Asianet Suvarna News Asianet Suvarna News

'ಕನ್ನಡ ಚಿತ್ರಗಳನ್ನು ನಮ್ಮವರೇ ಕೊಲ್ಲುತ್ತಿದ್ದಾರೆ'

ಮಫ್ತಿ ನಿರ್ಮಾಪಕರ ನಡೆಗೆ ಅತಿರಥ ನಿರ್ದೇಶಕ ಬೇಸರ

Kannada Movies Are Killed By Our Own People

ಚೇತನ್ ಅಭಿನಯದ ‘ಅತಿರಥ’ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರದ ನಿರ್ದೇಶಕ ಮಹೇಶ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಆದರೆ ಸಿನಿಮಾ ಬಿಡುಗಡೆಯಾದರೆ ನಿರ್ದೇಶಕರು ಯಾಕೆ ಸಿಟ್ಟು ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ಕೇಳಬೇಡಿ. ಯಾಕೆಂದರೆ ಮಹೇಶ್ ಬಾಬು ಸಿಟ್ಟಾಗಿರುವುದು ‘ಮಫ್ತಿ’ ಚಿತ್ರದ ನಿರ್ಮಾಪಕರ ವರ್ತನೆಗೆ. ಸಂತೋಷ್ ಚಿತ್ರ ಮಂದಿರದಲ್ಲಿ ‘ಅತಿರಥ’ ಸಿನಿಮಾ ಶುಕ್ರವಾರ ತೆರೆಗೆ ಬಂದಿದೆ.

ಆದರೆ, ಅದೇ ಚಿತ್ರಮಂದಿರದಲ್ಲಿನ ಮೊದಲ ದಿನದ ಮೊದಲ ಶೋನಲ್ಲೇ ಕಾಣಿಸಿಕೊಂಡಿದ್ದು ‘ಮಫ್ತಿ’ ಚಿತ್ರದ ಪೋಸ್ಟರ್. ‘ಮುಂದಿನ ಬದಲಾವಣೆ’ ಎನ್ನುವ ಪ್ರಕಟಣೆಯೊಂದಿಗೆ ಸಂತೋಷ್ ಚಿತ್ರಮಂದಿರದಲ್ಲೇ ‘ಮಫ್ತಿ’ ಪೋಸ್ಟರ್ ಹಾಕಿದ್ದಾರೆ.

ಒಂದು ಸಿನಿಮಾ ಪ್ರದರ್ಶನವಾಗುವ ಮೊದಲ ದಿನವೇ ಬೇರೊಂದು ಸಿನಿಮಾ ಪೋಸ್ಟರ್ ಹಾಕಿ ಮುಂದಿನ ಬದಲಾವಣೆ ಎಂದರೆ ಅದರ ಅರ್ಥವೇನು? ಈಗಾಗಲೇ ಪ್ರದರ್ಶನ ಗೊಳ್ಳುತ್ತಿರುವ ಚಿತ್ರ ಮುಂದಿನ ವಾರವೇ ತೆಗೆಯಲಾಗುತ್ತದೆ ಎಂಬುದನ್ನು ಪರೋಕ್ಷವಾಗುವ ಹೇಳಿದಂತೆ ಆಗುತ್ತದೆ.

ಸಿನಿಮಾ ಪ್ರದರ್ಶನದ ಮೊದಲ ಶೋನಲ್ಲೇ ಇಂಥ ದ್ದೊಂದು ಅಭಿಪ್ರಾಯ ಮೂಡಿಸಿದರೆ ಸಿನಿಮಾ ನೋಡಲು ಜನ ಬರುತ್ತಾರೆಯೇ? ಈಗ ಹೇಳಿ ಕನ್ನಡ ಸಿನಿಮಾಗಳನ್ನು ಕೊಲ್ಲುತ್ತಿರುವವರು ಯಾರು? ನಮ್ಮ ಚಿತ್ರಗಳಿಗೆ ಬೇರೆ ಭಾಷೆಯ ಸಿನಿಮಾಗಳು ದೊಡ್ಡ ಸಮಸ್ಯೆ ಇಲ್ಲ. ನಮ್ಮವರೇ ದೊಡ್ಡ ಸಮಸ್ಯೆ. ಇನ್ನೂ ಸೆನ್ಸಾರ್ ಆಗದ ಚಿತ್ರದ ಬಿಡುಗಡೆಯ ದಿನಾಂಕ ಹೇಳುವುದೇ ಕಾನೂನು ಬಾಹಿರ. ಅದರಲ್ಲೂ ಬೇರೆ ಚಿತ್ರದ ಪ್ರದರ್ಶನವಾಗುತ್ತಿರುವ ಚಿತ್ರಮಂದಿರದ ಮುಂದೆ ಆ ಚಿತ್ರದ ಪೋಸ್ಟರ್ ಹಾಕುವುದು ಮತ್ತೊಂದು ಕನ್ನಡ ಚಿತ್ರವನ್ನು ನೇರವಾಗಿ ಕೊಲ್ಲುವಂತಹ ನಡೆ ಇದು. ‘ಮಫ್ತಿ’ ಚಿತ್ರದ ನಿರ್ಮಾಪಕರ ವಿರುದ್ಧ ವಿಚಾರ ದಲ್ಲಿ ಯಾರು ಕ್ರಮ ಕೈಗೊಳ್ಳಬೇಕು? ಯಾಕೆ ಕನ್ನಡ ಸಿನಿಮಾ ಗಳನ್ನು ಕನ್ನಡ ನಿರ್ಮಾಪಕರೇ ಕೊಲ್ಲುತ್ತಿದ್ದಾರೆ? ಅದೇ ‘ಮಫ್ತಿ’ ಸಿನಿಮಾ ತೆರೆ ಕಾಣುವ ದಿನ ಇದೇ ರೀತಿ ಬೇರೆ ಚಿತ್ರದ ಪೋಸ್ಟರ್ ಹಾಕಿದರೆ ನಿರ್ಮಾಪಕ ಜಯಣ್ಣ- ಭೋಗೇಂದ್ರ ಸುಮ್ಮನಿರುತ್ತಾರೆಯೇ?... ಇದು ನಿರ್ದೇಶಕ ಮಹೇಶ್ ಬಾಬು ಅವರ ಖಾರವಾದ ಪ್ರಶ್ನೆ.

ಹಾಗಾದರೆ ಇನ್ನೂ ಸೆನ್ಸಾರ್ ಆಗದ ಶಿವರಾಜ್‌ಕುಮಾರ್ ಹಾಗೂ ಶ್ರೀಮುರಳಿ ಅಭಿನಯದ ‘ಮಫ್ತಿ’ ಚಿತ್ರದ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕ ಜಯಣ್ಣ ಹೇಗೆ ಪ್ರಕಟಿಸಿದರು? ಒಂದು ಕನ್ನಡ ಸಿನಿಮಾ ಪ್ರದರ್ಶನವಾಗುತ್ತಿರುವಾಗ ಮುಂದಿನ ಬದಲಾವಣೆ ಹೆಸರಿನಲ್ಲಿ ಬೇರೊಂದು ಕನ್ನಡ ಸಿನಿಮಾ ಪೋಸ್ಟರ್ ಹಾಕದಂತೆ ಹೇಳುವವರು ಯಾರು? ಎಂಬುದು ಮಹೇಶ್ ಬಾಬು ಅವರ ಪ್ರಶ್ನೆ

(ಕನ್ನಡಪ್ರಭ ಸಿನಿವಾರ್ತೆ)

Follow Us:
Download App:
  • android
  • ios