ಯಾವುದೋ ಪುಟ್ಟ ಪಟ್ಟಣದಿಂದ ದೊಡ್ಡ ನಗರಿಗೆ ಬರುವ ಹುಡುಗಿಯಾಗಿ, ದುಷ್ಟರ ಕೈಗೆ ಸಿಲುಕಿ ವೇಶ್ಯೆ ವೃತ್ತಿಗೆ ಬೀಳುವ ದುರಂತ ಕತೆಯೊಂದಕ್ಕೆ ಜಿಲೇಬಿ ರೂಪಕವಾಗಬೇಕಿತ್ತು. ಆದರೆ ಪ್ರೇಕ್ಷಕರನ್ನು ಜಿಲೇಬಿ ಕಾಡಿಸುವುದಕ್ಕಿಂತ ಕೆರಳಿಸುವುದೇ ಹೆಚ್ಚು.

ರೇಟಿಂಗ್: **

ಚಿತ್ರ: ಜಿಲೇಬಿ
ಭಾಷೆ : ಕನ್ನಡ
ತಾರಾಗಣ: ಪೂಜಾ ಗಾಂಧಿ, ಯಶಸ್‌ ಸೂರ್ಯ, ನಾಗೇಂದ್ರ, ವಿಜಯ್‌ ಚೆಂಡೂರ್‌, ಸುಧಾಕರ್‌, ದತ್ತಣ್ಣ
ನಿರ್ದೇಶನ: ಲಕ್ಕಿ ಶಂಕರ್‌
ಸಂಗೀತ: ಜೇಮ್ಸ್‌ ಆರ್ಕಿಟೆಕ್ಟ್
ಛಾಯಾಗ್ರಹಣ: ಎಂಆರ್‌ ಸೀನು
ನಿರ್ಮಾಣ: ಲಕ್ಕಿ ಶಂಕರ್‌ ಹಾಗೂ ಶಿವ ಕಬ್ಬಿನ್‌

ನಂದು ಫಿಕ್ಸೆಡ್‌ ರೇಟ್‌, ಚೌಕಾಸಿ ಇಲ್ಲ. ಕೆಲಸದಲ್ಲೂ ಅಷ್ಟೇ, ಜೀನಿಯಸ್‌...
- ವೇಶ್ಯಾವೃತ್ತಿಯನ್ನೇ ಬದುಕಾಗಿಸಿಕೊಂಡ ಜಿಲೇಬಿ ಈ ಮಾತನ್ನ ಮತ್ತೆ ಮತ್ತೆ ಹೇಳುತ್ತಾಳೆ. ಪಡ್ಡೆಗಳಿಗೆ ರುಚಿಸುತ್ತದೆ. ಸಭ್ಯರಿಗೆ ಜಾಸ್ತಿ ಆಯ್ತು ಎನಿಸುತ್ತದೆ. ಪೋಸ್ಟರ್‌ ಹಾಗೂ ಟ್ರೈಲರ್‌'ಗಳ ಮೇಲೆ ಮಳೆ ಹುಡುಗಿ ಪೂಜಾಗಾಂಧಿ ಸಿಕ್ಕಾಪಟ್ಟೆ ಹಾಟ್‌ ಆಗಿ ಕಾಣಿಸಿಕೊಂಡಿದ್ದನ್ನು ನೋಡಿ ಜಿಲೇಬಿ ಸವಿಯಲು ಹೋದವರಿಗೆ ಸಿಕ್ಕಷ್ಟೇ ಸೀರುಂಡೆ. ಈ ಮೊದಲು ‘90' ಹಾಗೂ ‘ಸಿಗರೇಟ್‌'ನಂಥ ಪಕ್ಕಾ ಕಾಮಿಡಿ ಚಿತ್ರಗಳಲ್ಲಿ ಪ್ರೇಕ್ಷಕರಿಗೆ ಕಾಮಿಡಿ ಕಿಕ್‌ ಕೊಟ್ಟ ನಿರ್ದೇಶಕ ಲಕ್ಕಿ ಶಂಕರ್‌'ಗೆ ಇಲ್ಲಿ ಕಾಮಿಡಿ ಸೂತ್ರ ಕೈತಪ್ಪಿದೆ. 

ಪೋಲಿ ಮನಸ್ಸಿನ ಮೂವರು ಯುವಕರು ಮತ್ತು ವೇಶ್ಯಾವೃತ್ತಿಯ ಹುಡುಗಿ ಜಿಲೇಬಿ ನಡುವೆ ಜರುಗುವ ಕತೆ ಇದು. ವಯಸ್ಸಿಗೆ ಬಂದ ಆಸೆಯ ಕತೆ, ಕಸರತ್ತುಗಳು ರೋಚಕವೇ. ಅಂಥ ರೋಚಕ ಅನುಭವಗಳೇ ಇಲ್ಲಿ ಕಾಮಿಡಿಯ ವಸ್ತು. ಜತೆಗೆ ಪೋಲಿ ಮಾತು. ಹೆಚ್ಚು ಕಡಿಮೆ ಅರ್ಧ ಸಿನಿಮಾ ಇಲ್ಲಿ ಅದನ್ನೇ ಬಿಂಬಿಸುತ್ತಾ ಹೋಗುತ್ತದೆ. ಸ್ನಾನದ ಮನೆಯಲ್ಲಿ ಮಾದಕವಾಗಿ ಕಾಣಿಸಿಕೊಂಡು ತೆರೆ ಮೇಲೆ ಮೊದಲು ಬರುವ ಪೂಜಾ ಗಾಂಧಿ ಮುಕ್ಕಾಲು ಗಂಟೆಯ ಮೇಲೆ ಸ್ನಾನ ಮುಗಿಸಿ ಎಂಟ್ರಿ ಕೊಡುತ್ತಾರೆ! ಪೋಲಿ ಹುಡುಗರು ವೇಶ್ಯೆಯರನ್ನು ಹುಡುಕುತ್ತಾ ಹೋಗಿ, ಆಕೆ ಸಿಕ್ಕಿ, ಕುಡಿದ ಅಮಲಿನಲ್ಲಿ ಮೂವರು ನಿದ್ದೆಗೆ ಜಾರಿ, ಮನೆಗೆ ಕರೆತಂದ ವೇಶ್ಯೆ ಜಿಲೇಬಿ ರಾತ್ರೋರಾತ್ರಿ ಕೊಲೆ ಆಗುತ್ತಾಳೆ. ಆ ಕೊಲೆ ಮಾಡಿದ್ದು ಯಾರು? 

ಮೊದಲರ್ಧ ಕಾಮಿಡಿ ಟ್ರ್ಯಾಕ್‌'ನಲ್ಲಿ ಸಾಗುವ ಚಿತ್ರ ದ್ವಿತೀಯಾರ್ಧಕ್ಕೆ ಹಾರರ್‌'ಗೆ ತಿರುಗುತ್ತದೆ. ಆನಂತರ ಕೊಲೆಗಾರನ ಹುಡುಕಾಟ. ಆಗುಂಬೆ ಘಾಟ್‌ ನೆನಪಿಸುವಂತೆ ಅಲ್ಲಿ ಹಲವು ತಿರುವುಗಳು. ಕೊನೆಗೂ ಪ್ರೇಕ್ಷಕನ ಕಣ್ಣೆದುರು ಕೊಲೆಗಾರ ಪತ್ತೆಯಾಗುವ ಹೊತ್ತಿಗೆ ಚಿತ್ರವೇ ಮುಗಿಯುತ್ತದೆ. ಬಿಳಿ ಪರದೆ ಮೇಲೆ ‘ಅಸಲಿ ಕತೆ ಈಗ ಆರಂಭ' ಎನ್ನುವ ಬರಹ ಕಾಣುತ್ತದೆ. ಹಾಗಾದ್ರೆ ಟಾಕೀಸ್‌ ಒಳಗಡೆ ಕುಳಿತು 1 ಗಂಟೆ 58 ನಿಮಿಷದಷ್ಟು ಕಾಲ ನೋಡಿದ್ದು ಯಾವ ಕತೆ? ಅದಕ್ಕೆ ‘ಜಿಲೇಬಿ ಭಾಗ-2' ನೋಡಿ ಎನ್ನುತ್ತಾರೆ ನಿರ್ದೇಶಕರು.

ಈಗಾಗಲೇ ‘ತಿಪ್ಪಜ್ಜಿ ಸರ್ಕಲ್‌'ನಲ್ಲಿ ನಟಿ ಪೂಜಾ ಗಾಂಧಿ ವೇಶ್ಯೆ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಮತ್ತೊಮ್ಮೆ ಇಲ್ಲಿ ಅವರದ್ದು ಅಂಥದ್ದೇ ಪಾತ್ರ. ಅಭಿನಯಕ್ಕೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಸಿಕ್ಕ ಅವಕಾಶದಲ್ಲಿ ಮಾದಕತೆಗೇ ಹೆಚ್ಚಿನ ಮಣೆ. ಪೋಲಿ ಯುವಕರಾಗಿ ಯಶಸ್‌ ಸೂರ್ಯ, ನಾಗೇಂದ್ರ, ವಿಜಯ್‌ ಚೆಂಡೂರ್‌ ಪ್ರೇಕ್ಷಕರನ್ನು ರಂಜಿಸಲು ಹರ ಸಾಹಸ ಪಟ್ಟಿದ್ದಾರೆ. ಸುಧಾಕರ್‌ ಹಾಗೂ ದತ್ತಣ್ಣ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಂದೇ ಮನೆಯಲ್ಲಿ ನಡೆದ ಚಿತ್ರೀಕರಣವು ಛಾಯಾಗ್ರಾಹಕ ಎಂ ಆರ್‌ ಸೀನು ಅವರಿಗೆ ಸವಾಲೆಸೆದಿದೆ. ಜೇಮ್ಸ್‌ ಸಂಗೀತಕ್ಕೂ ಸಿಕ್ಕಿದ್ದು ಕಡಿಮೆ ಅವಕಾಶ.

ಯಾವುದೋ ಪುಟ್ಟ ಪಟ್ಟಣದಿಂದ ದೊಡ್ಡ ನಗರಿಗೆ ಬರುವ ಹುಡುಗಿಯಾಗಿ, ದುಷ್ಟರ ಕೈಗೆ ಸಿಲುಕಿ ವೇಶ್ಯೆ ವೃತ್ತಿಗೆ ಬೀಳುವ ದುರಂತ ಕತೆಯೊಂದಕ್ಕೆ ಜಿಲೇಬಿ ರೂಪಕವಾಗಬೇಕಿತ್ತು. ಆದರೆ ಪ್ರೇಕ್ಷಕರನ್ನು ಜಿಲೇಬಿ ಕಾಡಿಸುವುದಕ್ಕಿಂತ ಕೆರಳಿಸುವುದೇ ಹೆಚ್ಚು.
ಉಳಿದದ್ದು ಪ್ರೇಕ್ಷಕನಿಗೇ ಗೊತ್ತು!

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ