ಪ್ರೇಮ ಯುದ್ಧ ಮತ್ತು ಇತರ ಕತೆಗಳು ‘ಬದ್ರಿ ವರ್ಸಸ್ ಮಧುಮತಿ’!
ಒಂದು ಪ್ರೇಮ ಕತೆ, ದ್ವಿತೀಯಾರ್ಧಕ್ಕೆ ಮತ್ತೊಂದು ಪ್ರೇಮ ಕತೆ. ಅವರೆಡು ಸೇರಿದರೆ ಬದ್ರಿ ವರ್ಸಸ್ ಮಧುಮತಿಯ ಒಟ್ಟು ಕತೆ. ಇಷ್ಟಕ್ಕೂ ಬದ್ರಿ ಮತ್ತು ಮಧುಮತಿ ಇಬ್ಬರೂ ಪ್ರೇಮಿಗಳು. ಅವರ ಪ್ರೇಮಕತೆಗೂ ಸುಖಾಂತ್ಯವಿದೆ. ಆದರೂ, ಬದ್ರಿ ಮತ್ತು ಮಧುಮತಿ ನಡುವೆ ‘ವರ್ಸಸ್’ ಯಾಕೆ ಎನ್ನುವ ಪ್ರಶ್ನೆಗಿಲ್ಲಿ ಉತ್ತರವಿಲ್ಲ. ನಿರ್ದೇಶಕರು ಕತೆ ಹೇಳುತ್ತಾರೆ, ಪ್ರೇಕ್ಷಕರು ಅದನ್ನು ಲಾಜಿಕ್ ಇಲ್ಲದೆ ನೋಡಬೇಕು ಅಷ್ಟೇ. ಹಾಗಂತ ಇದೇನು ಕಡಿಮೆ ಬಜೆಟ್ ಸಿನಿಮಾ ಅಲ್ಲ, ಒಂದು ಕಮರ್ಷಿಯಲ್ ಸಿನಿಮಾಕ್ಕೆ ಆಗುವಷ್ಟೇ ಬಂಡವಾಳ ಇದಕ್ಕೂ ಖರ್ಚಾಗಿದೆ. ಅಷ್ಟಾಗಿಯೂ ಚಿತ್ರತಂಡಕ್ಕೆ ಪ್ರೇಕ್ಷಕರನ್ನು ರಂಜಿಸುವಷ್ಟುಒಂದೊಳ್ಳೆ ಸಿನಿಮಾ ಮಾಡಲು ಸಾಧ್ಯವಾಗಿಲ್ಲ ಎನ್ನುವುದಾದರೆ, ಅದು ಅನುಭವದ ಕೊರತೆ ಎನ್ನುವುದಕ್ಕಿಂತ ಬೇರೆನು ಇಲ್ಲಿ ಕಾಣದು.
ಡಿಹೆಚ್
ರಾಯದುರ್ಗದ ಎನ್ನುವುದೊಂದು ಊರು. ಅಲ್ಲಿ ಸಾಹುಕಾರ ಸಿದ್ಧಪ್ಪನದ್ದೇ ದರ್ಬಾರು. ಆದರೂ, ಆತನ ಮಗಳು, ಓರ್ವ ಸಾಮಾನ್ಯ ಕುಟುಂಬದ ಹುಡುಗನೊಂದಿಗೆ ಪ್ರೀತಿಸಿ, ಪರಾರಿ ಆಗುತ್ತಾಳೆ. ಸಿದ್ಧಪ್ಪನಿಗೆ ಅದು ಪ್ರತಿಷ್ಠೆ. ಮಗಳನ್ನು ಪ್ರೀತಿಸಿ, ಕರೆದ್ಯೊಯ್ದ ಆ ಹುಡುಗನನ್ನು ಮುಗಿಸಿ ಬಿಡಿ ಅಂತ, ಆಳುಗಳಿಗೆ ಆರ್ಡರ್ ಮಾಡುತ್ತಾನೆ. ರೌಡಿ ಪಡೆ ಆ ಪ್ರೇಮಿಗಳನ್ನು ಅಟ್ಟಿಸಿಕೊಂಡು ಓಡುತ್ತದೆ. ಪ್ರೇಮಿಗಳ ಪಾಲಿನ ಆ ದುರ್ಗಮ ದಾರಿಗೆ ಕಥಾ ನಾಯಕ ಬದ್ರಿ ಆಪದ್ಬಾಂಧವನಾಗಿ ಬರುತ್ತಾನೆ. ಅವರಿಬ್ಬರ ಪ್ರೇಮಕ್ಕೆ ಕಾವಲು ನಿಂತು, ಸಿದ್ಧಪ್ಪನಿಗೆ ದಂಡಂ ದಶಗುಣಂದ ಪಾಠ ಹೇಳಿ, ಬುದ್ಧಿ ಕಲಿಸುತ್ತಾನೆ. ಅಲ್ಲಿಗೆ ಒಂದು ಸಮಸ್ಯೆ ಇತ್ಯರ್ಥವಾಗುತ್ತದೆ. ಚಿತ್ರದ ಅರ್ಧ ಭಾಗದ ಕತೆಯೂ ಅದರಲ್ಲೇ ಸವೆದು ಹೋಗುತ್ತದೆ. ಉಳಿದಿದ್ದು ಬದ್ರಿ ಮತ್ತು ಮಧುಮತಿ ಪ್ರೇಮ ಕತೆ.
ಸೈನ್ಯದಲ್ಲಿರುವ ಬದ್ರಿ, ಊರಿಗೆ ಬಂದಾಗ ನಡೆಯುವ ಪ್ರೇಮ ಪಯಣದಲ್ಲಿ ಭಗ್ನ ಪ್ರೇಮಿ ಆಗುವ ಆತಂಕದಲ್ಲಿರುತ್ತಾನೆ. ವಿಪರೀತ ಕುಡಿಯುತ್ತಾನೆ, ಸಿಗರೇಟು ಸೇದುತ್ತಾನೆ. ಇದ್ದಕ್ಕಿದ್ದ ಹಾಗೆ ಸೈನ್ಯಾಧಿಕಾರಿ ಆದೇಶದಂತೆ ಪಾಕ್‌ಗೆ ಹೋಗಿ ಉಗ್ರಗಾಮಿಗಳನ್ನು ಸದೆ ಬಡೆದು ಬರುತ್ತಾನೆ. ಈ ಲಾಜಿಕ್ಕಿಲ್ಲದ ಕತೆಯಲ್ಲಿನ ಆ್ಯಕ್ಷನ್ ಸನ್ನಿವೇಶಗಳು ಮೈ ನವಿರೇಳಿಸುವಂತೆ ಮಾಡುವ ಬದಲಿಗೆ ತಮಾಷೆ ಎನಿಸುತ್ತವೆ.ನಾಯಕ ಪ್ರತಾಪ್ ಅಷ್ಟಕ್ಕಷ್ಟೇ. ನಾಯಕಿ ಆಕಾಂಕ್ಷ ಹಾಗೂ ಪೂಜಾರಿ ಪಾತ್ರದಲ್ಲಿ ಜಹಂಗೀರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸಂಗೀತ, ಛಾಯಾಗ್ರಹಣದಲ್ಲೂ ವಿಶೇಷತೆ ಇಲ್ಲ.
ಇದು ಹೊಸಬರ ಎಳಸು ಪ್ರಯತ್ನ. ತಕ್ಕ ಅನುಭವವಿಲ್ಲದೆ, ಗಟ್ಟಿಕತೆ ಆಯ್ಕೆ ಮಾಡಿಕೊಳ್ಳದೆ, ಪೂರಕ ಸಿದ್ಧತೆ ನಡೆಸದೆ ನಟರಾಗುವ, ನಿರ್ದೇಶಕರಾಗುವ ದುಸ್ಸಾಹಸಕ್ಕೆ ಬಿದ್ದರೆ ಹೇಗೆಲ್ಲ ಸಿನಿಮಾ ಮಾಡಬಹುದು ಎನ್ನುವುದಕ್ಕೊಂದು ಉದಾಹರಣೆ ಇದು. ಏನೆಲ್ಲ ದೋಷಗಳಿವೆ, ಹೇಗೆಲ್ಲ ರಂಜಿಸದೆ ಸೋತಿವೆ, ಹಾಗಂತ ಪಟ್ಟಿಮಾಡುತ್ತಾ ಹೋದರೆ, ಸಿನಿಮಾದ ಬಹುತೇಕ ದೃಶ್ಯಗಳಿಗೆ ಕತ್ತರಿ ಪ್ರಯೋಗ ಗ್ಯಾರಂಟಿ. ಆದರೂ, ಸಂಕಲನಕಾರರು ಅವೆಲ್ಲವನ್ನು ಮನ್ನಿಸಿ, ಉಳಿಸಿ ಬೆಳೆಸಿದ್ದಾರೆಂದರೆ ಅದು ಹೊಸಬರ ಪ್ರಯತ್ನಕ್ಕೆ ನೀಡಿದ ಬೆಂಬಲ ಮಾತ್ರ.
ಚಿತ್ರ: ಬದ್ರಿ ವರ್ಸಸ್ ಮಧುಮತಿ
ತಾರಾಗಣ : ಪ್ರತಾಪ್ ಪವನ್, ಆಕಾಂಕ್ಷ ಗಾಂಧಿ, ಜಹಂಗೀರ್, ಕೆಂಪೇಗೌಡ, ಜತ್ತಿ, ರವಿಕುಮಾರ್, ಅರವಿಂದ್ ಬೋಳಾರ್
ನಿರ್ದೇಶಕ: ಶಂಕರ್ ನಾರಾಯಣ್
ಛಾಯಾಗ್ರಹಣ: ಶಂಕರ್ ಆರಾಧ್ಯ
ಸಂಗೀತ: ಎಲ್ವಿನ್ ಜೋಶ್ವಾ