Asianet Suvarna News Asianet Suvarna News

ಕುರುಕ್ಷೇತ್ರ ಸೆಟ್'ನಲ್ಲಿ ದರ್ಶನ್ ಮಾತಿಗೆ ಸಿಕ್ಕಾಗ ಹೇಳಿದ್ದೇನು?

ಕುರುಕ್ಷೇತ್ರ ಚಿತ್ರದ ಶೂಟಿಂಗ್ ಸ್ಥಳಕ್ಕೆ ಕನ್ನಡ ಪ್ರಭ ಭೇಟಿ ನೀಡಿದ ವೇಳೆ ಸಖತ್ ಬ್ಯುಸಿ ಇದ್ದ ದರ್ಶನ್, ನಡುವಲ್ಲಿ ಮಾತಿಗೆ ಸಿಕ್ಕಿ ಇಡೀ ಚಿತ್ರದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.

Kannada Prabha Interview with Darshan

ಕುರುಕ್ಷೇತ್ರ ಚಿತ್ರದ ಶೂಟಿಂಗ್ ಸ್ಥಳಕ್ಕೆ ಕನ್ನಡ ಪ್ರಭ ಭೇಟಿ ನೀಡಿದ ವೇಳೆ ಸಖತ್ ಬ್ಯುಸಿ ಇದ್ದ ದರ್ಶನ್, ನಡುವಲ್ಲಿ ಮಾತಿಗೆ ಸಿಕ್ಕಿ ಇಡೀ ಚಿತ್ರದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.

ಬಹು ನಿರೀಕ್ಷೆಯ ಚಿತ್ರವೊಂದನ್ನು ಬಹುತೇಕ ಮಾಡಿ ಮುಗಿಸಿದ್ದೀರಿ. ಚಿತ್ರದ ಮಹೂರ್ತದಿಂದ ಇಲ್ಲಿಯವರೆಗೂ ನಿಮಗಾಗಿರೋ ಅನುಭವದ ಬಗ್ಗೆ ಹೇಳಿ.

ಪೇಷೆನ್ಸ್ ಇಸ್ ದಿ ಫಸ್ಟ್ ಲೆಸನ್ ಇನ್ ದಿಸ್ ಫಿಲ್ಮ್. ಈ ಚಿತ್ರ ಮಾಡುವುದಕ್ಕಿಂತ ಮೊದಲು ನನಗೆ ಇಷ್ಟು ತಾಳ್ಮೆ  ಇರಲಿಲ್ಲ. ಆದರೆ ಈಗ ನನಗೇ ಅನ್ನಿಸುವಂತೆ ನನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೆಚ್ಚು ತಾಳ್ಮೆಯಿಂದಿರಲು ಕಲಿತದ್ದು ನನಗೆ ಪ್ಲಸ್ ಪಾಯಿಂಟ್. ಸುಮಾರು 40 ಕೆಜಿ ತೂಕದ ಕಾಸ್ಟ್ಯೂಮ್‌ಗಳನ್ನು ಹೊತ್ತುಕೊಂಡು ತ್ರಿಡಿ, ಟೂಡಿ ಎರಡೂ ಶಾಟ್‌ಗಳನ್ನು ತೆಗೆಯುವುದು ಸುಲಭದ  ಮಾತಲ್ಲ. ಅದೂ ಅಲ್ಲದೇ ಚಿಕ್ಕ ಸಮಸ್ಯೆಯಾದರೂ ಕೂಡ ರೀ ಟೇಕ್ ಮಾಡಿಸುತ್ತಾರೆ. ಒಂದೇ ಸೀನ್ ಅನ್ನು ಐದಾರು ಬಾರಿ ತೆಗೆಸಿದ್ದೂ ಇದೆ. ಹೆಚ್ಚು ಜೂನಿಯರ್ ಆರ್ಟಿಸ್ಟ್ ಇರುವುದರಿಂದ ಒಂದೇ ಶಾಟ್ ಓಕೆ ಮಾಡುವುದು ಕಷ್ಟ. ಯಾರಾದರೂ ಏನಾದರೂ ತಪ್ಪು ಮಾಡೇ ಮಾಡಿರುತ್ತಾರೆ. ಇದರ ಜೊತೆಯಲ್ಲಿ 2 ಡಿ, 3 ಡಿಗೆ ಪ್ರತ್ಯೇಕವಾಗಿ ಶಾಟ್ ನೀಡಬೇಕು. ಹೀಗಾಗಿ ಸಹಜವಾಗಿಯೇ ತಾಳ್ಮೆ ಬಂತು. ಇದರ ಜೊತೆಗೆ ಆನೆಯ ಮೇಲೆ ಕೂತಾಗ ಅದೂ ಕೂಡ ಆ ಕಡೆ, ಈ ಕಡೆ ಹೊರಳಾಡುತ್ತದೆ. ಕಾಸ್ಟ್ಯೂಮ್ ಭಾರ, ಬಿಸಿಲು ಎಲ್ಲಾ ಸೇರಿ ರಾತ್ರಿ ವೇಳೆಗೆ ಮೈ ಕೈ ಎಲ್ಲಾ ನೋವು ಬರುತ್ತಿತ್ತು. ಪ್ರಾರಂಭದಲ್ಲಿ ಕಿರೀಟ ಸುಮಾರು 25 ಕೆಜಿಯಷ್ಟು ಭಾರವಿತ್ತು. ಅದನ್ನು ಹೊತ್ತುಕೊಂಡು ರಣಬಿಸಿಲಿನಲ್ಲಿ  ಬಹಳ ಕಷ್ಟವಾಯಿತು. ತಲೆಯೆಲ್ಲಾ ನೋಯಲು ಶುರುವಾಯಿತು. ಆಮೇಲೆ ನಾನೇ ಕೇಳಿಕೊಂಡು ಸ್ವಲ್ಪ ಕಡಿಮೆ ತೂಕದ ಕಿರೀಟ ವಿನ್ಯಾಸ ಮಾಡಿಸಿಕೊಂಡೆ. ಎಲ್ಲವನ್ನೂ ಸಾಧ್ಯವಾದಷ್ಟು ಸಹಜವಾಗಿಯೇ ಮಾಡಲು ಒತ್ತು ನೀಡಿದ್ದೇವೆ. ಹಾಗಾಗಿ ಚಿತ್ರದಲ್ಲಿ ಗ್ರಾಫಿಕ್ಸ್'ನವರಿಗಂತೂ ಹೆಚ್ಚು ಕೆಲಸವೇ ಇಲ್ಲ.

ಪೌರಾಣಿಕ ಸಿನಿಮಾಕ್ಕೆ ಮೊದಲ ಆದ್ಯತೆ ನೀಡುತ್ತೀನಿ  ಎಂದಿದ್ದೀರಿ. ಪೌರಾಣಿಕ ಚಿತ್ರ ಎಂದರೆ ದರ್ಶನ್‌'ಗೆ ಯಾಕೆ ಇಷ್ಟ?

ನಾನು ಕಮರ್ಷಿಯಲ್ ಚಿತ್ರ ಮತ್ತು ಪೌರಾಣಿಕ ಚಿತ್ರ  ಎರಡಕ್ಕೂ ಒಂದೇ ಸಂಭಾವನೆ ತೆಗೆದುಕೊಳ್ಳುವುದು. ಆದರೆ ನನಗೆ ಪೌರಾಣಿಕ ಚಿತ್ರವೇ ಇಷ್ಟ. ನನ್ನ ಎಲ್ಲಾ  ಕಮರ್ಷಿಯಲ್ ಚಿತ್ರಗಳನ್ನು ಒಂದು ಕಡೆ ಇಟ್ಟರೆ ಪೌರಾಣಿಕ ಚಿತ್ರಗಳಾದ ಸಂಗೊಳ್ಳಿ ರಾಯಣ್ಣ ಮತ್ತು  ಕುರುಕ್ಷೇತ್ರವನ್ನು ಇನ್ನೊಂದು ಕಡೆ ಇಟ್ಟು ತೂಕ ಮಾಡಬೇಕು. ಕಮರ್ಷಿಯಲ್ ಚಿತ್ರಗಳ ಮ್ಯಾನರಿಸಮ್ ಬೇರೆ, ಪೌರಾಣಿಕ ಚಿತ್ರಗಳೇ ಬೇರೆ.

ಕುರುಕ್ಷೇತ್ರದಲ್ಲಿ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ  ಇದೆ. ಇದರ ಬಗ್ಗೆ ಹೇಳಿ

ಚಿತ್ರದ ವಿಶೇಷ ಇರುವುದೇ ಇಲ್ಲಿ. 70 ರ ದಶಕದಿಂದ ಹಿಡಿದು ಇಂದಿನವರೆಗಿನ ಎಲ್ಲಾ ಬಗೆಯ ಸ್ಟಾರ್‌ಗಳೂ  ಚಿತ್ರದಲ್ಲಿ ಇದ್ದಾರೆ. ಎಲ್ಲರೊಂದಿಗೂ ಸೇರಿ ಕೆಲಸ ಮಾಡುವುದು ನನಗೆ ಇಷ್ಟವಾಯಿತು. ನನಗಿಂತ ಬಹಳ ಹಿರಿಯರು, ಕಿರಿಯರೆಲ್ಲರೂ ಕನ್ನಡದಲ್ಲಿ ಹೀಗೊಂದು ಚಿತ್ರ ಮಾಡುತ್ತಿದ್ದಾರೆ ಎಂದ ತಕ್ಷಣ ಬಹಳ ಸಂತೋಷದಿಂದ ಬಂದು ನಟಿಸಿದ್ದಾರೆ. ಒಂದು ಚಿತ್ರಕ್ಕೆ ಅದೇ ದೊಡ್ಡ ಶ್ರೇಯಸ್ಸು. ಪ್ರತಿಯೊಬ್ಬರ ಜೊತೆಗೂ  ನಟಿಸಿದ ಅನುಭವ ನನಗೆ ಬಹಳ ಇಷ್ಟವಾಯಿತು.

ಇಡೀ ಚಿತ್ರದಲ್ಲಿ ನಿಮಗೆ ಚಾಲೆಂಜಿಂಗ್ ಆಗಿ ಕಂಡದ್ದು  ಯಾವುದು?

ಹಾಗೆ ನೋಡಿದರೆ ನನಗೆ ಮಾತ್ರವಲ್ಲ ಇಡೀ ಚಿತ್ರತಂಡಕ್ಕೆ ಇದೊಂದು ದೊಡ್ಡ ಚಾಲೆಂಜ್. ಮೊದಲನೆಯದಾಗಿ ಚಿತ್ರವನ್ನು ಒಪ್ಪಿಕೊಂಡಿದ್ದೇ ಎಲ್ಲರೂ ಮಾಡಿದ ಮೊದಲ ಚಾಲೆಂಜ್. ಅದನ್ನು ಎಲ್ಲರೂ ಚೆನ್ನಾಗಿಯೇ  ನಿಭಾಯಿಸಿದ್ದಾರೆ. ನಾವು ಅಂದುಕೊಂಡದ್ದಕ್ಕಿಂತಲೂ  ಚೆನ್ನಾಗಿಯೇ ಚಿತ್ರದ ಎಲ್ಲಾ ಕೆಲಸಗಳು ಸಾಗುತ್ತಿವೆ.

ಇಡೀ ಚಿತ್ರಕ್ಕಾಗಿ ನೀವು ಮಾಡಿಕೊಂಡ ತಯಾರಿ ಹೇಗಿತ್ತು?

ಒಂದು ಪೌರಾಣಿಕ ಚಿತ್ರ ಮಾಡುವಾಗ ಯಾವುದೇ ಕಲಾವಿದನಿಗಾದರೂ ಸಾಕಷ್ಟು ಸವಾಲುಗಳಿರುತ್ತವೆ. ಅವೆಲ್ಲವನ್ನು ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ಚಿತ್ರ ನಾವು ಅಂದುಕೊಂಡಂತೆ ಮೂಡಿಬರಲು ಸಾಧ್ಯ. ನನಗಂತೂ ಹಳೆಗನ್ನಡದ ಉಚ್ಛಾರವೇ ದೊಡ್ಡ ಸವಾಲಾಗಿತ್ತು. ಕೆಲವೊಂದು ಡೈಲಾಗ್‌ಗಳು ಪುಟಗಟ್ಟಲೆ ಇವೆ. ಅವನ್ನೆಲ್ಲಾ ಮನೆಯಲ್ಲಿ ಕೂತು ದಿನಗಟ್ಟಲೇ ಅಭ್ಯಾಸ ಮಾಡಿದ್ದೇನೆ. ಹ್ರಸ್ವ, ದೀರ್ಘ ಸ್ವರಗಳ ಉಚ್ಛಾರ ಮಾಡುವಾಗ ಸಾಕಷ್ಟು ಶ್ರಮ ಹಾಕಿದ್ದೇನೆ. ಡಬ್ಬಿಂಗ್ ಮಾಡುವಾಗಲೂ ಯಾವುದೇ ಸಮಸ್ಯೆ ಬರದೇ ಇರುವ ಹಾಗೆ ಪ್ರತಿಯೊಬ್ಬರೂ ಡೈಲಾಗ್ ಡೆಲಿವರಿ ಮಾಡಿದ್ದಾರೆ.

ಭೀಮನ ಪಾತ್ರಧಾರಿ ಡ್ಯಾನಿಶ್ ಅವರನ್ನು ಆಯ್ಕೆ ಮಾಡಿದ್ದು ನೀವೆ ಅಂತೆ?

ಹೌದು. ಡ್ಯಾನಿಶ್ ಭೀಮನ ಪಾತ್ರ ಮಾಡಬೇಕು ಎಂದು ಹೇಳಿದ್ದು ನಾನೇ. ಒಮ್ಮೆ ಚಕ್ರವರ್ತಿ ಚಿತ್ರದ ಚಿತ್ರೀಕಣದ ವೇಳೆ ನಾನು ಡ್ಯಾನಿಶ್‌ನನ್ನು ರಾಮೋಜಿ ಫಿಲ್ಮ್ ಸಿಟಿಯ ಜಿಮ್‌ನಲ್ಲಿ ನೋಡಿದ್ದೆ. ಇವಾಗ ಇರೋದಕ್ಕಿಂದ ಇನ್ನೂ ದಪ್ಪನಾಗಿದ್ದ. ಯಾವುದೋ ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅವನನ್ನು ನಾನೇ ಮಾತನಾಡಿಸಿದ್ದೆ. ಆಮೇಲೆ ನನಗೆ ಕುರುಕ್ಷೇತ್ರ ಚಿತ್ರದ ಆಫರ್ ಬಂದಾಗ ಡ್ಯಾನಿಶ್ ಭೀಮನ ಪಾತ್ರಕ್ಕೆ ಸೂಕ್ತ ಎಂದು ನಿರ್ಮಾಪಕರಿಗೆ ವಿಷಯ ತಿಳಿಸಿದೆ. ಅವರೂ ಅವನನ್ನು ನೋಡಿ ಒಪ್ಪಿದರು. ಇಪ್ಪತ್ತೈದು ವರ್ಷದ ಅವನು ಭೀಮನ ಪಾತ್ರಕ್ಕೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಿದ್ದಾನೆ.  ಕುರುಕ್ಷೇತ್ರದಲ್ಲಿ ಭೀಮ, ದುರ್ಯೋಧನರೇ ಮುಖ್ಯ.ಅದರಲ್ಲಿ ನೀವು ದುರ್ಯೋಧನ.

ಹೇಗಿದೆ ನೀವು ಮಾಡಿರುವ ದುರ್ಯೋಧನ ಪಾತ್ರ?

ಅವನು ಸುಯೋಧನ. ಇಡೀ ಮಹಾಭಾರತದಲ್ಲಿ ಕೊನೆಯವರೆಗೂ ಕೈಗೆತ್ತಿಕೊಂಡ ಛಲವನ್ನೇ ಮೆರೆಯುವವನು ಅವನೊಬ್ಬನೆ. ದುರ್ಯೋಧನ ಕೆಟ್ಟವನು ಎಂದೇ ಬಿಂಬಿಸಲಾಗಿದೆ. ಆದರೆ ಅವನು ಕೆಟ್ಟವನಲ್ಲ. ಯುದ್ಧದ ಕೊನೆಯಲ್ಲಿಯೂ ಧರ್ಮರಾಯ ನಮ್ಮ ಐದು ಜನರಲ್ಲಿ ಯಾರಾದರೂ ಒಬ್ಬರೊಡನೆ ಯುದ್ಧ ಮಾಡು ಎಂದಾಗ ಅವನು ಆಯ್ಕೆ ಮಾಡಿಕೊಂಡಿದ್ದೇ ಭೀಮನನ್ನು. ನಕುಲ-ಸಹದೇವ, ಅರ್ಜುನ, ಧರ್ಮರಾಯ ಯಾರ ಜೊತೆಗಾದರೂ ಅವನು ಯುದ್ಧಕ್ಕೆ ನಿಂತಿದ್ದರೆ ಅನಾಯಾಸವಾಗಿ ಗೆದ್ದು ಮತ್ತೆ ತನ್ನ ಸಾಮ್ರಾಜ್ಯ ಸ್ಥಾಪನೆ ಮಾಡುತ್ತಿದ್ದ. ಆದರೆ ಅವನು ಹಾಗೆ ಮಾಡುವುದಿಲ್ಲ. ಬದಲಾಗಿ ತನ್ನ ಸಮಾನನಾದ ಭೀಮನನ್ನೇ ಗದಾಯುದ್ಧಕ್ಕೆ ಆಹ್ವಾನಿಸುತ್ತಾನೆ. ಕೃಷ್ಣನ ಮೋಸದಿಂದ ದುರ್ಯೋಧನನಿಗೆ ಅನ್ಯಾಯವಾಗುತ್ತದೆ. ಇದನ್ನೆಲ್ಲಾ ತೆಗೆದುಕೊಂಡು ವಿವೇಚನೆ ಮಾಡಿದರೆ ದುರ್ಯೋಧನನೇ ಇಷ್ಟವಾಗುತ್ತಾನೆ. ಅವನು ದೊಡ್ಡ ಛಲಗಾರ. ಅದಕ್ಕಾಗಿಯೇ ನಾವು ಅವನನ್ನೇ ಮುಖ್ಯವಾಗಿಸಿಕೊಂಡು ಚಿತ್ರ ಮಾಡಿದ್ದೇವೆ. ಮಹಾಭಾರತದಲ್ಲಿ ತೋರಿಸದ ದುರ್ಯೋಧನನ ವ್ಯಕ್ತಿತ್ವವನ್ನು ಕುರುಕ್ಷೇತ್ರದಲ್ಲಿ ತೋರಿಸಿದ್ದೇವೆ. ನನಗೆ ಅನ್ನಿಸೋ ಹಾಗೆ ದುರ್ಯೋಧನನೇ ಮಹಾಭಾರತದ ಹೀರೋ. ಕೃಷ್ಣನ ಕುತಂತ್ರದಿಂದ ದುರ್ಯೋಧನ ಸೋಲಬೇಕಾಯಿತು. ಹಾಗೆ ರಾಮಾಯಣದ ರಾವಣನೂ ಮಹಾಜ್ಞಾನಿ. ಇಬ್ಬರಲ್ಲೂ ಬಹಳಷ್ಟು ಒಳ್ಳೆಯ ಗುಣಗಳಿವೆ. ನನಗೆ ಈ ಚಿತ್ರದಿಂದಲೇ ನಿಜವಾದ ದುರ್ಯೋಧನನ ವ್ಯಕ್ತಿತ್ವ ಅರ್ಥವಾಗಿದ್ದು. ಇದರ  ಜೊತೆಯಲ್ಲಿ ರಾಮಾಯಣ, ಮಹಾಭಾರತಗಳ ಪರಿಚಯವಾಗಿದ್ದು.

ಈ ಚಿತ್ರದಿಂದ ದುರ್ಯೋಧನನ ಇಮೇಜ್ ಚೇಂಜ್ ಆಗಬಹುದೇ?

ಅದನ್ನು ನಾನೊಬ್ಬನೇ ಹೇಳಲಾಗುವುದಿಲ್ಲ. ಒಬ್ಬೊಬ್ಬರಿಗೆ ಒಬ್ಬೊಬ್ಬರು ಇಷ್ಟವಾಗುತ್ತಾರೆ. ನನಗಂತೂ ದುರ್ಯೋಧನ ಇಷ್ಟ. ಚಿತ್ರ ಮಾಡುವಾಗ ಅವನ ಬಗ್ಗೆ ಕೇಳಿ ನನಗೆ ಇನ್ನೂ ಹತ್ತಿರವಾದ.

ಶೂಟಿಂಗ್ ವೇಳೆ ಚಿತ್ರದಾಚೆಗೆ ಕಂಡದ್ದು?  

ನನಗೆ ರಾಮೋಜಿ ಫಿಲ್ಮ್ ಸಿಟಿ ಒಂದು ಜೈಲ್ ಅನ್ನಿಸುತ್ತೆ. ಇಲ್ಲಿ ಯಾವ ಮನರಂಜನೆಯೂ ಇಲ್ಲ. ನಾನು ಹಠ ಮಾಡಿದ್ದಕ್ಕೆ ಇಲ್ಲೊಂದು ಕನ್ನಡ ಚಾನೆಲ್ ವ್ಯವಸ್ಥೆ ಮಾಡಿದ್ದಾರೆ. ಇಲ್ಲದಿದ್ದರೆ ಎಲ್ಲವೂ ತೆಲುಗುಮಯ. ಕೊಟ್ಟದ್ದನ್ನು ಮಾಡು, ತಿನ್ನು, ಮಲಗು ಅಷ್ಟೇ. ಅದನ್ನು ಬಿಟ್ಟರೆ ಇಲ್ಲಿ ಏನೂ ಇಲ್ಲ. ನಮಗೆ ಇದೆಲ್ಲಾ ಒಂದು ಶಾಪ. ನಮ್ಮಲ್ಲಿ ಸ್ಟುಡಿಯೋಗಳಿಲ್ಲದ ಕಾರಣ ಅನಿವಾರ್ಯವಾಗಿ ಇಲ್ಲಿಗೆ ಬಂದಿದ್ದೇವೆ. ನಮ್ಮಲ್ಲೂ ಈ ರೀತಿಯ ಸ್ಟುಡಿಯೋ  ನಿರ್ಮಾಣವಾಗಬೇಕು. ಸರಕಾರ ಹೆಸರಘಟ್ಟದಲ್ಲಿ ಜಾಗ ಕೊಟ್ಟರೂ ಸಹ ನಾವು ಏನೂ ಅಭಿವೃದ್ಧಿ ಮಾಡಿಕೊಳ್ಳಲಾಗಿಲ್ಲ. ಇನ್ನಾದರೂ ಕನ್ನಡ ಇಂಡಸ್ಟ್ರಿಯನ್ನು ಬೆಳೆಸುವ ಕಾರ್ಯವನ್ನು ಎಲ್ಲರೂ ಒಟ್ಟಾಗಿ ಮಾಡಬೇಕು. ಇಲ್ಲಿ ನಾವು ಬಹಳ ಕಷ್ಟಪಟ್ಟು ಚಿತ್ರೀಕರಣ ಮಾಡುತ್ತಿದ್ದೇವೆ.

ಸಂದರ್ಶನ: ಜೆಬಿ ಸರಗೂರು ಕೆಂಡಗಣ್ಣ

 

 

Follow Us:
Download App:
  • android
  • ios