ಜಯರಾಂ ಕಾರ್ತಿಕ್ ಅಲಿಯಾಸ್ ಜೆಕೆ ಪ್ರತಿಭಾವಂತರು ಎಂಬುದರಲ್ಲಿ ಎರಡು ಮಾತಿಲ್ಲ. ಸಿಸಿಎಲ್, ಬಿಗ್'ಬಾಸ್, ಸುದೀಪ್ ಆತ್ಮೀಯ, ಹಿಂದಿಯ ಕಿರುತೆರೆ ಅಂಗಳದಲ್ಲಿ ರಾವಣನಾಗಿ ಜೆಕೆ ಅವರ ಅಬ್ಬರದ ಬಗ್ಗೆ ಪ್ರತ್ಯೇಕವಾಗಿ ಹೇಳುವಂತಿಲ್ಲ. ಹೀಗೆ ಹತ್ತಾರು ನೆರಳುಗಳಿದ್ದರೂ ಯಾಕೋ ಜೆಕೆಗೆ ಕನ್ನಡ ಸಿನಿಮಾ ಪರದೆ ಅಂದುಕೊಂಡಂತೆ ಅವಕಾಶ ಕೊಡುತ್ತಿಲ್ಲ. ಕೊಟ್ಟ ಅವಕಾಶಗಳು ಜೆಕೆ ಪ್ರತಿಭೆಗೆ ತಕ್ಕಂತಿಲ್ಲ. ಆದರೂ ಜೆಕೆ, ತಮ್ಮ ಪ್ರಯತ್ನ ಮಾತ್ರ ಬಿಟ್ಟಿಲ್ಲ. ಅಂಥಾ ಪ್ರಯತ್ನದಿಂದಲೇ ಅವರ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರಗಳು ಜೆಕೆಗೆ ಅದೃಷ್ಟವಾಗಿ ಬದಲಾಗುತ್ತವೆ. ಅವರ ಶ್ರಮಕ್ಕೆ ತಕ್ಕಂತೆ ಫಲ ನೀಡುತ್ತವೆ ಎನ್ನುವ ಮಾತುಗಳು ಈಗಾಗಲೇ ಶುರುವಾಗಿವೆ. ಅದಕ್ಕೆ ತಕ್ಕಂತೆ ಸುದೀಪ್ ಕೂಡ ಜೆಕೆ ಅವರ ಶ್ರಮಕ್ಕೆ ಗೆಲುವು ಸಿಗಬೇಕೆಂದು ಹಾರೈಸಿದ್ದಾರೆ.

ಅಂದಹಾಗೆ ಜೆಕೆ ಅವರ ಯಶಸ್ಸಿನ ಭರವಸೆ ಹೆಚ್ಚಿರುವ ಆ ಮೂರು ಚಿತ್ರಗಳೆಂದರೆ, ‘ಆ ಕರಾಳ ರಾತ್ರಿ’, ‘ಪುಟ 109’ ಹಾಗೂ ‘ಮೇ 1’. ಈಗಷ್ಟೆ ‘ಮೇ 1’ ಚಿತ್ರದ ಆಡಿಯೋ ಸೀಡಿ ಹಾಗೂ ಟ್ರೇಲರ್ ಅನಾವರಣಗೊಂಡಿವೆ. ‘ಮೇ 1’ ಚಿತ್ರಕ್ಕೆ ತಾವೇ ಮೊದಲ ಬಾರಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ಬಿಗ್‌ಬಾಸ್‌ನಿಂದ ಬಂದ ಮೇಲೆ ನನ್ನ ನಟನೆಯ ಸಿನಿಮಾಳಿಗೆ ಹೆಚ್ಚು ಉತ್ಸಾಹ ಬಂದಿದೆ. ಮೂರು ಸಿನಿಮಾಗಳು ಸರದಿಯಂತೆ ತೆರೆಗೆ ಬರುವುದಕ್ಕೆ ಸಿದ್ಧವಾಗಿವೆ.
ಈಗಾಗಲೇ ಎರಡು ಚಿತ್ರಗಳ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಲುಕ್ ನೋಡಿದವರು ನನ್ನ ಬೇರೆ ರೀತಿಯಲ್ಲಿ ಮೆಚ್ಚಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಜೆಕೆ. ಇದರ ನಡುವೆ ಜೆಕೆ ನಾಯಕನಾಗಿ ನಟಿಸುತ್ತಿರುವ ಚಿತ್ರವೊಂದು ಹಿಂದಿಯಲ್ಲೂ] ಸೆಟ್ಟೇರಿದೆ. 

ಥಾಯ್‌ಲ್ಯಾಂಡ್‌ನಲ್ಲಿ ಜೆಕೆ ಹವಾ ನೋಡಿದೆ: ಸುದೀಪ್ ಅದೊಂದು ದಿನ ಸುದೀಪ್ ಥಾಯ್‌ಲ್ಯಾಂಡ್‌ನಲ್ಲಿ ಚಿತ್ರೀಕರಣ ಮುಗಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬಂದಾಗ ಯಾಕೋ ಟಿವಿ ಕಡೆ ನೋಡಿದರಂತೆ. ‘ಟಿವಿಯಲ್ಲಿ ಬರುತ್ತಿರುವುದು ನನ್ನ ಊರಿನ ಕಲಾವಿದ ಇದ್ದಂತಿದ್ದಾರಲ್ಲ’ ಎನ್ನುವ ಕುತೂಹಲ ಮೂಡಿ ಹತ್ತಿರ ಹೋದಾಗ ಕಂಡಿದ್ದು, ಜೆಕೆ. ಥಾಯ್ ಭಾಷೆಯ ಟಿವಿಯಲ್ಲಿ ಜೆಕೆ ನಟನೆಯ ಧಾರಾವಾಹಿಯ ರಾವಣ ಪಾತ್ರ ಪ್ರಸಾರವಾಗುತ್ತಿತ್ತು. ಯಾವುದೋ ದೇಶದ ಟಿವಿಯಲ್ಲಿ ತಮ್ಮ ಆತ್ಮೀಯನ ನಟನೆ ಕಂಡು ಪುಳಕಿತರಾಗಿ ಕೂಡಲೇ ಸುದೀಪ್, ಅದನ್ನು ಸ್ಕ್ರೀನ್ ಶಾಟ್ ತೆಗೆದು ಜೆಕೆಗೆ ಕಳುಹಿಸಿದರಂತೆ. ಥಾಯ್‌ಲ್ಯಾಂಡ್‌ನಲ್ಲಿ ಜೆಕೆ  ಕಂಡ ಕತೆಯನ್ನು ಸ್ವತಃ ಸುದೀಪ್ ಹೇಳಿಕೊಂಡಿದ್ದು ‘ಮೇ 1’ರ ಆಡಿಯೋ ಬಿಡುಗಡೆ ಸಮಾರಂಭದಲ್ಲಿ.