ಕಳೆದ ಕೆಲ ದಿನಗಳಿಂದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಮದುವೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ವಯ ಇವರಿಬ್ಬರೂ ಮುಂದಿನ ವರ್ಷ ಅಂದರೆ 2019ರಲ್ಲಿ ಮದುವೆಯಾಗಲಿದ್ದಾರೆಂಬ ವದಂತಿ ಹರಿದಾಡುತ್ತಿದೆ.

ಸದ್ಯ ಅರ್ಜುನ್ ಕಪೂರ್ ಜೊತೆಗಿನ ಮದುವೆ ವಿಚಾರವಾಗಿ ಖುದ್ದು ಮಲೈಕಾ ಅರೋರಾ ಪ್ರತಿಕ್ರಿಯಿಸಿದ್ದು, 'ನಾನ್ಯಾವತ್ತೂ ನನ್ನ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಉತ್ತರಿಸಲು ನನಗೆ ನಾಚಿಕೆ ಎಂದಲ್ಲ, ಬದಲಾಗಿ ನನ್ನ ವೈಯುಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ ಎಂಬುವುದು ನನ್ನ ಅಭಿಪ್ರಾಯ. ಹೀಗಾಗಿ ಈ ಕುರಿತಾಗಿ ಮಾತನಾಡುವುದು ಅಗತ್ಯವೆಂದು ನನಗನಿಸುವುದಿಲ್ಲ. ನಾನು ನನ್ನ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ. ಜೀವನ ಬಹಳ ಸುಂದರ ಹಾಗೂ ಅಮೂಲ್ಯವಾದದ್ದು' ಎಂದಿದ್ದಾರೆ.

ಮಲೈಕಾ ಹಾಗೂ ಅರ್ಜುನ್ ಕಪೂರ್ ನಡುವಿನ ಸಂಬಂಧ ಹಲವಾರು ಬಾರಿ ಸುದ್ದಿಯಾಗಿತ್ತು. ಆದರೆ ಯಾವತ್ತು ಮಲೈಕಾ ತೀರ್ಪುಗಾರಳಾಗಿರುವ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಶೋಗೆ ಅರ್ಜುನ್ ಕಪೂರ್ ಬಂದರೋ ಆವತ್ತು ಈ ವಿಚಾರ ಮತ್ತಷ್ಟು ಜೋರಾಯ್ತು. ಶೋನಲ್ಲಿ ಪರಸ್ಪರ ಕೈ ಹಿಡಿದು ವೇದಿಕೆ ಏರಿದ ಅರ್ಜುನ್ ಕಪೂರ್ ಹಾಗೂ ಮಲೈಕಾ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. ಇದಾದ ಕೆಲವೇ ದಿನಗಳಲ್ಲಿ ಅಬು ಜಾನಿ ಹಾಗೂ ಸಂದೀಪ್ ಕೋಸ್ಲಾ ಏರ್ಪಡಿಸಿದ್ದ ದೀಪಾವಳಿ ಪಾರ್ಟಿಯಲ್ಲೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಈ ಸುದ್ದಿಗೆ ಮತ್ತಷ್ಟು ಇಂಬು ನೀಡಿತ್ತು. 

ಮಲೈಕಾ ಹುಟ್ಟುಹಬ್ಬದ ಬಳಿಕ ಅವರ ಫಾರಿನ್ ಟ್ರಿಪ್ ಕೂಡಾ ಸುದ್ದಿಯಾಗಿತ್ತು. ಮಾಧ್ಯಮಗಳಲ್ಲಿ ಬಂದ ವರದಿಯನ್ವಯ ಅವರಿಬ್ಬರೂ ಒಂದು ಸೀಕ್ರೆಟ್ ಹಾಲಿಡೇಯಲ್ಲಿದ್ದರೆನ್ನಲಾಗಿದೆ.