ಮೊದಲೆರಡು ಚಿತ್ರಗಳು ಯಾಕೋ ಅಂದುಕೊಂಡಂತೆ ಆಗಲಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಎಂದವರನ್ನು ಪ್ರೇಕ್ಷಕ ಪ್ರೀತಿಸಿದ. ಅದೇ ಸಕ್ಸಸ್‌'ನ ಸಂಭ್ರಮದಲ್ಲಿ ಪ್ರಯೋಗಕ್ಕಿಳಿದರು. ಮಿಶ್ರ ಪ್ರತಿಕ್ರಿಯೇಗಳು ಸದ್ದು ಮಾಡಿದವು. ಚಿತ್ರವೂ ಅಷ್ಟೇ ಸುದ್ದಿ ಮಾಡಿತು. ಮುಂದೆ ‘ರಿಕ್ಕಿ’ಯಲ್ಲಿ ಸೌಂಡ್ ಮಾಡಿದ ಮೇಲೆ ‘ಗೋ ಬಣ್ಣ ಸಾಧಾರಣ ಮೈಕಟ್ಟು’ ಕತೆ ಹೇಳಿ ಅಸಾಧಾರಣ ಗೆಲುವು ಕಂಡರು. ಹೀಗೆ ಬೀಳುತ್ತ ಏಳುತ್ತ ಬಂದ ರಕ್ಷಿತ್ ಶೆಟ್ಟಿಯ ಗೆಲುವಿನ ‘ಜಾತ್ರೆ’ಯಲ್ಲಿ ‘ಕಿರಿಕ್ ಪಾರ್ಟಿ’ಯದ್ದೇ ಈಗ ಅಬ್ಬರ. ಅವರ ಚಿತ್ರಗಳ ಬಾಕ್ಸ್ ಅಫೀಸ್ ಗಳಿಕೆ ಈಗ ವಾಸ್ತು ಪ್ರಕಾರವೇ ನಡೆಯುತ್ತಿದೆ. ಒಂದು ಚಿತ್ರದ ಬಹು ದೊಡ್ಡ ಯಶಸ್ಸಿನಲ್ಲಿರುವ ರಕ್ಷಿತ್ ಅವರ ಮುಂದಿನ ಚಿತ್ರ ಯಾವುದು? ಸುದೀಪ್‌ಗೆ ಮಾಡಲು ಹೊರಟಿರುವ ಚಿತ್ರದ ಕತೆ ಏನು? ಅವರೊಂದಿಗಿನ ನಮ್ಮ ಪ್ರಶ್ನೆಗಳು- ಅವರ ಉತ್ತರಗಳು ಇಲ್ಲಿವೆ

ಮೊದಲೆರಡು ಚಿತ್ರಗಳು ಯಾಕೋ ಅಂದುಕೊಂಡಂತೆ ಆಗಲಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಎಂದವರನ್ನು ಪ್ರೇಕ್ಷಕ ಪ್ರೀತಿಸಿದ. ಅದೇ ಸಕ್ಸಸ್‌'ನ ಸಂಭ್ರಮದಲ್ಲಿ ಪ್ರಯೋಗಕ್ಕಿಳಿದರು. ಮಿಶ್ರ ಪ್ರತಿಕ್ರಿಯೇಗಳು ಸದ್ದು ಮಾಡಿದವು. ಚಿತ್ರವೂ ಅಷ್ಟೇ ಸುದ್ದಿ ಮಾಡಿತು. ಮುಂದೆ ‘ರಿಕ್ಕಿ’ಯಲ್ಲಿ ಸೌಂಡ್ ಮಾಡಿದ ಮೇಲೆ ‘ಗೋ ಬಣ್ಣ ಸಾಧಾರಣ ಮೈಕಟ್ಟು’ ಕತೆ ಹೇಳಿ ಅಸಾಧಾರಣ ಗೆಲುವು ಕಂಡರು. ಹೀಗೆ ಬೀಳುತ್ತ ಏಳುತ್ತ ಬಂದ ರಕ್ಷಿತ್ ಶೆಟ್ಟಿಯ ಗೆಲುವಿನ ‘ಜಾತ್ರೆ’ಯಲ್ಲಿ ‘ಕಿರಿಕ್ ಪಾರ್ಟಿ’ಯದ್ದೇ ಈಗ ಅಬ್ಬರ. ಅವರ ಚಿತ್ರಗಳ ಬಾಕ್ಸ್ ಅಫೀಸ್ ಗಳಿಕೆ ಈಗ ವಾಸ್ತು ಪ್ರಕಾರವೇ ನಡೆಯುತ್ತಿದೆ. ಒಂದು ಚಿತ್ರದ ಬಹು ದೊಡ್ಡ ಯಶಸ್ಸಿನಲ್ಲಿರುವ ರಕ್ಷಿತ್ ಅವರ ಮುಂದಿನ ಚಿತ್ರ ಯಾವುದು? ಸುದೀಪ್‌ಗೆ ಮಾಡಲು ಹೊರಟಿರುವ ಚಿತ್ರದ ಕತೆ ಏನು? ಅವರೊಂದಿಗಿನ ನಮ್ಮ ಪ್ರಶ್ನೆಗಳು- ಅವರ ಉತ್ತರಗಳು ಇಲ್ಲಿವೆ

1. ನಿಮ್ಮ ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್‌ನ ‘ಕಿರಿಕ್ ಪಾರ್ಟಿ’ ಚಿತ್ರದ ಗೆಲುವಿನ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಒಂದೇ ಮಾತಿನಲ್ಲಿ ಹೇಳುವುದಾದರೆ ಸೂಪರ್. ಆದರೆ, ಇದು ನನ್ನ ಒಬ್ಬನ ಯಶಸ್ಸಲ್ಲ. ಲೈಟ್ ಬಾಯ್‌ನಿಂದ ಹಿಡಿದು ಚಿತ್ರಕ್ಕೆ ದುಡಿದ ಪ್ರತಿಯೊಬ್ಬನಿಗೂ ಸೇರಬೇಕಾದ ಯಶಸ್ಸು ಇದು. ಸದ್ಯಕ್ಕೆ 200 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ದುಬೈನಲ್ಲೇ ದಿನಕ್ಕೆ 20 ಪ್ರದರ್ಶನಗಳನ್ನು ಕಂಡಿದೆ. ಮೂರು ದಿವಸಕ್ಕೆ 40 ಲಕ್ಷ ಗಳಿಕೆ ಮಾಡಿದೆ. ಕನ್ನಡ ಸಿನಿಮಾಗಳ ಮಟ್ಟಿಗೆ ಇದು ದೊಡ್ಡ ಗಳಿಕೆ.

2. ಸಿನಿಮಾ ಆರಂಭಿಸುವಾಗ ಇಂಥ ಗೆಲುವಿನ ನಿರೀಕ್ಷೆ ಇತ್ತಾ?

ಏನೋ ಅಧ್ಬುತ ಕತೆ ಹೇಳುತ್ತಿದ್ದೇವೆ. ಚಿತ್ರವೂ ಅದ್ಭುತವಾಗಿ ಮೂಡಿಬರುತ್ತದೆ ಎನ್ನುವ ಲೆಕ್ಕಾಚಾರವಂತೂ ಇರಲಿಲ್ಲ. ಆದರೆ, ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ಬೇಸರ ಆಗಬಾರದು. ಅವನು ಚಿತ್ರಮಂದಿರದಲ್ಲಿ ಇದ್ದಷ್ಟು ಹೊತ್ತು ನಗುತ್ತಿರಬೇಕು. ಈ ಉದ್ದೇಶದಿಂದ ಸಿನಿಮಾ ಶುರು ಮಾಡಿದ್ವಿ. ಹಾಡುಗಳು ಮಾರುಕಟ್ಟೆಗೆ ಬಂದ ನಂತರ ಸೂಪರ್ ಹಿಟ್ ಆಗದಿದ್ದರೂ ನಮ್ಮ ಸಿನಿಮಾ ಫ್ಲಾಪ್ ಅಂತೂ ಆಗಲ್ಲ ಎನ್ನುವ ಭರವಸೆ ಬಂತು. ಆದರೆ, ಈ ಮಟ್ಟದ ಸಕ್ಸಸ್ ನಿರೀಕ್ಷೆ ಮಾಡಿರಲಿಲ್ಲ.

3. ಈ ಚಿತ್ರಕ್ಕೆ ಬಂದ ಅತ್ಯುತ್ತಮ ಮೆಚ್ಚುಗೆ ಮಾತುಗಳೇನು?

ನನ್ನ ಗೆಳೆಯೊಬ್ಬನ ಪರಿಚಿತರು ಸಿನಿಮಾ ನೋಡಕ್ಕೆ ಹೋಗಿದ್ದರಂತೆ. ಅವರು ಸಿನಿಮಾ ನೋಡಿಕೊಂಡು ಬಂದ ಮೇಲೆ ನನ್ನ ನಂಬರ್‌ಗೆ ‘ಜೀವನದಲ್ಲಿ ನಕ್ಕಿ ತುಂಬಾ ವರ್ಷಗಳಾಗಿತ್ತು. ನನ್ನ ಎಲ್ಲ ನೋವುಗಳನ್ನು ಮರೆಸಿ ನನ್ನದೇ ಕಾಲೇಜಿನ ದಿನಗಳಿಗೆ ಕರೆದುಕೊಂಡು ಹೋಗಿದ್ದೀರಿ’ ಅಂತ ಮೆಸೇಜ್ ಮಾಡಿದ್ದರು. ಹಾಗೆ ಮೆಸೇಜ್ ಮಾಡಿದ್ದು ಕ್ಯಾನ್ಸರ್ ಪೇಷೆಂಟ್. ಸುಮಾರು ವರ್ಷ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಮೇಲೆ ನನ್ನ ಸಿನಿಮಾ ನೋಡಿ ಹೀಗೆ ಪ್ರತಿಕ್ರಿಯಿಸಿದ್ದರು. ಒಬ್ಬ ನಟನಿಗೆ ಇದಕ್ಕಿಂತ ಅವಾರ್ಡ್ ಬೇಕಾ?

4. ಈ ದಿನಗಳ ನಿಮ್ಮ ಯಶಸ್ಸಿನ ಸಂಭ್ರಮದಲ್ಲಿ ನಿಂತು ಆರಂಭದ ದಿನಗಳತ್ತ ನೋಡಿದಾಗ ಏನಿಸುತ್ತದೆ?

ಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬನೂ ಗೆಲ್ಲಲೇ ಬೇಕು. ಒಳ್ಳೆಯ ಸಿನಿಮಾ ಮಾಡಬೇಕು ಅಂತಲೇ ಯೋಚಿಸುತ್ತಾನೆ. ಕೆಲವೊಮ್ಮೆ ನಮ್ಮ ಅಂಥ ಯಾವ ಯೋಚನೆಗಳು ಕೈ ಹಿಡಿಯಲ್ಲ. ಹೌದು, ನಾನು ಕೂಡ ಸೋತಿದ್ದೇನೆ, ಮತ್ತೆ ಗೆದ್ದಿದ್ದೇನೆ, ಮಗದೊಮ್ಮೆ ಸೋತಿದ್ದೇನೆ. ಏಳುತ್ತಾ ಬೀಳುತ್ತಲೇ ಮತ್ತೆ ಎದ್ದಿರುವೆ. ಆರಂಭದ ದಿನಗಳನ್ನು ನೆನಪಿಸಿಕೊಂಡಾಗ ಈಗಿನ ಸಕ್ಸಸ್ ಆಗಿನ ಕಷ್ಟಕ್ಕೆ ಸಿಕ್ಕ ಲ ಅಂದುಕೊಳ್ಳುತ್ತೇನೆ. ಯಶಸ್ಸಿನ ಹಸಿವು ಜತೆಗೇ ಇತ್ತು. ಕಷ್ಟವಾದರೂ ಹಿಂದಕ್ಕೆ ಸರಿಯಲಿಲ್ಲ. ಹಂತ ಹಂತವಾಗಿ ಸಿನಿಮಾಗಳನ್ನು ಮಾಡುತ್ತ ಬಂದೆ. ಈಗ ನನಗೇ ಅಂತ ಒಂದು ಸ್ಥಾನ ಸಿಕ್ಕಿದೆ. ಮುಂದೆ ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ.

5. ಇಷ್ಟು ದೊಡ್ಡ ಸಕ್ಸಸ್ ಕಂಡವರಿಗೆ ಸಾಕಷ್ಟು ಅಫರ್‌ಗಳು ಬಂದಿರಬೇಕಲ್ಲವೇ?

ಹೌದು, ಬಂದಿವೆ. ಆದರೆ, ಎಲ್ಲವನ್ನೂ ಒಪ್ಪಿಕೊಂಡಿಲ್ಲ. ನನ್ನ ಮುಂದಿನ ಚಿತ್ರಕ್ಕೆ ಸಚಿನ್ ನಿರ್ದೇಶಕರು. ಇವರು ‘ಉಳಿದವರು ಕಂಡಂತೆ’ ಚಿತ್ರಕ್ಕೆ ಸಂಕಲನಕಾರನಾಗಿ ಕೆಲಸ ಮಾಡಿದ್ದರು. ಇದು ಅವರಿಗೆ ಮೊದಲ ಸಿನಿಮಾ. ಪಕ್ಕಾ ಫ್ಯಾಮಿಲಿ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ‘ರೂವಾರಿ’ ಅಂತ ಹೆಸರಿಟ್ಟಿದ್ದರು. ಆದರೆ, ಇನ್ನೂ ಟೈಟಲ್ ಅಂತಿಮವಾಗಿಲ್ಲ.

6. ಹಾಗಾದರೆ ‘ಥಂಗ್ಸ್ ಅಫ್ ಮಾಲ್ಗುಡಿ ಡೇಸ್’ ಯಾವಾಗ ಶುರುವಾಗುತ್ತದೆ?

ಸಚಿನ್ ನಿರ್ದೇಶನದ ಸಿನಿಮಾ ಮುಗಿಸಿಕೊಂಡು ಈ ಚಿತ್ರ ಶುರು ಮಾಡುತ್ತೇನೆ. ಇದು ನನ್ನ ಮತ್ತು ಸುದೀಪ್ ಅವರ ಕಾಂಬಿನೇಷನ್ ಸಿನಿಮಾ. ಅವರೊಂದಿಗೆ ಒಂದು ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ. ಜತೆಗೆ ಸುದೀಪ್ ಅವರೇ ಕೊಟ್ಟ ಅರ್ ಇದು. ಈ ಚಿತ್ರಕ್ಕೆ ನಾನು ನಿರ್ದೇಶಕ ಮತ್ತು ನಟ. ಸುದೀಪ್ ನಟರು. ಅವರಿಗೆ ಚಿತ್ರದ ಐಡಿಯಾ ಹೇಳಿದೆ. ಇನ್ನೂ ಕತೆ ಕೂಡ ಪೂರ್ತಿ ಹೇಳಿಲ್ಲ. ಆಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕತೆ ರೆಡಿ ಇದೆ.

7. ಸರಿ, ಈ ಚಿತ್ರದ ಕತೆ ಏನು?

ಈಗಲೇ ಕತೆ ಕೇಳುತ್ತಿದ್ದೀರಲ್ಲ... ಇರಲಿ. ಥಂಗ್ಸ್ ಅನ್ನೋದು ದರೋಡೆಕೋರರು ಎಂದರ್ಥ. ಈ ದರೋಡೆಕೋರರ ಬಗ್ಗೆ ಬೇರೆ ಬೇರೆಯವರು ಭಿನ್ನವಾದ ಕತೆಗಳನ್ನು ಹೇಳಿದ್ದಾರೆ. ಹಾಗೆ ಹೇಳಿರುವುದೆಲ್ಲ ಸರಿ ಇದೆ ಅನ್ನಲಾಗದು. ಆದರೆ, ನಾನೂ ಕೂಡ ಈಗ ದರೋಡೆಕೋರರ ಕತೆ ಹೇಳುವುದಕ್ಕೆ ಹೊರಟಿದ್ದೇನೆ. ಇದು ಬ್ರಿಟಿಷರ ಕಾಲದಲ್ಲಿ ಅಂದರೆ 1858-1947ರ ದಿನಗಳ ಕತೆ. ಆಗ ಬ್ರಿಟಿಷ್ ಸಾಮ್ರಾಜ್ಯ ಏಕಮುಖವಾಗಿ ಚಿತ್ರೀಕರಿಸಿದ್ದ ಚರಿತ್ರೆಯ ಮತ್ತೊಂದು ಮುಖವನ್ನು ಹೇಳುವ ಪ್ರಯತ್ನ ಇಲ್ಲಿಯದು. ಇದು ಅನ್‌ಟೋಲ್ಡ್ ಸ್ಟೋರಿ. ಯಾರಿಗೂ ಗೊತ್ತಿಲ್ಲದ ಕತ್ತಲೆಯಲ್ಲೇ ಮುಳುಗಿರುವ ಕತೆಯ ಮುಖದ ಅನಾವರಣ. ಆ ದಿನಗಳ ಚರಿತ್ರೆ ಜತೆಗೆ ಈ ದಿನಗಳ ಸ್ಪರ್ಶವೂ ಇರುತ್ತದೆ.

8. ಅಂದರೆ ದರೋಡೆಕೋರರಾಗಿ ಯಾರು ಕಾಣಿಸಿಕೊಳ್ಳುತ್ತಾರೆ? ನೀವಾ ಅಥವಾ ಸುದೀಪ್ ಅವರಾ?

ಓ... ನೀವ್ ಇಲ್ಲೇ ಫುಲ್ ಸಿನಿಮಾ ತೋರಿಸು ಅಂತಿದ್ದೀರಿ. ನಾವಿಬ್ಬರು ಕಳ್ಳರೆ. ಪಕ್ಕಾ ಕ್ಲಾಸಿಕ್ ಕಳ್ಳರು ಹ್ಹ ಹ್ಹ ಹ್ಹ... ನೀವು ಸಿನಿಮಾ ನೋಡಿ. ಇನ್ನೂ ಈ ಚಿತ್ರ ಪ್ರಾಥಮಿಕ ಹಂತದಲ್ಲೇ ಇದೆ. ನಿಧಾನಕ್ಕೆ ಎಲ್ಲವನ್ನೂ ಹೇಳುತ್ತೇನೆ.

9. ಇಂಥ ಕತೆ ಚಿತ್ರ ಮಾಡಬೇಕು ಅಂದಾಗ ನಿಮಗೆ ಎದುರಾದ ಸವಾಲೇನು?

ಚರಿತ್ರೆಯ ಪುಟಗಳು. ಯಾವುದು ನಿಜ, ಯಾವುದು ಸುಳ್ಳು ಎನ್ನುವ ಹುಡುಕಾಟದ ಪ್ರಯತ್ನ. ಎಲ್ಲಕ್ಕಿಂತ ಮುಖ್ಯವಾಗಿ ಮಾಲ್ಗುಡಿ ಎನ್ನುವ ಊರು ಇಲ್ಲವೇ ಇಲ್ಲ. ಅದೊಂದು ಕಾಲ್ಪನಿಕ ಊರು. ಹೀಗೆ ಇಲ್ಲದ ಊರಿನಲ್ಲಿ ನಡೆಯುವ ದರೋಡೆ ಕತೆ ಕೂಡ ಸುಳ್ಳಾಗಿರುತ್ತದೆ. ಆದರೆ, ಈ ಸುಳ್ಳಿನ ಕತೆಯನ್ನು ನಿಜ ಎಂದು ಹೇಗೆ ನಂಬಿಸಬೇಕು ಎಂಬುದು ನನಗೆ ಎದುರಾದ ಸವಾಲು. ಅದನ್ನು ನಂಬಿಸುತ್ತೇನೆ.

10. ಈ ಕತೆಯನ್ನು ಸುದೀಪ್ ಅವರೊಂದಿಗೆ ಮಾಡಬೇಕು ಅಂತ ಬರೆದುಕೊಂಡಿದ್ದಾ?

ಹಾಗೇನು ಇಲ್ಲ. 20 ವರ್ಷಗಳ ನಂತರ ನಾನೇ ನಿರ್ದೇಶಕನಾಗಿ, ನಾನೇ ಹೀರೋ ಆಗಿ ಮಾಡಬೇಕು ಅಂತ ಬರೆದುಕೊಂಡ ಕತೆ. ಆದರೆ, ಉಳಿದವರು ಕಂಡಂತೆ ಸಿನಿಮಾದ ಟ್ರೈಲರ್ ನೋಡಿದ ಸುದೀಪ್ ಅವರೇ ೆನ್ ಮಾಡಿ ನೀವು ಸಿನಿಮಾ ನಿರ್ದೇಶನ ಮಾಡುವುದಾದರ ನಾನು ಆ ಚಿತ್ರದಲ್ಲಿ ನಟಿಸುತ್ತೇನೆ ಅಂದರು. ಆಗಲೇ ನಾನು ಇಲ್ಲ ಮೊದಲು ಸಿನಿಮಾ ನೋಡಿ. ಆ ಮೇಲೆ ನಿರ್ಧರಿಸೋಣ ಅಂದೆ. ‘ಉಳಿದವರು ಕಂಡಂತೆ’ ಸೂಪರ್ ಹಿಟ್ ಆಗಲೀ, ಫ್ಲಾಪ್ ಆಗಲಿ ನನ್ನೊಂದಿಗೆ ನೀವು ಸಿನಿಮಾ ಮಾಡಿ ಅಂಥ ಭರವಸೆ ಕೊಟ್ಟಾಗ ನನ್ನ ‘ಥಂಗ್ಸ್ ಆ್ ಮಾಲ್ಗುಡಿ ಡೇಸ್’ಗೆ ಆನೆ ಬಲ ಬಂದಂತಾಗಿ ಅವರ ಜತೆ ಶುರು ಮಾಡುತ್ತಿದ್ದೇನೆ. ವಿಶೇಷ ಅಂದರೆ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್‌ನಲ್ಲಿ ಕಾಣಿಸಿಕೊಂಡ ಕೆಲ ಕಲಾವಿದರು ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

11. ನಟ, ನಿರ್ದೇಶಕ ಆಗಿರುವ ನಿಮಗೆ ಯಾವ ರೀತಿಯ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ?

ನಟನಾಗಿ ಹೇಳುವುದಾದರೆ ಕತೆಗೆ ನಾನು ಸೂಕ್ತನಾ, ಅದರಲ್ಲಿ ಕಮರ್ಷಿಯಲ್ ಅಂಶಗಳಿವೆಯಾ ಅಂತ ನೋಡಿ ಒಪ್ಪಿಕೊಳ್ಳುತ್ತೇನೆ. ಲೈಕ್ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಹಾಗೂ ‘ಕಿರಿಕ್ ಪಾರ್ಟಿ’ಯಂತಹ ಚಿತ್ರಗಳು. ಆದರೆ, ನಿರ್ದೇಶಕನಾದ ಕೂಡಲೇ ನನ್ನೊಳಗಿನ ಸಿನಿಮಾ ಎದ್ದು ಕೂರುತ್ತದೆ. ‘ಉಳಿದವರು ಕಂಡಂತೆ’ ರೀತಿಯ ಸಿನಿಮಾಗಳನ್ನು ಕಟ್ಟಿಕೊಡುವ ಸಾಹಸ ಮಾಡುತ್ತೇನೆ. 20 ವರ್ಷಗಳ ನಂತರ ಯೋಚಿಸುವುದನ್ನು ಈಗಲೇ ಕಾರ್ಯ ರೂಪಕ್ಕೆ ತರುವ ಉತ್ಸಾಹ ನನ್ನಲ್ಲಿ ಮೂಡುತ್ತದೆ. ‘ಥಂಗ್ಸ್ ಆಫ್ ಮಾಲ್ಗುಡಿ ಡೇಸ್’ ಶುರುವಾಗಿದ್ದು ಕೂಡ ಇಂಥ ಉತ್ಸಾಹದಲ್ಲೇ. ನಟನಾಗಿ ಆಯ್ಕೆ ಮಾಡಿಕೊಳ್ಳುವ ಸಿನಿಮಾ, ನಿರ್ದೇಶಕನಾಗಿ ಮಾಡುವ ಸಿನಿಮಾಗಳಿಗೂ ಬೇರೆಯವರು ಮಾಡಿದ ಅಡುಗೆಯನ್ನು ತಿನ್ನುವುದಕ್ಕೂ ನಾವೇ ಮಾಡಿಕೊಂಡ ಅಡುಗೆಯನ್ನು ರುಚಿ ನೋಡುವುದಕ್ಕೂ ಇರುವ ವ್ಯತ್ಯಾಸ ಅಷ್ಟೆ.

- ಆರ್ ಕೇಶವಮೂರ್ತಿ