ಅಪಾದಮಸ್ತಕ ರಸಹೀನ
‘ಪಾದರಸ’ ಎಂಬ ಒಬ್ಬ ಚುರುಕಿನ ಮನುಷ್ಯನ ಕಥೆಯನ್ನು ಹೇಳಲು ಎರಡೂವರೆ ಗಂಟೆ ತೆಗೆದುಕೊಂಡಿದ್ದಾರೆ ನಿರ್ದೇಶಕ. ನೀವು ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರೆ ಚಿತ್ರ ನೋಡಬೇಕು.
ಒಂದೂವರೆ ವರ್ಷದ ಪುಟ್ಟ ಮಗು ಕೂತಿದೆ. ಅದರ ಎದುರುಗಡೆ ನಾಯಕನಿದ್ದಾನೆ. ಅವನು ಸಿಗರೇಟು ಸೇದುತ್ತಿದ್ದಾನೆ. ಸಿಗರೇಟಿನ ಹೊಗೆ ಆ ಮಗುವಿನ ಮುಖಕ್ಕೆ ಬಡಿಯುತ್ತಿದೆ. ಅಂಥಾ ಸಂವೇದನಾರಹಿತ ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ ಸಂಚಾರಿ ವಿಜಯ್. ಆ ಮಟ್ಟಿಗೆ ಅವರನ್ನು ಈ ಚಿತ್ರ ಬದಲಿಸಿದೆ ಎಂದರೆ ತಪ್ಪೇನಿಲ್ಲ. ಇಷ್ಟೊಂದು ಬದಲಾಗಿದ್ದು ಅವರ ಹೆಗ್ಗಳಿಕೆಯೂ ಹೌದು. ‘ಪಾದರಸ’ ಎಂಬ ಒಬ್ಬ ಚುರುಕಿನ ಮನುಷ್ಯನ ಕಥೆಯನ್ನು
ಹೇಳಲು ಎರಡೂವರೆ ಗಂಟೆ ತೆಗೆದುಕೊಂಡಿದ್ದಾರೆ ನಿರ್ದೇಶಕ.
ಅವನ ಪೋಲಿತನ, ತುಂಟಾಟ, ಪ್ರೇಮ ಇವೆಲ್ಲದರ ಜೊತೆಗೆ ಒಂದರ್ಧ ಕೆಜಿ ಒಳ್ಳೆಯತನವನ್ನೂ ಕಟ್ಟಿಕೊಟ್ಟಿದ್ದಾರೆ. ಆ ಪಾತ್ರದ ಜರ್ನಿಯ ಜೊತೆಗಾರರು ವೈಷ್ಣವಿ ಮತ್ತು ನಿರಂಜನ್. ಒಬ್ಬ ಮನುಷ್ಯ ಒಳಗೆ ಎಷ್ಟೇ ನೋವಿದ್ದರೂ ಹೊರಗೆ
ನಗುನಗುತ್ತಾ ಇರುತ್ತಾನೆ ಅನ್ನುವ ಒಂದು ಪಾಯಿಂಟು ಹೊರತುಪಡಿಸಿದರೆ ಎಡವಟ್ಟುಗಳೇ ಇಡೀ ಚಿತ್ರದ ಸರಕು. ತನ್ನದಲ್ಲದ ದೊಗಳೆ ಅಂಗಿಯನ್ನು ಹಾಕಿದಂತೆ ಕಾಣಿಸುವ ಸಂಚಾರಿ ವಿಜಯ್ ಯಾವುದೋ ಕೆಲವು ಆ್ಯಂಗಲ್ಲಿನಲ್ಲಿ
ನೀಟಾಗಿ ಕಾಣಿಸುತ್ತಾರೆ. ಉಳಿದಂತೆ ಅಂಗಿಯ ದೊಗಳೆತನ ಎದ್ದೆದ್ದು ಕಾಣುತ್ತದೆ. ಪಾತ್ರ ಒಳ್ಳೆಯದಾಗಿರದಿದ್ದರೂ ಪರವಾಗಿಲ್ಲ, ಸ್ಕ್ರಿಪ್ಟು ವಿಧಿಲೀಲೆಯಂತಿರಬೇಕು ಅನ್ನುವುದು ಈ ಕಥೆಯ ನೀತಿ.