ಕೆಂಡಪ್ರದಿ

ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಹುಟ್ಟಿದ್ದು ನಮ್ಮ ನೆರೆಯ ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾ ಎಂಬ ಗ್ರಾಮದಲ್ಲಿ. ಇವರು ಹಾಡುಗಾರಿಕೆ ಕ್ಷೇತ್ರಕ್ಕೆ ಬರಲು ಮೂಲ ಕಾರಣ ಇವರ ತಂದೆಯೇ. ಇವರು ಶಾಸ್ತ್ರೀಯವಾಗಿ ಸಂಗೀತ ಕಲಿಯದೇ ಇದ್ದರೂ ತಂದೆ ಎಸ್‌.ಪಿ. ಸಾಂಬಮೂರ್ತಿ ಅವರು ಹೇಳುತ್ತಿದ್ದ ಹರಿಕಥೆಯನ್ನು ಕೇಳಿಕೊಂಡು, ಮನೆಯಲ್ಲಿದ್ದ ಹಾರ್ಮೋನಿಯಂ, ಕೊಳಲುಗಳನ್ನು ಇಷ್ಟಬಂದ ಹಾಗೆ ನುಡಿಸುತ್ತಾ ಬೆಳೆದವರು.

ಮರ್ಯಾದಾ ರಾಮಣ್ಣ ಮೊದಲ ಚಿತ್ರ

ಹೀಗೆ ತನ್ನಷ್ಟಕ್ಕೆ ತಾನೇ ಹಾಡಿಕೊಂಡು ಸಂಗೀತ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದ ಎಸ್‌.ಪಿ.ಬಿ. ಅಲ್ಲಿ ಗೆದ್ದು ಘಂಟಸಾಲ ಮತ್ತು ಎಸ್‌.ಪಿ. ಕೋದಂಡಪಾಣಿ ಅವರಿಂದ ಮೆಚ್ಚುಗೆ ಪಡೆದಿದ್ದರು. ಇದೇ ಮುಂದೆ ಅವರಿಗೆ ‘ಮರ್ಯಾದಾ ರಾಮಣ್ಣ’ ಚಿತ್ರದಲ್ಲಿ ಹಾಡುವ ಅವಕಾಶ ಕೊಟ್ಟಿತ್ತು. ಅಲ್ಲಿಂದ ಶುರುವಾದ ಎಸ್‌.ಪಿ.ಬಿ. ಸಿಂಗಿಂಗ್‌ ಜರ್ನಿ ಇಡೀ ಭಾರತವನ್ನು ವ್ಯಾಪಿಸಿಕೊಂಡುಬಿಟ್ಟಿದೆ.

ಬಾಲಿವುಡ್‌ನ ಖ್ಯಾತ ತಾರೆ ಅನಿಲ್‌ ಕಪೂರ್‌ ಸಿನಿ ಜರ್ನಿ ಆರಂಭವಾಗಿದ್ದೇ ಕನ್ನಡದ ‘ಪಲ್ಲವಿ ಅನು ಪಲ್ಲವಿ’ ಚಿತ್ರದ ಮೂಲಕ. ಇದರಲ್ಲಿನ ‘ನಗುವ ನಯನ ಮಧುರ ಮೌನ’ ಹಾಡು ಇಂದಿಗೂ ಸೂಪರ್‌ ಹಿಟ್‌. ಇದನ್ನು ಹಾಡಿದ್ದು ಎಸ್‌.ಪಿ.ಬಿ.

ವಿಷ್ಣುವರ್ಧನ್‌ ಆ್ಯಂಗ್ರಿ ಯಂಗ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದ ಚಿತ್ರ ‘ರಾಮಾಚಾರಿ’ಯನ್ನು ಮನಸ್ಸಿಗೆ ತಂದುಕೊಂಡರೆ ಮೊದಲು ನೆನಪಾಗುವುದು ‘ಹಾವಿನ ದ್ವೇಷ ಹನ್ನೆರಡು ವರುಷ’ ಹಾಡು. ಇದರ ಹಿಂದಿನ ದನಿ ಎಸ್‌.ಪಿ.ಬಿ.

ಪ್ರಣಯರಾಜ ಶ್ರೀನಾಥ್‌ಗಾಗಿ ‘ಸ್ನೇಹದ ಕಡಲಲ್ಲಿ’, ಅನಂತ್‌ ನಾಗ್‌ಗಾಗಿ ‘ಎಲ್ಲಿರುವೇ ಮನವ ಕಾಡುವ ರೂಪಸಿಯೇ’ ಎಂದು ಅನಂತ್‌ ನಾಗ್‌ ಅವರನ್ನು ರೊಮ್ಯಾಂಟಿಕ್‌ ಹೀರೋ ಮಾಡಿದ್ದರು. ಶಂಕರ್‌ ನಾಗ್‌ ಅವರ ‘ನಲಿವಾ ಗುಲಾಬಿ ಹೂವೆ’ ಹಾಡಿಗೆ ದನಿ ನೀಡಿ ಭಗ್ನ ಪ್ರೇಮಿಗಳ ಪಾಲಿನ ಮಾತುಗಳಿಗೆ ದನಿಯೊದಗಿಸಿದ್ದರು. ಇದಿಷ್ಟೇ ಅಲ್ಲದೇ, ಎಪ್ಪತ್ತು ಎಂಭತ್ತರ ದಶಕದಿಂದ ಇಂದಿನವರೆಗೂ ದಕ್ಷಿಣ ಭಾರತದ ಎಲ್ಲಾ ಸ್ಟಾರ್‌ಗಳ ಹಿಂದಿನ ಆತ್ಮವೇ ಆಗಿದ್ದಾರೆ ಇವರು.

ಡಾ. ರಾಜ್‌ ಮತ್ತು ಎಸ್‌.ಪಿ.ಬಿ

ಹೀರೋಗಳಿಗೆ ಸಿಂಗರ್‌ಗಳು ಹಾಡುವುದು ಸಾಮಾನ್ಯ. ಆದರೆ ದೊಡ್ಡ ಸ್ಟಾರ್‌ ಹೀರೋ ಒಬ್ಬರು ದೊಡ್ಡ ಸಿಂಗರ್‌ ನಟನೆಯ ಹಾಡಿಗೆ ದನಿ ಕೊಟ್ಟಿರುವುದು ತೀರಾ ಅಪರೂಪ. ಅಂತಹುದೊಂದು ಅಪರೂಪ ಡಾ. ರಾಜ್‌ ಮತ್ತು ಎಸ್‌.ಪಿ.ಬಿ ನಡುವೆ ಆಗಿದೆ. ಅದು ಶಶಿ ಕುಮಾರ್‌ ಮತ್ತು ಎಸ್‌.ಪಿ.ಬಿ ನಟನೆಯ ‘ಮುದ್ದಿನ ಮಾವ’ ಚಿತ್ರ. ಅದರಲ್ಲಿ ಬರುವ ಒಂದು ಹಾಡು ‘ದೀಪಾವಳಿ ದೀಪಾವಳಿ ಗೋವಿಂದ ನೀಲಾವಳಿ....’ ಇದರಲ್ಲಿ ನಟಿಸಿರುವುದು ಎಸ್‌.ಪಿ.ಬಿ ಈ ಹಾಡಿಗೆ ದನಿ ನೀಡಿರುವುದು ಡಾ. ರಾಜ್‌ ಕುಮಾರ್‌.

ಹೀಗೆ ಹಾಡುವುದರ ಹಿಂದೆಯೂ ಒಂದು ಕತೆ ಇದೆ. ಕನ್ನಡದಲ್ಲಿ ನಟರಾಗಿಯೂ ಕೆಲವಷ್ಟುಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಎಸ್‌.ಪಿ.ಬಿ ತಮ್ಮ ಒಂದು ಚಿತ್ರದ ಹಾಡಿಗೆ ಡಾ. ರಾಜ್‌ ಅವರ ದನಿ ಬೇಕು ಎಂದು ಅಪೇಕ್ಷೆ ಪಟ್ಟು ಇದನ್ನು ರಾಘವೇಂದ್ರ ರಾಜ್‌ಕುಮಾರ್‌ ಮೂಲಕ ಡಾ. ರಾಜ್‌ ಅವರಲ್ಲಿ ಕೇಳಿಕೊಂಡಿರುತ್ತಾರೆ. ಎಸ್‌.ಪಿ.ಬಿ ಅವರ ಈ ಬಯಕೆ ತಿಳಿದ ಕೂಡಲೇ ರಾಜ್‌ಕುಮಾರ್‌ ‘ಗಂಗೆಯೇ ಮನಗೆ ಬಂದು ಒಂದು ಕುಡಿಯಲು ಒಂದು ಬಟ್ಟಲು ನೀರು ಕೊಡು ಎಂಬಂತಾಗಿದೆ. ನಾನು ಖಂಡಿತಾ ಎಸ್‌.ಪಿ.ಬಿಗಾಗಿ ಹಾಡುತ್ತೇನೆ’ ಎಂದಿದ್ದರಂತೆ.

ಹದಿನೈದು ಭಾಷೆ ನಲ್ವತ್ತು ಸಾವಿರ ಹಾಡು

ಬಹುಶಃ ನಾವೂ ನೀವು ಜೀವಮಾನದಲ್ಲಿ ಕೇಳಿರದೇ ಇರುವಷ್ಟುಹಾಡುಗಳನ್ನು ಎಸ್‌.ಪಿ.ಬಿ ಹಾಡಿ ಮುಗಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಕೊಂಕಣಿ, ತುಳು, ಮರಾಠಿ, ಪಂಜಾಬಿ ಹೀಗೆ ನಾನಾ ಭಾಷೆಗಳಲ್ಲಿ ಘಟಾನುಘಟಿ ನಾಯಕರುಗಳಿಗೆ ಹಾಡಿರುವ ಇವರ ಒಟ್ಟು ಹಾಡುಗಳ ಸಂಖ್ಯೆ 40 ಸಾವಿರಕ್ಕೂ ಅಧಿಕ. ಹಾಗೆ ನೋಡಿದರೆ ಎಸ್‌.ಪಿ.ಬಿ ಗಾಯನ ಕ್ಷೇತ್ರವನ್ನು ಪ್ರವೇಶ ಮಾಡುವ ಮುನ್ನ ಒಂದೊಂದು ಭಾಷೆಗೆ ಒಬ್ಬೊಬ್ಬರು ದಿಗ್ಗಜ ಹಾಡುಗರು ಇದ್ದರು. ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ.ಎಂ. ಸುಂದರ್‌ ರಾಜನ್‌, ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್‌ ಖ್ಯಾತಿಯ ಉತ್ತುಂಗದಲ್ಲಿ ಇದ್ದವರು. ಇದೇ ವೇಳೆಗೆ ಎಂಟ್ರಿ ಕೊಟ್ಟಿದ್ದ ಎಸ್‌.ಪಿ.ಬಿ ಈ ಮೂರೂ ಭಾಷೆಗಳಲ್ಲಿ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡಿದ್ದರು.

ಕನ್ನಡದ ದತ್ತು ಪುತ್ರ

‘ನಾನು ಕನ್ನಡಕ್ಕೆ ಬಂದಿದ್ದು ‘ನಕ್ಕರೆ ಅದೇ ಸ್ವರ್ಗ’ ಸಿನಿಮಾಗೆ ಹಾಡುವುದಕ್ಕೆ. ಆಗ ನನಗೆ ಕನ್ನಡ ಬರುತ್ತಿರಲಿಲ್ಲ. ಸಂಗೀತ ನಿರ್ದೇಶಕ ರಂಗರಾಯರಿಗೆ ನನಗೆ ಕನ್ನಡ ಬರುವುದಿಲ್ಲ ಎಂದು ಹೇಳಿದ್ದೆ. ಆಗ ಅವರು ಗೊತ್ತಿಲ್ಲದೇ ಇದ್ದರೆ ಏನಂತೆ, ನಾವಿದ್ದೀವಲ್ಲ, ನಾವು ಹೇಳಿಕೊಡ್ತೀವಿ ಅಂದಿದ್ದರು. ಅದರಂತೆ ಹೇಳಿಕೊಟ್ಟರು. ಇಂದು ನಾನು ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀನಿ. ನನಗೆ ಈ ಭಾಷೆ, ಇಲ್ಲಿನ ಜನ ತೋರಿಸುವ ಪ್ರೀತಿ ನೋಡಿದರೆ ಭಾವನಾ ಲೋಕಕ್ಕೆ ಹೋಗಿ ಬಿಡುತ್ತೇನೆ’ ಎಂದು ಹೇಳಿಕೊಂಡಿದ್ದವರು ಎಸ್‌.ಪಿ.ಬಿ.

ಹೀಗೆ ಕನ್ನಡ ಕಲಿತ ಇವರು ಈ ಟಿವಿಯಲ್ಲಿ ಬರುತ್ತಿದ್ದ ‘ಎದೆ ತುಂಬಿ ಹಾಡುವೆನು’ ಎನ್ನುವ ಸೂಪರ್‌ ಹಿಟ್‌ ಕಾರ್ಯಕ್ರಮದ ನಿರೂಪಕರಾಗಿ ಮಕ್ಕಳಲ್ಲಿ ಇದ್ದ ಪ್ರತಿಭೆಯನ್ನು ಹೊರತಂದವರು. ತಪ್ಪಿಲ್ಲದೇ ಕನ್ನಡ ಮಾತನಾಡುತ್ತಾ, ಪ್ರೀತಿ ಮತ್ತು ವಿನಯವಾದ ನಗುಮುಖದ ಮಾತುಗಳಿಂದ ಇಡೀ ಚಿತ್ರರಂಗವನ್ನಾವರಿಸಿಕೊಂಡ ಎಸ್‌.ಪಿ.ಬಿ. ನಟರೂ ಹೌದು. ಕನ್ನಡದಲ್ಲಿಯೂ ಸಾಕಷ್ಟುಚಿತ್ರಗಳಲ್ಲಿ ಕಾಣಿಸಿಕೊಂಡು ದಿಗ್ಗಜರೊಂದಿಗೆ ನಟಿಸಿದ್ದಾರೆ.