ಕಲರ್ಸ್‌ ಕನ್ನಡ ವಾಹಿನಿಯ ವಾರಾಂತ್ಯದ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿಯಲ್ಲಿ ಈ ಬಾರಿ ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಹಾಗೂ ನಟ ಜಗ್ಗೇಶ್‌ ಭಾಗವಹಿಸಿದ್ದಾರೆ. ಇದರಲ್ಲಿ ಗೆದ್ದ ಹಣವನ್ನು ಸಂಸದರು, ಪ್ರವಾಹ ಪೀಡಿತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಈ ವೇದಿಕೆಯಲ್ಲಿ ಜಗ್ಗೇಶ್‌ ಅವರು ನೀರಿನ ಅಭಾವದ ಬಗ್ಗೆ ಜಾಗೃತಿ ಮೂಡಿಸಿದರು. ತಾವು ಗೆದ್ದ ಹಣವನ್ನು ಇಂಗು ಗುಂಡಿ ನಿರ್ಮಾಣ ಮಾಡುವ ಕೆಲಸಕ್ಕೆ ದೇಣಿಗೆಯಾಗಿ ನೀಡಿದರು. ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿಯಲ್ಲಿ ಈ ಬಾರಿ ಇಬ್ಬರು ಯುವ ನಾಯಕರು ತಮ್ಮ ಸಾಮಾನ್ಯಜ್ಞಾನವನ್ನು ಒರೆಗೆ ಹಚ್ಚಿದ್ದು ವಿಶೇಷವಾಗಿತ್ತು. ಜೊತೆಗೆ ರಾಜಕೀಯ ರಂಗದ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು. ಜಗ್ಗೇಶ್‌ ಅವರು ಹಾಸ್ಯದ ಮೂಲಕವೇ ಜಲಜಾಗೃತಿ ಮೂಡಿಸಿದ್ದು ಮತ್ತೊಂದು ವಿಶೇಷ.

 

ಕಾರ್ಯಕ್ರಮದ ಬಗ್ಗೆ ಮಾತನಾಡಿದ ವಯಾಕಾಂ 18ನ ಕನ್ನಡ ಕ್ಲಸ್ಟರ್‌ನ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌, ‘ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ನೆರವಾಗಲು ಹಾಗೂ ನೀರಿನ ಅಭಾವದ ಬಗ್ಗೆ ಜಾಗೃತಿ ಮೂಡಿಸಲು ಕನ್ನಡದ ಕೋಟ್ಯಧಿಪತಿ ವೇದಿಕೆಯಾಗಿದೆ. ಇದರಲ್ಲಿ ಭಾಗವಹಿಸಿದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಮತ್ತು ಜಗ್ಗೇಶ್‌ಅವರಿಗೆ ಕಲರ್ಸ್‌ ಕನ್ನಡ ಆಭಾರಿಯಾಗಿದೆ’ ಎಂದರು.

ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತದೆ.