ಈ ಕಾರಣಕ್ಕೆ ಎರಡು ದಿನಗಳ ಹಿಂದೆಯಷ್ಟೆ ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮಸಿಟಿಯಲ್ಲಿ ಸ್ಕ್ರೀನ್ ಟೆಸ್ಟ್ ಶೂಟ್ ಕೂಡ ಮಾಡಿದ್ದಾರೆ.ಹಾಗಂತ ಮೇಘನಾ ರಾಜ್ ಅವರ ಹೆಸರನ್ನೇ ಚಿತ್ರತಂಡ ಅಂತಿಮ ಮಾಡಿರುವ ಮಾಹಿತಿ ಇಲ್ಲ.

ನಟ ದರ್ಶನ್ ಅವರ ‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ಯಾಕೋ ಭಾನುಮತಿ ಪಾತ್ರಕ್ಕೆ ಸೂಕ್ತ ಮುಹೂರ್ತ ಕೂಡಿಬರಲಿಲ್ಲ ಅನಿಸುತ್ತದೆ.

ದುರ್ಯೋಧನ ಪಾತ್ರಧಾರಿ ದರ್ಶನ್ ಅವರಿಗೆ ನಾಯಕಿಯಾಗಿ ಮೊದಲು ರೆಜಿನಾ ನಟಿಸುತ್ತಾರೆನ್ನಲಾಗಿತ್ತು. ಕೊನೆಗೂ ರೆಜಿನಾ ಹೆಸರು ಸೈಲೆಂಟ್ ಆಗಿ ಮೂಲ ಸೇರಿದ ಮೇಲೆ ಮತ್ತೆ ಚಾಲ್ತಿಗೆ ಬಂದಿದ್ದು ಕೇರಳ ಕುಟ್ಟಿ ರಮ್ಯಾ ನಂಬೀಸನ್ ಹೆಸರು. ಈಕೆಯೇ ಭಾನುಮತಿಯಾಗಿ ನಟಿಸುತ್ತಾರೆಂಬ ಸುದ್ದಿ ಬಹುತೇಕ ಖಚಿತವಾಗಿತ್ತು. ಹಾಗೆ ನೋಡಿದರೆ ರಮ್ಯಾ ನಂಬೀಸನ್ ಈಗಾ ಗಲೇ ಚಿತ್ರೀಕರಣದ ಸೆಟ್‌ಗೆ ಬಂದಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಈಗ ಇದೇ ಭಾನುಮತಿ ಪಾತ್ರದ ಜಾಗಕ್ಕೆ ಕನ್ನಡತಿ ಮೇಘನಾ ರಾಜ್ ಹೆಸರು ಕೇಳಿ ಬರುತ್ತಿದೆ. ಬಲ್ಲ ಮಾಹಿತಿಗಳ ಪ್ರಕಾರ ಭಾನುಮತಿಯಾಗಿ ಮೇಘನಾ ರಾಜ್ ಅವರೇ ನಟಿಸುತ್ತಾರೆಂತೆ.

ಈ ಕಾರಣಕ್ಕೆ ಎರಡು ದಿನಗಳ ಹಿಂದೆಯಷ್ಟೆ ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮಸಿಟಿಯಲ್ಲಿ ಸ್ಕ್ರೀನ್ ಟೆಸ್ಟ್ ಶೂಟ್ ಕೂಡ ಮಾಡಿದ್ದಾರೆ.ಹಾಗಂತ ಮೇಘನಾ ರಾಜ್ ಅವರ ಹೆಸರನ್ನೇ ಚಿತ್ರತಂಡ ಅಂತಿಮ ಮಾಡಿರುವ ಮಾಹಿತಿ ಇಲ್ಲ. ಯಾಕೆಂದರೆ ಸದ್ಯಕ್ಕೆ ಟೆಸ್ಟ್ ಶೂಟ್ ಮಾತ್ರ ಮಾಡಲಾಗಿದೆ. ಇನ್ನೂ ಚಿತ್ರೀಕರಣಕ್ಕೆ ಹಾಜರಾಗಿಲ್ಲ. ಹೀಗಾಗಿ ಭಾನುಮತಿಯಾಗಿ

ಮೇಘನಾ ರಾಜ್ ಅವರನ್ನೇ ಅಂತಿಮಗೊಳಿಸುತ್ತಾರೆಯೇ ಎನ್ನುವ ಪ್ರಶ್ನೆಗೆ ಶೂಟಿಂಗ್‌ಗೆ ಬಂದು ಪಾಲ್ಗೊಳ್ಳುವವರೆಗೂ ಏನೂ ಹೇಳುವಂತಿಲ್ಲ. ಯಾಕೆಂದರೆ ಇದು ‘ಮುನಿರತ್ನ ಕುರುಕ್ಷೇತ್ರ’. ಯಾರ ಪಾತ್ರ ಯಾವಾಗ ಬೇಕಾದರೂ ಬದಲಾಗಬಹುದು. ಈಗಾಗಲೇ ಸಾಕಷ್ಟು ಬಾರಿ ಇದೇ ರೀತಿ ಪಾತ್ರಧಾರಿಗಳು ಬದಲಾಗಿ ಅವರ ಜಾಗಕ್ಕೆ ಬೇರೆ ಬೇರೆ ಕಲಾವಿದರು ಬಂದು ಚಿತ್ರೀಕರಣ ಮುಗಿಸಿ ಹೋಗಿದ್ದಾರೆ. ಹಾಗೆ ನೋಡಿದರೆ ಮುನಿರತ್ನ ಕುರುಕ್ಷೇತ್ರ ಚಿತ್ರಕ್ಕೆ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ.

ಆದರೂ ದುರ್ಯೋಧನಿಗೆ ನಾಯಕಿ ಸಿಕ್ಕಿಲ್ಲ. ಸಿಕ್ಕವರು ಇನ್ನೂ ಅಂತಿಮವಾಗಿಲ್ಲ. ಇದೇ ರೀತಿ ಮುಂದುವರಿದರೆ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಶೂಟಿಂಗ್ ಯಾವಾಗ ಮುಗಿಯುತ್ತೆ, ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.ಸದ್ಯಕ್ಕೆ ಕುರುಕ್ಷೇತ್ರ ಸೆಟ್‌ನಲ್ಲಿ ಅಭಿಮನ್ಯು ಪಾತ್ರಧಾರಿ ನಿಖಿಲ್ ಅವರ ಫೈಟಿಂಗ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಇನ್ನೂ ದರ್ಶನ್ ನಟನೆಯ ಕೆಲವು ಭಾಗಗಳ ಚಿತ್ರೀಕರಣ ಬಾಕಿ ಇದೆ. ಈಗಾಗಲೇ ಶೂಟಿಂಗ್ ಮುಗಿಸಿರುವವರ ಪಾತ್ರಗಳಿಗೆ ಡಬ್ಬಿಂಗ್ ಶುರುವಾಗಿದೆ. ಇನ್ನೂ ಭಾನುಮತಿಯಾಗಲು ಬಂದ ಮಲಯಾಳಿ ನಟಿ ರಮ್ಯಾ ನಂಬೀಸನ್ ಅವರನ್ನು ಯಾಕೆ ಕೈ ಬಿಡಲಾಯಿತು? ಎನ್ನುವ ಕುತೂಹಲಕ್ಕೆ ಎಂದಿನಂತೆ ಅದೇ ಉತ್ತರ. ‘ಅವರು ತುಂಬಾ ಬ್ಯುಸಿಯಾಗಿದ್ದಾರೆ. ಕುರುಕ್ಷೇತ್ರಕ್ಕೆ ಡೇಟ್ಸ್ ಕೊಟ್ಟ ಮೇಲೂ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಹೀಗಾಗಿ ಡೇಟ್ಸ್ ಸಮಸ್ಯೆ ಉಂಟಾಗಿ ಅವರನ್ನು ಈ ಚಿತ್ರದಿಂದ ಕೈ ಬಿಡಲಾಗಿದೆ’ ಎಂಬುದು ರಾಮೋಜಿ ಫಿಲ್ಮಸಿಟಿಯಿಂದ ಕೇಳಿಬರುತ್ತಿರುವ ಹೇಳಿಕೆಗಳು. ಸದ್ಯಕ್ಕೆ ಮೇಘನಾ ರಾಜ್ ಅವರು ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.