್‌ ಬಾಲಾಜಿ ನಿರ್ದೇಶನದ ‘ನನ್ನ ಪ್ರಕಾರ’ ಸಿನಿಮಾದ ಆಡಿಯೋ ಮತ್ತು ಟ್ರೇಲರ್‌ ಲಾಂಚ್‌ ಮಾಡಿದ ಸಂದರ್ಭದಲ್ಲಿ ದರ್ಶನ್‌ ಈ ಮಾತುಗಳನ್ನು ಹೇಳಿದರು.

ಕಿಶೋರ್‌, ಪ್ರಿಯಾಮಣಿ, ಮಯೂರಿ, ಅರ್ಜುನ್‌ ಯೋಗಿ, ನಿರಂಜನ್‌ ದೇಶಪಾಂಡೆ ನಟಿಸಿರುವ ಚಿತ್ರ ಥ್ರಿಲ್ಲರ್‌ ಸಬ್ಜೆಕ್ಟ್ನಿಂದ ಕೂಡಿದೆ. ಕೊಲೆ ಪ್ರಕರಣವೊಂದರ ಬೆನ್ನು ಹತ್ತುವ ಪೊಲೀಸ್‌ ಅಧಿಕಾರಿಗೆ ಹಲವು ಪ್ರಕಾರದ ಜನರು ಅವರ ಪ್ರಕಾರ ಏನೇನು ಆಗಿದೆ ಎನ್ನುವುದನ್ನು ಹೇಳುತ್ತಾರೆ. ಇಲ್ಲಿ ಸತ್ಯಗಳ ಅನ್ವೇಷಣೆಯಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿತು.

‘ಮೂರು ಡೈಮೆನ್ಷನ್‌ನಲ್ಲಿ ಸಾಗುವ ನಮ್ಮ ಚಿತ್ರ ನೋಡುಗರಿಗೆ ಅವರವರದ್ದೇ ಪ್ರಕಾರಗಳು ಮನಸ್ಸಲ್ಲಿ ಮೂಡುವಂತೆ ಮಾಡುತ್ತದೆ. ಈಗಾಗಲೇ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ಸಿಕ್ಕಿದ್ದು, ಮುಂದಿನ ವಾರ ಪ್ರೇಕ್ಷಕರ ಮುಂದೆ ಬರಲಿದ್ದೇವೆ’ ಎಂದು ನಿರ್ದೇಶಕ ವಿನಯ್‌ ಬಾಲಾಜಿ ಹೇಳಿಕೊಂಡರು.

ಸಿನಿಮಾ ಲೋಕಕ್ಕೆ ಬಂದು ಭರ್ತಿ ಹದಿನೈದು ವರ್ಷಗಳನ್ನು ಕಳೆದಿರುವ ಕಿಶೋರ್‌ ಅವರಿಗೆ ಇಲ್ಲಿ ಪ್ರಧಾನವಾದ ಪೊಲೀಸ್‌ ಪಾತ್ರ ಸಿಕ್ಕಿದೆ. ಮಯೂರಿ ಭಿನ್ನವಾದ ಪಾತ್ರ ಮಾಡಿದ್ದಾರೆ. ಅರ್ಜುನ್‌ ಯೋಗಿ ಬಿಕ್ಲನ ಪಾತ್ರ ಮಾಡಿದ್ದರೆ, ನಿರಂಜನ ದೇಶಪಾಂಡೆ ಸಿರಿಯಸ್‌ ಪಾತ್ರ ಮಾಡಿದ್ದಾರೆ. ಅರ್ಜುನ್‌ ರಾಮ್‌ ಸಂಗೀತ ನೀಡಿದ್ದಾರೆ. ಕ್ಯಾಮರಾ ವರ್ಕ್ ಅನ್ನು ಮನೋಹರ್‌ ಜೋಶಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಮೀರ್‌ ಅಹ್ಮದ್‌, ಚಲುವರಾಯ ಸ್ವಾಮಿ, ಮಾಜಿ ಶಾಸಕ ಬಾಲಕೃಷ್ಣ ಇದ್ದರು.

ಪ್ರವಾಹ ಸಂತ್ರಸ್ತರಿಗೆ 50 ಸಾವಿರ ನೆರವು

ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರ ಪಾಲಿಗೆ ನಿಂತಿರುವ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭದೊಂದಿಗೆ ‘ನನ್ನ ಪ್ರಕಾರ’ ಚಿತ್ರತಂಡವೂ ಕೈ ಜೊಡಿಸಿತು. ಸುವರ್ಣ ನ್ಯೂಸ್‌ನ ಸಿನಿಮಾ ವಿಭಾಗದ ಮುಖ್ಯಸ್ಥೆ ಸುಗುಣ ಮೂಲಕ 50 ಸಾವಿರ ರುಪಾಯಿ ಚೆಕ್‌ ವಿತರಿಸುವ ಮೂಲಕ ಇಡೀ ಚಿತ್ರತಂಡ ಉತ್ತರ ಕರ್ನಾಟಕದ ಮಂದಿಗೆ ತಮ್ಮಿಂದಾದ ಸಹಾಯ ಮಾಡಿತು.

ದರ್ಶನ್‌ಗೆ ಅಭಿಮಾನದ ಹೊಳೆ

ಇಡೀ ಸಮಾರಂಭದ ಆಕರ್ಷಣೆಯಾಗಿದ್ದ ದರ್ಶನ್‌ಗೆ ಅಭಿಮಾನಿಗಳ ಪ್ರೀತಿ ಇದ್ದೇ ಇತ್ತು. ಇದರ ಜೊತೆಗೆ ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಯತಿರಾಜ್‌ ಅವರು ಗಜ ಗಾತ್ರದ ಗುಲಾಬಿ ಹಾರವನ್ನು ಹಾಕಿ ತಮ್ಮ ಅಭಿಮಾನ ಮೆರೆದರೆ, ಜೋಸೆಫ್‌ ಎನ್ನುವ ಯುವ ಕಲಾವಿದ ವೇದಿಕೆಯ ಮೇಲೆಯೇ ಪಟಾಪಟ್‌ ಎಂದು ದರ್ಶನ್‌ ಅವರ ಚಿತ್ರ ಬಿಡಿಸಿ ಅಭಿಮಾನ ತೋರ್ಪಡಿಸಿದರು.