ಗರನೆ ಗರಗರನೆ ತಿರುಗಿದೆ ಧರಣಿ!

ನಿರೂಪಕರಾಗಿ ಜನಪ್ರಿಯರಾಗಿದ್ದ ರೆಹಮಾನ್‌ ಚಿತ್ರರಂಗಕ್ಕೆ ಬಲಗಾಲಿಟ್ಟು ಪ್ರವೇಶಿಸಿದ್ದಾರೆ. ಅವರ ನಟನಾ ಪ್ರತಿಭೆಗೆ ಸಾಕ್ಷಿ ಈ ಚಿತ್ರ. ಎರಡು ಡಿಫರೆಂಟ್‌ ಗೆಟಪ್‌ಗಳಲ್ಲಿ ನಟಿಸಿರುವ ಅವರ ಉತ್ಸಾಹ ಚಿತ್ರದುದ್ದಕ್ಕೂ ಕಾಣಸಿಗುತ್ತದೆ. ಇಷ್ಟುಕಾಲ ಅವರ ನಿರೂಪಣೆ ಧ್ವನಿಯನ್ನು ಮಿಸ್‌ ಮಾಡಿಕೊಂಡವರು ಈ ಸಿನಿಮಾ ನೋಡಬಹುದು. ಇಲ್ಲಿ ಅವರ ಆ ಚೆಂದದ ನಿರೂಪಣೆಯ ಧ್ವನಿ ಮತ್ತೆ ಕೇಳಿಸುತ್ತದೆ.

Kannada movie Gara film review

ರಾಜೇಶ್‌ ಶೆಟ್ಟಿ

ಅಲ್ಲೊಂದೂರು. ಅಲ್ಲಿಗೊಬ್ಬ ತರುಣ ಒಬ್ಬಳು ಹುಡುಗಿಯನ್ನು ಹುಡುಕಿಕೊಂಡು ಬರುತ್ತಾನೆ. ಹಾಗೆ ಬಂದ ಆ ತರುಣನಿಗೆ ಸಿಗುವವನು ಒಬ್ಬ ಜ್ಯೋತಿಷಿ. ಅವನು ಗರ ಹಾಕುವುದರಲ್ಲಿ ಎಕ್ಸ್‌ಪರ್ಟು. ಗರ ಹಾಕಿ ಜನರನ್ನು ಗರಗರನೆ ತಿರುಗಿಸುವ ಶಕ್ತಿ ಸಾಮರ್ಥ್ಯ ಅವನಿಗಿದೆ. ಸಿನಿಮಾ ನೋಡುತ್ತಾ ಅದು ಬಹುಬೇಗನೇ ಅರ್ಥವಾಗುತ್ತದೆ. ಅಲ್ಲಿಂದ ಮುಂದೆ ಆ ಜ್ಯೋತಿಷಿ ಮತ್ತು ಆ ತರುಣನ ಕಥೆ ತೆರೆದುಕೊಳ್ಳುತ್ತದೆ. ಈ ಕತೆಯನ್ನು ಹೇಳಲು ನಿರ್ದೇಶಕರು ಹಿಡಿದ ದಾರಿ ಭಾರಿ ವಿಭಿನ್ನವಾದುದು. ಆಲ್ಫೆ್ರಡ್‌ ಹಿಚ್‌ಕಾಕ್‌ ಅಭಿಮಾನಿಯಂತೆ ಕಾಣಿಸುವ ಅವರು ಹಿಚ್‌ಕಾಕ್‌ನಂತೆ ಪ್ರೇಕ್ಷಕರನ್ನು ಕೈಯಲ್ಲಿ ಹಿಡಿದು ಸೀಟ್‌ನ ತುದಿಗೆ ಕರೆತರುವ ಪ್ರಯತ್ನವನ್ನಂತೂ ಮಾಡಿದ್ದಾರೆ. ಕತೆ ಅಲ್ಲಿಂದ ಇಲ್ಲಿಗೆ ಜಿಗಿದು ಇಲ್ಲಿಂದ ಅಲ್ಲಿಗೆ ಹಾರಿ ಎಲ್ಲಿಂದ ಎಲ್ಲಿಗೋ ಹೋಗಿ ಮತ್ತೆ ಇಲ್ಲಿಗೆ ಬಂದು ನಾನು ನಿನಗೆ ಮಂಗ ಮಾಡಿದೆ ಎಂದು ನಗುವಂತಹ ಚಿತ್ರಕತೆ ಇಲ್ಲಿದೆ. ಅದಕ್ಕಾಗಿ ನಿರ್ದೇಶಕರು ಭಾರಿ ಶ್ರಮ ಪಟ್ಟಿದ್ದಾರೆ. ಆ ಶ್ರಮದ ಅನುಭವ ಪ್ರೇಕ್ಷಕರಿಗೂ ಆಗುತ್ತದೆ ಅನ್ನುವುದೇ ಇಲ್ಲಿನ ವಿಶೇಷ.

ಚಿತ್ರ: ಗರ

ತಾರಾಗಣ: ರೆಹಮಾನ್‌, ಅವಂತಿಕಾ ಮೋಹನ್‌, ಆದಿತ್ಯ ಆರ್ಯನ್‌, ಪ್ರದೀಪ್‌ ಆರ್ಯನ್‌, ಜಾನಿ ಲಿವರ್‌, ಸಾಧು ಕೋಕಿಲ

ನಿರ್ದೇಶನ: ಕೆಆರ್‌ ಮುರಳಿಕೃಷ್ಣ

ರೆಹಮಾನ್‌ ಈ ಚಿತ್ರದ ಮುಖ್ಯ ಪಾತ್ರಧಾರಿ. ಅವರ ಸ್ಕ್ರೀನ್‌ ಪ್ರೆಸೆನ್ಸ್‌ ಖುಷಿ ಕೊಡುತ್ತದೆ. ಒಮ್ಮೊಮ್ಮೆ ನಾವು ಸಂಬಂಧ ಬಿಟ್ಟರೂ ಆ ನೆನಪು ನಮ್ಮನ್ನು ಬಿಡುವುದಿಲ್ಲ. ನಾವು ಕೆಲಸ ಬಿಟ್ಟರೂ ಕೆಲಸ ನಮ್ಮನ್ನು ಬಿಡುವುದಿಲ್ಲ. ಅದು ಅವರ ಧ್ವನಿಯಲ್ಲಿ ಗೊತ್ತಾಗುತ್ತದೆ. ಡಿಜಿಟಲ್‌ ಗೌಡ ಎಂಬ ವಿಲನ್‌ ಪಾತ್ರದಲ್ಲಿ ಪ್ರದೀಪ್‌ ಆರ್ಯನ್‌ ಇದ್ದಾರೆ. ಅವರ ನಿಲುವು, ಭಾಷೆ ಒಂಥರಾ ಚೆಂದ. ನಾಯಕಿ ಅವಂತಿಕಾ ಕಣ್ಣುಗಳೇ ಕತೆ ಹೇಳುತ್ತವೆ. ಉಳಿದಂತೆ ಅವರವರ ಪಾತ್ರಕ್ಕೆ ಅವರು ನಿಷ್ಠರು.

ಚಿತ್ರದ ನಾಯಕನಂತೆ ಸಿನಿಮಾ ಮೂಲಕ ನಿರ್ದೇಶಕರು ಗರ ಹಾಕಿದ್ದಾರೆ. ಅವರು ಆಡಿಸುತ್ತಾರೆ. ನೋಡುಗರು ಆಡಬೇಕು. ಕೊನೆಗೆ ಅವರು ಗೆಲ್ಲುತ್ತಾರೆ. ಪ್ರೇಕ್ಷಕ ಗರ ಬಡಿದಂತೆ ನಿಂತುಕೊಳ್ಳಬೇಕು. ಅರ್ಥವಾಗಬೇಕಾದರೆ ಸಿನಿಮಾ ನೋಡಬೇಕು.

Latest Videos
Follow Us:
Download App:
  • android
  • ios