ಚಿತ್ರ ವಿಮರ್ಶೆ: ಕೃಷ್ಣ ಗಾರ್ಮೆಂಟ್ಸ್
ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದು ಗಾರ್ಮೆಂಟ್ಸ್ ಉದ್ಯಮಕ್ಕೆ ಸಂಬಂಧಿಸಿದ ಕತೆ. ಅಲ್ಲಿ ಕೆಲಸ ಮಾಡುವ ಅಮಾಯಕ ಹೆಣ್ಣು ಮಕ್ಕಳ ತವಕ, ತಲ್ಲಣವೇ ಚಿತ್ರದ ಕಥಾ ಹಂದರ. ಹಳ್ಳಿಯ ಯುವ ಜೋಡಿಯೊಂದು, ಪ್ರೀತಿಸಿ ಮದುವೆಯಾದ ನಂತರ ಹೊಸ ಬದುಕು ಅರಸಿ, ಬೆಂಗಳೂರು ನಗರಕ್ಕೆ ಬಂದಿಳಿಯುತ್ತದೆ. ಅವರೇ ಚಿತ್ರದ ನಾಯಕ ಅಶೋಕ ಮತ್ತು ನಾಯಕಿ ನೇತ್ರಾ.
ದೇಶಾದ್ರಿ ಹೊಸ್ಮನೆ
ಜೀವನಕ್ಕೊಂದು ದಾರಿ ಬೇಕು, ನಾಯಕ ಪೆಟ್ರೋಲ್ ಬಂಕ್‌ನಲ್ಲಿ ಕೆಲಸಕ್ಕೆ ಸೇರಿದರೆ, ನಾಯಕಿ ಗಾರ್ಮೆಂಟ್ಸ್ ಫ್ಯಾಕ್ಟರಿ ಕಡೆ ಮುಖ ಮಾಡುತ್ತಾಳೆ. ಅವರಿಬ್ಬರ ಪೈಕಿ ಸಮಸ್ಯೆಗೆ ಸಿಲುಕುವುದು ನಾಯಕಿ. ಅಂದವಾದ ಹುಡುಗಿ ಆಕೆ. ಚೆಲುವಾದ ಆ ಹುಡುಗಿ ಮೇಲೆ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಲೀಕ ಕಣ್ಣು ಹಾಕಿದ. ಆತನಿಂದ ಹೇಗಾದ್ರೂ ಸರಿ ಪಾರಾಗಬೇಕೆಂದು ಆಕೆ ಯೋಚಿಸುತ್ತಿದ್ದಾಗಲೇ ಫ್ಯಾಕ್ಟರಿ ಮಾಲೀಕ ಸುಜಯ್ ಕೊಲೆ ಆಗಿ ಹೋದ. ವಿಚಿತ್ರ ಅಂದ್ರೆ, ಕೊಲೆಯಾದ ಸುಜಯ್ ದೇಹ, ಪತ್ತೆಯಾಗಿದ್ದು ನಾಯಕಿ ನೇತ್ರಾ ಮನೆಯಲ್ಲೇ. ಅದನ್ನು ತಂದು ಹಾಕಿದವರು ಯಾರು? ಆ ಕೊಲೆ ಮಾಡಿದ್ದು ಯಾರು? ಯಾಕಾಗಿ ನಡೆಯಿತು ಆ ಕೊಲೆ? ಈ ಪ್ರಶ್ನೆಗಳ ಕುತೂಹಲವೇ ಚಿತ್ರದ ಕತೆ.
ತಾರಾಗಣ: ಭಾಸ್ಕರ್ ನೀನಾಸಂ, ರಶ್ಮಿತಾ, ಚಂದನ್ ಗೌಡ , ರಾಜೇಶ್ ನಟರಂಗ,
ನಿರ್ದೇಶನ : ಸಿದ್ದು ಪೂರ್ಣಚಂದ್ರ
ಸಂಗೀತ: ರಘು ಧನ್ವಂತ್ರಿ
ಛಾಯಾಗ್ರಹಣ: ಚಿದಾನಂದ್, ಚಂದ್ರಶೇಖರ್
ಹೆಚ್ಚೇನು ತಿರುವುಗಳಿರದ, ಅಷ್ಟಾಗಿಯೂ ಕುತೂಹಲವೂ ಎನಿಸದ ಸಾದಾಸೀದಾ ಕ್ರೈಮ್ ಥ್ರಿಲ್ಲರ್ ಕತೆ. ಹಳ್ಳಿಯ ಪರಿಸರದೊಳಗೆ ಮುಗ್ಧತೆಯಲ್ಲಿ ಪ್ರೀತಿಯಲ್ಲಿ ಒಂದಾಗುವ ಒಂದು ಜೋಡಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಆಗುವುದು, ಬದುಕು ಕಟ್ಟಿಕೊಳ್ಳಲು ನಗರಕ್ಕೆ ಬರುವುದು, ಸವಾಲು ಹಾಕುವ ನಗರದೊಳಗೆ ಪ್ರತಿ ಹೆಜ್ಜೆಗೂ ಕಷ್ಟಎದುರಿಸುವುದು, ಆ ನಡುವೆಯೂ ಗೊತ್ತಿಲ್ಲದೆ ಸಂಕಷ್ಟದ ಸುಳಿಗೆ ಸಿಲುಕುವುದು, ಕೊನೆಗೆ ಆ ಕಷ್ಟಗಳನ್ನೇ ಸವಾಲಾಗಿ ಸ್ವೀಕರಿಸಿ ಗೆದ್ದು ತೋರಿಸುವಂತಹ ಎಷ್ಟುಕತೆಗಳು ಸಿನಿಮಾ ಆಗಿಲ್ಲ ಹೇಳಿ? ಆರಂಭದಲ್ಲೇ ಇದು ಕೂಡ ಅಂಥದ್ದೇ ಒಂದು ಕತೆ ಎನಿಸಿದರೂ, ಆ ಕತೆಗೆ ಪ್ರೇಕ್ಷಕ ಊಹಿಸಲಾಗದ ಟ್ವಿಸ್ಟ್ ಇರುವುದು ಕ್ಲೈಮ್ಯಾಕ್ಸ್‌ನಲ್ಲಿ. ಪ್ರೇಕ್ಷಕನ ಪಾಲಿಗೆ ವಿಶೇಷ ಎನಿಸುವ ಈ ಕ್ಲೈಮ್ಯಾಕ್ಸ್ ನೋಡುವುದಕ್ಕೆ ಸಾಗುವ ಪಯಣ ಮಾತ್ರ ಕಷ್ಟಕರವೇ ಹೌದು. ಕತೆಯ ಎಳೆ ಚೆನ್ನಾಗಿದೆ ಎನ್ನುವುದನ್ನು ಬಿಟ್ಟರೆ ಅದರ ನಿರೂಪಣೆ ಆಮೆ ವೇಗಕ್ಕೆ ಸರಿಸಮಾನ. ನೋಡುಗರಿಗೆ ಮೆಗಾ ಧಾರಾವಾಹಿಯ ಅನುಭವಂತೂ ಕಟ್ಟಿಟ್ಟಬುತ್ತಿ. ಹೇಳಿ ಕೇಳಿ ಇದು ಕಿರುತೆರೆ ನಿರ್ದೇಶಕರ ಸಿನಿಮಾ. ಜತೆಗೆ ಕಲಾವಿದರು ಅಲ್ಲಿಂದಲೇ ಬಂದವರು. ಅದರ ಪ್ರಭಾವ ಇಲ್ಲಿ ತುಸು ಹೆಚ್ಚೇ ಇದೆ ಎನ್ನುವುದು ಬಹು ಕೋನಗಳಲ್ಲಿ ಆಗುವ ಅನುಭವವೇ.
ಪೊಲೀಸ್ ಇನ್ಸ್‌ಸ್ಪೆಕ್ಟರ್ ಆಗಿ ಕೊಲೆಯ ರಹಸ್ಯ ಭೇದಿಸಲು ಮುಂದಾಗುವ ರಾಜೇಶ್ ನಟರಂಗ,ಚಿತ್ರದ ಹೈಲೈಟ್ಸ್. ಇನ್ನು ನಾಯಕ ಭಾಸ್ಕರ್ ನೀನಾಸಂ ಆ್ಯಕ್ಷನ್, ರೊಮಾನ್ಸ್ ಹಾಗೂ ಅನಗತ್ಯ ಬಿಲ್ಡಪ್‌ಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಕತೆಯಲ್ಲಿರುವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆನ್ನುವುದನ್ನು ಬಿಟ್ಟರೆ ಎಕ್ಸಾ$್ಟ$್ರ ಪರ್‌ಫಾರ್ಮೆನ್ಸ್ ಏನು ಅನ್ನೋದು ದುರ್ಭೀನು ಹಚ್ಚಿದರೂ ಕಾಣದು. ಇರೋದ್ರಲ್ಲಿ ನಾಯಕಿ ರಶ್ಮಿಕಾ ಆಗಾಗ ನೋಡುಗರಲ್ಲಿ ಆಸಕ್ತಿ ಹುಟ್ಟಿಸುತ್ತಾರೆನ್ನುವುದು ಸಮಾಧಾನದ ಸಂಗತಿ. ವರ್ಧನ್ ತೀರ್ಥಹಳ್ಳಿ ಕಡಿಮೆ ಅವದಿಯಲ್ಲೂ ಗಮನ ಸೆಳೆಯುತ್ತಾರೆ. ರಘು ಧನ್ವಂತ್ರಿ ಅವರ ಸಂಗೀತ, ಹಿನ್ನೆಲೆ ಸಂಗೀತ ಹಾಗೂ ಚಿದಾನಂದ್ ಮತ್ತು ಚಂದ್ರಶೇಖರ್ ಛಾಯಾಗ್ರಹಣದಲ್ಲಿ ಅಷ್ಟೇನು ವಿಶೇಷತೆ ಇಲ್ಲ.ತ್ರಾಸದಾಯಕ ಪಯಣದಲ್ಲಿ ಒಂದಷ್ಟುಹೊಸತಾಗಿ ಕಾಣುವುದು ಕತೆಯ ಎಳೆ ಮಾತ್ರ. ಅಷ್ಟನ್ನು ತಡೆದುಕೊಳ್ಳುವ ತಾಳ್ಮೆ ಇದ್ದವರಿಗೆ ಈ ಸಿನಿಮಾ ನೋಡುವುದು ಕಷ್ಟವಾಗದು.