ವಾಸ್ತವ ನಿಧಾನ, ಕನಸು ಪ್ರಧಾನ 'ಸ್ಟ್ರೈಕರ್'!
ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ವೀಕ್‌ನೆಸ್ ಇರುತ್ತದೆ. ಅದು ಮತ್ತೊಬ್ಬರಿಗೆ ಪ್ಲಸ್ ಆಗುತ್ತದೆ. ಅಂಥದ್ದೇ ಒಂದು ಕತೆಯ ಚಿತ್ರವಿದು. ಕಥಾ ನಾಯಕ ಇಲ್ಲಿ ಅನಾಥ. ಆತನಿಗೆ ಕನಸಲ್ಲಿ ನಡೆಯುವ ಘಟನೆಗಳು ವಾಸ್ತವದಲ್ಲಿ ನಿಜವಾಗುತ್ತವೆ. ಕೆಲವೊಮ್ಮೆ ಕನಸುಗಳೇ ವಾಸ್ತವ ಎಂದುಕೊಂಡರೂ ಅವು ಕೇವಲ ಭ್ರಮೆ ಮಾತ್ರ. ಅದನ್ನೇ ಬಳಸಿಕೊಂಡು ಓರ್ವ ವ್ಯಕ್ತಿ ಹೇಗೆಲ್ಲ ತನ್ನ ಅಪರಾಧ ಮುಚ್ಚಿ ಹಾಕಲು ಯತ್ನಿಸುತ್ತಾನೆನ್ನುವುದೇ ಈ ಚಿತ್ರದ ಒನ್‌ಲೈನ್ ಕತೆ.
ದೇಶಾದ್ರಿ ಹೊಸ್ಮನೆ
ಮನುಷ್ಯನಲ್ಲಿ ಕಾಣುವ ವಿಚಿತ್ರ ಬಗೆಯ ಮಾನಸಿಕ ಕಾಯಿಲೆಗಳ ಮೇಲೆಯೇ ಸಾಕಷ್ಟುಸಿನಿಮಾಗಳು ಬಂದಿವೆ. ಖ್ಯಾತ ಮನೋವೈದ್ಯ ಡಾ. ಅಶೋಕ ಪೈ, ತಾವೇ ಅಧ್ಯಯನ ನಡೆಸಿದ್ದ ಮಾನಸಿಕ ಕಾಯಿಲೆಗಳನ್ನೇ ಕತೆಯಾಗಿಸಿಕೊಂಡು ಮೂರ್ನಾಲ್ಕು ಸಿನಿಮಾ ಮಾಡಿದ್ದರು.ಆದರೂ, ಕನ್ನಡದ ಮಟ್ಟಿಗೆ ಕೊಂಚ ವಿಭಿನ್ನ ಎನ್ನುವ ಹಾಗೆ ಇದು ಕನಸು ಮತ್ತು ವಾಸ್ತವಕ್ಕೆ ಸಂಬಂಧಿಸಿದ ಕತೆ. ಇದೊಂದು ಮಾನಸಿಕ ಕಾಯಿಲೆ. ವೈದ್ಯಶಾಸ್ತ್ರದ ಪ್ರಕಾರ ಬ್ರೈನ್ ಡಿಸಾರ್ಡರ್ ಅಥವಾ ನೈಟ್‌ಮೆರ್ ಡಿಸಾರ್ಡರ್ ಎನ್ನಲಾಗುತ್ತಿದೆ. ಈ ತರಹದ ಕಾಯಿಲೆಗೆ ಒಳಗಾದ ಕಥಾ ನಾಯಕ ಹೇಗೆಲ್ಲ ಕನಸು ಕಾಣುತ್ತಾನೆ, ಅದರಲ್ಲಿ ವಾಸ್ತವ ಯಾವುದು, ಭ್ರಮೆ ಯಾವುದು, ಆ ಕಾಯಿಲೆಯಿಂದಾಗಿಯೇ ಆತ ಹೇಗೆಲ್ಲ ಸಂಕಷ್ಟಕ್ಕೆ ಸಿಲುಕುತ್ತಾನೆ, ಕೊನೆಗೆ ಅದರಿಂದ ಹೇಗೆ ಪಾರಾಗುತ್ತಾನೆ ಎನ್ನುವುದೇ ಚಿತ್ರದ ಕೀ ಪಾಯಿಂಟ್. ಅದನ್ನು ಸಸ್ಪೆನ್ಸ್ ಹಾಗೂ ಕ್ರೈಮ್ ಥ್ರಿಲ್ಲರ್ ಜಾನರ್‌ನಲ್ಲಿ ರೋಚಕವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪವನ್ ತ್ರಿವಿಕ್ರಮ್.
ಚಿತ್ರದ ಮೊದಲರ್ಧ ವಾಸ್ತವ ಮತ್ತು ಕನಸುಗಳ ಕಥಾ ಹಂದರ. ಕಥಾ ನಾಯಕ ಸಿದ್ಧುಗೆ ಪೊಲೀಸರು ಬೇಡಿ ತೋಡಿಸಿ ಕರೆದುಕೊಂಡು ಹೋಗುವ ಸನ್ನಿವೇಶದೊಂದಿಗೆ ಪರದೆ ಮೇಲೆ ಕತೆ ತೆರೆದುಕೊಳ್ಳುತ್ತದೆ. ಆತ ಪೊಲೀಸರಿಂದ ಬಂಧನಕ್ಕೊಳಗಾಗುವಂತಹ ಅಪರಾಧ ಏನು ಮಾಡಿದ್ದಾ ಎನ್ನುವ ಕುತೂಹಲ ಪ್ರೇಕ್ಷಕರದ್ದು. ಅದನ್ನು ಹೇಳ ಹೊರಟ ನಿರ್ದೇಶಕರು, ಕಥಾ ನಾಯಕ ಕನಸು ಮತ್ತು ವಾಸ್ತವ ಪ್ರಸಂಗಗಳಿಗೇ ಚಿತ್ರದ ಮೊದಲರ್ಧ ಮೀಸಲಿಟ್ಟಿದ್ದಾರೆ. ಇನ್ನೇನು ವಿರಾಮ ಎನ್ನುವ ಹೊತ್ತಿಗೆ ಸಿದ್ಧ ಗೆಳೆಯ ರವಿ ಕೊಲೆ ಆಗುತ್ತದೆ. ಆ ಕೊಲೆ ಮಾಡಿದ್ದು ಯಾರು? ದ್ವಿತೀಯಾರ್ಧ ಪೂರ್ತಿ ಕಳ್ಳ-ಪೊಲೀಸ್ ಆಟ. ಕಥಾ ನಾಯಕ ಸಿದ್ಧು ಮತ್ತು ಪೊಲೀಸ್ ಇನ್ಸ್‌ಸ್ಪೆಕ್ಟರ್ ಪುರುಷೋತ್ತಮ್ ನಡುವಿನ ಜಿದ್ದಾಜಿದ್ದಿ. ಇನ್ಸ್‌ಸ್ಪೆಕ್ಟರ್ ಪುರುಷೋತ್ತಮ್‌ಗೆ ರವಿ ಕೊಲೆ ಗೆ ಸಿದ್ಧುನೇ ಕಾರಣ ಎನ್ನುವ ಶಂಕೆ. ಸಿದ್ಧುಗೆ ಮತ್ತೊಬ್ಬರ ಕೈವಾಡದ ಶಂಕೆ. ಕೊನೆಗೆ ಯಾರು ಅಪರಾಧಿ ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್.
ಚಿತ್ರಕ್ಕೆ ಆಯ್ಕೆ ಮಾಡಿಕೊಂಡ ಕತೆ ಚೆನ್ನಾಗಿದೆ. ಹಾಗೆ ನೋಡಿದರೆ ಹೊಸ ತರಹದ ಥ್ರಿಲ್ಲರ್. ಅದರ ನಿರೂಪಣೆಯಲ್ಲಿ ನಿಧಾನಗತಿ ಕಾಣುತ್ತೆ. ಕತೆಯ ವೇಗಕ್ಕೆ ಇನ್ನಷ್ಟುರೋಚಕತೆಯೂ ಬೇಕಿತ್ತು. ಸಸ್ಪೆನ್ಸ್ ಹಾಗೂ ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿಗೆ ರೋಚಕತೆಯೇ ಜೀವಾಳ. ಅದರ ಕೊರತೆ ಇಲ್ಲಿ ಎದ್ದು ಕಾಣುತ್ತದೆ.ಆದರೂ ಉದ್ವೇಗಕ್ಕೆ ಸಿಲುಕಿಸದೆ, ಬೇಸರವೂ ಮೂಡಿಸದೆ ಸಹಜವಾದ ಮನಸ್ಥಿತಿಯಲ್ಲಿ ಕೊನೆ ತನಕ ಹಿಡಿದಿಡುವ ಶಕ್ತಿ ಚಿತ್ರಕ್ಕಿದೆ. ಹಾಡುಗಳಲ್ಲಿ ಇಷ್ಟವಾಗುವ ಭರತ್ ಸಂಗೀತ, ಹಿನ್ನೆಲೆಯಲ್ಲಿ ತಳ ತಪ್ಪಿದೆ. ಚಿತ್ರಕ್ಕೆ ಅದೇ ಮೈನಸ್ ಎನಿಸುತ್ತದೆ. ಕತೆಗೆ ತಕ್ಕಂತೆ ಸಂಭಾಷಣೆಯೂ ಖಡಕ್ ಆಗಿದೆ. ರಾಕೇಶ್ ಎರಗಲ್ಲು ಕ್ಯಾಮರಾ ವರ್ಕ್ ಪರ್ವಾಗಿಲ್ಲ. ಕಲಾವಿದರ ಅಭಿನಯಕ್ಕೆ ಬಂದರೆ ನಾಯಕ ನಟ ಪ್ರವೀಣ್ ತೇಜ್, ಹಾವಭಾವದೊಂದಿಗೆ ಇ,್ಟವಾಗುತ್ತಾರೆ. ಲೋಕಿ ಖಳನಟನ ಇಮೇಜ್ ದಾಟಿ ಹೊಸ ಬಗೆಯ ಪಾತ್ರಗಳನ್ನು ಲೀಲಾ ಜಾಲವಾಗಿ ನಿಭಾಯಿಸಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಧರ್ಮಣ್ಣ ಹಾಸ್ಯದಲ್ಲೂ, ಅತ್ತು ಕರೆಯುವ ನಟನೆಯಲ್ಲೂ ರಂಜಿಸುತ್ತಾರೆ. ಲುಕ್‌ನಲ್ಲೇ ಪ್ರೇಕ್ಷಕರ ಮನೆ ಗೆಲ್ಲುವ ನಾಯಕಿ ಶಿಲ್ಪಾ ಮಂಜುನಾಥ್, ಆಗಾಗ ತೆರೆ ಮೇಲೆ ಕಾಣಿಸಿಕೊಂಡರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಟೈಟಲ್‌ಗೆ ತಕ್ಕಂತೆ ಚಿತ್ರದೊಳಗಡೆ ಅಷ್ಟುಪಾತ್ರಗಳಿಗೂ ಒಂದೇ ಪ್ರಾಮುಖ್ಯತೆ ಸಿಕ್ಕಿದೆ. ಯಾವುದೇ ಹೀರೋಯಿಸಂ, ಬ್ಯುಲ್ಡಪ್ ಗಿಲ್ಡಪ್ ಇಲ್ಲದೆ ಆ ಆಯಾ ಪಾತ್ರಗಳಲ್ಲಿ ಅಷ್ಟುಕಲಾವಿದರು ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ಆದರೆ ಕತೆಯಲ್ಲಿ ಇನ್ನಷ್ಟುಗಟ್ಟಿತನ ಬೇಕಿತ್ತು, ಹಾಗೆಯೇ ನಿರೂಪಣೆಯಲ್ಲಿ ಮತ್ತಷ್ಟುಬಿಗಿಹಿಡಿತ ಬೇಕಿತ್ತು ಎನ್ನುವುದೇ ಕೊರತೆ.
ಚಿತ್ರ: ಸ್ಟ್ರೈಕರ್
ತಾರಾಗಣ: ಪ್ರವೀಣ್ ತೇಜ್, ಭಜರಂಗಿ ಲೋಕಿ, ಶಿಲ್ಪಾ ಮಂಜುನಾಥ್, ಧರ್ಮಣ್ಣ ಕಡೂರು
ನಿರ್ದೇಶನ: ಪವನ್ ತ್ರಿವಿಕ್ರಮ್
ಛಾಯಾಗ್ರಹಣ: ರಾಕೇಶ್ ಎರಕಲ್ಲು
ಸಂಗೀತ : ಬಿ.ಜೆ. ಭರತ್
ರೇಟಿಂಗ್ 3