- ಹೇಳಿದ್ದೊಂದು ಮಾಡುವುದೊಂದು ಅಂತ ಶಾನ್ವಿ ಶ್ರೀವಾಸ್ತವ್‌ ಅಸಮಾಧಾನ ಪಡಿಸಿದ್ದು ನಮ್ಮ ಚಿತ್ರದ ಬಗ್ಗೆ.

- ಗೀತಾ ಚಿತ್ರದ ಒಂದು ಹಾಡನ್ನು ನಾವು ಅನಿವಾರ್ಯವಾಗಿ ತೆಗೆಯಬೇಕಾಯಿತು. ಅದನ್ನು ಅವರಿಗೆ ತಿಳಿಸದೇ ಇದ್ದುದು ನಮ್ಮ ತಂಡದ ತಪ್ಪು.

- ಆ ಹಾಡಿಗೆ 35 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ನಾವು ಉದ್ದೇಶಪೂರ್ವಕವಾಗಿ ಆ ಹಾಡನ್ನು ತೆಗೆಯಲಿಲ್ಲ. ಸಿನಿಮಾದ ಸಮಯ ಜಾಸ್ತಿಯಾಗಿದ್ದರಿಂದ ತೆಗೆಯಬೇಕಾಯಿತು. ಅದರ ಜೊತೆಗೆ ಒಂದು ನಾಯಕನ ಹಾಡನ್ನೂ ತೆಗೆದಿದ್ದೇವೆ.

ನಟಿಗೆ ಮೋಸ ಮಾಡಿ ‘ಗೀತಾ’ ಹಿಟ್ ಆಯ್ತಾ? ಶಾನ್ವಿ ಬರೆದ್ರು ಅಸಮಾಧಾನದ ಪತ್ರ!

- ಸಿನಿಮಾಗೆ ಏನು ಅನಿವಾರ್ಯವಿತ್ತೋ ಆ ಕೆಲಸ ನಾವು ಮಾಡಿದ್ದೇವೆ. ಶಾನ್ವಿ ಅವರಿಗೆ ಬೇಜಾರಾಗಿದ್ದು ನಮಗೆ ತಿಳಿಸಿದ್ದರೆ ನಾವು ಕ್ಷಮೆ ಕೇಳುತ್ತಿದ್ದೆವು. ಈಗಲೂ ನಮ್ಮ ಕಡೆಯಿಂದ ತಪ್ಪಾಗಿದ್ದನ್ನು ಒಪ್ಪಿಕೊಳ್ಳುತ್ತಿದ್ದೇವೆ.

ಇವು ‘ಗೀತಾ’ ಚಿತ್ರತಂಡದ ಸ್ಪಷ್ಟನೆ. ಚಿತ್ರದ ನಾಯಕ ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ನಿರ್ಮಾಪಕ ಸೈಯದ್‌ ಸಲಾಂ ಈ ಸ್ಪಷ್ಟನೆ ನೀಡಿದ್ದಾರೆ. ‘ನಮಗೆ ಮೊದಲು ಹೇಳಿದಂತೆ ಸಿನಿಮಾ ಮಾಡುವುದಿಲ್ಲ, ಸಿನಿಮಾದಲ್ಲಿ ಬದಲಾವಣೆ ಮಾಡುವಾಗ ಒಂದು ಮಾತು ತಿಳಿಸುವುದಿಲ್ಲ. ಇದು ಸರಿಯಲ್ಲ’ ಎಂದು ಶಾನ್ವಿ ಶ್ರೀವಾಸ್ತವ್‌ ಯಾರ ಹೆಸರನ್ನೂ ಉಚ್ಚರಿಸದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಅನೇಕ ನಾಯಕ ನಟಿಯರು ಬೆಂಬಲ ಸೂಚಿಸಿದ್ದರು. ಅವರು ಹಾಗೆ ಹೇಳಿದ್ದು ಗೀತಾ ಚಿತ್ರದ ಕುರಿತಾಗಿ ಎಂಬ ಮಾತೂ ಚರ್ಚೆಯಲ್ಲಿತ್ತು. ಇದೀಗ ಗಣೇಶ್‌ ಅವರು ಹೇಳಿದ್ದು ಗೀತಾ ಚಿತ್ರದ ಬಗ್ಗೆಯೇ ಎಂದು ಒಪ್ಪಿಕೊಂಡಿದ್ದಾರೆ. ‘ಗೀತಾ’ ಚಿತ್ರದ ಯಶಸ್ಸು ಹಂಚಿಕೊಳ್ಳುವುದಕ್ಕೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದರು.