ನಾಲ್ಕು ವರ್ಷಗಳ ನಂತರ ಚೇತನ್‌, ‘ನೂರೊಂದು ನೆನಪು' ಚಿತ್ರದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಇಷ್ಟುವರ್ಷ ಏನು ಮಾಡಿದರು, ಈಗ ಒಪ್ಪಿಕೊಂಡಿರುವ ಸಿನಿಮಾದ ವಿಶೇಷತೆ ಏನು, ಬಂದ ಆಫರ್‌ಗಳಿಗೆ ಯಾಕೆ ಓಕೆ ಮಾಡುತ್ತಿಲ್ಲ... ಈ ಎಲ್ಲದರ ಬಗ್ಗೆಯೂ ಚೇತನ್‌ ಮಾತನಾಡಿದ್ದಾರೆ.
ಒಳ್ಳೆ ಕತೆ ಬಂದರೆ ಸಿನಿಮಾ; ಸಿನಿಮಾದಿಂದ ಬಂದ ಹೆಸರಿಂದ ಸಮಾಜ ಸೇವೆ - ನಟ ಚೇತನ್ ಹೇಳಿಕೆ
ಬಿಡುಗಡೆಯ ಹಂತದಲ್ಲಿರುವ ‘ನೂರೊಂದು ನೆನಪು' ಚಿತ್ರದ ಕುರಿತು ಹೇಳಿ?
ಇದೊಂದು ಪಿರಿಯಾಡಿಕ್ ಸಿನಿಮಾ. ಇಡೀ ಚಿತ್ರ ರೆಟ್ರೋ ಸ್ಟೈಲ್ನಲ್ಲಿ ಸಾಗುತ್ತದೆ. ನಾನಿಲ್ಲಿ ಕಾಲೇಜ್ ಹುಡುಗ. ಕಾಲೇಜು ಕಾರಿಡಾರ್, ಪ್ರೀತಿ- ಪ್ರೇಮ, ಸೆಂಟಿಮೆಂಟ್, ಫ್ಯಾಮಿಲಿ ಸ್ಟೋರಿ ಎಲ್ಲ ಇದೆ. ನಿರ್ದೇಶಕ ಕುಮರೇಶ್ ಅವರು ಆ ದಿನಗಳ ಕತೆಯನ್ನು ಈ ಕಾಲದಲ್ಲಿ ತುಂಬಾ ಚೆನ್ನಾಗಿ ಕಂಪೋಸ್ ಮಾಡಿದ್ದಾರೆ.
ಅಂದರೆ?
ಸಾಮಾನ್ಯವಾಗಿ 70, 80ರ ದಶಕದ ಕತೆಗಳು ಅಂದರೆ ಬೆಂಗಳೂರಿನ ಆ ದಿನಗಳ ಕತ್ತಲ ಜಗತ್ತಿನ ಸಿನಿಮಾ ಅಂತಾರೆ. ಆದರೆ ‘ನೂರೊಂದು ನೆನಪು' ಪಿರಿಯಾಡಿಕ್ ಸಿನಿಮಾ ಆಗಿದ್ದರೂ ನೆತ್ತರಿನ ನೆರಳು ಇಲ್ಲ. ಮಾಫಿಯಾ, ರೌಡಿಸಂ ಕಾಣಲ್ಲ. ಆ ದಿನಗಳ ಕಾಲೇಜು ಲೈಫ್ಸ್ಟೈಲ್, ಪ್ರೀತಿ- ಪ್ರೇಮ, ಕುಟುಂಬಗಳ ಕತೆ ಹೇಗಿತ್ತು ಎಂಬುದನ್ನು ಕಟ್ಟಿರುವ ಸಿನಿಮಾ ಇದು.
ನಿಮ್ಮ ಪ್ರಕಾರ ಪಿರಿಯಾಡಿಕ್ ಸಿನಿಮಾಗಳಿಗೆ ಏನೆಲ್ಲ ತಯಾರಿ ಬೇಕು?
ಮೇಕಿಂಗ್ ದೊಡ್ಡ ಸವಾಲು. ಛಾಯಾಗ್ರಾಹಕ ಒಂದು ಕ್ಷಣ ಯಾಮಾರಿದರೂ ರೆಟ್ರೋ ನೆರಳು ಮರೆಯಾಗಿ ಮಾಡ್ರನ್ ಸಿನಿಮಾ ಆಗುತ್ತದೆ. ಹೀಗಾಗಿ ಪ್ರತಿ ದೃಶ್ಯವನ್ನು ಜಾಗೃತೆಯಿಂದ ಚಿತ್ರೀಕರಣ ಮಾಡಬೇಕು. ಜತೆಗೆ ಕಲಾವಿದರ ಲುಕ್, ಅವರಾಡುವ ಮಾತು, ಕತೆಯ ಹಿನ್ನೆಲೆ, ಪ್ರಾಪರ್ಟಿ, ಮನೆಗಳು ಹೀಗೆ ಪ್ರತಿಯೊಂದು ಆಗಿನದ್ದೇ ಆಗಿರಬೇಕು. ಇಲ್ಲದಿದ್ದರೆ ಅನ್ಲಾಜಿಕ್ ಆಗುತ್ತದೆ.
ಅಂದಹಾಗೆ ಇದು ರೀಮೇಕ್?
ಮರಾಠಿಯ ‘ದುನಿಯಾ ದಾರಿ' ಕಾದಂಬರಿ ಆಧರಿತ ಸಿನಿಮಾ. ಇದೇ ಹೆಸರಿನಲ್ಲಿ ಅಲ್ಲಿ ಸಿನಿಮಾ ಕೂಡ ಆಗಿದೆ. ನಾವು ಕನ್ನಡದಲ್ಲಿ ಮಾಡಿದ್ದೇವೆ. ‘ಆ ದಿನಗಳು' ನಂತರ ಮತ್ತೊಂದು ಪಿರಿಯಾಡಿಕ್ ಸಿನಿಮಾದಲ್ಲಿ ನಟಿಸಿದ್ದೇನೆ.
ರೀಮೇಕ್ ಸಿನಿಮಾದ ಅಗತ್ಯ ಏನಿತ್ತು?
ನನಗೆ ಒಳ್ಳೆಯ ಸಿನಿಮಾ ಮಾತ್ರ ಗೊತ್ತು. ಅದು ಯಾವ ಭಾಷೆಯವರಾದರೂ ಸರಿ. ಹೊಸತನಕ್ಕಾಗಿ ಕಾಯುತ್ತಿದ್ದವನಿಗೆ ಸಿಕ್ಕಿರುವ ಒಳ್ಳೆಯ ಕತೆ ಇದು. ಅದಕ್ಕೆ ಒಪ್ಪಿಕೊಂಡೆ. ಇನ್ನು ಈ ಮರಾಠಿ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿಸಲು ನಾನೇ ರೈಟ್ಸ್ ತಂದಿರುವೆ. ಸಾಹಿತಿ ವೀಣಾ ಶಾಂತೇಶ್ವರ ಅವರು ಸಿನಿಮಾ ಹೆಸರಲ್ಲೇ ಅನುವಾದ ಮಾಡಲಿದ್ದಾರೆ.
ಸರಿ, ನೀವು ಸಿನಿಮಾಗಳಿಗೆ ಯಾಕೆ ಅಪರೂಪ?
ನಾನೇನೂ ಹೀರೋ ಆಗಬೇಕೆಂದೇ ಕರ್ನಾಟಕಕ್ಕೆ ಬಂದವನಲ್ಲ. 12 ವರ್ಷಗಳ ಹಿಂದೆ ಸಾಮಾಜಿಕ ಕಳಕಳಿಯ ಕನಸು ಹೊತ್ತು ಬಂದೆ. ನಾನೇನಾದರೂ ಹೇಳಿದರೆ ಜನ ಕೇಳಬೇಕು. ಅದಕ್ಕೊಂದು ಹೆಸರು ಬೇಕು. ಹೆಸರು ಗಳಿಸುವುದಕ್ಕೇ ಸಿನಿಮಾ ಬಂದೆ. ಈಗ ಸಿಕ್ಕಿರುವ ಹೆಸರಿನಿಂದ ಜನಸಾಮಾನ್ಯರ ಚಳವಳಿಗಳ ಜತೆಯಾಗುತ್ತಿರುವೆ. ಚಾಲ್ತಿಯಲ್ಲಿರಬೇಕು. ಸ್ಟಾರ್ ಪಟ್ಟದಲ್ಲಿ ಕೂರಬೇಕು. ಸಿನಿಮಾಗಳ ಸಂಖ್ಯೆ ಹೆಚ್ಚಾಗಬೇಕು ಅಂತ ಸಿನಿಮಾ ಮಾಡೋ ಅಗತ್ಯ ನನಗಿಲ್ಲ. ಸಿನಿಮಾ ಹೊರತಾಗಿ ಕನಸು, ಗುರಿಗಳಿಗಾಗಿ ಸಿನಿಮಾ ಪರದೆಯನ್ನು ವೇದಿಕೆಯಾಗಿಸಿಕೊಂಡಿರುವೆ ಅಷ್ಟೇ. ಅಲ್ಲದೆ ದುಡ್ಡು ಮಾಡುವುದಕ್ಕಾಗಿ ಚಿತ್ರರಂಗಕ್ಕೆ ಬಂದಿಲ್ಲ.
ಹಾಗಾದರೆ ಅವಕಾಶಗಳಿವೆ. ಒಪ್ಪಿಕೊಳ್ಳುತ್ತಿಲ್ಲ ಅಷ್ಟೇ?
"ಮೈನಾ" ನಂತರ ತುಂಬಾ ಕತೆಗಳನ್ನು ಕೇಳಿದೆ. ಬಹಳಷ್ಟು ಒಪ್ಪಿಗೆಯಾಗಲಿಲ್ಲ. ನಾಲ್ಕು ವರ್ಷಗಳ ನಂತರವೂ ಒಂದು ಸಿನಿಮಾ ಬರುತ್ತಿದೆ ಅಂದಾಗ ಆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರಲ್ಲ ಅದು ನಿಜವಾಗಿಯೂ ಕಲಾವಿದನ ಗೆಲುವು. ತಿಂಗಳಿಗೊಂದು ಸಿನಿಮಾ ಮಾಡಿ ಸೋಲುವುದಕ್ಕಿಂತ ವರ್ಷಗಳಾದರೂ ಒಂದು ಸಿನಿಮಾ ಮಾಡಿ ಗೆದ್ದು ಒಳ್ಳೆಯ ಹೆಸರು ತೆಗೆದುಕೊಳ್ಳುವುದು ಮುಖ್ಯ ತಾನೆ? 'ನೂರೊಂದು ನೆನಪು' ನಂಗೆ ಹಾಗೆ ಹೊಸ ಸಿನಿಮಾ, ಹೊಸ ಕತೆ ಅನಿಸುತ್ತಿದೆ.
- ಆರ್ ಕೇಶವಮೂರ್ತಿ, ಕನ್ನಡಪ್ರಭ
