ಇಂದಿರಾ ಕ್ಯಾಂಟೀನ್: ಅನುದಾನ ವಿಚಾರಕ್ಕೆ ಕೈ-ಕಮಲ ಜಟಾಪಟಿ

https://static.asianetnews.com/images/authors/b348a094-0bef-5801-a1f6-61e57071185f.jpg
First Published 31, Jul 2018, 1:33 PM IST
Indira Gandhi canteen : BJP and Congress gets credit
Highlights

ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಡವರಿಗಾಗಿ ಇರುವ ‘ಇಂದಿರಾ ಕ್ಯಾಂಟೀನ್’ ಯೋಜನೆಯನ್ನು ಇನ್ನಷ್ಟು ಉತ್ತಮಗೊಳಿಸಲು ಹಾಗೂ ಕಾರ್ಯವೈಖರಿಯಲ್ಲಿನ ಕೆಲವು ಲೋಪಗಳನ್ನು ಸರಿಪಡಿಸುವಂತೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಂದ ಅಭಿಪ್ರಾಯಗಳು ವ್ಯಕ್ತವಾದವು.

 

ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಶೀಘ್ರ ಪಾಲಿಕೆಯ ಸರ್ವ ಪಕ್ಷ ಸದಸ್ಯರ ಸಮಿತಿ ರಚಿಸಿ ತಿಂಗಳಲ್ಲಿ ವರದಿ ಪಡೆಯುವುದಾಗಿ ಮೇಯರ್ ಆರ್.ಸಂಪತ್‌ರಾಜ್ ಘೋಷಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಇಂದಿರಾ ಕ್ಯಾಂಟೀನ್‌ಗಳ ಪರಿಶೀಲನೆಗೆ ಸರ್ವ ಪಕ್ಷ ಸದಸ್ಯರ ಸಮಿತಿ ರಚಿಸಲಾಗುವುದು. ಸಮಿತಿ ಮುಂದಿನ ಒಂದು ತಿಂಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಖುದ್ದು ಪರಿಶೀಲಿಸಿ ಸಾರ್ವಜನಿಕರ ಅಭಿಪ್ರಾಯ, ಸಲಹೆಗಳೊಂದಿಗೆ ವರದಿ ನೀಡಲಿ, ಆ ವರದಿ ಆಧರಿಸಿ ಇಂದಿರಾ ಕ್ಯಾಂಟೀನ್‌ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಇಂದಿರಾ ಕ್ಯಾಂಟಿನ್ ಯೋಜನೆಗೆ ಒಂದು ವರ್ಷವಾಗುತ್ತಿದೆ. ಆದರೆ, ಕ್ಯಾಟೀನ್‌ಗಳ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಬಾಕಿ ಬಿಲ್ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅದಕ್ಕೆ ಆಯುಕ್ತ ಮಂಜುನಾಥ ಪ್ರಸಾದ್, ಇಂದಿರಾ ಕ್ಯಾಂಟೀನ್ ಉತ್ತಮ ಕ್ಯಾಂಟೀನ್ ವ್ಯವಸ್ಥೆಯಾಗಿದೆ ಎಂಬ ಜರ್ಮನ್ ಟಿವಿಯೊಂದುವರದಿ ಮಾಡಿದೆ. ಬೇಡಿಕೆಗನುಗುಣವಾಗಿ ಪ್ರತಿ ತಿಂಗಳು ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲಾಗುತ್ತದೆ. ದಿನವೂ ಒಂದೊಂದು ಲೆಕ್ಕದಲ್ಲಿ ಆಹಾರ ಪೂರೈಸಲಾಗುವುದಿಲ್ಲ. ಆಹಾರ ಉಳಿದರೆ ಕ್ಯಾಂಟಿನ್‌ನವರಿಗೆ ನಷ್ಟ ಆಗಬಾರದು ಎಂದು ನಿರ್ದಿಷ್ಟ ಪ್ರಮಾಣದ ಆಹಾರಕ್ಕೆ ಹಣ ಪಾವತಿ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಲೋಪವಿಲ್ಲ. ನಿತ್ಯ ಯಾವ ಕ್ಯಾಂಟೀನ್‌ಗೆ ಎಷ್ಟು ಪ್ರಮಾಣದ ಊಟ ಸರಬರಾಜಾಗಿದೆ, ಎಷ್ಟು ಜನ ಊಟ ಮಾಡಿ ದ್ದಾರೆ ಎಂಬುದಕ್ಕೆ ದಾಖಲೆ ಇದೆ. ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆಗೆ ಬದಲಾವಣೆಗಳು ಅಗತ್ಯವಿದ್ದರೆ ಕೌನ್ಸಿಲ್ ಸಭೆಯ ಸಲಹೆಯಂತೆ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ, ಪ್ರತಿಪಕ್ಷ ಬಿಜೆಪಿ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಇಂದಿರಾ ಕ್ಯಾಂಟಿನ್ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಬಡವರಿಗಾಗಿ ಇಂತಹ ಇನ್ನೂ ೧೦೦೦ ಕ್ಯಾಂಟಿನ್ ಆರಂಭಿಸಿ ಅದಕ್ಕೆ ಬೆಂಬಲ ನೀಡುತ್ತೇವೆ. ಆದರೆ, ಇಂದಿರಾ ಕ್ಯಾಂಟಿನ್ ವಿಚಾರದಲ್ಲಿ ಪಾರದರ್ಶಕತೆ ಇರಬೇಕು. ಊಟ ಸರಬರಾಜು ಅಂಕಿ ಅಂಶದ ವಿಚಾರದಲ್ಲಿ ನಮಗೆ ಅನುಮಾನವಿದೆ. ಬೆಂಗಳೂರು ಬಂದ್ ದಿನವೂ ಸಾಮಾನ್ಯ ದಿನದಷ್ಟೇ ಜನರು ಈ ಕ್ಯಾಂಟೀನ್‌ಗಳಲ್ಲಿ ಊಟ ಮಾಡಿದ್ದಾರೆಯೇ? ಈ ವಿಚಾರದಲ್ಲಿ ಸುಳ್ಳು ಲೆಕ್ಕ ತೋರಿಸಿರುವ ಸಂಶಯವಿದೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ ಇಂದಿರಾ ಕ್ಯಾಂಟಿನ್‌ನಲ್ಲಿ ಉಳಿದ ಊಟವನ್ನು ವ್ಯರ್ಥ ಮಾಡಲಾಗುತ್ತಿದೆ. ಇದರ ಬದಲು ಎಷ್ಟು ಮಂದಿ ಬರುತ್ತಾರೆ ಎಂಬ ಅಂದಾಜಿನಲ್ಲಿ ಊಟ ಪೂರೈಸುವುದು ಸೂಕ್ತ ಎಂದಾಗ ಮೇಯರ್ ಪ್ರತಿಕ್ರಿಯಿಸಿ, ಇಂದಿರಾ ಕ್ಯಾಂಟಿನ್‌ನ ಲೋಪಗಳನ್ನು ಸರಿಮಾಡಲು ಉಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿಯೇ ಒಂದು ಸಮಿತಿ ರಚನೆ ಮಾಡುವುದಾಗಿ ಹೇಳಿ ವಿಷಯಕ್ಕೆ ತೆರೆ ಎಳೆದರು.

ಅನುದಾನ ವಿಚಾರಕ್ಕೆ ಕೈ-ಕಮಲ ಜಟಾಪಟಿ

ಬೆಂಗಳೂರು: ‘ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸಿದ ಹಾಗೆ ನಗರದಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದೆ, ನಮಗೆ ಅನುದಾನ ಕೊಡಲಾಗದಿದ್ದರೆ ಪ್ರತ್ಯೇಕ ಬಿಜೆಪಿ ಪಾಲಿಕೆ ಮಾಡಿಬಿಡಿ’ ಎಂದು ಬಿಜೆಪಿ ಸದಸ್ಯರು ಸೋಮವಾರ ಪಾಲಿಕೆ ಸಭೆಯಲ್ಲಿ ಮಾಡಿದ ಆರೋಪದ ಮಾತುಗಳು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ದಾಳಿ ಹಾಗೂ ಪ್ರತಿಭಟನೆಗೆ ಕಾರಣವಾಯಿತು.

ಬಿಜೆಪಿ ಶಾಸಕರಾದ ಸತೀಶ್ ರೆಡ್ಡಿ, ಎಸ್.ಆರ್. ವಿಶ್ವನಾಥ್, ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಉಮೇಶ್ ಶೆಟ್ಟಿ ಮತ್ತಿತರರು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ಅನುದಾನ ಹಂಚಿಕೆಯಲ್ಲಿ ಪಕ್ಷಪಾತ ಮಾಡಲಾಗಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ೧೪ನೇ ಹಣಕಾಸು ಆಯೋಗ ಮತ್ತು ಎಸ್‌ಎಫ್‌ಸಿ ಅನುದಾನದಲ್ಲಿ ಒಂದು ರೂಪಾಯಿಯನ್ನೂ ನೀಡಿಲ್ಲ. ನಾವು ಪಾಲಿಕೆಗೆ, ಸರ್ಕಾರಕ್ಕೆ ತೆರಿಗೆ ಕಟ್ಟುವು ದಿಲ್ಲವೇ? ಹಾಗೆ ನೋಡಿದರೆ ನಮ್ಮ ಕ್ಷೇತ್ರಗಳಿಂದಲೇ ಅತಿ ಹೆಚ್ಚು ತೆರಿಗೆ ಪಾಲಿಕೆಗೆ ಪಾವತಿ ಯಾಗುತ್ತಿದೆ. ಈ ತಾರತಮ್ಯ ಮಾಡಿರುವುದಾದರೂ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಮಾಜಿ ಮೇಯರ್‌ಗಳಾದ ಮಂಜುನಾಥ್ ರೆಡ್ಡಿ, ಪದ್ಮಾವತಿ, ಆಡಳಿತ ಪಕ್ಷದ ನಾಯಕ ಎಂ. ಶಿವರಾಜು ಆಕ್ಷೇಪ ವ್ಯಕ್ತಪಡಿಸಿ, ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹೧೧೦ ಕೋಟಿ ಬಿಡುಗಡೆ ಮಾಡಲಾಗಿದೆ. ಮಡಿವಾಳ, ಬೆಳ್ಳಂದೂರು, ವರ್ತೂರು ಕೆರೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಾಗಿದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪ್ರವಾಹ ಪರಿಸ್ಥಿತಿ ತಡೆಗೆ ಅನುದಾನ ಕೊಡಲಾಗಿದೆ. ಆದರೂ, ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಆರೋಪಿಸುತ್ತಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಇದ್ಕಕೆ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯಿಸಿ, ನಮ್ಮ ಕ್ಷೇತ್ರದ ಸಮಸ್ಯೆಯನ್ನು ನಾವು ಕೇಳುತ್ತಿದ್ದೇವೆ. ಕೇಳಲು ಇಚ್ಛೆಯಿದ್ದರೆ ಕೇಳಿ, ಇಲ್ಲದಿದ್ದರೆ ಸಭೆಯಿಂದ ಆಚೆ ಹೋಗಿ. ನಮಗೆ ಅನುದಾನ ಕೊಡಲಾಗಿದ್ದರೆ, ಬಿಜೆಪಿ ಶಾಸಕರು, ಪಾಲಿಕೆ ಸದಸ್ಯರ ಪ್ರತ್ಯೇಕ ಪಾಲಿಕೆ ಮಾಡಿಬಿಡಿ ಎಂದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು, ನಮ್ಮನ್ನು ಆಚೆ ಹೋಗಿ ಎನ್ನಲು ನೀವು ಯಾರು? ಪ್ರತ್ಯೇಕ ಬೇಡಿಕೆಯನ್ನು ಹೊರಗಿಟ್ಟುಕೊಳ್ಳಿ ಎಂದು ತಿರುಗೇಟು ನೀಡಿದರಲ್ಲದೆ, ಶಾಸಕರ ಮಾತನ್ನು ಕಡತದಿಂದ ತೆಗೆಯಬೇಕು ಎಂದು ಮೇಯರ್‌ಗ ಒತ್ತಾಯಿಸಿದರು. ವೇಳೆ ಬಿಜೆಪಿ ಸದಸ್ಯರು ತಾರತಮ್ಯ ಖಂಡಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಕೂಡ ಬಾವಿಗಿಳಿದು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಆಗ ಮೇಯರ್ ಸಂಪತ್‌ರಾಜ್ ಮಧ್ಯಪ್ರವೇಶಿಸಿ, ನೀವು ಎಷ್ಟೇ ಗಲಾಟೆ ಮಾಡಿದರೂ ಸಭೆ ಮುಂದೂಡುವುದಿಲ್ಲ. ಬೆಂಗಳೂರಿನ ಅಭಿವೃದ್ಧಿಗಾಗಿ ಆರೋಗ್ಯಕರ ಚರ್ಚೆಗಳು ನಡೆಯಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿ ಶಾಸಕರ ಹೇಳಿಕೆಯನ್ನು ಕಡತದಿಂದ ತೆಗೆಸಿದರಲ್ಲದೆ, ಯಾವುದೇ ರೀತಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆಸಿದ್ದರೆ ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿ ಗದ್ದಲ ತಿಳಿಗೊಳಿಸಿದರು.

ಪೊಲೀಸರಿಗೆ ಅನುಮತಿ ಕೊಟ್ಟವರ್ಯಾರು ಯಾರು?

ತಮ್ಮ ವಾರ್ಡ್‌ನಲ್ಲಿ ಶಾಸಕರ ಕುಮ್ಮಕ್ಕಿನಿಂದ ಪೊಲೀಸರು ಏಳು ಆಟೋ ಟಿಪ್ಪರ್‌ಗಳನ್ನು ನಿಯಮ ಉಲ್ಲಂಘನೆಯಡಿ ಜಪ್ತಿ ಮಾಡಿದ್ದಾರೆ. ಆರ್‌ಟಿಓ ಅಧಿಕಾರಿಗಳ ಕೆಲಸ ಮಾಡಲು ಪೊಲೀಸರಿಗೆ ಅನುಮತಿ ಕೊಟ್ಟವರಾರು ಎಂದು ಜೆ.ಪಿ.ಪಾರ್ಕ್ ವಾರ್ಡ್ ಸದಸ್ಯೆ ಮಮತಾ ವಾಸುದೇವ್ ಸಭೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಇದೇ ರೀತಿ ಎಲ್ಲಾ ವಾರ್ಡುಗಳಲ್ಲೂ ತಪಾಸಣೆ ನಡೆಸಿ ಟಿಪ್ಪರ್‌ಗಳ ಜಪ್ತಿ ಮಾಡಲಾಗುವುದೇ ಎಂದು ಮೇಯರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಮೇಯರ್ ಪ್ರತಿಕ್ರಿಯಿಸಿ, ಜೆ.ಪಿ. ಉದ್ಯಾನ ವಾರ್ಡ್‌ನಲ್ಲಿ ಮಾಡಿದ ರೀತಿಯಲ್ಲಿಯೇ ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲೂ ಆಟೋ ಟಿಪ್ಪರ್‌ಗಳ ಪರಿಶೀಲನೆ ಮಾಡಲಾಗುವುದು. ನಿಯಮ ಉಲ್ಲಂಘಿಸಿ ನಿಗದಿತ ಆಟೋ ಟಿಪ್ಪರ್‌ಗಳನ್ನು ಕೆಲಸಕ್ಕೆ ನಿಯೋಜಿಸದಿದ್ದರೆ, ಅಂತಹ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

loader