ದೇಶಾದ್ರಿ ಹೊಸ್ಮನೆ

ಕಿಕ್ ನೀಡುವ ಪಂಚಿಂಗ್ ಡೈಲಾಗ್‌ಗಳ ಮೂಲಕ ರಾಬರಿ ಪತ್ತೇದಾರಿಕೆಯ ಪ್ರಸಂಗವು ಪ್ರೇಕ್ಷಕರ ತಾಳ್ಮೆಯ ಪರೀಕ್ಷೆಗೂ ಒಡ್ಡಿ, ಹೊಸತಾದ ಜಾಡಿನಲ್ಲಿ ರಂಜಿಸುವುದು ಈ ಚಿತ್ರದ ಪ್ಲಸ್ ಪಾಯಿಂಟ್. ಹಾಗೆಯೇ ರೆಟ್ರೋ ಚಿತ್ರಣವೊಂದು ಆಧುನಿಕ ತಂತ್ರಜ್ಞಾನದಲ್ಲಿ ತೆರೆ ಮೇಲೆ ಮೂಡಿದ ವಿಶಿಷ್ಟ ಅನುಭಾವವೂ ಇಲ್ಲಿ ಪ್ರೇಕ್ಷಕರಿಗೆ ಖಚಿತ. 

ಒಂದು ಪೊಲೀಸ್ ಠಾಣೆ ರಾಬರಿ ಪ್ರಕರಣ ಮತ್ತದರ ಪತ್ತೇದಾರಿಕೆಯ ಮೂಲಕ ಅದನ್ನು ರೆಟ್ರೋ ಲುಕ್‌ನಲ್ಲಿ ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. 80 ದಶಕದ ಕತೆ ಎನ್ನುವುದು ಅದರ ರೆಟ್ರೋ ಲುಕ್‌ಗಿದ್ದ ಮೂಲ ಕಾರಣ. ಕತೆಯ ಕಾಲಘಟ್ಟಕ್ಕೆ ಕಿಂಚಿತ್ತು ದಕ್ಕೆ ಆಗದ ಹಾಗೆ ಇಲ್ಲಿ ಲೊಕೇಷನ್ಸ್, ಕ್ಯಾಮರಾ, ಕಾಸ್ಟ್ಯೂಮ್ ಹಾಗೂ ಸಂಗೀತ ಎಲ್ಲವೂ ಅಚ್ಚುಕಟ್ಟಾಗಿವೆ. ರೋಚಕವಾಗಿ ಹೆಣೆದ ಕತೆ, ಅದನ್ನು ಸೊಗಸಾಗಿ ನಿರೂಪಿಸಿದ ರೀತಿ, ಅದಕ್ಕೆ ಸಾಥ್ ನೀಡಿದ ಡೈಲಾಗ್ ಎಲ್ಲವೂ ಚಿತ್ರವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿವೆ. ಸಿನಿಮಾದ ಅವಧಿ ತುಸು ಹೆಚ್ಚೇನಿಸಿದರೂ, ರಂಜನೆ ಮತ್ತು ಥ್ರಿಲ್‌ನಲ್ಲಿ ಅವು ಕೊರತೆ ಉಂಟಾಗದಂತೆ ಮಾಡಿವೆ.

ಸಿಂಪಲ್ ಕತೆ. ಮುತ್ತಿನ ಕೊಪ್ಪ ಪೊಲೀಸ್ ಠಾಣೆಯ ಒಬ್ಬ ಸಾಮಾನ್ಯ ಪೇದೆ ದಿವಾಕರ್(ರಿಷಬ್ ಶೆಟ್ಟಿ). ಆತನಿಗೆ ಪತ್ತೇದಾರಿ ಕೆಲಸ ಎಂದರೆ ಬಲು ಇಷ್ಟ. ಅದೇ ಕಾರಣಕ್ಕೆ ಆತ, ತನ್ನ ಹೆಸರಿನ ಹಿಂದೆ ಡಿಟೆಕ್ಟಿವ್ ಎನ್ನುವ ಟ್ಯಾಗ್ ಅಂಟಿಸಿಕೊಂಡವನು.  ಬಾಲ್ಯದಿಂದಲೂ ಪತ್ತೇದಾರಿ ಕಾದಂಬರಿ ಹಾಗೂ ಸಿನಿಮಾಗಳನ್ನು ನೋಡಿ ಬೆಳೆದವನು. ಅದೇ ತಂತ್ರವನ್ನು ಆತ ತನ್ನ ಡಿಟೆಕ್ಟಿವ್ ಕೆಲಸಗಳಲ್ಲೂ ತೋರಿಸಬೇಕೆನ್ನುವ ಆಸೆ. ಅದು ಬಿಟ್ಟು ಮೇಲೆ ಕೆಲಸಗಳಿಗೆ ತಮ್ಮ ಮೇಲಿನ ಅಧಿಕಾರಿಗಳು ಹೇಳಿದಾಗೆಲ್ಲ ನಾನ್...ಸರ್ ಅಂತ ಉದ್ಘಾರ ಎತ್ತುತ್ತಾನೆ. ಅನಿವಾರ್ಯವಾಗಿ ಆ ಕೆಲಸ ಮಾಡಿ ಮುಗಿಸುತ್ತಾನೆ. ಹಾಗೆ ಸಿಕ್ಕ ಒಂದು ಸವಾಲಿನ ಕೆಲಸದಲ್ಲಿ ಸಕ್ಸಸ್ ಕಾಣುತ್ತಾನೆ. ಕೊಲೆ ಪ್ರಕರಣ ಭೇದಿಸಿ, ಶಹಬಾಸ್ ಎನಿಸಿಕೊಳ್ಳುತ್ತಾನೆ. ಆ ನಂತರ ಮತ್ತೆ ಆತನನ್ನು ಹುಡುಕಿಕೊಂಡು ಬಂದಿದ್ದು ಪೊಲೀಸ್ ಠಾಣೆಯಲ್ಲೇ ನಡೆದ ರಾಬರಿ ಪ್ರಕರಣವನ್ನು ಭೇದಿಸುವ ಕೆಲಸ. ಅದರ ಹಿಂದೆ ಯಾರಿರುತ್ತಾರೆ, ಅದನ್ನು ಆತ ಹೇಗೆ ಭೇದಿತ್ತಾನೆ ಎನ್ನುವುದು ಕತೆ. ಇದರಲ್ಲಿ ಲಾಜಿಕ್ ಇದೆ, ಮ್ಯಾಜಿಕ್ ಇದೆ. ಅವೆರಡನ್ನು ಹದವಾಗಿ ಹೆಣೆದು ತೋರಿಸುವ ಪ್ರಯತ್ನವೂ ಆಗಿದೆ. ಆದರೂ ಕೆಲವು ಲೋಪಗಳು ಇಲ್ಲಿವೆ.

ಒಳ್ಳೆಯ ಉದ್ದೇಶಕ್ಕಾಗಿ ಪೊಲೀಸ್ ಠಾಣೆ ರಾಬರಿ ಮಾಡುವವರಿಗೆ ಸಾರ್ವಜನಿಕರ ಹಣವೇ ಬೇಕಿತ್ತಾ? ದಿವಾಕರ್ ತನಗೆ ನಿಗದಿ ಆಗಿದ್ದ ಗಡುವು ಮರೆತನಾ? 

ಡಿಟೆಕ್ಟಿವ್ ದಿವಾಕರ್‌ನ ಪತ್ತೇದಾರಿಕೆಯ ಕಸರತ್ತು ತುಸು ಜಾಸ್ತಿಯೇ ಇದೆ. ಆದರೂ, ರೆಟ್ರೋ ಲುಕ್ ಮತ್ತು ಪಂಚಿಂಗ್ ಡೈಲಾಗ್ ಡೆಲಿವರಿ ಮೂಲಕ ಆ ಪಾತ್ರವನ್ನು ರಿಷಬ್ ಶೆಟ್ಟಿ ಲವಲವಿಕೆಯಲ್ಲಿ ಅಭಿನಯಿಸಿದ್ದಾರೆ. ಪಾತ್ರದಲ್ಲಿನ ಹೀರೋ ಅವರು ಎನ್ನುವುದಕ್ಕಿಂತ, ಅವರೊಳಗಿನ ಪಾತ್ರವೇ ಅಲ್ಲಿ ಹೀರೋ. ಹಾಗೆಯೇ ಹರಿಪ್ರಿಯಾ ಪಾತ್ರ. ಮೂರ್ನಾಲ್ಕು ಹೆಸರಲ್ಲಿ ಗುರುತಿಸಿಕೊಳ್ಳುವ ಹರಿಪ್ರಿಯಾ ಈ ಕತೆಯ ಪ್ರಧಾನ ಪಾತ್ರಧಾರಿ. ಈ ತರಹದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಮಾತು, ನಟನೆ ಎಲ್ಲವೂ ಹಿಡಿಸುತ್ತವೆ. ಇಲ್ಲಿ ಪಾತ್ರಗಳ ಸೃಷ್ಟಿಯೂ ವಿಶಿಷ್ಟ. ಡಿಟೆಕ್ಟಿವ್ ದಿವಾಕರ್, ಅಣ್ಣಪ್ಪ, ಕುಸುಮ, ಗೀತಾ, ಮೇರಿ, ಸೆಗಣಿ ಪಿಂಟೋ, ಮೋಡಿ ನಂಜಪ್ಪ, ಗೂಬೆ ರಾಮ, ಮರ ಕುಟುಕ, ಕುರೇಶಿ... ಇದೆಲ್ಲ ಸೃಷ್ಟಿಸಿದ್ದು ಕತೆಗಾರ ದಯಾನಂದ್. ಇವೆಲ್ಲ ಅವರಿಗೆ ಮಾತ್ರ ಸಿಗುವ ಪಾತ್ರಗಳೋ ಏನೋ ಎನ್ನುವ ವಿಶೇಷ ಮತ್ತು ವಿಭಿನ್ನ ಎನಿಸುತ್ತವೆ. ಅವುಗಳನ್ನು ತೋರಿಸಿದ ರೀತಿಯೂ ಸೊಗಸಾಗಿದೆ. ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಶಿವಮಣಿ ಸೇರಿ ಪ್ರತಿಯೊಬ್ಬರು ಆಯಾ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಾರೆ. ಹಾಗೆಯೇ ಅವು ಚಿತ್ರ ನೋಡಿ ಎದ್ದು ಬಂದಾಗಲೂ ಮನಸ್ಸಲ್ಲಿ ಉಳಿದು ಕಿಚ್ಚಾಯಿಸುತ್ತವೆ. ಅದೇ ಕತೆಗಾರನ ಕಸುವು. ಸಿನಿಮಾದ
ಶಕ್ತಿಯೂ ಹೌದು. ಜತೆಗೆ ಕಶ್ಯಪ್ ಕ್ಯಾಮರಾ, ಅಜನೀಶ್ ಸಂಗೀತ ಮತ್ತು ರಘು ನಿಡುವಳ್ಳಿ ಸಂಭಾಷಣೆ. ಕತೆಗೆ ತಕ್ಕಂತೆ ಅವೆರಡು ಚಿತ್ರವನ್ನು ಮತ್ತಷ್ಟು ಸುಂದರಗೊಳಿಸಿವೆ. ಅವೇ ಈ ಸಿನಿಮಾದ ಜೀವಾಳ. ಆ ಮೂಲಕ ನಿರ್ದೇಶಕರ ಶ್ರಮ ಇಲ್ಲಿ ಫಲಿಸಿದಂತೆ ಎನಿಸುವುದು ಸುಳ್ಳಲ್ಲ.

ಚಿತ್ರ: ಬೆಲ್ ಬಾಟಮ್

ತಾರಾಗಣ: ರಿಷಬ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಕುಮಾರ್, ಯೋಗರಾಜ್
ಭಟ್, ಶಿವಮಣಿ, ಸುಜಯ್ ಶಾಸ್ತ್ರಿ, ದಿನೇಶ್ ಮಂಗಳೂರು

ನಿರ್ದೇಶನ: ಜಯತೀರ್ಥ

ಸಂಗೀತ : ಅಜನೀಶ್ ಲೋಕನಾಥ್ 

ಛಾಯಾಗ್ರಹಣ: ಅರವಿಂದ್ ಕಶ್ಯಪ್

ರೇಟಿಂಗ್: ***