ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಕಿರಣ್ ಅವರ ಆಸಕ್ತಿಯನ್ನು ಗುರುತಿಸಿ ಪೋಷಿಸಿದ್ದು ತಾಯಿ ಅನುರಾಧ, ಅಣ್ಣ ನವೀನ್ ಹಾಗೂ ಮನೆಯವರು. ಪ್ರಾಥಮಿಕ ಶಾಲೆಯಿಂದಲೂ ಕಿರಣ್‌ಗೆ ನಾಟಕಗಳು, ನಟನೆಯೆಂದರೆ ತುಂಬಾ ಆಸಕ್ತಿ. ಸಿನಿಮಾ ನೋಡುವುದೆಂದರೆ ಅತ್ಯಂತ ಪ್ರೀತಿಯ ಹವ್ಯಾಸ. ಸ್ನೇಹಿತರೊಡಗೂಡಿ ತಾವೇ ನಾಟಕ
ಬರೆದು, ಅಭಿನಯಿಸುತ್ತಿದ್ದರು ಕೂಡ. ಪಿಯುಸಿ ಮುಗಿದ ಬಳಿಕ ಬೆಂಗಳೂರು ಸೇರಿದ ಕಿರಣ್ ಇಂಜಿನಿಯರಿಂಗ್ ಕಲಿಯಲು ನಿರ್ಧರಿಸಿದರು. ಎಂ.ಎಸ್. ರಾಮಯ್ಯ ಕಾಲೇಜಿಗೆ ಪ್ರವೇಶವೂ ದೊರೆಯಿತು. ಇವರೊಳಗಿನ ನಟನಾ ಪ್ರತಿಭೆಗೆ ಒಂದು ವೇದಿಕೆ ಹಾಗೂ ಬೆಲೆ ಕಂಡುಕೊಂಡದ್ದು ಇಲ್ಲಿಯೇ.

ಪದವಿಯ ಮೊದಲ ವರ್ಷವೇ ಕಾಲೇಜಿನ ಚಿರರಂಗ ತಂಡದ ಸದಸ್ಯನಾಗಿ ಗುರುತಿಸಿಕೊಂಡರು. ಸ್ನೇಹಿತರೊಡಗೂಡಿ ಕೆಲವು ಕಿರುಚಿತ್ರಗಳನ್ನೂ ನಿರ್ಮಿಸಿದ್ದಾರೆ. ಅವುಗಳಲ್ಲಿ ಗಿರಿಗಿಟ್ಲೆ ಚಿತ್ರದ ಅಭಿನಯಕ್ಕಾಗಿ ಕಾಲೇಜಿನ ವತಿಯಿಂದ ಉತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಮಾರು 20 ಕಿರು ಚಿತ್ರಗಳು ಹಾಗೂ ಜಾಹೀರಾತುಗಳನ್ನು ಇವರ ತಂಡ ನಿರ್ಮಿಸಿದ್ದು ಕಾಲೇಜು ಹಾಗೂ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಬಾಚಿಕೊಂಡಿದೆ. ಅದರಲ್ಲೂ ಡಿಕ್ಕಿ ಎಂಬ ಕಿರುಚಿತ್ರ ಸೈಮಾ ಪ್ರಶಸ್ತಿಗಾಗಿ ಆಯ್ಕೆಯಾಗಿತ್ತು. ಅನೇಕ ನಾಟಗಳನ್ನು ರಚಿಸಿ ಅಭಿನಯಿಸಿದ್ದು ಅವುಗಳಲ್ಲಿ 'ನಾನೇ ಏಕೆ?' ನಾಟಕವನ್ನು ಮೆಚ್ಚಿಕೊಂಡ ಅಂತರಂಗದ ಅಂಕಲ್ ಶ್ಯಾಮ್ ಇದೇ ಕಥೆಯನ್ನು ಇಟ್ಟುಕೊಂಡು ನಾಟಕವನ್ನು ನಿರ್ಮಿಸಿದ್ದರು. ಕೆ.ಎಚ್ ಕಲಾಸೌಧದಲ್ಲಿ ಪ್ರದರ್ಶಿಸಿದ ಮಹಿಮಾಪುರ ನಾಟಕಕ್ಕಾಗಿ ಉತ್ತಮ ಪೋಷಕ ನಟ ಗೌರವ ಕಿರಣ್ ಪಾಲಿಗೆ ಒಲಿದು ಬಂದಿತ್ತು.

ಇಂಜಿನಿಯರಿಂಗ್ ಬಳಿಕ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ದ್ಯೋಗಕ್ಕೆ ಸೇರಿದ ಕಿರಣ್ ನಟನೆಯನ್ನೂ ಮುಂದುವರೆಸಿದ್ದಾರೆ. ಸಿನೆಮಾ ಎಂದರೆ ನನಗೆ ಹುಚ್ಚು ಪ್ರೀತಿ ಎನ್ನುವ ಇವರಿಗೆ ಸಿಂಪಲ್ ಸುನಿ ಗಾಡ್‌ಫಾದರ್. ಈ ವರ್ಷ ಬಿಡುಗಡೆಯಾದ 'ಬಜಾರ್', '99' ಹಾಗೂ 'ಯಾನ' ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಶೂಟಿಂಗ್ ನಡೆಯುತ್ತಿರುವ ಶಿವಾಜಿ ಸುರತ್ಕಲ್, ಅವತಾರ ಪುರುಷ ಮೊದಲಾಗಿ ನಾಲ್ಕೈದು ಸಿನೆಮಾಗಳಲ್ಲಿ ಅಭಿನಯಿಸುವ ಅವಕಾಶ ಒಲಿದು ಬಂದಿದೆ. ಗೋಲ್ಡನ್ ಸ್ಟಾರ್ ಗಣೇಶ್ ನನ್ನ ರೋಲ್ ಮಾಡೆಲ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಿರಣ್ ಮುಂಗಾರು ಮಳೆಸಿನೆಮಾವೆಂದರೆ ಅಚ್ಚುಮೆಚ್ಚು. ಕಾಮಿಡಿ ಅಂತೆಯೇ ಸೀರಿಯಸ್ಯಾವುದೇ ರೀತಿಯ ಪಾತ್ರಕ್ಕಾದರು ತಾನು ಸಿದ್ಧವೆನ್ನುವ ಕಿರಣ್ಸಿನಿಮಾಗಳಿಗೆ ಸಾಹಿತ್ಯ, ಸಂಭಾಷಣೆಗಳನ್ನು ಬರೆಯುತ್ತಾರೆ.ಕ್ರಿಕೆಟ್ ಇವರ ನೆಚ್ಚಿನ ಕ್ರೀಡೆ.ಏನಾದ್ರು ಸಾಧಿಸಬೇಕು ಎಂದುಕೊಂಡು ಆ ಹಾದಿಯಲ್ಲಿಹೊರಟಾಗ ನಿರಾಸೆಗಳು ಎದುರಾಗುವುದು ಸಹಜ. ಅವುಗಳಿಗೆ ಹಿಂಜರಿದರೆ ಕನಸು ಕನಸಾಗಿಯೇ ಉಳಿದು ಬಿಡುತ್ತದೆ. ಕಷ್ಟಗಳನ್ನು ಮೆಟ್ಟಿ ನಿಂತಾಗ ಮಾತ್ರ ಯಶೋ ಮಾಲೆ ನಮ್ಮದಾಗುತ್ತದೆ ಎನ್ನುವ ಕಿರಣ್‌ಗೆ ಸಿನೆಮಾ ಎಂದರೆ ಅದಮ್ಯ ಪ್ರೀತಿ.


ಸೀಮಾ ಪೋನಡ್ಕ
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು