ಹೇಗಿದೆ ಕುಮಾರಿ 21 ಎಫ್?
ಡೈನಾಮಿಕ್ ಹೀರೋ ದೇವರಾಜ್ ಎರಡನೇ ಪುತ್ರ ಪ್ರಣಾಮ್ ದೇವರಾಜ್ ಕೂಡಾ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ. ’ಕುಮಾರಿ 21 ಎಫ್’ ಚಿತ್ರದಲ್ಲಿ ಪ್ರಣಾಮ್ ಅಭಿನಯಿಸಿದ್ದಾರೆ. ಈ ವಾರ ಈ ಚಿತ್ರ ತೆರೆ ಕಂಡಿದೆ. ಹೇಗಿದೆ ಚಿತ್ರ?
ಮಾಯಕ ಹುಡುಗ. ಮೆಚ್ಯೂರ್ಡ್ ಹುಡುಗಿ. ಆಕೆ ಮಾಡೆಲ್. ಅವನು ಹೋಟೆಲ್ ಶೆಫ್ ಆಗುವ ಕನಸು ಕಾಣುತ್ತಿರುವವನು. ಇವರಿಬ್ಬರ ಭೇಟಿ ಆಕಸ್ಮಿಕ. ಪ್ರೀತಿಯೂ ಅಷ್ಟೇ. ಆದರೆ, ಆಕಸ್ಮಿಕವಾಗಿ ಹುಟ್ಟಿಕೊಂಡ ಪ್ರೀತಿಗೆ ಅನುಮಾನದ ಮಾತುಗಳು ಸೋಕಿದರೆ ಏನಾಗುತ್ತದೆ? ಇಂಥ ಕುತೂಹಲ ಇದ್ದವರು ‘ಕುಮಾರಿ ೨೧ಎಫ್’ ಸಿನಿಮಾ ನೋಡಬಹುದು.
ಆಗಷ್ಟೇ ಪ್ರೀತಿಯಲ್ಲಿ ಬಿದ್ದವರಿಂದ ಶುರುವಾಗಿ ಮದುವೆಯಾಗಿ ನಡು ವಯಸ್ಸು ದಾಟಿ, ಮಕ್ಕಳಾಗಿದ್ದರೂ ಸಂಬಂಧ, ಪ್ರೀತಿ- ಪ್ರೇಮದ ವಿಚಾರದಲ್ಲಿ ಅನುಮಾನ ಅನ್ನೋದು ಯಾವಾಗಲೂ ಅಂಟಿಕೊಂಡಿರುವ ಆತ್ಮ. ಆದರೆ, ಈ ಆತ್ಮವನ್ನು ಹಣೆಗೆ ಹಚ್ಚಿಕೊಂಡರೆ ಶುದ್ಧ ಪ್ರೇಮ ಮತ್ತು ಸಂಬಂಧವೊಂದು ಚದುರಿ ಹೋಗುತ್ತದೆಂದು ಹೇಳುವುದಕ್ಕಾಗಿ ನಿರ್ದೇಶಕರು ಹದಿಹರೆಯದ ಮನಸ್ಸುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಅವರ ಮೂಲಕ ಕುಮಾರಿ ಮತ್ತು ಕುಮಾರನ ಕತೆ ಹೇಳುವ ಪ್ರಯತ್ನದಲ್ಲಿ ಕತೆ ಎದ್ದಿದೆ, ಬಿದ್ದಿದೆ. ಮೊದಲ ನೋಟದಲ್ಲೇ ಹುಟ್ಟಿಕೊಳ್ಳುವ ಆಕರ್ಷಣೆ. ನಾಯಕಿ ಸಿಕ್ಕಾಪಟ್ಟೆ ಪ್ರಾಕ್ಟಿಲ್ ಹುಡುಗಿ. ನಾಯಕ ಎಲ್ಲದರಲ್ಲೂ ಅಮಾಯಕತೆ. ತನ್ನ ಗೆಳೆಯರು ಕಾನೂನು ಬಾಹಿರ ಕೆಲಸ ಮಾಡಿ ತಲೆಮರೆಸಿಕೊಂಡಿದ್ದರೆ ಅವರಿಗೆ ತಾನೇ ಅಡುಗೆ ರೆಡಿ ಮಾಡಿಕೊಂಡು ಹೋಗುವಷ್ಟು ಒಳ್ಳೆಯವನು. ಇಂಥ ಮುಗ್ಧನಿಗೆ ಜೀವನದ ಪ್ರತಿ ಹಂತವನ್ನು ಪ್ರಾಕ್ಟಿಕಲ್ಲಾಗಿ ನೋಡಬೇಕು.
ಹೊತ್ತಲ್ಲ ಹೊತ್ತಿನಲ್ಲಿ ಒಂದು ಹುಡುಗಿ ಹುಡುಗನ ಜತೆ ಮನೆಗೆ ಬರುವುದು, ತನಗೆ ಇಷ್ಟ ಬಂದ ಡ್ರೆಸ್ ಹಾಕಿಕೊಳ್ಳುವುದು, ಪಬ್ಬು- ಕ್ಲಬ್‌ಗೆ ಹೋಗಿ ಕುಣಿಯುವುದು ಹುಡುಗಿಯರ ಸ್ವಾತಂತ್ರ್ಯ ಎನ್ನುವ ಹುಡುಗಿಯ ಪರಿಚಯವಾಗುತ್ತದೆ. ಹೀಗೆ ಎರಡು ವಿರುದ್ಧ ದಿಕ್ಕಿನ ಮನಸ್ಸುಗಳು ಪ್ರೀತಿಯಲ್ಲಿ ಸಿಕ್ಕಿಕೊಂಡ ಮೇಲೆ ಸಹಜವಾಗಿ ಅನುಮಾನದ ಗಾಳಿ ಸದ್ದು ಮಾಡುತ್ತದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾಯಕ, ನಾಯಕಿ ಮುಂದೆ ಫೂಲ್ ಆಗುತ್ತಾನೆ.
ಕೊನೆಗೆ ಯಾರೂ ಏನೇ ಹೇಳಿದರೂ ತನ್ನ ಹುಡುಗಿ ತುಂಬಾ ಒಳ್ಳೆಯವಳು ಎಂದು ನಂಬುವ ಹೊತ್ತಿಗೆ ಕತೆಯಲ್ಲಿ ಮತ್ತೊಂದು ತಿರುವು ಬಂದ ಅದು ದುರಂತಕ್ಕೆ ದಾರಿ ಮಾಡಿಕೊಡುವ ಜತೆಗೆ ಆ ದುರಂತವೇ ಅನುಮಾನದ ಮನಸ್ಥಿತಿಗಳಿಗೆ ಕನ್ನಡಿ ಹಿಡಿಯುತ್ತದೆ. ಇದು ತೆಲುಗಿನ ರೀಮೇಕ್ ಚಿತ್ರ. ಏನೂ ಬದಲಾವಣೆಗಳಿಲ್ಲದೆ ಯಥವತ್ತಾಗಿ ಕನ್ನಡೀಕರಣ ಮಾಡಿರುವ ಸಿನಿಮಾ.
ಚಿತ್ರಕತೆ ಓಟ, ಸಂಭಾಷಣೆಗಳ ತೀಕ್ಷ್ಣತೆ, ಪಾತ್ರದಾರಿಗಳಿಂದ ನಟನೆ ತೆಗೆಸುವ ಕೆಲಸ ನಿರ್ದೇಶಕರಿಂದ ಆಗಿಲ್ಲ. ಇಡೀ ಸಿನಿಮಾ ಪೇಲವವಾಗಿ ಸಾಗುತ್ತದೆ. ಹಾಗಾದರೆ ದೇವರಾಜ್ ಅವರ ಎರಡನೇ ಪುತ್ರ ಪ್ರಣಾಮ್ ತೆರೆ ಮೇಲೆ ಹೇಗೆ ಕಾಣಿಸುತ್ತಾರೆ? ಅವರ ನಟನೆ ಹೇಗಿದೆ? ಡ್ಯಾನ್ಸ್‌ನಲ್ಲಿ ಫಸ್ಟ್ ರ‌್ಯಾಂಕ್ ಸ್ಟೂಡೆಂಟ್. ತೆರೆ ಮೇಲೂ ಚೆನ್ನಾಗಿ ಕಾಣುತ್ತಾರೆ.
ವಾಯ್ಸ್ ಪರ್ವಾಗಿಲ್ಲ ಅಲ್ಲ. ಆದರೆ, ನಟನೆ ಅಂತ ಬಂದಾಗ ಕಲಿಯುವುದು ತುಂಬಾ ಇದೆ. ತಮಗಿದು ಮೊದಲ ಸಿನಿಮಾ ಎಂಬುದು ಚಿತ್ರದ ಪ್ರತಿ ದೃಶ್ಯದಲ್ಲೂ ಸಾಬೀತು ಮಾಡುತ್ತ ಹೋಗುತ್ತಾರೆ ಪ್ರಣಾಮ್. ಆದರೂ ಕನ್ನಡದ್ದೇ ಒಳ್ಳೆಯ ಕತೆ ಮಾಡಿಕೊಂಡು ಪ್ರಣಾಮ್‌ರೊಂದಿಗೆ ಸಿನಿಮಾ ಮಾಡಿಸಬಹುದು ಎನ್ನುವ ಭರವಸೆ ಮೂಡಿಸಿದೆ ಅವರ ಮೊದಲ ಚಿತ್ರ. ನಟನೆಗಿಂತ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಕ್ಕೆ ನಾಯಕಿ ಪಾತ್ರ ಸೀಮಿತವಾಗಿದೆ.
ಹಾಸ್ಯವನ್ನು ಮೆಚ್ಚಿಕೊಂಡವರಿಗೇ ಇಷ್ಟ! ಎರಡು ಹಾಡುಗಳಲ್ಲಿ ಸಾಗರ್ ಮಹತಿ ಸಂಗೀತ ಪ್ರೇಕ್ಷಕರನ್ನು ಎಚ್ಚರಿಸುತ್ತದೆ.
-ಆರ್.ಕೇಶವಮೂರ್ತಿ
ಚಿತ್ರ: ಕುಮಾರಿ ೨೧ಎಫ್
ತಾರಾಗಣ: ಪ್ರಣಾಮ್ ದೇವರಾಜ್, ನಿಧಿ ಕುಶಾಲಪ್ಪ, ಅವಿನಾಶ್, ರವಿಕಾಳೆ, ಉಮೇಶ್,
ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ
ನಿರ್ದೇಶನ: ಶ್ರೀಮಾನ್ ವೇಮುಲ ನಿರ್ಮಾಣ: ಸಂಪತ್‌ಕುಮಾರ್, ಶ್ರೀಧರ್ ರೆಡ್ಡಿ
ಛಾಯಾಗ್ರಾಹಣ: ರಾಮಿ ರೆಡ್ಡಿ ಸಂಗೀತ: ಸಾಗರ್ ಮಹತಿ ರೇಟಿಂಗ್: **