Asianet Suvarna News Asianet Suvarna News

ಸದ್ದಿಲ್ಲದೆ ನಡೆಯುತ್ತಿದೆ ಕನ್ನಡ ಸಿನಿಮಾ ನಿರ್ದೇಶಕನ ಸಮಾಜ ಸೇವೆ ! ಎಚ್'ಐವಿ ಪೀಡಿತರಿಗಾಗಿ ಈ ಕಾಯಕ

ಪೃಥ್ವಿ’, ‘ಸವಾರಿಸಿನಿಮಾಗಳ ನಿರ್ದೇಶಿಸಿದ್ದ ಜೇಕಬ್ ವರ್ಗೀಸ್ ಬಗ್ಗೆ ಹಾಗೆ ಹೇಳಲು ಕಾರಣವಿದೆ. ಅವರು ಸೈಲೆಂಟಾಗಿಯೇ ಎಲ್ಲರೂ ಮೆಚ್ಚುವ ಒಂದು ಕೆಲಸ ಮಾಡಿದ್ದಾರೆ. ನಾಲ್ಕು ವರ್ಷ ಇಬ್ಬರು ಎಚ್‌ಐವಿ ಮಕ್ಕಳ ಜೊತೆಗಿದ್ದು ಅವರ ಜೀವನದ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದಾರೆ.

Kannada director Jacob Varghese documentary Running Positive

ಇಲ್ಲೊಬ್ಬರು ಎಚ್‌ಐವಿ ಮಕ್ಕಳ ಜೀವನದ ಕತೆ ಕೆಲವು ನಿರ್ದೇಶಕರು ‘ಭಾರಿ ಸದ್ದು ಮಾಡುತ್ತಾರೆ. ಆಮೇಲೆ ಸೈಲೆಂಟಾಗಿ ಹೋಗುತ್ತಾರೆ. ಇನ್ನು ಕೆಲವರು ಮೌನವಾಗಿಯೇ ಏನೇನೋ ಕೆಲಸ ಮಾಡುತ್ತಿರುತ್ತಾರೆ. ಅವರ ಕೆಲಸವೇ ಮಾತನಾಡುತ್ತದೆ. ಇದರಲ್ಲಿ ಎರಡನೆಯ ವಿಭಾಗಕ್ಕೆ ಸೇರಿದವರು ನಿರ್ದೇಶಕ ಜೇಕಬ್ ವರ್ಗೀಸ್.

‘ಪೃಥ್ವಿ’, ‘ಸವಾರಿ’ ಸಿನಿಮಾಗಳ ನಿರ್ದೇಶಿಸಿದ್ದ ಜೇಕಬ್ ವರ್ಗೀಸ್ ಬಗ್ಗೆ ಹಾಗೆ ಹೇಳಲು ಕಾರಣವಿದೆ. ಅವರು ಸೈಲೆಂಟಾಗಿಯೇ ಎಲ್ಲರೂ ಮೆಚ್ಚುವ ಒಂದು ಕೆಲಸ ಮಾಡಿದ್ದಾರೆ. ನಾಲ್ಕು ವರ್ಷ ಇಬ್ಬರು ಎಚ್‌ಐವಿ ಮಕ್ಕಳ ಜೊತೆಗಿದ್ದು ಅವರ ಜೀವನದ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದಾರೆ. ಅದರ ಹೆಸರು ‘ರನ್ನಿಂಗ್ ಪಾಸಿಟಿವ್’. ನಾವೆಲ್ಲಾ ಹೆಮ್ಮೆ ಪಡಬಹುದಾದ ಈ ಡಾಕ್ಯುಮೆಂಟರಿಯನ್ನು ವಿಶ್ವದ ಪ್ರಖ್ಯಾತ ಟಿವಿ ವಾಹಿನಿಯಾದ ಎಚ್‌ಬಿಓ ಖರೀದಿಸಿದೆ. ಎಚ್‌ಬಿಓ ಒಪ್ಪಿದೆ ಅಂದರೆ ಈ ಡಾಕ್ಯುಮೆಂಟರಿ ಅತ್ಯುತ್ಕೃಷ್ಟವಾಗಿದೆ ಎಂದೇ ಅರ್ಥ. ಅಲ್ಲದೇ ದೊಡ್ಡ ಮೊತ್ತ ನೀಡಿ ಈ ಡಾಕ್ಯುಮೆಂಟರಿ ಖರೀದಿಸಲಿದೆ. ಆದರೆ ಜೇಕಬ್ ಅಲ್ಲೂ ತನ್ನ ಹೃದಯ ವೈಶಾಲ್ಯ ಮೆರೆದಿದ್ದಾರೆ. ಈ ಡಾಕ್ಯುಮೆಂಟರಿಯಿಂದ ಬಂದ ಒಂದೇ ಒಂದು ಪೈಸೆಯೂ ನನಗೆ ಬೇಡ, ಎಲ್ಲವನ್ನೂ ಎಚ್‌ಐವಿ ಪೀಡಿತ ಮಕ್ಕಳಿಗೆ ನೀಡುತ್ತೇನೆ ಎನ್ನುತ್ತಾರೆ. ಈ ಬಗ್ಗೆ ಅವರ ಜೊತೆ ನಡೆಸಿದ ಮಾತುಕತೆ ಇಲ್ಲಿದೆ.

1)ಎಚ್‌ಐವಿ ಮಕ್ಕಳ ಬಗ್ಗೆ ಡಾಕ್ಯುಮೆಂಟರಿ ಮಾಡಬೇಕು ಅಂತನ್ನಿಸಿದ್ದು ಯಾಕೆ?

ಜೇ: ನಾವು ಕೆಲವೊಂದ್ಸಲ ನಮ್ಮ ಹತ್ತಿರ ಎಲ್ಲಾ ಇದ್ದು ಸಣ್ಣ ಸಣ್ಣ ವಿಷಯಗಳಿಗೆ ಸಾಯುತ್ತಾ ಇರುತ್ತೇವೆ. ಆದರೆ ಈ ಎಚ್‌ಐವಿ ಮಕ್ಕಳಿದ್ದಾರಲ್ಲ, ಹುಟ್ಟಿನಿಂದಲೇ ಎಚ್‌ಐವಿಗೆ ತುತ್ತಾದವರು. ಅವರ ತಂದೆ ತಾಯಿಯಿಂದ ಅವರಿಗೆ ಎಚ್‌ಐವಿ ಬಂದಿದೆ. ಇಂತಹ ಸಾವಿರಾರು ಮಕ್ಕಳಿದ್ದಾರೆ. ಅವರು ಯಾವ ಪಾಪವನ್ನೂ ಮಾಡಿದವರಲ್ಲ, ಅವರು ಮಾಡದ ತಪ್ಪಿಗೆ ಹುಟ್ಟಿ ನಿಂದಲೇ ಸಮಸ್ಯೆ ಅನುಭವಿಸುತ್ತಾ ಬಂದಿದ್ದಾರೆ. ಅಂಥವರ ಸಾಧನೆ ಈ ಜಗತ್ತಿನಲ್ಲಿರುವ ಎಲ್ಲರಿಗೂ ಒಂದು ಸ್ಫೂರ್ತಿ ಅಂತನ್ನಿಸಿದ್ದು ನಾನು ಬೆಂಗಳೂರಿನ ಸರ್ಜಾಪುರದಲ್ಲಿರುವ ಸ್ನೇಹ ಸದನ ಎಂಬ ಶಾಲೆಯಲ್ಲಿ ಎಚ್‌ಐವಿ ಪೀಡಿತ ಮಕ್ಕಳನ್ನು ನೋಡಿದಾಗ. ಅಲ್ಲಿ 160 ಮಂದಿ ಇದ್ದಾರೆ. ಯಾರಿಗೂ ಅಪ್ಪ ಅಮ್ಮ ಇಲ್ಲ. ನನಗೆ ಅವರ ಬದುಕನ್ನು ಊಹಿಸಿದಾಗ ಅಬ್ಬಾ ಅನ್ನಿಸಿತು. ಅಂಥದ್ದರಲ್ಲಿ ಅವರು ಏನಾದರೂ ಸಾಧನೆ ಮಾಡಿದರೆ ಅದು ನಿಜಕ್ಕೂ ದೊಡ್ಡ ವಿಷಯ. ಎಲ್ಲರಿಗೂ ಅದು ಸ್ಫೂರ್ತಿ. ಹೀಗೆ ಸ್ಫೂರ್ತಿ ನೀಡುವ ಡಾಕ್ಯುಮೆಂಟರಿ ಮಾಡಬೇಕು ಅಂತ ಹೊರಟೆ.

2) ಏನಿದೆ ಈ ಡಾಕ್ಯುಮೆಂಟರಿಯಲ್ಲಿ?

ಜೇ: ನನಗೆ ಅಲ್ಲಿ ಇಬ್ಬರು ಹುಡುಗರು ಸಿಕ್ಕರು. ಬಾಬು ಮತ್ತು ಮಾಣಿಕ್ ಪ್ರಭು ಅಂತ. ಬಾಬು ಹೊಸಕೋಟೆಯವನು. ಮಾಣಿಕ್ ಬೀದರ್‌ನ ಹುಡುಗ. ನಾನವರನ್ನು ನೋಡಿದಾಗ 12 ವರ್ಷ ಅವರಿಗೆ. ಆರು ತಿಂಗಳಲ್ಲಿ ಒಂದು ಡಾಕ್ಯುಮೆಂಟರಿ ಮಾಡೋಣ ಅಂದುಕೊಂಡೆ. ಆದರೆ ಲೈಫ್ ನನ್ನನ್ನು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಯಿತು. ಅವರ ಜೀವನವನ್ನು ತೋರಿಸಬೇಕು ಅಂತ ಹೊರಟೆ. ಆದರೆ ಅವರು ನನಗೆ ಜೀವನ ಕಲಿಸಿಬಿಟ್ಟರು. ಅವರಿಬ್ಬರೂ ಆಟಗಾರರು. ಮ್ಯಾರಥಾನ್ ಓಡುತ್ತಾರೆ. ಅವರ ಶ್ರಮ, ಸಾಧನೆ ಅತ್ಯಪೂರ್ವ. ಹಾಗಾಗಿ ಅವರನ್ನು ಕರೆದುಕೊಂಡು ಒಂ‘ತ್ತು ದೇಶ ಸುತ್ತಿದ್ದೇನೆ. ನಾಲ್ಕು ಖಂಡಕ್ಕೆ ಹೋಗಿದ್ದೀವಿ ನಾವು. ಚಿಲ್ಡ್ರನ್ ಒಲಿಂಪಿಕ್‌ನಲ್ಲಿ ‘ಭಾಗವಹಿಸಿದ್ದಾರೆ. ನೆದರ್‌ಲ್ಯಾಂಡ್, ಬೋಸ್ಟನ್‌ನಲ್ಲಿ ಮ್ಯಾರಥಾನ್ ಓಡಿದ್ದಾರೆ. ಇವರ ಸಾಧನೆ ನೋಡಿದ ವಿಶ್ವಸಂಸ್ಥೆ ಜಿನೀವಾ ಕಚೇರಿಯಲ್ಲಿ ಇವರಿಬ್ಬರನ್ನೂ ಪ್ರಶಂಸೆ ಮಾಡಿತು. ಇವರಿಬ್ಬರೂ ಒಂದು ಕನಸಿದೆ, ಕಡೆಯವರೆಗೂ ನಾವು ಓಡುತ್ತಲೇ ಇರುತ್ತೇವೆ. ನಮ್ಮನ್ನು ನೋಡು ನಾಲ್ಕು ಜನ ಅವರಂತಹ ಮಕ್ಕಳು ಸ್ಫೂರ್ತಿ ಪಡೆದರೆ ಸಾಕು ಅನ್ನುವ ಆಸೆ ಅವರು. ಈ ನಾಲ್ಕು ವರ್ಷಗಳ ಜರ್ನಿ ಈ ಡಾಕ್ಯುಮೆಂಟರಿಯಲ್ಲಿದೆ. ಈಗ ನೋಡಿದರೆ ನಂಗೇ ಅಚ್ಚರಿಯಾಗತ್ತೆ. ಎಲ್ಲಿಂದ ಎಲ್ಲಿಗೆ ಹೋಗಿಬಿಟ್ಟಿತು ಜೀವನ. ಒಬ್ಬ ನಿರ್ದೇಶಕನಿಗೆ ತುಂಬಾ ತೃಪ್ತಿ ಕೊಟ್ಟ ಪ್ರಯತ್ನ ಇದು.

3) ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದವರಿಗೆ ಈ ಪ್ರಯತ್ನ ಮಾಡಬೇಕು ಅನ್ನಿಸಿದ್ದಕ್ಕೆ ಕಾರಣ?

ಜೇ: ನನಗೆ ಒಳ್ಳೆಯ ಸಿನಿಮಾ ಮಾಡಬೇಕು ಅನ್ನುವ ಆಸೆ. ನಮ್ಮ ಮೈಂಡ್‌ಗೆ ಭಯಂಕರ ಶಕ್ತಿ ಇದೆ. ನಾವು ಅದನ್ನು ಯಾವಾಗಲೂ ತೆರೆದಿಟ್ಟುಕೊಂಡಿರಬೇಕು. ಇಲ್ಲದಿದ್ದರೆ ಇದ್ದಲ್ಲೇ ಇರುತ್ತೇವೆ. ಉದಾಹರಣೆಗೆ ಒಬ್ಬ ಸ್ಟಾರ್ ಅನ್ನೇ ತೆಗೆದುಕೊಳ್ಳಿ. ಅವರಿಗೆ ಏನೋ ಬೇರೆ ಥರದ ಪ್ರಯತ್ನ ಮಾಡಬೇಕು ಅಂತ ಆಸೆ ಇರಬಹುದು. ಆದರೆ ಅದು ಸಾಧ್ಯ ಆಗೋದಿಲ್ಲ. ನಾನೊಬ್ಬ ನಿರ್ದೇಶಕ. ನನಗೆ ಹಾಗೆ ಇರೋದಿಕ್ಕೆ ಆಗಲ್ಲ. ನನಗೆ ತೃಪ್ತಿ ಕೊಡುವಂತಥದ್ದೇನೋ ಮಾಡಬೇಕು ಅಂದುಕೊಳ್ಳುತ್ತೇನೆ. ಆಗ ಈ ಥರದ್ದನ್ನೆಲ್ಲಾ ಮಾಡುತ್ತೇನೆ. ಅಲ್ಲದೇ ಕಮರ್ಷಿಯಲ್ ಸಿನಿಮಾ ಕೂಡ ಇದೆ. ನೀನಾಸಂ ಸತೀಶ್, ಕಿಶೋರ್ ಅಭಿನಯದ ‘ಚಂಬಲ್’ ಸಿನಿಮಾದ ಚಿತ್ರೀಕರಣ ಮುಗಿದಿದೆ. ವಿಶ್ವದ ಪ್ರಸಿದ್ಧ ಚಾನೆಲ್ ಎಚ್‌ಬಿಓ ನಿಮ್ಮ ಡಾಕ್ಯುಮೆಂಟರಿ ಖರೀದಿಸಿದೆ... ಹೌದು. ಮಾತುಕತೆ ಎಲ್ಲಾ ಆಗಿದೆ. ಇನ್ನೊಂದು ಪ್ರೊಸೆಸ್ ಬಾಕಿ ಇದೆ. ಕನ್ನಡದ ನಿರ್ದೇಶಕನೊಬ್ಬ ಎಚ್‌ಬಿಓ ತಲುಪಿದ್ದೇ ಅಚ್ಚರಿ.

4) ಇದೆಲ್ಲಾ ಹೇಗಾಯಿತು?

ಜೇ: ಸತ್ಯವಾಗಲೂ ನನ್ನ ಡಾಕ್ಯುಮೆಂಟರಿ ಎಚ್‌ಬಿಓಗೆ ಹೋಗುತ್ತದೆ ಅನ್ನುವ ಕಲ್ಪನೆಯೇ ನನಗಿಲ್ಲ. ನಾನು ಸುಮ್ಮನೆ ನನ್ನ ಖುಷಿಗೆ ಈ ಡಾಕ್ಯುಮೆಂಟರಿ ಮಾಡಬೇಕು ಅಂದುಕೊಂಡೆ. ಕಳೆದ ವರ್ಷ ‘ವಿಸಾರಣೈ’ ಸಿನಿಮಾ ಆಸ್ಕರ್‌ಗೆ ಹೋಗಿತ್ತು. ಅದರ ನಿರ್ದೇಶಕ ವೆಟ್ರಿಮಾರನ್ ನನ್ನ ಗೆಳೆಯ. ಅವನ ಜೊತೆ ಹಾಲಿವುಡ್‌ಗೆ ಹೋಗಿದ್ದೆ. ಅಲ್ಲಿ ಬೇರೆ ಬೇರೆ ನಿರ್ದೇಶಕರ ಜೊತೆ ಮಾತನಾಡುತ್ತಾ ಈ ಡಾಕ್ಯುಮೆಂಟರಿ ವಿಷಯ ಎಚ್‌ಬಿಓವರೆಗೂ ತಲುಪಿತು.

5) ಎಂಟು ಕೋಟಿ ರೂಪಾಯಿಗೆ ಈ ಡಾಕ್ಯುಮೆಂಟರಿ ಖರೀದಿ ಮಾಡಿದೆ ಅನ್ನೋ ಸುದ್ದಿ ಇದೆ. ಹೌದಾ?

ಜೇ:  ಇನ್ನೂ ತೀರ್ಮಾನ ಆಗಿಲ್ಲ. ಎಚ್‌ಬಿಓ ಆಗಿದ್ದರಿಂದ ಅಲ್ಲ ಅಂತ ಹೇಳೋಕಾಗಲ್ಲ. ಅಷ್ಟು ಸಿಕ್ಕಿದರೆ ಖುಷಿ. ಆದರೆ ಅದೆಲ್ಲವೂ ಈ ಮಕ್ಕಳಿಗೆ ಹೋಗುತ್ತದೆ. ನಾನು ಈ ಡಾಕ್ಯುಮೆಂಟರಿ ಮಾಡುವಾಗ ಮೊದಲೇ ನಿರ್ಧಾರ ಮಾಡಿದ್ದೆ. ಇದರಿಂದ ಒಂದು ಪೈಸೆ ಬಂದರೂ ಅದು ಈ ಎಚ್ ಐವಿ ಪೀಡಿತ ಮಕ್ಕಳಿಗೆ ಹೋಗಬೇಕು ಅಂತ. ಹಾಗಾಗಿ ಒಂದು ರೂಪಾಯಿ ಬಂದರೂ ಅಥವಾ ಹತ್ತು ಕೋಟಿ ದುಡ್ಡು ಬಂದರೂ ಸ್ನೇಹ ಸದನದ ಅಷ್ಟೂ ಮಕ್ಕಳ ಜೀವನಕ್ಕೆ ಈ ದುಡ್ಡು ಮೀಸಲು. ಹಾಗಾಗಿ ನೀವೂ ಹೆಚ್ಚು ದುಡ್ಡು ಬರಲಿ ಅಂತ ಪ್ರಾರ್ಥಿಸಿ.

(ಕನ್ನಡಪ್ರಭ)

Follow Us:
Download App:
  • android
  • ios