ಕೈಲಾಸದ ಶಿವ ಸದಾ ಶಾಂತ ಚಿತ್ತನಾದರೆ ಇಲ್ಲಿರುವ ನಾಯಕ ಹೊಡೆದಾಟದಲ್ಲಿ ನಿಸ್ಸೀಮ. ಹಿಮಾಲಯ ಶಿಖರವನ್ನು ಏರುತ್ತಾನೆ, ಹಿಮಪಾತವಾದರೂ ಬದುಕುಳಿಯುತ್ತಾನೆ. ದೇಹಕ್ಕೆ ಗುಂಡು ಬಿದ್ದರೂ ಸಾಯುವುದಿಲ್ಲ. ಕುತ್ತಿಗೆಗೆ ಚಾಕು ಬೀಸಿದರೂ ಎದೆಗುಂದುವುದಿಲ್ಲ. ಭೂಕಂಪವಾದರೂ ಜೊತೆಗಿದ್ದವರನ್ನು ರಕ್ಷಿಸುತ್ತಾನೆ. ಒಟ್ಟಿನಲ್ಲಿ ಇವನು ರುದ್ರಶಿವ ಎನ್ನಬಹುದು.

ಸಿನಿಮಾ: ಶಿವಾಯ್

ಭಾಷೆ: ಹಿಂದಿ

ತಾರಾಗಣ: ಅಜಯ ದೇವಗನ್‌, ಸಾಯೇಷಾ ಸೈಗಲ್, ಎರಿಕಾ ಕಾರ್‌, ಅಭಿಗಲ್‌ ಎಮಾಸ್‌, ಗಿರೀಶ್‌ ಕಾರ್ನಾಡ್‌

ನಿರ್ದೇಶಕ: ಅಜಯ್‌ ದೇವಗನ್‌

ನಿರ್ಮಾಪಕ: ಅಜಯ್‌ ದೇವಗನ್‌

ಛಾಯಾಗ್ರಹಣ: ಅಸೀಮ್‌ ಬಜಾಜ್‌

ಸಂಗೀತ: ಮಿಥುನ್‌

- ಕೆ. ಚೇತನ್‌ ಕುಮಾರ್‌

ನಾಯಕ, ನಿರ್ಮಾಪಕರಾಗಿ ಹಾಸ್ಯ, ಆ್ಯಕ್ಷನ್‌ ಚಿತ್ರಗಳಲ್ಲಿ ತಮ್ಮದೇ ಬ್ರ್ಯಾಂಡ್‌ ನಿರ್ಮಿಸಿಕೊಂಡಿರುವ ಅಜಯ… ದೇವಗನ್‌ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡು ಭರ್ಜರಿ ಆ್ಯಕ್ಷನ್‌ ಸಿನಿಮಾ ‘ಶಿವಾಯ್‌' ತೆರೆಗಿಳಿಸಿದ್ದಾರೆ.
ದೇವಲೋಕದ ಶಿವನಿಗೂ ಪರದೆ ಮೇಲೆ ಬರುವ ಶಿವಾಯ್‌ಗೂ ಯಾವುದೇ ಸಂಬಂಧವಿಲ್ಲ. ಕೈಲಾಸದ ಶಿವ ಸದಾ ಶಾಂತ ಚಿತ್ತನಾದರೆ ಇಲ್ಲಿರುವ ನಾಯಕ ಹೊಡೆದಾಟದಲ್ಲಿ ನಿಸ್ಸೀಮ. ಹಿಮಾಲಯ ಶಿಖರವನ್ನು ಏರುತ್ತಾನೆ, ಹಿಮಪಾತವಾದರೂ ಬದುಕುಳಿಯುತ್ತಾನೆ. ದೇಹಕ್ಕೆ ಗುಂಡು ಬಿದ್ದರೂ ಸಾಯುವುದಿಲ್ಲ. ಕುತ್ತಿಗೆಗೆ ಚಾಕು ಬೀಸಿದರೂ ಎದೆಗುಂದುವುದಿಲ್ಲ. ಭೂಕಂಪವಾದರೂ ಜೊತೆಗಿದ್ದವರನ್ನು ರಕ್ಷಿಸುತ್ತಾನೆ. ಒಟ್ಟಿನಲ್ಲಿ ಇವನು ರುದ್ರಶಿವ ಎನ್ನಬಹುದು.
ಸಿನಿಮಾದ ಆರಂಭದಲ್ಲಿ ಪ್ರೇಮದ ನವಿರುಗಳಿದ್ದರೂ ನಂತರದಲ್ಲಿ ಪರಿಪೂರ್ಣ ಆ್ಯಕ್ಷನ್‌ ಆವರಿಸಿಕೊಳ್ಳುತ್ತದೆ. ಹಿಮಾಲಯ ಶಿಖರ ಏರುವಾದ ಬಲ್ಗೇರಿಯಾದ ಚೆಲುವೆ ಪರಿಚಯವಾಗುತ್ತಾಳೆ. ಪರಿಚಯ ಸ್ನೇಹವಾಗಿ ಸ್ನೇಹದಿಂದ ಪ್ರಣಯವಾಗಿ ಇವರಿಬ್ಬರಿಗೂ ಒಬ್ಬ ಮಗಳು ಜನಿಸುತ್ತಾಳೆ. ಚಂದದ ಮಗಳಿಗೆ ದೇವರು ಮಾತನ್ನೇ ಕಿತ್ತುಕೊಂಡಿರುತ್ತಾನೆ. ಸಂಸಾರವೆಂದ ಮೇಲೆ ಜಗಳವಿದ್ದಿದ್ದೇ ತಾನೆ, ಮಗುವಾದ ಕೆಲ ದಿನಗಳಲ್ಲೇ ವಿದೇಶಿ ಪತ್ನಿ ಮಗುವನ್ನು ಬಿಟ್ಟು ತನ್ನ ತಾಯ್ನಾಡಿಗೆ ಹಿಂತಿರುಗಿ ಇನ್ನೊಂದು ವಿವಾಹವಾಗುತ್ತಾಳೆ.
ಮಗಳು ಬೆಳೆಯುತ್ತಿದ್ದಂತೆ ತನ್ನ ತಾಯಿಯ ಬಗ್ಗೆ ಕುತೂಹಲ ಹುಟ್ಟುತ್ತದೆ. ಇದು ನಿಜ ಜೀವನದ ರೀತಿ ಸಿನಿಮಾದಲ್ಲೂ ಸರ್ವೇಸಾಮಾನ್ಯ. ಮಗಳ ಹಠಕ್ಕೆ ಬಿದ್ದ ತಂದೆ ತಾಯಿಯ ದೇಶ ಬಲ್ಗೇರಿಯಾಕ್ಕೆ ಮಗಳನ್ನು ಕರೆದುಕೊಂಡು ಹೋಗುತ್ತಾನೆ. ವಿದೇಶಕ್ಕೆ ಹೋದ ಮೇಲೆ ಕಥೆ ಮತ್ತೊಂದು ತಿರುವು ತೆಗೆದುಕೊಳ್ಳುತ್ತದೆ. ಅಲ್ಲಿನ ಮಾನವ ಕಳ್ಳಸಾಗಣೆಕಾರರು ಮಗಳನ್ನು ಅಪಹರಿಸುತ್ತಾರೆ. ಮಗಳನ್ನು ಹುಡುಕುವ ಭರದಲ್ಲಿ ದುಷ್ಟರ ಜಾಲವನ್ನು ಭೇದಿಸುತ್ತಾನೆ. ಆದರೂ ಮಗಳು ಸಿಗುವುದಿಲ್ಲ. ಸಾಕಷ್ಟುಹೋರಾಟ, ಹೊಡೆದಾಟದ ನಂತರ ಮಗಳನ್ನು ಹುಡುಕಿಕೊಳ್ಳುತ್ತಾನೆ. ಮೊದಲ ವಿದೇಶಿ ಹೆಂಡತಿ ಮತ್ತೊಬ್ಬನಿಗೆ ಪತ್ನಿಯಾಗಿರುವ ಕಾರಣ ಪರರಾಷ್ಟ್ರದಲ್ಲಿ ದೇಶಿ ಸುಂದರಿ ನಾಯಕನ ಹೃದಯವನ್ನು ಕೊಂಚ ಆವರಿಸಿರುತ್ತಾಳೆ. ಮಗಳ ಮೇಲಿನ ವ್ಯಾಮೋಹದ ಕಾರಣ ಮತ್ತೆ ವಿವಾಹದ ಬಂಧನಕ್ಕೆ ಒಳಗಾಗದೇ ತಾಯ್ನಾಡನ್ನು ಬಿಟ್ಟು ಹೊರದೇಶದಲ್ಲಿಯೇ ಉಳಿಯಲು ನಿರ್ಧರಿಸುತ್ತಾನೆ.
ಚಿತ್ರದಲ್ಲಿ ಅದ್ಧೂರಿತನವಿದ್ದರೂ ಕತೆ, ಚಿತ್ರಕತೆ ದುರ್ಬಲವಾಗಿದೆ. ಭಾರತದಲ್ಲೇ ಹಲವು ಸಮಸ್ಯೆಗಳಿದ್ದರೂ ಅಜಯ್‌ ದೇವಗನ್‌ ತಮ್ಮ ಮೊದಲ ಚಿತ್ರಕ್ಕೆ ವಿದೇಶದಲ್ಲಿನ ಮಾನವ ಕಳ್ಳಸಾಗಣೆ ವಿಚಾರವನ್ನು ಆಯ್ದುಕೊಂಡಿದ್ದಾರೆ. ಬಹುತೇಕ ಸಿನಿಮಾ ಚಿತ್ರೀಕರಣ ಹಿಮಾಲಯದ ತಪ್ಪಲು, ಬಲ್ಗೇರಿಯಾರಲ್ಲಿ ಚಿತ್ರಿತಗೊಂಡಿದೆ. ತಾರಾಗಣದಲ್ಲಿ ಅಜಯ… ದೇವಗನ್‌ ಹಾಗೂ ಮಗುವಿನ ಪಾತ್ರ ಮಾಡಿರುವ ಅಬಿಗೇಲ… ಎಮಾಸ್‌ ಬಿಟ್ಟರೆ ಉಳಿದ ಇಬ್ಬರು ನಾಯಕಿಯರು ಹೆಚ್ಚು ಆವರಿಸುವುದಿಲ್ಲ. ಮಿಥುನ್‌ ಅವರ ಸಂಗೀತ ಮನದಲ್ಲಿ ಉಳಿಯುವುದಿಲ್ಲ. ಕನ್ನಡಿಗ ಹಿರಿಯ ಸಾಹಿತಿ ಗಿರೀಶ್‌ ಕಾರ್ನಾಡ್‌ ಕೆಲ ದೃಶ್ಯಗಳಲ್ಲಿ ಬಂದುಹೋಗುತ್ತಾರೆ. ಸಿನಿಮಾದಲ್ಲಿ ಬಲ್ಗೇರಿಯಾದ ದೃಶ್ಯವೈಭವ, ಆ್ಯಕ್ಷನ್‌ ಸನ್ನಿವೇಶಗಳೇ ಹೈಲೈಟ್‌.