ಚಿತ್ರ ವಿಮರ್ಶೆ : ತ್ರಾಟಕ
ಈ ವಾರ ತ್ರಾಟಕ ಎನ್ನುವ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ಹೇಗಿದೆ? ಏನಂತಾನೆ ಪ್ರೇಕ್ಷಕ ಮಹಾಪ್ರಭು? ಇಲ್ಲಿದೆ ಈ ಚಿತ್ರದ ವಿಮರ್ಶೆ.
ಬೆಂಗಳೂರು (ಸೆ. 01): ಮರ್ಡರ್ ಮಿಸ್ಟ್ರಿ ಸಿನಿಮಾಗಳಲ್ಲಿ ಪತ್ತೇದಾರಿಕೆಯ ನಿರೂಪಣಾ ಶೈಲಿಯೇ ಮುಖ್ಯ. ಹಾಡು, ಸಂಗೀತ, ಕ್ಯಾಮರಾಗಳಾಚೆ ಗಟ್ಟಿಯಾದ ನಿರೂಪಣೆಯೊಂದಿಗೆ ಅದು ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಬಲ್ಲದು ಎನ್ನುವುದರ ಮೇಲೆ ಆ ಸಿನಿಮಾದ ಹಣೆಬರಹ ಡಿಸೈಡ್ ಆಗುತ್ತೆ. ಸದ್ಯಕ್ಕೀಗ ಪ್ರೇಕ್ಷಕರ ಪಾಲಿಗೆ ಅಂಥದೊಂದು ಥ್ರಿಲ್ ತ್ರಾಟಕದಲ್ಲೂ ಇದೆ.
ಆದ್ರೆ ಫಸ್ಟ್ ಹಾಫ್ ಬೋರು, ಸೆಕೆಂಡ್ ಹಾಫ್ ಜೋರು. ಸೆಕೆಂಡ್ ಹಾಫ್‌ನ ಥ್ರಿಲ್ಲಿಂಗ್ ಅನುಭವ ಕಾಣಬೇಕಾದ್ರೆ, ಮೊದಲಾರ್ಧದ ತ್ರಾಸಿನ ಪಯಣ ಸವೆಸಲೇಬೇಕು. ಇನ್ನು ಮರ್ಡರ್ ಮಿಸ್ಟ್ರಿ ಎನ್ನುವುದು ಸಿನಿಮಾ ಹೆಣಿಗೆಯ ಮತ್ತೊಂದು ತಂತ್ರ. ‘ಜಿಗರ್ ಥಂಡಾ’ ನಂತರ ನಿರ್ದೇಶಕ ಶಿವಗಣೇಶ್ ಎರಡನೇ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡ ಕಥಾವಸ್ತು ಕೂಡ ಮರ್ಡರ್ ಮಿಸ್ಟ್ರಿಯೇ ಆಗಿದ್ದರೂ, ಕತೆಗೆ ಕಾಂಪ್ಲೆಕ್ಸ್ ಪಾರ್ಷಿಯಲ್ ಸೀಜರ್ ಎನ್ನುವ ವಿಚಿತ್ರ ಕಾಯಿಲೆಯ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹೊಸ ರೀತಿಯಲ್ಲಿ ರಂಜಿಸುವ ಪ್ರಯತ್ನ ಮಾಡಿರುವುದು ವಿಶೇಷ.
ಕ್ಲೈಮ್ಯಾಕ್ಸ್ ತನಕ ಇಲ್ಲಿ ನಿಜವಾದ ಕೊಲೆಗಾರ ಯಾರು ಎನ್ನುವುದನ್ನು ಉಹಿಸುವುದಕ್ಕೂ ಅಸಾಧ್ಯ. ಅದೇ ಈ ಚಿತ್ರದ ಬಹು ದೊಡ್ಡ ಯಶಸ್ಸು. ಹಾಗೆಯೇ ನಿರ್ದೇಶಕರ ಜಾಣ್ಮೆಯೂ ಕೂಡ. ಎಸಿಪಿ ದೇವ್ ಅಲಿಯಾಸ್ ಜಯದೇವ್(ರಾಹುಲ್ ಐನಾಪುರ್) ಸಹೋದರ ನಿಖಿಲ್‌ನ ನಿಗೂಢ ಕೊಲೆಯ ಮೂಲಕ ಪರದೆ ಮೇಲೆ ಚಿತ್ರಕತೆ ಬಿಚ್ಚಿಕೊಳ್ಳುತ್ತದೆ. ಮರ್ಡರ್ ಮಿಸ್ಟ್ರಿ ಅಂದ್ಮೇಲೆ ಅದು ಸಹಜ ಕೂಡ. ಆದರೆ, ಮಾಧವನ್ ಸ್ಟ್ರೀಟ್‌ನಲ್ಲಿ ಆ ರಾತ್ರಿ ನಡೆದು ಹೋದ ಆ ಕೊಲೆಯ ಹಿಂದೆ ಅತ್ಯಂತ ವ್ಯವಸ್ಥಿತ ಸಂಚು ಇರುತ್ತೆ.
ಕೊಲೆಗಾರನ ಸಣ್ಣದೊಂದು ಕ್ಲೂ ಕೂಡ ಸಿಗುವುದಿಲ್ಲ. ದಕ್ಷ ಪೊಲೀಸ್ ಅಧಿಕಾರಿಯಾಗಿ ಸಾಕಷ್ಟು ಕೊಲೆ ರಹಸ್ಯ ಭೇದಿಸಿ, ಎನ್‌ಕೌಂಟರ್ ಸ್ಪೆಷಲಿಸ್ಟ್ ಅಂತಲೇ ಖ್ಯಾತಿ ಪಡೆದ ದೇವ್‌ಗೂ ಅದು ಸವಾಲು. ಎನ್
ಕೌಂಟರ್ ಕಾರಣಕ್ಕೆ ತನಗಿರುವ ಶತ್ರುಗಳ ಸುಳಿವು ಪತ್ತೆ ವಿಚಾರಣೆ ನಡೆಸುತ್ತಾನೆ. ಆತ ಹಾಗೆ ವಿಚಾರಣೆ ನಡೆಸಿದ ಕೆಲವೇ ಕ್ಷಣಗಳಲ್ಲಿ ಅವರೆಲ್ಲರೂ ಕೊಲೆ ಆಗುತ್ತಾ ಬರುತ್ತಾರೆ. ನಿಖಿಲ್ ಕೊಲೆಯ ಬೆನ್ನಲೇ ಸರಣಿ ಕೊಲೆಗಳು ನಡೆದು ಹೋಗುತ್ತವೆ. ಪ್ರೇಕ್ಷಕರ ಪಾಲಿಗೆ ದೇವ್ ಕೊಲೆಗಾರ !
ಹಲವು ಟ್ವಿಸ್ಟ್‌ಗಳ ಮೂಲಕ ಕತೆ ಕುತೂಹಲಕಾರಿ ಆಗಿದೆ. ಹಾಗೆ ನೋಡಿದರೆ ಕಥಾ ನಾಯಕ ದೇವ್ ಪಾತ್ರದಲ್ಲಿ ರಾಹುಲ್ ಐನಾಪುರ್ ಅಭಿನಯ ಅಷ್ಟಕಷ್ಟೇ ಎನಿಸುತ್ತದೆ. ಸೆಕೆಂಡ್ ಹಾಫ್‌ನಲ್ಲಿ ಅವರೇ ನಿಜವಾದ ಹೀರೋ. ಹಾಗೆಯೇ ಯಶ್ ಶೆಟ್ಟಿ, ಅಜಿತ್ ಜಯರಾಜ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿ, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿದ್ದಾರೆ. ಲಾಂಗ್ ಗ್ಯಾಪ್ ನಂತರ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರುವ ಹೃದಯ ಅವಂತಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುವ ಭರವಸೆ ಮೂಡಿಸುತ್ತಾರೆ.
ಜತೆಗೆ ಭವಾನಿ ಪ್ರಕಾಶ್ ಕೂಡ.ವಿನೋದ್ ಭಾರತಿ ಛಾಯಾಗ್ರಹಣ, ಅರುಣ್ ಸುರುಧಾ ಸಂಗೀತ, ಜತೆಗೆ ಸುರೇಶ್ ಆರ್ಮುಗಂ ಸಂಕಲನ, ವಿಕ್ರಮ್ ಮೋರ್ ಸಾಹಸ ಅಚ್ಚುಕಟ್ಟಾಗಿವೆ. ಮೊದಲಾರ್ಧ ಎದುರಾಗುವ ತ್ರಾಸದಾಯಕ ಪ್ರಯಾಣ ಸವೆಸುವುದಕ್ಕೆ ತಾಳ್ಮೆ ಬೇಕು.
ಚಿತ್ರ: ತ್ರಾಟಕ
ತಾರಾಗಣ : ರಾಹುಲ್ ಐನಾಪುರ್, ಅಜಿತ್ ಜಯರಾಜ್, ಯಶ್ ಶೆಟ್ಟಿ, ಹೃದಯ, ಅಕ್ಷತಾ, ಭವಾನಿ ಪ್ರಕಾಶ್
ನಿರ್ದೇಶನ : ಶಿವಗಣೇಶ್
ಛಾಯಾಗ್ರಹಣ: ವಿನೋದ್ ಭಾರತಿ
ನಿರ್ಮಾಣ: ಆಸ್ತಾಸ್
ರೇಟಿಂಗ್: ***
- ಚಿತ್ರ ವಿಮರ್ಶೆ : ದೇಶಾದ್ರಿ ಹೊಸ್ಮನೆ