ಆಸ್ಕರ್ ನಾಮನಿರ್ದೇಶಿತರ ಅಧಿಕೃತ ಪಟ್ಟಿಯನ್ನು 2026ರ ಜನವರಿ 22 ರಂದು ಬಹಿರಂಗಪಡಿಸಲಾಗುವುದು. 98 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 15, ರಂದು ನಡೆಯಲಿದೆ. ಒಮ್ಮೆ ಬಾಲಿವುಡ್‌ನ 'ಹೋಮ್‌ಬೌಂಡ್' ಆಸ್ಕರ್‌ ಗೆದ್ದರೆ ಮತ್ತೊಮ್ಮೆ ಇತಿಹಾಸ ಸೃಷ್ಟಿಯಾಗಲಿದೆ. 

ಮುಂಬೈ: ಶ್ರೀದೇವಿ ಮಗಳು ಜಾನ್ವಿ ಕಪೂರ್, ಇಶಾನ್ ಖಟ್ಟರ್ ಹಾಗೂ ವಿಶಾಲ್ ಜೇಥಾ ನಟನೆ, ನೀರಜ್ ಘಯ್ಯಾನ್ ನಿರ್ದೇಶನದ 'ಹೋಮ್‌ಬೌಂಡ್' (Homebound) ಸಿನಿಮಾ 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ. ಇದೀಗ ಆಸ್ಕರ್‌ ಅಂಗಳದಲ್ಲಿ ಕೂಡ ಈ ಚಿತ್ರಕ್ಕೆ ಮನ್ನಣೆ ಸಿಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಕರಣ್ ಜೋಹರ್ 'ಹೋಮ್‌ಬೌಂಡ್ ಸಿನಿಮಾದ ಪ್ರಯಾಣದ ಬಗ್ಗೆ ನಾನು ಎಷ್ಟು ಹೆಮ್ಮೆಪಡುತ್ತಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು.. ತುಂಬಾ ಉತ್ಸುಕನಾಗಿ ಚಂದ್ರನ ಮೇಲೆ ಇದ್ದೇನೆ ಎನಿಸುತ್ತಿದೆ. ನಮ್ಮೆಲ್ಲರ ಧರ್ಮಾ ಮೂವೀಸ್ ನಮ್ಮ ಚಲನಚಿತ್ರಗಳ ಪಟ್ಟಿಯಲ್ಲಿರುವ ಈ ಹೆಮ್ಮೆಯ ಮತ್ತು ಮಹತ್ವದ 'ಹೋಮ್‌ಬೌಂಡ್' ಚಿತ್ರವನ್ನು ಹೊಂದಲು ಹೆಮ್ಮೆ ಪಡೆದಿದ್ದೇವೆ.

ನಮ್ಮ ಹಲವು ಕನಸುಗಳನ್ನು ನನಸಾಗಿಸಿದ ನೀರಜ್ ಘಯ್ಯಾನ್ ಅವರಿಗೆ ಧನ್ಯವಾದಗಳು. ಕೇನ್ಸ್‌ ನಿಂದ ಆಸ್ಕರ್ ಕಿರುಪಟ್ಟಿಯಲ್ಲಿ ಸ್ಥಾನ ಪಡೆಯುವವರೆಗೆ ಇದು ತುಂಬಾ ಅಗಾಧವಾದ ಪ್ರಯಾಣವಾಗಿವೇ ಆಗಿದೆ! ಈ ವಿಶೇಷ ಚಿತ್ರದ ಸಂಪೂರ್ಣ ಪಾತ್ರವರ್ಗ ಮತ್ತು ಸಿಬ್ಬಂದಿ ಮತ್ತು ತಂಡಗಳಿಗೆ ನಾನು ನ್ನನ ಹೃದಯಾಂತರಾಳದಿಂದ ಅಭಿನಂದನೆ ಸಲ್ಲಿಸುತ್ತೇನೆ. ಸದ್ಯದಲ್ಲೇ 'ಹೋಮ್‌ಬೌಂಡ್' ಚಿತ್ರವು 'ನೆಟ್‌ಪ್ಲಿಕ್ಸ್'ನಲ್ಲಿ ಪ್ರಸಾರವಾಗಲಿದೆ ' ಎಂದು ತಿಳಿಸಿದ್ದಾರೆ.

'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್' 98 ನೇ ಅಕಾಡೆಮಿ ಪ್ರಶಸ್ತಿಗಳಿಗೆ ತನ್ನ ಕಿರುಪಟ್ಟಿಯನ್ನು ಬಿಡುಗಡೆ ಮಾಡಿದೆ. 12 ವಿಭಾಗಗಳಲ್ಲಿ ಆಯ್ದ ಲಿಸ್ಟ್‌ ಬಹಿರಂಗಪಡಿಸಿದೆ. ಇವುಗಳಲ್ಲಿ ಅನಿಮೇಟೆಡ್ ಕಿರುಚಿತ್ರ, ಪಾತ್ರವರ್ಗ, ಛಾಯಾಗ್ರಹಣ, ಸಾಕ್ಷ್ಯಚಿತ್ರ ವೈಶಿಷ್ಟ್ಯ ಮತ್ತು ಕಿರುಚಿತ್ರ, ಅಂತರರಾಷ್ಟ್ರೀಯ ವೈಶಿಷ್ಟ್ಯ ಚಲನಚಿತ್ರ, ಲೈವ್ ಆಕ್ಷನ್ ಕಿರುಚಿತ್ರ, ಮೇಕಪ್ ಮತ್ತು ಕೇಶವಿನ್ಯಾಸ, ಮೂಲ ಸಂಗೀತ, ಮೂಲ ಹಾಡು, ಧ್ವನಿ ಮತ್ತು ದೃಶ್ಯ ಪರಿಣಾಮಗಳು ಸೇರಿವೆ. ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯ ಚಲನಚಿತ್ರ ವಿಭಾಗದಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ ಚಿತ್ರಗಳಲ್ಲಿ ಹೋಮ್‌ಬೌಂಡ್ ಸಹ ಸೇರಿದೆ.

ಕಿರುಪಟ್ಟಿಯಲ್ಲಿರುವ ಇತರ ಚಿತ್ರಗಳಲ್ಲಿಇರಾಕ್‌ನ ದಿ ಪ್ರೆಸಿಡೆಂಟ್ಸ್ ಕೇಕ್, ಜಪಾನ್‌ನ ಕೊಕುಹೋ, ಅರ್ಜೆಂಟೀನಾದ ಬೆಲೆನ್, ಬ್ರೆಜಿಲ್‌ನ ದಿ ಸೀಕ್ರೆಟ್ ಏಜೆಂಟ್, ಫ್ರಾನ್ಸ್‌ನ ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್, ಪ್ಯಾಲೆಸ್ಟೈನ್‌ ಪ್ಯಾಲೆಸ್ಟೈನ್ 36, ದಕ್ಷಿಣ ಕೊರಿಯಾದ ನೋ ಅದರ್ ಚಾಯ್ಸ್, ಸ್ಪೇನ್‌ನ ಸಿರಾಟ್, ಜರ್ಮನಿಯ ಸೌಂಡ್ ಆಫ್ ಫಾಲಿಂಗ್, ಜೋರ್ಡಾನ್‌ನ ಆಲ್ ದಟ್ಸ್ ಲೆಫ್ಟ್ ಆಫ್ ಯು, ನಾರ್ವೆಯ ಸೆಂಟಿಮೆಂಟಲ್ ವ್ಯಾಲ್ಯೂ, ಸ್ವಿನ್ಮರ್‌ಲ್ಯಾಂಡ್‌ನ ಲೇಟ್ ಶಿಫ್ಟ್, ತೈವಾನ್‌ನ ಲೆಫ್ಟ್-ಹ್ಯಾಂಡೆಡ್ ಗರ್ಲ್ ಮತ್ತು ಟುನೀಶಿಯಾದ ದಿ ವಾಯ್ಸ್ ಆಫ್ ಹಿಂದ್ ರಜಬ್ ಸೇರಿವೆ.

ಆಸ್ಕರ್ ನಾಮನಿರ್ದೇಶಿತರ ಅಧಿಕೃತ ಪಟ್ಟಿಯನ್ನು 2026ರ ಜನವರಿ 22 ರಂದು ಬಹಿರಂಗಪಡಿಸಲಾಗುವುದು. 98 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 15, ರಂದು ನಡೆಯಲಿದೆ. ಒಮ್ಮೆ ಬಾಲಿವುಡ್‌ನ 'ಹೋಮ್‌ಬೌಂಡ್' ಆಸ್ಕರ್‌ ಗೆದ್ದರೆ ಮತ್ತೊಮ್ಮೆ ಇತಿಹಾಸ ಸೃಷ್ಟಿಯಾಗಲಿದೆ.