ಚಿತ್ರ ವಿಮರ್ಶೆ: ಬಿಂದಾಸ್ ಗೂಗ್ಲಿ
ಈ ವಾರ ’ಬಿಂದಾಸ್ ಗೂಗ್ಲಿ’ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದ ವಿಶೇಷತೆಗಳೇನು? ಹೇಗಿದೆ ಈ ಚಿತ್ರ? ಇಲ್ಲಿದೆ ಚಿತ್ರ ವಿಮರ್ಶೆ.
ಬೆಂಗಳೂರು (ಸೆ. 08): ಮಕ್ಕಳಿಗಾಗಿ ಅಪ್ಪಂದಿರೇ ನಿರ್ಮಾಪಕರಾಗಿ ತಮ್ಮ ಪುತ್ರರನ್ನು ಸಿನಿಮಾ ಹೀರೋಗಳನ್ನಾಗಿ ಮಾಡುವುದು ಹೊಸದಲ್ಲ. ಆದರೆ, ಮಗನ ಚಿತ್ರದಲ್ಲೇ ತಾವೇ ಹೀರೋ ಆಗುವುದು ಹೊಸ ಟ್ರೆಂಡ್.
ಈ ಸಾಲಿಗೆ ‘ಬಿಂದಾಸ್ ಗೂಗ್ಲಿ’ ಎನ್ನುವ ಸಿನಿಮಾ ಸೇರಿಕೊಂಡಿದೆ. ಇಲ್ಲಿ ಅಪ್ಪ ನಿರ್ಮಾಪಕ. ಮಗ ಹೀರೋ. ತಾವೇ ಕಾಸು ಹಾಕಿರುವುದರಿಂದ ಕ್ಯಾಮೆರಾ ಮುಂದೆ ಕಾಣಿಸಿಕೊಂಡರೆ ತಪ್ಪೇನು ಎಂಬ ದಿಢೀರ್ ಆಲೋಚನೆಯಲ್ಲಿ ಅಪ್ಪ ಕ್ಯಾಮೆರಾ ಮುಂದೆ ನಿಂತಂತಿದೆ.
ಮಗ ಬಂದು ಫೈಟ್ ಮಾಡಿ, ಹುಡುಗಿಯರ ಜತೆ ಕುಣಿದರೆ, ಅಪ್ಪ ಬಂದು ಸುದೀಪ್, ದರ್ಶನ್, ಶಿವರಾಜ್‌ಕುಮಾರ್, ಯಶ್, ಪುನೀತ್‌ರಾಜ್ ಕುಮಾರ್ ಹೀಗೆ ಎಲ್ಲ ಸ್ಟಾರ್ ಹೀರೋಗಳನ್ನು ಒಂದೇ ಮಿಕ್ಸಿಯಲ್ಲಿ ಹಾಕಿ ರುಬ್ಬಿ ತಿಂದಂತೆ ಉದ್ದುದ್ದ ಡೈಲಾಗ್‌ಗಳನ್ನು ಹೇಳುತ್ತಾರೆ.
ಹೀಗಾಗಿ ನಿಜ ಜೀವನದ ಅಪ್ಪ- ಮಗ ಇಬ್ಬರು ಸ್ಕ್ರೀನ್ ಮೇಲೆ ಇರುವುದರಿಂದ ಯಾರನ್ನ ಹೀರೋ ಮಾಡಬೇಕೆಂಬ ಸಂಕಟವನ್ನು ನಿರ್ದೇಶಕರು ಅನುಭವಿಸಿರುವುದು ಪ್ರೇಕ್ಷಕರಿಗೂ ಗೊತ್ತಾಗುತ್ತದೆ. ಹೀಗೆ ಆಟಕ್ಕೂ ಇಲ್ಲದ, ಲೆಕ್ಕಕ್ಕೂ ಇಲ್ಲದ ‘ಬಿಂದಾಸ್ ಗೂಗ್ಲಿ’ ಎನ್ನುವ ಚಿತ್ರದ್ದು ಆಟದ್ದೇ ಕತೆ. ಕಾಲೇಜು ಓದುತ್ತಿರುವ ನಾಯಕನ ಗ್ಯಾಂಗ್‌ಗೆ ಡ್ಯಾನ್ಸರ್‌ಗಳಾಗಿ ಗುರುತಿಸಿಕೊಳ್ಳುವ ಆಸೆ. ಆದರೆ, ಅದಕ್ಕೆ ತಕ್ಕಂತೆ ತರಬೇತಿ ಸಿಗದೆ ಹೊತ್ತಿನಲ್ಲಿ ಹೊಸ ಕೋಚ್ ಒಬ್ಬರು ಆ ಕಾಲೇಜಿಗೆ ಬರುತ್ತಾರೆ.
ಆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಮಗಳು ಟೀಚರ್. ಆಕೆಗೆ ಆಗಲೇ ಮದುವೆ ಆಗಿದೆ. ಗಂಡ ಇಲ್ಲ. ಮಗು ಇದೆ. ತನ್ನ ಮಗಳ ಜತೆ ಕೋಚ್ ಬೇರೆ ಆಟ ಆಡುತ್ತಿದ್ದಾನೆಂದುಕೊಂಡು ತರಬೇತುದಾರನನ್ನು ಕಾಲೇಜಿನಿಂದ ಹೊರ ಹಾಕುತ್ತಾರೆ. ಇತ್ತ ಡ್ಯಾನ್ಸ್ ಕಲಿಯುವ ಆಸೆ ಹೊತ್ತ ಹುಡುಗರ ಕತೆ ಏನು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದರ ನಡುವೆ ಕಾಲೇಜು ಕಾರಿಡಾರ್‌ನಲ್ಲಿ ಪುಂಡರ ಗ್ಯಾಂಗ್‌ನ ಆಟಗಳು ಜೋರಾಗಿರುತ್ತವೆ. ಅದರ ವಿರುದ್ಧ ನಾಯಕನ ಹೋರಾಟವೂ ಇರುತ್ತದೆ.
ಡ್ಯಾನ್ಸ್, ಫೈಟ್‌ಗಳ ನಡುವೆ ಪ್ರೇಮ ಕತೆಯೂ ಹುಟ್ಟಿಕೊಳ್ಳುತ್ತದೆ. ಮುಂದೆ ಈ ಹುಡುಗರ ತಂಡ ಗುರುಕುಲ ಎನ್ನುವ ಕಾಲೇಜಿಗೆ ಹೆಸರು ತಂದುಕೊಡುತ್ತಾರೆಯೇ ಎಂಬುದು ಕತೆ. ಚಿತ್ರಕತೆ, ಸಂಭಾಷಣೆ, ಕಲಾವಿದರ ನಡುವೆ ಹೀಗೆ ಯಾವುದನ್ನೂ ನಿರೀಕ್ಷೆ ಮಾಡದೆ ಸುಮ್ಮನೆ ತೆರೆ ಮೇಲೆ ಒಂದಿಷ್ಟು ದೃಶ್ಯಗಳು ಬಂದು ಹೋದರೆ ಸಾಕು ಅದು ಸಿನಿಮಾ ಆಗುತ್ತದೆಯೇ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಇದ್ದವರು ಈ ಚಿತ್ರವನ್ನು ಒಮ್ಮೆ ನೋಡುವ ಧೈರ್ಯ ಮಾಡಬಹುದು.
ಕೋಚ್ ಪಾತ್ರ ಮಾಡಿರುವ ಧರ್ಮ ಕೀರ್ತಿರಾಜ್, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ವಾಣಿಶ್ರೀ, ರಾಮಕೃಷ್ಣ, ಕೀರ್ತಿರಾಜ್ ಹೀಗೆ ಯಾವ ಕಲಾವಿದರು ಕತೆಗೆ ಮುಖ್ಯ ಅನಿಸಿಲ್ಲ ಅದು ನಿರ್ದೇಶಕನ ಚಿತ್ರಕತೆಯ ತಿಳುವಳಿಕೆ ಮತ್ತು ಪಾತ್ರಧಾರಿಗಳ ಸಂಯೋಜನೆಯ ರೀತಿಗೆ ಹಿಡಿದ ಕನ್ನಡಿ.
ಚಿತ್ರ: ಬಿಂದಾಸ್ ಗೂಗ್ಲಿ ತಾರಾಗಣ: ಆಕಾಶ್, ನಿಮಿಕ ರತ್ನಕರ್, ಕಾರ್ತಿಕ್, ಕೀರ್ತಿ ರಾಜ್, ರಾಮಕೃಷ್ಣ, ವಾಣಿಶ್ರೀ, ನಿರ್ದೇಶನ: ಸಂತೋಷ್ ಕುಮಾರ್ ನಿರ್ಮಾಣ: ವಿಜಯ್ ಸದಾನಂದ್ ಛಾಯಾಗ್ರಾಹಣ: ಮ್ಯಾಥ್ಯೂ ರಾಜನ್ ಸಂಗೀತ: ವಿನು ಮನಸ್ಸು ರೇಟಿಂಗ್: **
-ವಿಮರ್ಶೆ : ಆರ್.ಕೇಶವಮೂರ್ತಿ