ಹೇಗಿದೆ ವಾಸು...ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ?
ವಾಸು, ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ಲವ್, ಸೆಂಟಿಮೆಂಟ್ ,ರೊಮಾನ್ಸ್, ಆ್ಯಕ್ಷನ್ ಎನ್ನುವ ಎಲ್ಲಾ ಕಮರ್ಷಿಯಲ್ ಅಂಶಗಳು ಇಲ್ಲಿವೆ. ಆ ಮೂಲಕ ಮನರಂಜನೆಯ ಭರ್ಜರಿ ಮಸಾಲೆ ಇಟ್ಕೊಂಡು ತೆರೆ ಮೇಲೆ ಹೊಸದೊಂದು ಕತೆಯಲ್ಲಿ ಕಾಣಿಸಿಕೊಂಡಿದ್ದಾರೆ ಅನೀಶ್. ಉಳಿದಂತೆ ಹೇಗಿದೆ ಸಿನಿಮಾ?
ನಾನು ಈಕೆಯನ್ನು ಮುಗಿಸಿಬಿಡಬೇಕೆಂದುಕೊಂಡಿದ್ದೇನೆ. ಸಾಧ್ಯವಾದರೆ ಈಗಲೇ ನನ್ನ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಿ ! ಆತ ಪೊಲೀಸ್ ಇನ್ಸ್‌ಸ್ಪೆಕ್ಟರ್ ಮುಂದೆ ಕುಳಿತು ತಾನು ಕೊಲೆ ಮಾಡಬೇಕೆಂದುಕೊಂಡವಳ ಫೋಟೋ ಬಿಸಾಕಿ
ಹಾಗೆ ಹೇಳುತ್ತಾನೆ.
ಎಫ್‌ಐಆರ್ ದಾಖಲಿಸಿಕೊಳ್ಳುವ ಮುಂಚೆ ನಿನ್ನದೇನು ಕತೆ ಹೇಳು ಅಂತಾರೆ ಪೊಲೀಸ್ ಇನ್ಸ್‌ಸ್ಪೆಕ್ಟರ್.ಚಿತ್ರ ಫ್ಲ್ಯಾಶ್ ಬ್ಯಾಕ್‌ನತ್ತ ತಿರುಗುತ್ತದೆ. ಲವ್ ಬ್ರೇಕಪ್ ಆತನನ್ನು ಪೊಲೀಸ್ ಠಾಣೆಯವರಿಗೂ ಕರೆತಂದಿರುತ್ತದೆ. ಪ್ರೀತಿಸಿದ ಹುಡುಗ ತನಗೆ ಐ ಲವ್ ಯು ಹೇಳಿಲ್ಲ ಅನ್ನೋದು ನಾಯಕಿಯ ಆಕ್ಷೇಪ. ಅಸಲಿ ಕಾರಣ ಏನು ಅನ್ನೋದೇ ಈ ಚಿತ್ರದ ಒನ್‌ಲೈನ್ ಸ್ಟೋರಿ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಲವ್, ಸೆಂಟಿಮೆಂಟ್ ,ರೊಮಾನ್ಸ್, ಆ್ಯಕ್ಷನ್ ಎನ್ನುವ ಎಲ್ಲಾ ಕಮರ್ಷಿಯಲ್ ಅಂಶಗಳು ಇಲ್ಲಿವೆ. ಆ ಮೂಲಕ ಮನರಂಜನೆಯ ಭರ್ಜರಿ ಮಸಾಲೆ ಇಟ್ಕೊಂಡು ತೆರೆ ಮೇಲೆ ಹೊಸದೊಂದು ಕತೆಯಲ್ಲಿ ಕಾಣಿಸಿಕೊಂಡಿದ್ದಾರೆ ಅನೀಶ್.
ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಈ ಸಿನಿಮಾದಲ್ಲಿ ಅನೀಶ್ ಲುಕ್, ಆ್ಯಕ್ಟಿಂಗ್ ಖದರ್ ಎರಡು ಬೇರೆಯದೇ ರೀತಿಯಲ್ಲಿವೆ. ಲವ್ ಬ್ರೇಕಪ್ ಕತೆಗಳು ಹೊಸದಲ್ಲದಿದ್ದರೂ, ಆ ಬ್ರೇಕಪ್ ಹಿಂದಿನ ಅಸಲಿಯತ್ತು ಏನು ಅನ್ನೋದನ್ನು ಪ್ರೇಕ್ಷಕನಿಗೆ ಗಾಢವಾಗಿ ತಟ್ಟುವ ಹಾಗೆ ನಿರ್ದೇಶಕರು ರೋಚಕವಾಗಿಯೇ ತೆರೆಗೆ ತಂದಿದ್ದಾರೆ. ನಿರೂಪಣೆಯೂ ಸಂಭಾಷಣೆಯೂ ಜೋರಾಗಿವೆ.
ಚಿತ್ರದ ಮೊದಲರ್ಧವೀಡಿ ಪ್ರೀತಿ, ಪ್ರೇಮದ ಓಟ, ಪ್ರೀತಿಗೆ ಅಡ್ಡಬಂದವರ ಜೊತೆಗಿನ ಹೊಡೆದಾಟ, ಜತೆಗೆ ಫ್ಯಾಮಿಲಿ ಸೆಂಟಿಮೆಂಟು. ಅದರ ಜತೆಗೆ ಹಾಡು. ಅವುಗಳ ಜತೆಗೆ ಕತೆ ಸಾಗುವುದೇ ಗೊತ್ತಾಗುವುದಿಲ್ಲ. ಸೊಗಸಾದ ಅವರ ಪ್ರೀತಿಯ ಕತೆ ರೋಚಕವಾಗಿಯೇ ಪ್ರೇಕ್ಷಕರನ್ನು ರಂಜಿಸುತ್ತದೆ. ಬಿಗಿಯಾದ ನಿರೂಪಣೆ ಪ್ರತಿ ದೃಶ್ಯವನ್ನು ಮುದ್ದಾಗಿಸಿದೆ.
ಹಾಗಾಗಿಯೇ ಅರ್ಧ ಹಾದಿ ಪ್ರೀತಿಯಲ್ಲೇ ಸುಗಮವಾಗುತ್ತದೆ. ನಿಜವಾದ ಕತೆ ದ್ವಿತೀಯಾರ್ಧದಲ್ಲಿ ಶುರುವಾಗುತ್ತದೆ. ಹೊಸತೆನಿಸಿದ ಈ ಕತೆಯಾಚೆ, ಕಲಾವಿದರ ಅಭಿನಯಕ್ಕೆ ಬಂದರೆ ಅನೀಶ್ ಇಲ್ಲಿ ಹೊಸ ತೆರನಾಗಿಯೇ ಕಾಣುತ್ತಾರೆ. ಆ್ಯಕ್ಟಿಂಗ್, ಆ್ಯಕ್ಷನ್, ಡಾನ್ಸ್ ಮೂರರಲ್ಲೂ ಪ್ರೇಕ್ಷಕರನ್ನು ರಂಜಿಸುತ್ತಾರೆ. ವಿಕ್ರಮ್ ಮೋರ್ ಅವರ ಸಾಹಸ ಮೈನವೀರೆಳಿಸುತ್ತದೆ. ನಾಯಕಿ ಮಹಾಲಕ್ಷಿ ಪಾತ್ರದಲ್ಲಿ ನಟಿ ನಿಶ್ವಿಕಾ ನಾಯ್ಡು ಅಭಿನಯ ಚಿತ್ರದ ಹೈಲೈಟ್.ಕನ್ನಡಕ್ಕೆ ಮತ್ತೊಬ್ಬ
ಪರ್‌ಫಾರ್ಮೆನ್ಸ್ ನಟಿ ಸಿಕ್ಕಳು ಎನ್ನುವುದಕ್ಕೆ ಅಡ್ಡಿಯಿಲ್ಲ.
ನಾಯಕನ ತಂದೆಯಾಗಿ ಮಂಜುನಾಥ ಹೆಗ್ಡೆ, ತಾಯಿಯಾಗಿ ಅರುಣಾ ಬಾಲರಾಜ್, ಇನ್ಸಸ್ಪೆಕ್ಟರ್ ಪಾತ್ರದಲ್ಲಿ ಅವಿನಾಶ್, ನಾಯಕಿ ತಂದೆಯಾಗಿ ದೀಪಕ್ ಶೆಟ್ಟಿ ಅಷ್ಟು ಪಾತ್ರಗಳಲ್ಲೂ ಸಹಜತೆ ಇದೆ. ದಿಲೀಪ್ ಚಕ್ರವರ್ತಿ ಕ್ಯಾಮೆರಾ ಕೆಲಸದಲ್ಲಿ ಕ್ರಿಯೇಟಿವಿಟಿ ಕಾಣುತ್ತದೆ. ನೆನಪಿಡಿ, ಇದು ಪಕ್ಕಾ ಕಮರ್ಶಿಯಲ್!
-ದೇಶಾದ್ರಿ ಹೊಸ್ಮನೆ
ಚಿತ್ರ : ವಾಸು.. ನಾನ್ ಪಕ್ಕಾ ಕಮರ್ಷಿಯಲ್
ತಾರಾಗಣ: ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು,
ಅವಿನಾಶ್, ಮಂಜುನಾಥ್ ಹೆಗಡೆ, ಅರುಣಾ ಬಾಲರಾಜ್,
ಗಿರಿ, ದೀಪಕ್ ಶೆಟ್ಟಿ
ನಿರ್ದೇಶನ: ಅಜಿತ್ ವಾಸನ್ ಉಗ್ಗಿನ
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ: ದಿಲೀಪ್ ಚಕ್ರವರ್ತಿ
ರೇಟಿಂಗ್: ***