ಜೋಗಿ ಪ್ರೇಮ್ ಹೊಸ ಹುಡುಗಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ರಕ್ಷಿತಾ ಪ್ರೇಮ್ ನಿರ್ಮಾಣದ, ರಕ್ಷಿತಾ ಸೋದರ ರಾಣಾ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ‘ಏಕ್‌ಲವ್‌ಯಾ’ ಚಿತ್ರಕ್ಕೆ ನಾಯಕಿಯಾಗಿ ಬರುತ್ತಿದ್ದಾರೆ ಕೊಡಗಿನ ರೀಷ್ಮಾ ನಾಣಯ್ಯ. ಅವರ ಜತೆ ಮಾತುಕತೆ.

ನಿಮ್ಮ ಪೂರ್ತಿ ಹೆಸರೇನು, ನಿಮ್ಮ ಹಿನ್ನೆಲೆ ಏನು?

ರೀಷ್ಮಾ ನಾಣಯ್ಯ. ಮೂಲತಃ ನಾನು ಕೂರ್ಗ್. ಕೊಡಗಿನ ಹುಡುಗಿ. ಈಗ ಇರೋದು ಬೆಂಗಳೂರು. ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದೇನೆ. ಅಪ್ಪ ಬ್ಯುಸಿನೆಸ್ ಮ್ಯಾನ್. ನಮ್ಮ ಮನೆಯಿಂದ ಯಾರೂ ಚಿತ್ರರಂಗಕ್ಕೆ ಬಂದಿಲ್ಲ. ನಾನೇ ಮೊದಲ ಪ್ರವೇಶ.

ಚಿತ್ರಕ್ಕೆ ನಿಮ್ಮನ್ನು ನಾಯಕಿಯನ್ನಾಗಿಸಿದ್ದು ಮಾಡೆಲಿಂಗ್ ಲೋಕವಾ?

ಖಂಡಿತ ಇಲ್ಲ. ಯಾಕೆಂದರೆ ನಾನು ವೃತ್ತಿಪರ ಮಾಡೆಲ್. ಕಾಲೇಜು ಮಟ್ಟದಲ್ಲಿ ನಡೆಯುವ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದೇನೆ ಹೊರತು, ದೊಡ್ಡ ಮಟ್ಟದಲ್ಲಿ ರ‌್ಯಾಂಪ್ ವಾಕ್ ಮಾಡಿದವಳಲ್ಲ ನಾನು.

‘ಏಕ್‌ಲವ್‌ಯಾ’ ಚಿತ್ರಕ್ಕೆ ನಾಯಕಿ ಆಗಿದ್ದು ಹೇಗೆ?

ನಮ್ಮ ಕಾಲೇಜಿನಲ್ಲಿ ಬ್ಯೂಟಿ ಕಾಂಪಿಟೇಷನ್‌ಗಳು ಆಗಾಗ ನಡೆಯುತ್ತವೆ. ಹಾಗೆ ನಮ್ಮ ಕಾಲೇಜಿನಲ್ಲಿ ಫ್ರೆಶ್ ಫೇಸ್ ಕಾಂಪಿಟೇಷನ್‌ನಲ್ಲಿ ನಾನು ಸ್ಪರ್ಧಿಸಿದೆ. ಇಲ್ಲಿ ರನ್ನರ್‌ಅಪ್ ಆದೆ. ಈ ಶೋನಲ್ಲೇ ನನ್ನನ್ನು ಪ್ರೇಮ್ ಅವರು ನೋಡಿದ್ದು.

ಫ್ಯಾಷನ್ ಹೊರತಾಗಿ ನಟನೆಗೆ ಬೇರೆ ತಯಾರಿಯೂ ಬೇಕಲ್ಲ?

ಹೌದು, ಪ್ರೇಮ್ ಅವರೇ ನಟನೆ ಕಲಿಯಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾಗೆ ಸೇರಿಸಿದ್ರು. ಆಡಿಷನ್ ನಲ್ಲಿ ಆಯ್ಕೆ ಆದ ಮೇಲೆ ಒಂದು ತಿಂಗಳು ನಾನು ಟೆಂಟ್ ಸಿನಿಮಾದಲ್ಲಿ ಅಭಿನಯ ಕೋರ್ಸ್ ಮಾಡಿದೆ. ಆ ನಂತರ ಅಂದರೆ ಈಗ ಎರಡು ವಾರಗಳಿಂದ ಚಿತ್ರತಂಡದಿಂದ ಪ್ರೇಮ್ ಅವರ ಕಚೇರಿಯಲ್ಲಿ ಸಿನಿಮಾ ದೃಶ್ಯಗಳ ಜತೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ. ಸದ್ಯದಲ್ಲೇ ನನ್ನ ಪಾತ್ರದ ಚಿತ್ರೀಕರಣ ಶುರುವಾಗಲಿದೆ.

ಸರಿ, ಚಿತ್ರದಲ್ಲಿ ನಿಮ್ಮ ಪಾತ್ರವೇನು? ರಚಿತಾರಾಮ್ ಕೂಡ ನಾಯಕಿ ಎನ್ನುತ್ತಿದ್ದಾರಲ್ಲ?

ಚಿತ್ರದ ಕತೆ ಮತ್ತು ಪಾತ್ರದ ಬಗ್ಗೆ ಈಗಲೇ ಏನೂ ಹೇಳಲ್ಲ. ಆತ್ಮವಿಶ್ವಾಸದಿಂದ ಕ್ಯಾಮೆರಾ ಮುಂದೆ ನಿಲ್ಲುವುದಕ್ಕೆ ಬೇಕಾದ ತರಬೇತಿ ನೀಡಿದ್ದಾರೆ. ಚಿತ್ರೀಕರಣ ಶುರುವಾದ ಮೇಲೆ ನನ್ನ ಪಾತ್ರದ ಬಗ್ಗೆ ಹೇಳುತ್ತೇನೆ. ಆದರೆ, ನಾನು ಈ ಚಿತ್ರದ ನಾಯಕಿ.

ರಚಿತಾರಾಮ್ ಅವರ ಪಾತ್ರ ಏನು?

ಅವರು ಹೇಗೆ ಚಿತ್ರದಲ್ಲಿ ಬರುತ್ತಾರೆ ಎಂಬುದು ನನಗೆ ಮಾಹಿತಿ ಇಲ್ಲ.

ಮೊದಲ ಹೆಜ್ಜೆಯಲ್ಲೇ ದೊಡ್ಡ ನಿರ್ದೇಶಕನ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ಹೇಗನಿಸುತ್ತಿದೆ?

ನಾನು ತುಂಬಾ ಲಕ್ಕಿ ಗರ್ಲ್. ಒಂದು ಬ್ಯೂಟಿಫುಲ್ ಲವ್‌ಸ್ಟೋರಿ. ನೋಡಕ್ಕೆ ಚೆನ್ನಾಗಿರೋ ಹೀರೋ ರಾಣಾ. ಸ್ಟಾರ್ ನಿರ್ದೇಶಕರಾದ ಪ್ರೇಮ್. ಇದೆಲ್ಲವೂ ಮೊದಲ ಚಿತ್ರದಲ್ಲೇ ಸಿಗುತ್ತಿದೆ ಎಂದರೆ ನಾನು ಅದೃಷ್ಟವಂತೆ.

ಕನ್ನಡದಲ್ಲಿ ಯಾರ ಚಿತ್ರಗಳನ್ನು ಹೆಚ್ಚು ನೋಡುತ್ತೀರಿ? ಜೋಗಿ ಪ್ರೇಮ್ ಚಿತ್ರಗಳನ್ನು ನೋಡಿದ್ದೀರಾ?

ನಾನು ಯಶ್ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತೇನೆ. ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ನನ್ನ ನೆಚ್ಚಿನ ಸಿನಿಮಾ. ಪ್ರೇಮ್ ಅವರ ‘ಜೋಗಿ’ ಸಿನಿಮಾ ತುಂಬಾ ಸಲ ನೋಡಿದ್ದೇನೆ. ಹಾಗೆ ನೋಡಿದರೆ ನಾನು ಸ್ಟೇಜ್ ಮೇಲೆ ಮೊದಲು ಹೆಜ್ಜೆ ಹಾಕಿದ್ದೇ ಜೋಗಿ ಚಿತ್ರದ ಹಾಡುಗಳಿಗೆ.

ಯಾವ ರೀತಿಯ ಪಾತ್ರಗಳೆಂದರೆ ಇಷ್ಟ, ನಟನೆಗಾಗಿ ಓದುವುದನ್ನು ಬಿಡುತ್ತೀರಾ?

ನಟಿ ಆಗಬೇಕು ಎಂದರೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು. ಇಂಥದ್ದೇ ಪಾತ್ರಕ್ಕೆ ಸೀಮಿತವಾಗಬಾರದು. ನಾನು ಎಜುಕೇಷನ್ ಜತೆಗೆ ನಟನೆಯನ್ನೂ ಮುಂದುವರಿಸುತ್ತೇನೆ. ಸಿನಿಮಾ ಮತ್ತು ಓದು ಎರಡು ನನಗೆ ಮುಖ್ಯ. 

- ಕೇಶವಮೂರ್ತಿ