ಆರ್‌ ಕೇಶವಮೂರ್ತಿ

ಪದೇ ಪದೇ ಕವಚ ಸಿನಿಮಾದ ಬಿಡುಗಡೆಯ ದಿನ ಮುಂದೂಡುತ್ತಿರುವುದು ಯಾಕೆ?

ನಿಜ ಹೇಳಬೇಕು ಅಂದರೆ ನನಗೂ ಸರಿಯಾಗಿ ಗೊತ್ತಿಲ್ಲ. ಒಂದಿಷ್ಟುತಾಂತ್ರಿಕ ದೋಷಗಳಿದ್ದವು. ಸೌಂಡ್‌ ಸರಿಯಾಗಿರಲಿಲ್ಲ. ಹೀಗೆ ಕೆಲ ತಾಂತ್ರಿಕ ಕಾರಣಗಳಿಂದ ಚಿತ್ರವನ್ನು ಮುಂದೂಡಲಾಗಿತ್ತು. ಆದರೆ, ಈಗ ಎಲ್ಲವೂ ಸರಿಯಾಗಿದೆ. ತೆರೆಗೆ ಸಿದ್ಧವಾಗಿದೆ.

ತುಂಬಾ ವರ್ಷಗಳ ನಂತರ ಒಂದು ರೀಮೇಕ್‌ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಕಾರಣ?

ಈ ಮೊದಲೇ ಹೇಳಿದಂತೆ ಈ ಕತೆಯನ್ನು ಎಲ್ಲ ಭಾಷಿಕರು ನೋಡಬೇಕು. ಮುಖ್ಯವಾಗಿ ಕನ್ನಡಗರಿಗೆ ತಮ್ಮದೇ ಭಾಷೆಯಲ್ಲಿ ಒಂದು ಒಳ್ಳೆಯ ಕತೆ ಮಿಸ್‌ ಆಗಬಾರದು ಎನ್ನುವ ಕಾರಣಕ್ಕೆ ನಾನು ‘ಕವಚ’ ಚಿತ್ರವನ್ನು ಒಪ್ಪಿ, ಅಭಿನಯಿಸಿದೆ. ಆದರೂ ನನಗೂ ಕುತೂಹಲ ಇದೆ. ಯಾವ ರೀತಿ ಸಿನಿಮಾ ಬಂದಿದೆ ಅಂತ. ಆಸಕ್ತಿಯಿಂದ ಈ ಚಿತ್ರಕ್ಕಾಗಿ ಕಾಯುತ್ತಿರುವೆ.

ಆದರೆ, ನಿಮ್ಮನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬರುವ ನಿಮ್ಮ ಫ್ಯಾನ್ಸ್‌ಗೆ ಈ ಸಿನಿಮಾ ಇಷ್ಟವಾಗುತ್ತದೆಯೇ?

ಕತೆಗಾಗಿ ಈ ಸಿನಿಮಾ ನೋಡಿ. ಹೊಸ ಶಿವರಾಜ್‌ಕುಮಾರ್‌ ಕಾಣುತ್ತಾರೆ. ರೆಗ್ಯುಲರ್‌ ಶಿವಣ್ಣ ಸಿನಿಮಾ ಅಲ್ಲ ಇದು. ನನ್ನ ಹೊಸದಾಗಿ ನೋಡಬೇಕು ಎನ್ನುವವರು ಖಂಡಿತ ಈ ಸಿನಿಮಾ ನೋಡಿ.

ಹೊಸ ಶಿವರಾಜ್‌ಕುಮಾರ್‌ ಅಂದರೆ ಹೇಗೆ? ನಿಮಗೆ ಸವಾಲು ಅನಿಸಿತಾ?

ಮೊದಲ ಬಾರಿಗೆ ಬ್ಲೈಂಡ್‌ ಕ್ಯಾರೆಕ್ಟರ್‌ನಲ್ಲಿ ನಟಿಸಿದ್ದೇನೆ. ರೋಚಕವಾದ ಫೈಟ್‌ಗಳು ಇಲ್ಲಿಲ್ಲ. ಆದರೆ, ಆ್ಯಕ್ಷನ್‌ ಇದೆ. ಕಣ್ಣು ಕಾಣದ ವ್ಯಕ್ತಿಯೊಬ್ಬ ಫೈಟ್‌ ಮಾಡಿದರೆ ಹೇಗಿರುತ್ತದೆ ಎಂಬುದನ್ನು ನ್ಯಾಚುರಲ್ಲಾಗಿ ನೋಡಬಹುದು. ಕಣ್ಣು ಕಾಣಲ್ಲ ಅನ್ನೋ ರೀತಿ ಆ್ಯಕ್ಟ್ ಮಾಡೋದು ಕಷ್ಟ. ಯಾಕೆಂದರೆ ಇಂಥ ಪಾತ್ರ ಮಾಡಿದರೆ ಯಾರನ್ನೋ ಇಮಿಟೆಡ್‌ ಮಾಡುತ್ತಿದ್ದೇವೆ ಅನಿಸಬಾರದು. ಇದೇ ನನಗೆ ದೊಡ್ಡ ಸವಾಲು ಅನಿಸಿತು.

ರುಸ್ತುಂ ಸಿನಿಮಾ ಎಲ್ಲಿವರೆಗೂ ಬಂದಿದೆ? ಯಾವಾಗ ಬಿಡುಗಡೆ ಆಗಬಹುದು?

ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಹಾಡುಗಳು ಕಲರ್‌ಫುಲ್ಲಾಗಿ ಬಂದಿವೆ. ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ನಿರ್ದೇಶಕ ರವಿವರ್ಮ ತುಂಬಾ ಚೆನ್ನಾಗಿ ಕತೆ ಮಾಡಿಕೊಂಡಿದ್ದಾರೆ. ಕಂಪ್ಲೀಟ್‌ ಆ್ಯಕ್ಷನ್‌ ಹಾಗೂ ಸಾಮಾಜಿಕ ಕಾಳಜಿ ಇರುವ ಸಿನಿಮಾ ಇದು. ಏಪ್ರಿಲ್‌ ಕೊನೆ ವಾರ ಅಥವಾ ಮೇ ಆರಂಭದಲ್ಲಿ ಈ ಸಿನಿಮಾ ತೆರೆಗೆ ಬರಬಹುದು.

ಆ್ಯಕ್ಷನ್‌ ನಿರ್ದೇಶಕನ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿದೆ?

ರವಿ ವರ್ಮ ಅವರ ಸಾಹಸಗಳ ಬಗ್ಗೆ ಹೇಳಬೇಕಿಲ್ಲ. ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಲ್ಲೂ ಕೆಲಸ ಮಾಡಿರುವ ಅನುಭವ ಅವರದ್ದು. ಆ್ಯಕ್ಷನ್‌ ಡೈರೆಕ್ಟರ್‌ ಎನ್ನುವುದಕ್ಕಿಂತ ಅವರಿಗೆ ಕತೆ ಬಗ್ಗೆ ಸಾಕಷ್ಟುತಿಳುವಳಿಕೆ ಇತ್ತು. ಸೀನ್‌ ಟು ಸೀನ್‌ ಆ್ಯಕ್ಷನ್‌ ಇದೆ. ಆ ಮಟ್ಟಿಗೆ ವಿಶೇಷವಾಗಿ ಈ ಸಿನಿಮಾ ರೂಪಿಸಿದ್ದಾರೆ. ಎಂಭತ್ತು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಬೇರೆ ಬೇರೆ ಲೊಕೇಶನ್‌ಗಳಲ್ಲಿ ಸಿನಿಮಾ ಅದ್ಭುತವಾಗಿ ಬಂದಿದೆ. ತುಂಬಾ ಗ್ಯಾಪ್‌ ನಂತರ ಮತ್ತೊಮ್ಮೆ ಎನರ್ಜಿಟಿಕ್‌ ಆಗಿ ಡ್ಯಾನ್ಸ್‌ ಮಾಡಿದ್ದೇನೆ.

ಇಲ್ಲಿ ನಿಮ್ಮ ಪಾತ್ರವೇನು? ಏನು ಹೇಳಕ್ಕೆ ಹೊರಟಿದ್ದೀರಿ ಈ ಚಿತ್ರ ಮೂಲಕ?

ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಪ್ರತಿಯೊಬ್ಬ ಸಾಮಾನ್ಯನ ಜವಾಬ್ದಾರಿಯನ್ನು ಹೇಳುತ್ತಿದ್ದೇವೆ. ನಾವು ಜೀವನದಲ್ಲಿ ಅಲರ್ಟ್‌ ಆಗಿಲ್ಲದಿದ್ದರೆ ಏನಾಗುತ್ತದೆ ಮತ್ತು ಅದರಿಂದ ಹೇಗೆ ಹೊರಗೆ ಬರಬೇಕು ಎಂಬುದು ಚಿತ್ರದ ಕತೆ. ಜೀವನದಲ್ಲಿ ದುಡ್ಡೇ ಮುಖ್ಯವಲ್ಲ. ಸಾಮಾಜಿಕ ಜವಾಬ್ದಾರಿಯೂ ಮುಖ್ಯ ಎನ್ನುವುದು ‘ರುಸ್ತುಂ’ ಚಿತ್ರದ ಕತೆ.

ಈಗಾಗಲೇ ನೀವು ಪೊಲೀಸ್‌ ಪಾತ್ರಗಳನ್ನು ಮಾಡಿದ್ದೀರಲ್ಲ. ಇದು ಹೇಗೆ ಭಿನ್ನ?

ಹೌದು, ಹಿಂದೆ ಬೇರೆ ಬೇರೆ ಚಿತ್ರಗಳಲ್ಲಿ ಪೊಲೀಸ್‌ ಪಾತ್ರ ಮಾಡಿದ್ದರೂ ಇಲ್ಲಿ ಬೇರೆ ರೀತಿಯಲ್ಲಿದೆ. ‘ಟಗರು’ ಪೊಲೀಸ್‌, ‘ಶಿವಲಿಂಗ’ ಪೊಲೀಸ್‌ ಅಧಿಕಾರಿ, ‘ರಾಕ್ಷಸ’ ಪೊಲೀಸ್‌ ಪಾತ್ರ ಬೇರೆ ಬೇರೆ ಅಲ್ವಾ. ಅದೇ ರೀತಿ ಇಲ್ಲೂ ಹೊಸ ರೀತಿಯ ಕಾಪ್‌ ಆಗಿದ್ದೇನೆ. ರೆಗ್ಯುಲರ್‌ ಖಾಕಿ ತೊಡಲ್ಲ. ಬಟ್‌ ರಗಡ್‌ ಆಗಿರುತ್ತೇನೆ. ನನ್ನ ಗೆಟಪ್‌ ನನಗೇ ಸಪ್ರೈಸ್‌ ಆಗಿದೆ. ನಿರ್ದೇಶಕರು ಬಂದು ಕತೆ ಜತೆಗೆ ನನ್ನ ಗೆಟಪ್‌ಗಳನ್ನು ಹೇಳಿದಾಗ ಸಿಕ್ಕಾಪಟ್ಟೆಆಸಕ್ತಿ ಮೂಡಿತು.

ರುಸ್ತುಂ ಬೇರೆ ಬೇರೆ ಭಾಷೆಯಲ್ಲೂ ಬರುತ್ತದೆಯೇ?

ರವಿವರ್ಮ ಅವರು ಬಹುಭಾಷೆಯಲ್ಲಿ ಕೆಲಸ ಮಾಡಿದ್ದಾರೆ. ಬಾಲಿವುಡ್‌ನಿಂದ ವಿವೇಕ್‌ ಓಬೆರಾಯ್‌ ಬಂದಿದ್ದಾರೆ. ಹಾಗಂತ ಇದು ಮಲ್ಟಿಲ್ಯಾಂಗ್ವೇಜ್‌ನಲ್ಲಿ ಮಾಡುತ್ತಿರುವ ಸಿನಿಮಾ. ಚಿತ್ರಕಥೆ ಮಾಡುವಾಗಲೇ ಅಂಥದ್ದೊಂದು ಪ್ಲಾನ್‌ ಇರಲಿಲ್ಲ. ಈಗ ನಡುವೆ ಧಿಡೀರ್‌ ಅಂತ ಮಾಡಲಾಗದು. ಹೀಗಾಗಿ ಇದು ಪಕ್ಕಾ ಕನ್ನಡದಲ್ಲೇ, ಕನ್ನಡ ಪ್ರೇಕ್ಷಕರಿಗಾಗಿಯೇ ಮಾಡಿರುವ ಸಿನಿಮಾ.

ಬೇರೆ ಯಾವ ಚಿತ್ರಗಳು ಸರದಿಯಲ್ಲಿವೆ?

ಮೂರು ಚಿತ್ರಗಳು ಇವೆ. ಒಂದು ‘ದ್ರೋಣ’. ಇಲ್ಲೂ ನಾನು ಮೇಷ್ಟು್ರ ಪಾತ್ರ ಮಾಡುತ್ತಿದ್ದೇನೆ. ಮತ್ತೊಮ್ಮೆ ಹೊಸ ರೀತಿಯ ಕ್ಯಾರೆಕ್ಟರ್‌ ಇದೆ. ಇದರ ಜತೆಗೆ ಪಿ ವಾಸು ನಿರ್ದೇಶನದ ಸಿನಿಮಾ. ಇದು ಶುರುವಾಗಬೇಕಿದೆ. ಇದರ ಜತೆಗೆ ಹರ್ಷ ನಿರ್ದೇಶನದಲ್ಲಿ ‘ಮೈ ನೇಮ್‌ ಈಸ್‌ ಅಂಜಿ’ ಸಿನಿಮಾ ಒಪ್ಪಿಕೊಂಡಿದ್ದೇನೆ. ಸದ್ಯಕ್ಕೆ ಇವು ಅಧಿಕೃತವಾಗಿ ಅಂತಿಮಗೊಂಡಿರುವ ಸಿನಿಮಾ.