ಇದು ಆತ್ಮಗಳ ಕತೆ. ಹೀಗೆಂದಾಕ್ಷಣ ಇದೇನು ಹಾರರ್‌ ಸಿನಿಮಾವೇ ಅಂತೇನು ಭಾವಿಸಬೇಕಿಲ್ಲ. ಇದೊಂದು ಪ್ರೀತಿ, ಪ್ರೇಮದ ರೊಮ್ಯಾಂಟಿಕ್‌ ಕತೆ. ಅಲ್ಲೂ ಆತ್ಮಗಳು ಬಂದಿದ್ದು ಇಲ್ಲಿನ ವಿಶೇಷ. ಅವು ಅಲ್ಲಿ ಬಂದಿದ್ದು ಚಿತ್ರದ ಕಥಾ ನಾಯಕನನ್ನು ಬೆನ್ನು ಹತ್ತಿ. ಅವ್ಯಾಕೆ ಆತನನ್ನೇ ಹಿಂಬಾಲಿಸಿ ಬಂದವು? ವಿಚಿತ್ರವೆಂದರೆ, ಆ ಹೊತ್ತಿಗೆ ಕಥಾ ನಾಯಕ ಕೂಡ ಸಾವಿನಿಂದ ಪಾರಾಗಿ ಬಂದವನು. 

ತಾನೊಬ್ಬ ಏಕಾಂಗಿ, ತನಗೆ ಅಂತ ತನ್ನವರು ಯಾರು ಇಲ್ಲ, ಸಾಯುವುದೇ ಲೇಸು ಎಂದು ಮಾತ್ರೆ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಆತ. ಆದರೆ, ಆಕಸ್ಮಿಕವಾಗಿ ಸಾವಿನಿಂದ ಆತನನ್ನು ಪಾರು ಮಾಡಿದವಳು ಡಾಕ್ಟರ್‌ ಪ್ರಿಯಾ. ಆಕೆ ಚಿತ್ರದ ಕಥಾ ನಾಯಕಿ. ಅಲ್ಲಿಂದ ಏಕಾಂಗಿ ಕಥಾ ನಾಯಕನ ಬದುಕಲ್ಲಿ ಜತೆಯಾದವರು ಡಾಕ್ಟರ್‌ ಪ್ರಿಯಾ, ಅವರೊಂದಿಗೆ ನಾಲ್ಕು ಆತ್ಮಗಳು. ಆ ಮೂಲಕ ಕಾರ್ಮೋಡದ ಮುಂದಿನ ಕತೆ ಏನು ಅನ್ನೋದು ಸಸ್ಪೆನ್ಸ್‌.

ತಾರಾಗಣ : ಮಂಜು ರಾಜಣ್ಣ, ಅದ್ವಿತಿ ಶೆಟ್ಟಿ. ಶ್ರೀಧರ್‌, ಅಶೋಕ್‌, ದಿವ್ಯಾಶ್ರೀ

ನಿರ್ದೇಶನ : ಉದಯ್‌ ಕುಮಾರ್‌

ಸಂಗೀತ : ಸತೀಶ್‌ ಬಾಬು

ಛಾಯಾಗ್ರಹಣ: ಅರುಣ್‌ ಸುರೇಶ್‌

ಜೀವನದಲ್ಲಿ ಒಬ್ಬಂಟಿ ಆಗಿರುವವರಿಗೆ ಏಕಾಂಗಿತನವೇ ದೊಡ್ಡ ಶತ್ರು. ತಮಗೆ ತಮ್ಮವರು ಅಂತ ಯಾರಿಲ್ಲ, ಈ ಬದುಕೇ ಬೇಡ ಅಂತ ಆತ್ಮಹತ್ಯೆಗೆ ಯತ್ನಿಸಿದವರು ಹಲವಾರು ಮಂದಿ. ಆದರೆ ವಾಸ್ತವ ಬೇರೆಯದೇ ಇರುತ್ತೆ. ಪರೋಕ್ಷವೋ, ಪ್ರತ್ಯಕ್ಷವೋ ಅವರಿಗೂ ತಮ್ಮವರು ಅಂತ ಕೆಲವರಿರುತ್ತಾರೆ. ಆವರು ಹೇಗೆ ಜತೆಗಿದ್ದು ಬದುಕಲು ಪ್ರೇರಣೆಯಾಗುತ್ತಾರೆನ್ನುವ ಒಟ್ಟು ತಿರುಳು ಈ ಚಿತ್ರದ್ದು. ಇದೊಂದು ಸಿಂಪಲ್‌ ಕತೆ. ಏಕಾಂಗಿ ಅಂತ ಸಾಯಲು ಹೊರಟ ಕಥಾ ನಾಯಕ ಕಾರ್ತಿಕ್‌, ಬದುಕಿನ ವಿವಿಧ ತಿರುವುಗಳಲ್ಲಿ ಹೇಗೆ ವಾಸ್ತವಕ್ಕೆ ಬಂದು, ಹೊಸ ಬದುಕು ಕಟ್ಟಿಕೊಂಡ ಎನ್ನುವುದನ್ನು ತೋರಿಸಲು ಹೊರಟ ನಿರ್ದೇಶಕರು, ಅದನ್ನು ಮೆಗಾ ಧಾರಾವಾಹಿಯಷ್ಟುಎಳೆದು ತೋರಿಸಿದ್ದು ಮಾತ್ರ ವಿಚಿತ್ರ. ಕತೆಯ ಎಳೆಯ ಬಗ್ಗೆ ಆಕ್ಷೇಪವೇ ಮೂಡದು. ಆದರೆ ಅದನ್ನು ನಿರೂಪಿಸಿದ ರೀತಿಯಲ್ಲಿ ಲವಲವಿಕೆಯೇ ಇಲ್ಲ. ನಾಯಕ ಮಂಜು ರಾಜಣ್ಣ ಅಭಿನಯ, ಹಾವಭಾವದಲ್ಲಿ ಸತ್ವವೇ ಕಾಣದು.

ಚಿತ್ರ ವಿಮರ್ಶೆ: ರತ್ನಮಂಜರಿ

ಆ ಕೊರತೆಯನ್ನು ತುಂಬುವುದು ನಾಯಕಿ ಅದ್ವಿತಿ ಶೆಟ್ಟಿ. ಅಭಿನಯ, ನೃತ್ಯ, ನಗು, ಹಾವಭಾವದಲ್ಲಿ ಸೂಜಿಗಲ್ಲಿನಂತೆ ಆಕರ್ಷಿಸುವ ಅದ್ವಿತಿ, ಭರವಸೆ ನಟಿಯಾಗುವ ಎಲ್ಲಾ ಸಾಧ್ಯತೆಗಳನ್ನು ತಮ್ಮ ಪಾತ್ರದ ಮೂಲಕ ಕಟ್ಟಿಕೊಡುತ್ತಾರೆ. ಹಾಡುಗಳಲ್ಲಂತೂ ಸೂಜಿ ಸಲ್ಲಿಗೆಯಂತೆ ಗಮನ ಸೆಳೆದು ಚಿತ್ರದ ಅಷ್ಟುಬೇಸರ ಕೊಚ್ಚಿಕೊಂಡು ಹೋಗುವಂತೆ ಮಾಡುತ್ತಾರೆ. ಹಾಗೆಯೇ ಆತ್ಮಗಳ ರೂಪದಲ್ಲಿ ಬಂದ ಸಿದ್ಲಿಂಗು ಶ್ರೀಧರ್‌, ಅಶೋಕ್‌, ದಿವ್ಯಾಶ್ರೀ, ಮಾಸ್ಟರ್‌ ಹೇಮಂತ್‌, ಅಷ್ಟೋ ಇಷ್ಟೋ ಪಾತ್ರ ಪೋಷಣೆಯ ಅವಕಾಶದಲ್ಲಿ ಚಿತ್ರವನ್ನು ದಡ ಸೇರಿಸುವಲ್ಲಿ ಸಾಕಷ್ಟುಶ್ರಮ ಹಾಕಿದ್ದಾರೆ. ಇದರ ಜತೆಗೆ ಚಿತ್ರಕ್ಕೆ ಹೆಚ್ಚು ಸಾಥ್‌ ನೀಡಿದ್ದು ಸತೀಶ್‌ ಬಾಬು ಸಂಗೀತ. ನಾಗೇಂದ್ರ ಪ್ರಸಾದ್‌ ಸಾಹಿತ್ಯದ ಯುಗಳ ಗೀತೆಯಲ್ಲಿ ಮತ್ತೆ ಮತ್ತೆ ಕೇಳುವಂತೆ ಸಂಗೀತದಲ್ಲಿ ಆಪ್ತವಾಗುತ್ತಾರೆ. ಇನ್ನು ಅರುಣ್‌ ಸುರೇಶ್‌ ಕ್ಯಾಮರಾದಲ್ಲಿ ಕುದುರೆಮುಖದ ಸುರಿಯವ ಮಳೆ, ಹಚ್ಚ ಹಸಿರು, ಬೆಟ್ಟಗುಡ್ಡಗಳು ಕಣ್ಣು ತಂಪಾಗಿಸಿ, ನಿರ್ದೇಶಕರ ಮೇಲಿನ ಸಿಟ್ಟನ್ನು ಮರೆಸುವಂತೆ ಮಾಡುತ್ತವೆ ಎನ್ನುವುದು ಚಿತ್ರದ ಪ್ಲಸ್‌ ಪಾಯಿಂಟ್‌.