ಮಿಸ್ ಮಾಡದೇ ನೋಡುವಂಥ ಚಿತ್ರ ’ಎಂಎಂಸಿಎಚ್’

Kannada latest movie MMCH review
Highlights

ಮಹಿಳಾ ಪರ ಹೋರಾಟವನ್ನು ತೆರೆ ಮೇಲೆ ಮನೋಜ್ಞವಾಗಿ ತಂದಿದ್ದಾರೆ ನಿರ್ದೇಶಕ ಮುಸ್ಸಂಜೆ ಮಹೇಶ್. ಸಸ್ಪೆನ್ಸ್, ಥ್ರಿಲ್ ಎಲ್ಲವೂ ಇದೆ ಈ ಚಿತ್ರದಲ್ಲಿ. ಹೇಗಿದೆ ಈ ಚಿತ್ರ?  

ಸಸ್ಪೆನ್ಸ್ ಥ್ರಿಲ್ಲರ್ ಎಂದೇ ಕರೆಸಿಕೊಂಡ ಎಂಎಂಸಿಎಚ್  ಸಿನಿಮಾ ಸೆಕೆಂಡ್ ಹಾಫ್ ನಂತರ ಮಹಿಳಾ ಪರ ಹೋರಾಟದ ಚಿತ್ರವಾಗಿ ಬದಲಾಗುವುದು ನಿರ್ದೇಶಕ ಮುಸ್ಸಂಜೆ ಮಹೇಶ್ ಚಾಣಾಕ್ಷತನ, ಹೆಗ್ಗಳಿಕೆ, ಬುದ್ಧಿವಂತಿಕೆ ಹೀಗೆ ಏನು ಬೇಕಾದರೂ ಆಗಬಹುದು.

ನಾಲ್ಕು ಜನ ಹುಡುಗಿಯರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಈ ಚಿತ್ರದ ಜೀವಾಳ. ಉಳಿದಂತೆ ಒಂದಿಬ್ಬರು ಹುಡುಗರು ಆಗೀಗ ಬಂದು ಹೋಗುತ್ತಾರಾದರೂ ಹೆಚ್ಚಿನ ಮರ್ಯಾದೆ ಏನೂ ಇಲ್ಲ. ಹಾಗಾಗಿ ಇದೊಂದು ಮಹಿಳಾ ಪ್ರಧಾನ ಕತೆ, ಸಿನಿಮಾ ಮತ್ತು ಪ್ರಯತ್ನ. ನಿರ್ದೇಶಕರು ಈ ಚಿತ್ರದಲ್ಲಿ ಒಂದು ಮಹತ್ವದ ವಿಚಾರವನ್ನು ದಾಟಿಸುವ ಪ್ರಯತ್ನ ಮಾಡಲು ಹೊರಟಿದ್ದಾರೆ. ಆದರೆ ಡೈಲಾಗ್ ಬರೆಯುವ ಹೊತ್ತಿಗೆ ಒಂದು ವಿಚಾರಕ್ಕೆ  ಮತ್ತೊಂದು ವಿಚಾರ ಡಿಕ್ಕಿ ಹೊಡೆದು ಗೋಜಲು ಉಂಟಾಗಿ ಮಹಿಳೆಯರ ವಿರುದ್ಧದ ಅನ್ಯಾಯವನ್ನು ತಡೆಗಟ್ಟುವ ಪ್ರಸ್ತಾಪದಿಂದ ಹಿಡಿದು ನ್ಯಾಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಆಲೋಚನೆವರೆಗೆ ಎಲ್ಲವನ್ನೂ ಹೀಗೆ ಟಚ್ ಮಾಡಿ ಹಾಗೆ ಹೋಗುತ್ತಾರೆ.

ಭಾಷಣಗಳು  ಸಿನಿಮಾವನ್ನು ಕಾಪಾಡುವುದಿಲ್ಲ ಅನ್ನುವುದು ಮಾತಿನ ಭರದಲ್ಲಿ ಅವರಿಗೇ ಮರೆತು ಹೋಗಿದೆ. ತೆಳ್ಳಗೆ ಬೆಳ್ಳಗೆ ಬಳುಕುವಂಥಾ ಖಡಕ್ ಆಫೀಸರ್ ರಾಗಿಣಿ  ಈ ಚಿತ್ರದ ಹೀರೋ. ಆರಂಭದಲ್ಲಿ ಅವರ ಆರ್ಭಟ ಹೇಗಿದೆ ಅಂದರೆ ಅವರು ಫೈಟ್ ಮಾಡಿ, ಸಿಗರೇಟ್ ಸೇದಿ ಮತ್ತು ಬೇಜಾನ್ ಯೋಚನೆ ಮಾಡುವುದನ್ನು ನೋಡಿಯೇ ಚಿತ್ರ ಮುಗಿಯುವಷ್ಟರ ಹೊತ್ತಿಗೆ ಮತ್ತಷ್ಟು ಸಣ್ಣಗಾಗಬಹುದು ಅನ್ನಿಸುತ್ತದೆ. ಅಷ್ಟು ಶ್ರಮ ಪಟ್ಟಿದ್ದಾರೆ ರಾಗಿಣಿ. ದ್ವಿತೀಯಾರ್ಧದ ತುಂಬಾ ಮೇಘನಾ ರಾಜ್, ಸಂಯುಕ್ತಾ, ದೀಪ್ತಿ ಮತ್ತು ಪ್ರಥಮಾ ಪ್ರಸಾದ್ ಹವಾ.

ಲೈವ್ಲೀ ಕಾಲೇಜು ಹುಡುಗಿಯರು ಪಾತ್ರಗಳನ್ನು ನಿಭಾಯಿಸಿರುವ ಅವರು ನೋಡುವುದಕ್ಕೆ ಸಾಫ್ಟು. ಮಾತಿಗಿಳಿದರೆ ನಂದಮೂರಿ ಬಾಲಕೃಷ್ಣ ರೇಂಜಿನ ಡೈಲಾಗುಗಳು. ಫೈಟಿಗೆ ನಿಂತರೆ ನಾಲ್ಕು ಥರದ ಮಾಲಾಶ್ರೀಯನ್ನು ಒಟ್ಟೊಟ್ಟಿಗೆ ನೋಡುವ ಭಾಗ್ಯ. ನಟನೆ ಚೆಂದ. ವೀರಾವೇಶ ಸ್ವಲ್ಪ ಕಷ್ಟ. ನಟೀಮಣಿಯರು ಮಹಿಳಾ ಹೋರಾಟಗಾರರಂತೆ ಕಾಣಿಸುವುದು ಈ ಚಿತ್ರದ ಹೈಲೈಟು. ಚಚ್ಚಿ ಬಿಸಾಕುವುದಷ್ಟೇ ಅಲ್ಲದೇ ಹುಡುಗರಿಗೆ ಹುಡುಗಿಯರಿದ್ದಾರೆ ಎಚ್ಚರಿಕೆಯನ್ನೂ
ನೀಡುತ್ತಾರೆ. ಆದುದರಿಂದ ಇದೊಂದು ಎಚ್ಚರಿಕೆ ಭರಿತ ಚಿತ್ರ. ತೆಳುವಾದ ದೃಶ್ಯ ಸಂಯೋಜನೆ, ಭರಪೂರ ಮಾತುಗಳಿಂದಾಗಿ ತಾಳ್ಮೆ ಎಷ್ಟಿದ್ದರೂ ಸಾಲದು. ಸ್ವಲ್ಪ ಸಹನೆ ಕಡ ತೆಗೆದುಕೊಳ್ಳುವುದು ಒಳಿತು. 

 

ಚಿತ್ರ: ಎಂಎಂಸಿಹೆಚ್ ನಿರ್ದೇಶನ: ಮುಸ್ಸಂಜೆ ಮಹೇಶ್ ತಾರಾಗಣ: ರಾಗಿಣಿ ದ್ವಿವೇದಿ, ಮೇಘನಾ ರಾಜ್, ಸಂಯುಕ್ತಾ ಹೊರನಾಡು, ದೀಪ್ತಿ, ಪ್ರಥಮಾ ಪ್ರಸಾದ್ ನಿರ್ಮಾಣ: ಎಸ್. ಪುರುಷೋತ್ತಮ್, ಜೆ. ಜಾನಕಿರಾಮ್, ಅರವಿಂದ್ ಸಂಗೀತ: ಶ್ರೀಧರ್ ವಿ ಸಂಭ್ರಮ್ ರೇಟಿಂಗ್: ***

-ರಾಜೇಶ್ ಶೆಟ್ಟಿ 

loader