ಆತ್ಮಗಳ ಭಾವನಾತ್ಮಕಥೆ ‘ಲೋಫರ್ಸ್ ’!
ಈ ಚಿತ್ರದ ಹೆಸರು ‘ಲೋಫರ್ಸ್’. ಆದರೆ, ಚಿತ್ರದ ಕತೆಗೂ ಹಾಗೂ ಹೆಸರಿಗೂ ಕೊಂಚವೂ ಸಂಬಂಧವಿಲ್ಲ ಎಂದರೆ ಕತೆಯಲ್ಲಿ ಚಿತ್ರದ ಟೈಟಲ್‌ಗೂ ಮೀರಿದ್ದು ಏನೋ ಇದೆ ಎಂದರ್ಥ. ಆ ‘ಏನೋ’ ಅಂಶವನ್ನು ತಿಳಿಯಬೇಕು ಅಂದರೆ ನೋಡುಗ ಕ್ಲೈಮ್ಯಾಕ್ಸ್ ವರೆಗೂ ಕಾಯಬೇಕು. ಚಿತ್ರದ ಕೊನೆಯಲ್ಲಿ ಅಂಥದ್ದೊಂದು ತಿರುವು ಇಟ್ಟುಕೊಂಡೇ ನಿರ್ದೇಶಕ ಮೋಹನ್ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಹೀಗಾಗಿ ಚಿತ್ರದ ಹೆಸರಿನಂತೆ ಸಿನಿಮಾ ‘ಲೋಫರ್’ ಅಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.
ಆರ್ ಕೇಶವಮೂರ್ತಿ
ಇದೊಂದು ಹಾರರ್ ಕಂ ಕ್ರೈಮ್ ಕತೆಯ ಚಿತ್ರ ಎಂದು ಒಂದು ಸಾಲಿನ ಷರಾ ಬರೆದುಬಿಡಬಹುದು. ಆದರೆ, ಆತ್ಮಗಳ ಹೆಸರಿನಲ್ಲಿ ನಡೆಯುವ ಒಂದು ಎಮೋಷನಲ್ ಕತೆ ಇದೆ. ಅದು ಏಟಿಗೆ ಪ್ರತಿ ತಿರುಗೇಟು ಎನ್ನುವ ದ್ವೇಷದ ಭಾವನೆಯೂ ಇದೆ. ಜತೆಗೆ ಸ್ನೇಹಿತರನ್ನೇ ಸಾಯಿಸುವ ಮತ್ತೊಬ್ಬ ಸ್ನೇಹಿತನಿದ್ದಾನೆ.
ಸಾವು, ಸ್ನೇಹ, ಪ್ರೀತಿ, ಗುಂಡ್ರುಗೋವಿತನ, ನೋಡುಗನ ಎದೆಯ ತಾಪಮಾನ ಏರಿಸುವ ಮೂವರು ಹುಡುಗಿಯರು, ಸಸ್ಪೆನ್ಸ್ ... ಈ ಎಲ್ಲವೂ ಸೇರಿಕೊಂಡು ‘ಲೋಫರ್ಸ್’ ಹೆಸರಿನ ಚಿತ್ರವನ್ನು ಸಾಧ್ಯವಾದಷ್ಟುಮೇಲಕ್ಕೆತ್ತುವ ಪ್ರಯತ್ನ ಮಾಡಿವೆ. ಆದರೆ, ಚಿತ್ರಕತೆಗೆ ಬೇಕಾದ ಟ್ವಿಸ್ಟ್‌ಗಳನ್ನು ಜೋಡಿಸುವುದಕ್ಕೆ ಗಮನ ಕೊಟ್ಟಂತೆ ಪಾತ್ರದಾರಿಗಳನ್ನು (ಕ್ಯಾರೆಕ್ಟರ್ಸ್) ರೂಪಿಸುವತ್ತ ಗಮನ ಕೊಟ್ಟಿಲ್ಲ. ಅಲ್ಲದೆ ಹೊಸ ಕಲಾವಿದರು ಬೇರೆ. ಈ ಕಾರಣಕ್ಕೆ ಅವರು ಬಂದರು, ಹೋದರು ಎನ್ನುವಂತೆ ತೆರೆ ಮೇಲಿನ ಪಾತ್ರಗಳು ನೋಡುಗನಿಗೆ ಭಾಸವಾಗುತ್ತವೆ. ಒಂದು ಕತೆಗೆ ಹಿನ್ನೆಲೆ ಇರುವಂತೆ, ಆ ಕತೆಯೊಳಗೆ ಪ್ರವೇಶಿಸುವ ಪಾತ್ರಕ್ಕೂ ಹಿಂದೆ- ಮುಂದೆ ಇಲ್ಲದಿದ್ದಾಗ ಪ್ರೇಕ್ಷಕನಿಗೆ ಆ ಚಿತ್ರ ನಾಟುವುದು ಕಷ್ಟ. ಯಾವುದೇ ರೀತಿಯಲ್ಲಿ ಜವಾಬ್ದಾರಿ ಇಲ್ಲದೆ ತಿರುಗಾಡಿಕೊಂಡಿರುವ ಮೂವರು ಹುಡುಗಿಯರು, ನಾಲ್ಕು ಮಂದಿ ಹುಡುಗರು. ಇವರ ಪೈಕಿಗೆ ಒಬ್ಬನದ್ದು ಗಾಂಜಾ ಮಾರುವ ಕೆಲಸ. ಇವರೆಲ್ಲ ಸೇರಿ ಆಗಾಗ ಟ್ರಿಪ್ ಹೋಗುವುದು ವಾಡಿಕೆ. ಹೀಗೆ ಒಮ್ಮೆ ವೀಕೆಂಡ್ ಮೋಜಿನಲ್ಲಿ ಹೋದಾಗ ಒಬ್ಬನಿಗೆ ಒಂದು ಮನೆ ಕಾಣುತ್ತದೆ. ಆ ಮನೆಗೆ ಆಕಸ್ಮಿಕವಾಗಿ ಭೇಟಿ ಕೊಡುತ್ತಾನೆ. ಆದರೆ, ತಾನು ಆ ಮನೆಗೆ ಹೋಗುತ್ತಿರುವ ಬಗ್ಗೆ ನೆನಪು ಇದೆ. ವಾಪಸ್ಸು ಬರುತ್ತಿರುವ ಬಗ್ಗೆ ನೆನಪಿಲ್ಲ.
ಚಿತ್ರ: ಲೋಫರ್ಸ್
ತಾರಾಗಣ: ಚೇತನ್, ಅರ್ಜುನ್ ಆರ್ಯ, ಮನೋಜ್, ಕೆಂಪೇಗೌಡ, ಶ್ರಾವ್ಯ, ಸುಷ್ಮ, ಸಾಕ್ಷಿ, ಎಂ.ಎಸ್.ಉಮೇಶ್, ಟೆನ್ನಿಸ್ ಕೃಷ್ಣ, ಭಾರತಿ
ನಿರ್ದೇಶನ: ಎಸ್ ಮೋಹನ್
ನಿರ್ಮಾಣ: ಬಿ. ಎನ್. ಗಂಗಾಧರ್ ಅವರು ನಿುರ್‍ಸಿರುವ
ಸಂಗೀತ: ದಿನೇಶ್ ಕುಮಾರ್
ಛಾಯಾಗ್ರಾಹಣ: ಪ್ರಸಾದ್ ಬಾಬು
ಹಾಗಾದರೆ ಆ ಮನೆಯಲ್ಲಿ ಏನಿದೆ? ಅಜ್ಜಿ, ಮೊಮ್ಮಗಳು, ಮನೆಯ ಮುಂದೆ ಶೆಡ್ ಹಾಕಿಕೊಂಡಿರುವ ಗ್ಯಾರೇಜ್ ವ್ಯಕ್ತಿ ಇವರೆಲ್ಲ ಯಾರು? ಇವರಿಗೆ ಬೇಜವಾಬ್ದಾರಿ ಗ್ಯಾಂಗಿಗೂ ಸಂಬಂಧವೇನು? ಇಂಥ ಪ್ರಶ್ನೆಗಳಿಗೆ ಉತ್ತರ ಸಿಗುವ ಹೊತ್ತಿಗೆ ಸಿನಿಮಾ ಅರ್ಧ ಮುಗಿದು ಇನ್ನರ್ಧ ಶುರುವಾಗುತ್ತದೆ. ಹಾಗೆ ವಿರಾಮದ ನಂತರ ಕತೆಯ ನಿಜವಾದ ನೆರಳು ತೆರೆದುಕೊಳ್ಳುತ್ತದೆ. ಅದನ್ನು ತೆರೆ ಮೇಲೆ ನೋಡಿ. ಮೊದಲೇ ಹೇಳಿದಂತೆ ಕತೆಗೆ ತಕ್ಕಂತೆ ಪಾತ್ರಗಳನ್ನು ದುಡಿಸಿಕೊಂಡಿಲ್ಲ. ಹಾಡು, ಫೈಟ್‌ಗಳಲ್ಲಿ ಗಮನ ಸೆಳೆಯುವ ಚಿತ್ರದ ನಾಯಕ, ನಾಯಕಿಯರು ಉಳಿದ ಸಂದರ್ಭಗಳಲ್ಲಿ ಸಪ್ಪೆ ಎನಿಸುತ್ತಾರೆ. ಕತೆಯನ್ನು ಅನಗತ್ಯವಾಗಿ ಎಳೆಗಿದಿದ್ದು, ಕಾಮಿಡಿ ಹೆಸರಿನ ಆಡುವ ಮಾತುಗಳು ಸಹಿಸಿಕೊಳ್ಳುವುದು ಕಷ್ಟ. ಉಳಿದಿದ್ದು ನೋಡುಗನಿಗೆ ಬಿಟ್ಟವಿಚಾರ.