ಚಿತ್ರ ವಿಮರ್ಶೆ : ಮನೋರಥ
ಈ ವಾರ ಮನೋರಥ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಮನಸ್ಸಿಗೆ ಸಂಬಂಧಿಸಿದ್ದು. ಹೇಗಿದೆ ಈ ಚಿತ್ರ। ಇಲ್ಲಿದೆ ಚಿತ್ರದ ವಿಮರ್ಶೆ.
ಬೆಂಗಳೂರು (ಸೆ. 08): ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ವಿಚಿತ್ರ ಕಾಯಿಲೆಗೆ ಸಂಬಂಧಿಸಿದ ಕತೆ. ಅದರ ಹೆಸರೇ ಮನೋರಥ. ಬಾಲ್ಯದಲ್ಲಿ ನೋಡಿದ ಅಘಾತಕಾರಿ ಘಟನೆಯೊಂದು ಮನಸಿನ ಮೇಲೆ ಗಂಭೀರವಾದ ಪರಿಣಾಮ ಬೀರಿದಾಗ ಬರುವ ಕಾಯಿಲೆ ಇದು.
ಅಂತಹ ಮಾನಸಿಕ ಕಾಯಿಲೆಗೆ ಒಳಗಾದ ಕಥಾ ನಾಯಕ ತನ್ನ ಸುತ್ತಲ ಜನರೊಂದಿಗೆ ಹೇಗೆಲ್ಲ ವರ್ತಿಸುತ್ತಾನೆ, ಆ ಕಾಯಿಲೆಯಿಂದ ಆತನ ಗುಣಮುಖನಾಗಲು ಸಾಧ್ಯವಾಗುತ್ತೋ, ಇಲ್ಲವೋ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. ಇದೇನು ಹೊಸ ಬಗೆಯ ಕತೆಯಾ? ಮನೋರೋಗಕ್ಕೆ ಸಂಬಂಧಿಸಿದ ಹಲವು ಚಿತ್ರಗಳು ಕನ್ನಡದಲ್ಲೇ ಬಂದು ಹೋಗಿವೆ.
ಅವುಗಳ ಸಾಲಿನಲ್ಲಿ ಇದು ಕೂಡ ಒಂದು. ಹಾಗಾಗಿ ಪ್ರೇಕ್ಷಕರನ್ನು ರಂಜಿಸಲು ಚಿತ್ರದ ಈ ಕತೆಯೊಳಗೆ ಹೆಚ್ಚೇನು ಹೊಸತಿಲ್ಲ, ಹಾಗೆಯೇ ವಿಶೇಷತೆಯೂ ಇಲ್ಲ. ಕತೆಯ ಎಳೆ ತುಂಬಾ ಚಿಕ್ಕದು. ಕಥಾ ನಾಯಕ ಬಾಲ್ಯದಲ್ಲಿ ಕಂಡ ಆಘಾತಕಾರಿ ಘಟನೆಯಿಂದಾಗಿ ಮನೋರೋಗಿ ಆಗುತ್ತಾನೆ. ಆತ ನೋಡಿದ ಘಟನೆ ಏನು, ಆತನ ವರ್ತನೆ ಹೇಗಿರುತ್ತವೆ ಎನ್ನುವುದನ್ನಷ್ಟನ್ನೇ ತೋರಿಸಲು ನಿರ್ದೇಶಕರು ಫ್ಲ್ಯಾಷ್ ಬ್ಯಾಕ್ ಸೂತ್ರ ಬಳಸಿದ್ದಾರೆ. ಅದಕ್ಕೊಂದು ಡೈರಿ ಕತೆ ಸೇರಿಸಿಕೊಂಡಿದ್ದಾರೆ.
ಚಿತ್ರದ ಕತೆ ಶುರುವಾಗುವುದೇ ಡೈರಿ ತೆರೆದ ನಂತರ. ಫಸ್ಟ್‌ಹಾಫ್‌ಗೆ ಒಂದು ಡೈರಿ, ಸೆಕೆಂಡ್ ಹಾಫ್ಗೆ ಮತ್ತೊಂದು ಡೈರಿ. ಒಟ್ಟು ಎರಡು ಡೈರಿಯೊಳಗಿನ ಕತೆಗಳು ಶುರುವಾಗುವುದೇ ಒಂದು ಬೃಹತ್ ಅಪಾರ್ಟ್‌ಮೆಂಟ್‌ನ ಕೊಠಡಿಗಳಲ್ಲಿ. ಇಡೀ ಕತೆ ಅದೇ ಕಟ್ಟಡದಲ್ಲಿ ಸಾಗುತ್ತದೆ. ಹಾಗಾಗಿ ಒಂದೆಡೆ ಅಪಾರ್ಟ್‌ಮೆಂಟ್, ಮತ್ತೊಂದೆಡೆ ಆಸ್ಪತ್ರೆ. ಎರಡೇ ಚಿತ್ರದ ಲೊಕೇಷನ್. ಛಾಯಾಗ್ರಹಣದ ಸಾಹಸಕ್ಕೂ ಇಲ್ಲಿ ಜಾಗವೇ ಸಿಕ್ಕಿಲ್ಲ.
ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಹಾಗೆ, ಸಿಕ್ಕಷ್ಟೇ ಜಾಗದಲ್ಲಿ ಮುರುಳಿಕೃಷ್ಣ ಅವರ ಕ್ಯಾಮರಾ ತಿರುಗಾಡಿದೆ. ಅಲ್ಲಲ್ಲಿ ಕಣ್ಮನ ಸೆಳೆಯುತ್ತದೆ. ಕತೆಯೇ ವಿಚಿತ್ರ, ಅದಕ್ಕೆ ತಕ್ಕಂತೆಯೇ ಇದೆ ಚಂದ್ರು ಓಬಯ್ಯ
ಹಿನ್ನೆಲೆ ಸಂಗೀತ. ರಾಜ್ ಚರಣ್(ಕಥಾನಾಯಕ ವಿವೇಕ್), ಅಂಜಲಿ (ನಾಯಕಿ ಅಂಜಲಿ),ವಿಠಲ್‌ಭಟ್(ಚಿತ್ರನಿರ್ದೇಶಕ), ರಘು ರಾಮಣ್ಣ ಕೊಪ್ಪ(ಮನೋವೈದ್ಯ) ಧಮಯಂತಿ ನಾಗರಾಜ್ (ನಾಯಕನ ತಾಯಿ) ಸೇರಿ ಕೆಲವೇ ಕೆಲವು ಪಾತ್ರಗಳು ಚಿತ್ರದಲ್ಲಿವೆ.
ನಾಯಕ, ನಾಯಕಿ ಇಬ್ಬರಿಗೂ ಇದು ಮೊದಲ ಚಿತ್ರ. ಆ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆನ್ನುವುದನ್ನು ಬಿಟ್ಟರೆ , ಅಭಿನಯದ ಯಾವುದೇ ಕೋನದಲ್ಲೂ ವಿಶೇಷವಾಗಿ ಗಮನ ಸೆಳೆಯುವುದಿಲ್ಲ. ನಾಯಕನ ತಾಯಿ ಪಾತ್ರದಲ್ಲಿ ದಮಯಂತಿ ಅವರು ಪ್ರತಿ ದೃಶ್ಯದಲ್ಲಿ ತರಹೇವಾರಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದೇ ಸೌಭಾಗ್ಯ. ಉಳಿದಂತೆ ಹಾಡು, ಸಂಗೀತ, ಸಂಕಲನ ಎಲ್ಲವೂ ನೀರಸ, ನೋಡುವುದಕ್ಕೂ ತ್ರಾಸ. ನೋಡುತ್ತಾ ಹೋದಂತೆ ನಾಯಕನ ಸ್ಥಿತಿಯೇ ಪ್ರೇಕ್ಷಕನದ್ದು ಕೂಡ.
ಚಿತ್ರ: ಮನೋರಥ ತಾರಾಗಣ : ರಾಜ್ ಚರಣ್, ಅಂಜಲಿ, ವಿಠಲ್ ಭಟ್, ರಘು ರಾಮಣ್ಣ ಕೊಪ್ಪ, ಧಮಯಂತಿ ನಾಗರಾಜ್ ನಿರ್ದೇಶನ, ನಿರ್ಮಾಣ : ಪ್ರಸನ್ನ ಕುಮಾರ್ ಛಾಯಾಗ್ರಹಣ : ಮುರುಳಿಕೃಷ್ಣ
ಸಂಗೀತ : ಚಂದ್ರು ಒಬಯ್ಯ ರೇಟಿಂಗ್: **
- ದೇಶಾದ್ರಿ ಹೊಸ್ಮನೆ