ಚಿತ್ರ ವಿಮರ್ಶೆ: ಪುಣ್ಯಾತ್‌ಗಿತ್ತೀರು
ಫಸ್ಟ್ ಹಾಫ್ ಬಿಲ್ಡಪ್, ಸೆಕೆಂಡ್ ಹಾಫ್ ಟೇಕಾಫ್. ಇದು ಪುಣ್ಯಾತ್‌ಗಿತ್ತೀರು ಸಿನಿಮಾ. ಟೀ ಅಂಗಡಿ ಮಾಲೀಕನ ಮಗನೊಬ್ಬ ದೊಡ್ಡ ಡಾನ್ಸರ್ ಆಗುವ ಕನಸು ನನಸಾಗುವ ಕಥೆ ಇದು.
ದೇಶಾದ್ರಿ ಹೊಸ್ಮನೆ
ಆ ಕಥೆ ಶುರುವಾಗುವುದೇ ವಿರಾಮದ ನಂತರ. ಉಳಿದಂತೆ ಚಿತ್ರದ ಮೊದಲರ್ಧವೀಡಿ ನಾಲ್ವರು ಪುಣ್ಯಾತ್‌ಗಿತ್ತೀಯರ ಬಿಲ್ಡಿಪ್‌ಗೆ ಸೀಮಿತ. ಸ್ಟಾರ್‌ಗಳಿಲಿಲ್ಲದಿದ್ದರೂ ಮಹಿಳಾ ಪ್ರಧಾನ ಕತೆಯೊಂದಿಗೆ ನಾಲ್ವರು ಹುಡುಗಿಯರಿಗೆ ಒಂದಷ್ಟುಫೈಟು, ಮತ್ತೊಂದಿಷ್ಟುಸೆಂಟಿಮೆಂಟು, ಅದರ ಜತೆಗೆ ಮೂರ್ನಾಲ್ಕು ಸಾಂಗು ಇಟ್ಟು ಪ್ರೇಕ್ಷಕರನ್ನು ರಂಜಿಸಬಹುದೆನ್ನುವ ಗುಂಗಿನಲ್ಲೇ ಮಾಡಿದ್ದಾರೆ ನಿರ್ದೇಶಕರು.
ಆ ಮಟ್ಟಿಗೆ ಚಿತ್ರದ ಮೊದಲಾರ್ಧದ ಪ್ರಯತ್ನ ವ್ಯರ್ಥ ಪ್ರಲಾಪವೇ ಹೌದು. ಚಿತ್ರದ ಅಸಲು ಕತೆ ದ್ವಿತೀಯಾರ್ಧದಲ್ಲಿದೆ. ಅಲ್ಲಿ ಒಂದಷ್ಟುಕುತೂಹಲವಿದೆ. ನೋಡುವುದಕ್ಕೂ ರಂಜಿಸುತ್ತದೆ. ಸಿನಿಮಾ ಅಷ್ಟಕ್ಕೇ ಮಾತ್ರ ಸೇಫ್.
ತಾರಾಗಣ : ಮಮತಾ ರಾಹುತ್, ದಿವ್ಯಶ್ರೀ, ಐಶ್ವರ್ಯ, ಸಂಭ್ರಮ, ಶೋಭರಾಜ್, ಕುರಿರಂಗ, ಗೋವಿಂದೇಗೌಡ
ನಿರ್ದೇಶನ : ರಾಜು ಬಿ.ಎನ್
ನಿರ್ಮಾಣ: ಸತ್ಯನಾರಾಯಣ್
ಅವರು ನಾಲ್ವರು ಅನಾಥ ಹುಡುಗಿಯರು. ಆರ್ಟಿಸ್ಟ್ ಆರತಿ, ಮಿಟ್ರು ಮಂಜುಳಾ, ಸುಳ್ಳಿ ಸುಜಾತ, ಬಾಯ್ಬಡುಕಿ ಭವ್ಯ ಅವರ ಹೆಸರು. ಆ ಹೆಸರಿಗೆ ತಕ್ಕಂತೆ ಗಂಡು ಬೀರಿ ಎನಿಸಿಕೊಂಡವರು. ಸುಳ್ಳು ಹೇಳಿದರೂ ಸರಿ, ಮೋಸ ಮಾಡಿದರು ಸರಿ, ಲೈಫು ಎಂಜಾಯ್ ಮಾಡ್ಬೇಕು ಎನ್ನುವ ಸೂತ್ರ ಅವರದ್ದು. ಆ ಪ್ರಕಾರವೇ ಅವರು ಸುಳ್ಳು ಹೇಳುತ್ತಾರೆ, ದರ್ಪ ತೋರಿಸುತ್ತಾರೆ. ಗಂಡು ಬೀರಿಗಳ ಹಾಗೆ ಅಬ್ಬರಿಸುತ್ತಾರೆ. ಅದಕ್ಕೆಲ್ಲ ನಿರ್ದೇಶಕರು ಮಾಸ್ ಲುಕ್ ಕೊಟ್ಟು ಅವರನ್ನು ಸಾಂಗು, ಫೈಟುಗಳ ಮೂಲಕ ಭರ್ಜರಿಯಾಗಿಯೇ ತೋರಿಸಿದ್ದಾರೆ.
ಚಿತ್ರ ವಿಮರ್ಶೆ: 'ಸಾಹೋ'ಗೆ ಸಾಥ್ ಕೊಟ್ರಾ ಕನ್ನಡಿಗರು?
ಅಷ್ಟಾಗಿಯೂ ಅವರಲ್ಲೂ ಒಂದಷ್ಟುಮಾನವೀಯತೆ ಇದೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು ಎನ್ನುವ ಕಕ್ಕುಲತೆ ಇದೆ. ಅವರ ಆ ಗುಣದೊಂದಿಗೆ ಕನೆಕ್ಟ್ ಆದ ಹುಡುಗ ಪ್ರಸನ್ನ. ಡಾನ್ಸರ್ ಆಗಬೇಕೆನ್ನುವ ಆತನ ಕನಸನ್ನು ನನಸಾಗಿಸಲು ಹೊರಟಾಗ ಅವರೆಲ್ಲ ಹೇಗೆಲ್ಲ ಸವಾಲು ಎದುರಿಸುತ್ತಾರೆ, ಏನೆಲ್ಲ ಸಂಕಷ್ಟಕ್ಕೆ ಸಿಲುಕುತ್ತಾರೆ, ಅವೆಲ್ಲವನ್ನು ಮೆಟ್ಟಿಹೇಗೆ ಸಕ್ಸಸ್ ಆಗುತ್ತಾರೆನ್ನುವುದು ಚಿತ್ರದ ಕಥೆ.
ಚಿತ್ರದಲ್ಲಿ ಶೋಭರಾಜ್ ಅವರದ್ದು ಪೊಲೀಸ್ ಪಾತ್ರ. ಕುರಿ ರಂಗ ರಿಯಲ್ ಎಸ್ಟೇಟ್ ಎಂಜೆಟ್. ಹೆಸರು ರಾಯಲ್ ರಂಗ. ಅವರಿದ್ದರೂ, ಚಿತ್ರದ ಪ್ರಧಾನ ಪಾತ್ರಧಾರಿಗಳೇ ಮಮತಾ ರಾಹುತ್ ಅಲಿಯಾಸ್ ಆರ್ಟಿಸ್ಟ್ ಆರತಿ, ದಿವ್ಯಶ್ರೀ ಅಲಿಯಾಸ್ ಮೀಟ್ರು ಮಂಜುಳಾ, ಐಶ್ವರ್ಯ ಅಲಿಯಾಸ್ ಬಾಯ್ಬಡುಕಿ ಭವ್ಯ ಹಾಗೂ ಸಂಭ್ರಮ ಅಲಿಯಾಸ್ ಸುಳ್ಳಿ ಸುಜಾತ. ಆ ಪಾತ್ರಗಳಿಗೆ ತಕ್ಕಂತೆ ಅವರೆಲ್ಲ ಯಾವುದೇ ಸ್ಟಾರ್‌ಗೆ ಕಮ್ಮಿ ಇಲ್ಲದಂತೆ ಪಕ್ಕಾ ಮಾಸ್ ಲುಕ್‌ನಲ್ಲಿ ಭರ್ಜರಿಯಾಗಿಯೇ ಕಾಣಿಸಿಕೊಂಡಿದ್ದರೂ, ಸೆಂಟಿಮೆಂಟ್ ಸನ್ನಿವೇಶಗಳಲ್ಲಿನ ಅವರ ಹಾವಭಾವ ನೀರಸವಾಗಿದೆ.
ನಟನೆಗೆ ಆದ್ಯತೆ ಸಿಗದೆ ಬರೀ ಬಿಲ್ಡಪ್‌ಗಳಲ್ಲೇ ಕಳೆದುಹೋಗಿದ್ದಾರೆ. ಎರಡು ಹಾಡುಗಳಲ್ಲಿ ಚಿತ್ರದ ಸಂಗೀತ ಆಪ್ತವಾಗುತ್ತದೆ. ಚಿತ್ರದ ಮೊದಲಾರ್ಧ ಬಿಲ್ಡಪ್ ಸಹಿಸಿಕೊಳ್ಳುವುದು ಕಷ್ಟವಾದರೂ, ಟೀ ಅಂಗಡಿ ಮಾಲಿಕನ ಮಗ ಪ್ರಸನ್ನ ಡಾನ್ಸರ್ ಆಗುವ ಚಿತ್ರಣ ಮನಮಿಡಿಯುವಂತೆ ಮಾಡುವುದು ಚಿತ್ರದ ಹೈಲೈಟ್.