Asianet Suvarna News Asianet Suvarna News

ಕಂತ್ರಿ ಬಾಯ್ಸ್ ಚಿತ್ರ ಹೇಗಿದೆ ಗೊತ್ತಾ?

ಬಹುತೇಕ ಚಿತ್ರಗಳ ಹಣೆಬರಹವನ್ನು ಅವುಗಳ ಹೆಸರೇ ನಿರ್ಧರಿಸುತ್ತವೆ. ಅಂಥಾ ಆಕರ್ಷಕ ಮತ್ತು ಮನಮೋಹಕ ಹೆಸರು ಈ ಚಿತ್ರಕ್ಕಿದೆ. ಅದು ಕಂತ್ರಿ ಬಾಯ್ಸ್ ಅಂತ.

Kannada Movie Kantri Boys Review

ಬೆಂಗಳೂರು (ಫೆ.17): ಬಹುತೇಕ ಚಿತ್ರಗಳ ಹಣೆಬರಹವನ್ನು ಅವುಗಳ ಹೆಸರೇ ನಿರ್ಧರಿಸುತ್ತವೆ. ಅಂಥಾ ಆಕರ್ಷಕ ಮತ್ತು ಮನಮೋಹಕ ಹೆಸರು ಈ ಚಿತ್ರಕ್ಕಿದೆ. ಅದು ಕಂತ್ರಿ ಬಾಯ್ಸ್ ಅಂತ.

ಅದೊಂದು ಹಳ್ಳಿ. ಆ ಹಳ್ಳಿಯಲ್ಲಿ ನಾಲ್ಕು ತರುಣರು. ಯಾವುದೇ ಊರಿನ ಮಾನ ಕಳೆಯಬಲ್ಲಂತಹ ಕೆಲಸ ಮಾಡಬಲ್ಲ ಶಕ್ತಿ ಸಾಮರ್ಥ್ಯ ಇರುವ ಮಹಾನ್ ಪ್ರತಿಭೆಗಳು. ಅವರಿಗೆ ಊರು ಸುತ್ತುವುದೇ ಕೆಲಸ. ಅವರಿವರಿಗೆ ತೊಂದರೆ ಕೊಡುತ್ತಾ ತಿರುಗುವ ಅವರ ವರಸೆ ನೋಡಿದರೆ ಸಾಕು ತೊಂದರೆ ಅನುಭವಿಸುವವರಿಗಿಂತ ಹೆಚ್ಚಿನ ನೋವು ನೋಡಿದ ಕಣ್ಣುಗಳಿಗಾಗುತ್ತವೆ. ಅಂಥಾ ಪ್ರತಿಭಾವಂತರು. ಇಂಥವರಿಗೆ ಹಬ್ಬ ಅನ್ನುವಂತೆ ಆ ಊರಿಗೊಬ್ಬರು ಸಿಲ್ಕ್‌ಸ್ಮಿತಾರನ್ನು ನೆನಪಿಸುವ
ಮೇಡಂ ಬರುತ್ತಾರೆ. ಆಮೇಲೆ ಕೇಳಬೇಕೇ.ಕ್ಯಾಮೆರಾಮೆನ್‌’ಗೆ ನೋಡಿ ನೋಡಿ ಸುಸ್ತಾಗುತ್ತದೆ. ಸಂಕಲನಕಾರರಿಗೆ ಎಲ್ಲಿ ಕತ್ತರಿ ಹಾಕಬೇಕು ಅಂತ  ಮರೆತುಹೋಗುತ್ತದೆ. ಈ ಪರಿಯ ಸೊಬಗ ನಾನೆಲ್ಲೂ
ನೋಡೆನು ಅನ್ನುತ್ತಾ ಪ್ರೇಕ್ಷಕ ಬಯಲ ಶೂನ್ಯವನ್ನು ದಿಟ್ಟಿಸುತ್ತಾ ದಿಗ್ಮೂಢನಾಗುತ್ತಾನೆ.

ಅಷ್ಟು ಚಿತ್ರಕ ಶಕ್ತಿ ಇದೆ ನಿರ್ದೇಶಕ ರಾಜು ಚಟ್ಣಳ್ಳಿಯವರಿಗೆ. ಅವರ ಪ್ರತಿಭೆಯ ಪೂರ್ತಿಯಾಗಿ ವ್ಯಕ್ತವಾಗುವುದು ‘ತಿಥಿ’ ಖ್ಯಾತಿಯ ಗಡ್ಡಪ್ಪ ದರ್ಶನ ನೀಡಿದಾಗ. ಇಡೀ ಸಿನಿಮಾದಲ್ಲಿ ಗಡ್ಡಪ್ಪ ಎಡಭುಜದ
ಮೇಲೆ ಕೋವಿ ಇಟ್ಟುಕೊಂಡೇ ಸುತ್ತಾಡುತ್ತಾರೆ. ಅವರು ಯಾಕೆ ಕೋವಿ ಹಿಡಿದುಕೊಂಡೇ ತಿರುಗುತ್ತಾರೆ ಅನ್ನುವುದಕ್ಕೆ ನಿರ್ದೇಶಕರು ಕೊಡುವ ಕಾರಣ ಭಾರಿ ಮಜವಾಗಿದೆ.

ಯಾರೋ ಒಬ್ಬ ಕೇಳಿದಾಗ, ನನ್ನದೊಂದು ಕಿಡ್ನಿ ಮಾರಿದ್ದೇನೆ. ಹಾಗಾಗಿ ದೇಹ ಬಲಗಡೆ ವಾಲಬಾರದು ಅಂತ ಬ್ಯಾಲೆನ್ಸ್‌ಗೆ ಕೋವಿ ಹಿಡಿದುಕೊಂಡಿರುತ್ತೇನೆ ಎನ್ನುತ್ತಾರೆ. ಅದು ಚಿತ್ರದೊಳಗೂ ಜೋಕು. ಚಿತ್ರದ
ಹೊರಗೂ ಜೋಕು. ಆ ಜೋಕನ್ನು ನೋಡಿ ಕೇಳಿ ಅನುಭವಿಸಿದ ನೋಡುಗನ ಪಂಚೇಂದ್ರಿಯಗಳೆಲ್ಲವೂ ಪಾವನವಾಗುತ್ತದೆ. ಚಿತ್ರದ ತುಂಬಾ ಇಂಥಾ ಜೋಕುಗಳೇ ತುಂಬಿಕೊಂಡಿರುವುದರಿಂದ ಈ ಸಿನಿಮಾ ನೋಡುವ ಧೈರ್ಯ ತೋರಿಸುವವರು ಪೂರ್ವ ಸಿದ್ಧತೆ ಮಾಡಿಕೊಂಡೇ ಹೋಗಬೇಕಾಗಿದೆ. ಅಷ್ಟರ ಮಟ್ಟಿಗೆ ಕತೆ, ಚಿತ್ರಕತೆ ಕಾಡುತ್ತದೆ. ಸೀರಿಯಸ್ಸಾಗಿ ಹೇಳುವುದಾದರೆ ಈ ಚಿತ್ರದಲ್ಲಿರುವ ಒಂದೇ ಒಂದು ಒಳ್ಳೆಯ ಅಂಶವೆಂದರೆ ಗಡ್ಡಪ್ಪ ಅವರ ಮುಗ್ಧ ಮುಖ ಮಾತ್ರ. ಅದನ್ನು ಹೊರತುಪಡಿಸಿದರೆ ಉಳಿದೆಲ್ಲಾ ನಿರ್ದೇಶಕರ ಕಲಾ ಚಾತುರ್ಯವೇ ಕಂಡು ಬರುತ್ತದೆ.

ಕೆಲವೊಮ್ಮೆ ಮಾತು, ಮತ್ತೊಮ್ಮೆ ಚಿತ್ರ ಮಗದೊಮ್ಮೆ  ನಟನೆ ಪ್ರೇಕ್ಷಕನನ್ನು ಥಟ್ ಎಂದು ಒದ್ದಂತೆ ಸೀಟಿನಿಂದ ಎದ್ದು ಕೂರಿಸುತ್ತವೆ. ಸಿನಿಮಾ ಪೂರ್ತಿಯಾಗಿ ನೋಡುವ ಅನಿವಾರ್ಯತೆ ಇಲ್ಲದೇ ಹೋದರೆ ಎಲ್ಲವೂ ಚೆಂದವೇ.
ಈ ಚಿತ್ರ ನೋಡಲೇಬೇಕಾಗಿ ಬಂದಾಗ ಆಗುವ ಖುಷಿ ಮತ್ತು ವಿಷಾದ ಉಂಟಲ್ಲ ನೋಡಿದವರಿಗಷ್ಟೇ ಗೊತ್ತು.?

ವಿಮರ್ಶೆ: ರಾಜೇಶ್ ಶೆಟ್ಟಿ 

Follow Us:
Download App:
  • android
  • ios