ಬೆಂಗಳೂರು: ಜಯಂತ್ ಕಾಯ್ಕಿಣಿ ಬರಹಗಳನ್ನು ಓದುವುದೇ ಸಂಭ್ರಮ. ಅವರ ಹಾಡುಗಳನ್ನು ಕೇಳುವುದು ಹಬ್ಬ. ತನ್ನ ಹಾಡು ಬರಹಗಳಿಂದ ಇಡೀ ಕರ್ನಾಟಕದ ಮನಸ್ಸು ಗೆದ್ದಿರುವ ಜಯಂತ್ ಕಾಯ್ಕಿಣಿ  ಬರೆದಿರುವ ನಾಟಕ ಸಂಗ್ರಹ ‘ರೂಪಾಂತರಗಳು’ ಹಾಗೂ ವಿವಿಧ ಬರಹಗಳ ಸಂಗ್ರಹ ‘ಗುಲ್ ಮೊಹರ್’ ಕೃತಿಗಳು ಏ.22 ರಂದು ಲೋಕಾರ್ಪಣೆಯಾಗುತ್ತಿವೆ. ಈ ಮೂರೂ ನಾಟಕಗಳ ಹುಟ್ಟು ಹಾಗೂ ಅವುಗಳು ಜನರನ್ನು ಮುಟ್ಟಿರುವ ಬಗ್ಗೆ ಜಯಂತ್ ಕಾಯ್ಕಿಣಿ ಮಾತನಾಡಿದ್ದಾರೆ.

ಬಿಡುಗಡೆಗೊಳ್ಳುತ್ತಿರುವ ‘ರೂಪಾಂತರ ನಾಟಕಗಳು’ ಕೃತಿಯ ವಿಶೇಷವೇನು?
ಬರ್ನಾರ್ಡ್ ಷಾ ಅವರ ‘ಪಿಗ್ಮೇಲಿಯನ್’ ನ ಕನ್ನಡಾನುವಾದ ‘ಸೇವಂತಿ ಪ್ರಸಂಗ’, ಜೋಸೆಫ್ ಸ್ಟೀನ್ ಅವರ ‘ಫಿಡ್ಲರ್ ಆನ್ ದ ರೂಫ್’ ನಾಟಕದ ಕನ್ನಡಾನುವಾದ ‘ಜತೆಗಿರುವನು ಚಂದಿರ’ ಹಾಗೂ ಜಾವೇದ್ ಸಿದ್ಧಿಕಿ ಅವರ ‘ತುಮ್ಹಾರಿ ಅಮೃತಾ’ ಹಿಂದಿ ನಾಟಕದ ರೂಪಾಂತರ ‘ಇತಿ ನಿನ್ನ ಅಮೃತಾ’. ಈ ಮೂರೂ ನಾಟಕಗಳಿವೆ. ಬೇರೆ ಬೇರೆ ಕಾಲಘಟ್ಟದಲ್ಲಿ ರಚಿತಗೊಂಡವು. ಇವುಗಳು ಈಗಾಗಲೇ ಬೇರೆ ಬೇರೆಯಾಗಿ ಮುದ್ರಣಗೊಂಡಿದ್ದವು. ಆದರೆ ಸಮಗ್ರವಾಗಿಸಿದ್ದು ಇದೇ ಮೊದಲು.

ಈ ಮೂರು ನಾಟಕಗಳ ಹುಟ್ಟು ಹೇಗಾಯ್ತು? ಯಾವಾಗ ಆಯ್ತು?
ಇದರಲ್ಲಿನ ಎರಡು ನಾಟಕಗಳನ್ನು ‘ನೀನಾಸಂ’ನ ತಿರುಗಾಟಕ್ಕಾಗಿ ರಚಿಸಿದ್ದು. 1992 ರಲ್ಲಿ ಈ ‘ಸೇವಂತಿ ಪ್ರಸಂಗ’ವು ‘ಹೂ ಹುಡುಗಿ’ ಆಗಿತ್ತು. ಇದನ್ನು ಬಾಂಬೆಯ ಹಿರಿಯ ರಂಗಕರ್ಮಿ ಅತುಲ್ ತಿವಾರಿ ನಿರ್ದೇಶಿಸಿದ್ದರು. ಅಲ್ಲದೇ 1998 ರಲ್ಲಿ ನೀನಾಸಂನ ತಿರುಗಾಟಕ್ಕಾಗಿಯೇ ‘ಜತೆಗಿರುವನು ಚಂದಿರ’ ರಚಿಸಿದೆ. ಇದನ್ನು ಪೂನಾದ ಹಿರಿಯ ರಂಗಕರ್ಮಿ ಭಾಸ್ಕರ್ ಚಂದಾ ವರ್ಕರ್ ನಿರ್ದೇಶಿಸಿದ್ದರು. ಎರಡೂ ನಾಟಕಗಳೂ ತಿರುಗಾಟದಲ್ಲಿ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಇಪ್ಪತ್ತು ವರ್ಷಗಳಿಂದ ಹಿಂದೆ ಆಗಿದ್ದು.

ಈ ಎರಡೂ ನಾಟಕಗಳ ರಚನೆಗೆ ಪ್ರೇರಣೆ?
ನೀನಾಸಂ ತಿರುಗಾಟಕ್ಕಾಗಿಯೇ ಕೆವಿ ಸುಬ್ಬಣ್ಣ  ಅವರೇ ಹೇಳಿ ನನ್ನಿಂದ ರೂಪಾಂತರ ಮಾಡಿಸಿದ್ದು. ಇವೆರಡೂ ಸಂಗೀತ ನಾಟಕಗಳಾಗಿವೆ ಎನ್ನುವುದೇ ವಿಶೇಷ. ಪ್ರತಿ ನಾಟಕದಲ್ಲೂ ಇಪ್ಪತ್ತು ಹಾಡುಗಳಿವೆ. ನಾನು ಕವಿಯೂ ಆದ್ದರಿಂದ ಹಾಡು ಬರೀತೀನಿ ಅನ್ನೋ ಧೈರ್ಯದ ಮೇಲೆ ಸುಬ್ಬಣ್ಣನವರು ನನ್ನ ಹತ್ರ ಬರೆಸಿಕೊಂಡಿದ್ದು.

ತಿರುಗಾಟದಲ್ಲಿ ಅಲ್ಲದೇ ಮತ್ಯಾರು ಪ್ರಯೋಗ ಮಾಡಿದ್ದರು?
‘ಸೇವಂತಿ ಪ್ರಸಂಗ’ವನ್ನು ವೈಶಾಲಿ ಕಾಸರವಳ್ಳಿ  ಅವರೂ ಚೆನ್ನಾಗಿ ನಿರ್ದೇಶನ ಮಾಡಿದ್ದರು. ಅಲ್ಲದೇ ಕಳೆದ ಇಪ್ಪತ್ತು ವರ್ಷಗಳಲ್ಲಿ ಮೂರೂ ನಾಟಕಗಳನ್ನು ನಾನಾ ತಂಡಗಳು, ನಾನಾ  ರೀತಿಯಲ್ಲಿ ಆಡುತ್ತಾ ಜೀವಂತವಾಗಿ ಇಟ್ಟಿದ್ದಾರೆ. ಯಾವುದೇ ಕಾಲೇಜಿನ ನಾಟಕ ಸ್ಪರ್ಧೆಗಳಲ್ಲಿಯೂ ‘ಸೇವಂತಿ ಪ್ರಸಂಗ’ ಹಾಗೂ ‘ಜತೆಗಿರುವನು ಚಂದಿರ’ ಇರುತ್ತೆ. ಇವೆರೆಡೂ ಹೆಚ್ಚು ಪಾಪ್ಯುಲರ್ ಪ್ಲೇ ಆಗಿವೆ.  ಹೊಸ ಹೊಸ ತಂಡಗಳು ಆಡುತ್ತಿದ್ದಾರೆ. ಇಷ್ಟು ವರ್ಷಗಳಾದರೂ ಇವು ಜೀವಂತವಾಗಿರುವುದು ಖುಷಿ ತಂದಿದೆ.

ಮೊದಲ ಪ್ರದರ್ಶನಗಳಲ್ಲದೇ ನಿಮಗೆ ಹೆಚ್ಚು ಇಷ್ಟವಾದ ಪ್ರದರ್ಶನ ಯಾವುದು?
ನನ್ನನ್ನು ತುಂಬ ವಿನೀತಗೊಳಿಸಿದ್ದು ಅಂದ್ರೆ ರಂಗಾಯಣದ ನಟ, ನಿರ್ದೇಶಕರಾದ  ಹುಲಿಗಪ್ಪ ಕಟ್ಟಿಮನಿ ಅವರ ‘ಜತೆಗಿರುವನ ಚಂದಿರ’ ಪ್ರದರ್ಶನ. ಖೈದಿಗಳ ವಿಕಾಸ  ಕಾರ್ಯಕ್ರಮಕ್ಕಾಗಿ ಸೆಂಟ್ರಲ್ ಜೈಲ್‌ನಲ್ಲಿರುವ ಖೈದಿಗಳನ್ನು ಇಟ್ಟುಕೊಂಡು ಪ್ರತಿವರ್ಷ ನಾಟಕಗಳನ್ನು ಆಡಿಸ್ತಾರೆ. ಅವರಿಗೊಂದು ರಿಫಾರ್ಮಿಟಿವ್ ಎಕ್ಸರ್‌ಸೈಜ್ ಥರ.  ಸಮಾಜದ ಮುಂದೆ ಖೈದಿಗಳು ಬಂದು ಕಲಾಕೃತಿಯಲ್ಲಿ ಅರಳಿ ನಿಲ್ಲೋದು ಇದ್ಯಲ್ಲ ಅದೊಂದು ಆಧ್ಯಾತ್ಮಿಕ ಕ್ಷಣ ಅನ್ನಿಸಿತು. ನಾಟಕದ ಕೊನೆಯಲ್ಲಿ ಎಲ್ಲರೂ ಚಪ್ಪಾಳೆಯನ್ನು  ಸ್ವೀಕರಿಸೋದು. ಕಣ್ಣಲ್ಲಿ ಕಣ್ಣಿಟ್ಟು ನಿಲ್ಲೋದು. ಅದು ನನಗೆ ವಿಶೇಷ ಎನಿಸಿತು. ಎರಡ್ಮೂರು ಸಲ ನೋಡಿದ್ದೀನಿ ಪ್ರತಿಸಲವೂ ನನಗೆ ಮನಸ್ಸು ಕರಗ್ತಾ ಇತ್ತು. ನಾನಾ ಕಡೆಗಳಲ್ಲಿ ಆಡಿಸುತ್ತಾರೆ. ದೊಡ್ಡ ಹಿಟ್ ಆಗಿದೆ.
ಇಪ್ಪತ್ತು ವರ್ಷಗಳ ಹಿಂದೆ ಈ ನಾಟಕಗಳಿಗೆ  ಬರೆದ ಹಾಡುಗಳ ಸಾಲುಗಳು ಮತ್ತೆ  ಪುನರಾವರ್ತಿತವಾಗಿವೆಯಾ?
- ನನಗೆ ಗೊತ್ತಿಲ್ಲದೇ ಬಂದಿರಬಹುದು. 
ಎರಡೂ ಪುಸ್ತಕಗಳಲ್ಲಿ ರಾವ್‌ಬೈಲ್ ಅವರ ಕಲಾಕೃತಿಗಳನ್ನು ಬಳಸಿಕೊಂಡ ಬಗೆ?
ಮುಖಪುಟದಲ್ಲಿ ಬಳಸಿದ್ದಷ್ಟೇ ಅಲ್ಲ ಈ ಎರಡೂ ಪುಸ್ತಕಗಳ ಕಲಾವಿನ್ಯಾಸ ರಾವ್‌ ಬೈಲ್ ಅವರಿಗೆ ‘ಮುಡಿಪು’. ರಾವ್ ಬೈಲ್ ಕಲೆಯನ್ನು ಸೆಲೆಬ್ರೇಟ್ ಮಾಡುವುದಾಗಿದೆ. ಅದ್ಭುತವಾದ ಕಲಾವಿದರು, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರವರು ಅವರು ನಮ್ಮೊಳಗೇ ಇದ್ದರು ಎನ್ನುವುದೇ ಹೆಮ್ಮೆ. ಕವರ್ ಪೇಜ್ ಅಲ್ಲದೇ ಅವರ ಲೈನ್ ಡ್ರಾಯಿಂಗ್‌ಗಳನ್ನು ಒಳಗಿನ ಪುಟಗಳಿಗೂ ಬಳಸಿಕೊಂಡಿದ್ದೇನೆ. ನನ್ನ ಹಿಂದಿನ ಪುಸ್ತಕಗಳಾದ ಒಂದು ಜಿಲೇಬಿ, ಶ್ರಾವಣ ಮಧ್ಯಾಹ್ನ, ನೀಲಿ ಮಳೆಗಳಲ್ಲಿ ಅವರ ಮೀನುಗಳ ಚಿತ್ರಗಳಿವೆ. ರಾವ್‌ಬೈಲ್ ಅವರ ನಂಟು ಬಾಂಬೆಯಲ್ಲಿದ್ದಾಗಿನ ದಿನಗಳಿಂದ ಇದೆ. ಅವರ ಬಗ್ಗೆ ಲೇಖನ ‘ಶಬ್ದ ತೀರ’ ಪುಸ್ತಕದಲ್ಲಿದೆ.

'ಇತಿ ನಿನ್ನ ಅಮೃತಾ’ದ ರಚನೆಗೆ ಕಾರಣ?
ರಂಗಶಂಕರದ ಸ್ಥಾಪನೆಗೆ ಮುಂಚೆ ರಂಗಶಂಕರ ತಂಡಕ್ಕಾಗಿಯೇ ಸಹಾಯಾರ್ಥ ಪ್ರದರ್ಶನಕ್ಕಾಗಿ ಅರುಂಧತಿ ನಾಗ್ ಅವರು ಹೇಳಿ ಬರೆಸಿದ್ದು. 2002 ರಲ್ಲಿ  ರಚಿಸಿದ್ದು. ಕನ್ನಡದ ಹಿರಿಯ ರಂಗಕರ್ಮಿ ಎಂ ಎಸ್ ಸತ್ಯು ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತ್ತು. ಆಗಿನ ಮೊದಲ ಪ್ರಯೋಗದಲ್ಲಿ ಅರುಂಧತಿ ಹಾಗೂ ಶ್ರೀನಿವಾಸ್ ಪ್ರಭು ಅಭಿನಯಿಸಿದ್ದರು.

 ‘ಇತಿ ನಿನ್ನ ಅಮೃತಾ’ದ ವಿಶೇಷತೆ ಏನು?
ಇಂಗ್ಲಿಷ್‌ನಲ್ಲಿ ಗುರ‌್ನಿ ಬರೆದಿದ್ದರು. ಜಾವೇದ್ ಸಿದ್ಧಿಕಿ ‘ತುಮ್ಹಾರಿ ಅಮೃತಾ’ ಹಿಂದಿ ನಾಟಕವಾಗಿಸಿದರು.  ಅದನ್ನು ಕನ್ನಡಕ್ಕೆ ತರಲಾಯಿತು. ಇದೊಂದು ಪತ್ರ ರೂಪಕ. ಇಡೀ ನಾಟಕ ಪತ್ರಗಳನ್ನು ಓದುವುದು. ಇದರಲ್ಲಿ ಅಮೃತಾ ಮತ್ತು ಜುಲ್ಫಿ ಎಂಬ ಎರಡು ಪಾತ್ರಗಳು ಪತ್ರಗಳನ್ನು ಓದುತ್ತಾರೆ. ಇದು ನಿಮ್ಮ ಮನಸನ್ನೇ ರಂಗಭೂಮಿಯನ್ನಾಗಿಸಿ ಬೆಳೆಯುವ ನಾಟಕ. ಆರಂಭದಲ್ಲಿ ಪತ್ರ ಓದುವಿಕೆಯಷ್ಟೇ ಎನಿಸಿದರೂ ಆಮೇಲೆ ಸ್ಲೋಲಿ ಆ ಪಾತ್ರಗಳು
ನಿಮ್ಮಲ್ಲಿ ಬೆಳೆದುಕೊಂಡು ಆ ಪತ್ರಗಳಲ್ಲಿ ಬರುವ ಲೊಕೇಷನ್‌ಗಳು ಕಣ್ಣಲ್ಲಿ ಕಟ್ಟುತ್ತಾ ಹೋಗುತ್ತದೆ. ಯಾವುದೇ ರಂಗಭೂಮಿಯ ಕಲಾವಿದರೇ ಆಗಬೇಕಿಲ್ಲ. ಯಾರು ಓದಿದರೂ ಒಂದು ಗಂಟೆಯಲ್ಲಿ ನಿಮ್ಮ ಎಲ್ಲರನ್ನೂ ಆವರಿಸಿ ಮನಸ್ಸನ್ನು ಕಲಕದಿದ್ದರೆ ಕೇಳಿ. ನಾನು ಚಾಲೆಂಜ್ ಮಾಡ್ತೇನೆ. ಆ ಥರ  ಮನಸ್ಸನ್ನು ಆರ್ದೃಗೊಳಿಸುತ್ತೆ. ಮೂಲ ಬರವಣಿಗೆಯೇ ಹಾಗಿದೆ.

 ‘ಗುಲ್ ಮೊಹರ್’ ಪುಸ್ತಕದಲ್ಲಿ ಏನಿದೆ?
ಕಳೆದ ಹತ್ತು ವರ್ಷಗಳಲ್ಲಿ ನನ್ನನ್ನು ಕಾಡಿದ ಸಂಗತಿಗಳು, ಓದಿದ ಸಂಗತಿಗಳು ಎಲ್ಲಾ ಇವೆ. ನಾನು ಬರೆದಂತಹ ಬೇರೆ ಬೇರೆ ತರಹದ ಪ್ರಬಂಧಗಳು, ಪತ್ರಿಕೆಗೆ ಬರೆದ  ಅಂಕಣ ಬರಹಗಳು, ಪ್ರತಿಫಲನಗಳು, ಪುಸ್ತಕಕ್ಕೆ ಸ್ಪಂದನಗಳು, ವ್ಯಕ್ತಿಚಿತ್ರಣಗಳು, ನುಡಿಚಿತ್ರಗಳು ಹೀಗೆ ನಾನಾ ರೀತಿಯ ಬರಹಗಳಿವೆ. ಬೊಗಸೆಯಲ್ಲಿ  ಮಳೆ ಪುಸ್ತಕದಲ್ಲಿ ಬಂದಂತಹ ಬರಹಗಳು ಈ ಗುಲ್ ಮೊಹರ್‌ನಲ್ಲಿವೆ.