ನಿರ್ದೇಶಕ ಪ್ರಶಾಂತ್ ಕೌಟುಂಬಿಕ ಮನರಂಜನೆ ಸಿನಿಮಾ ಮಾಡಬೇಕೆಂದು ಹೊರಟು, ಆ್ಯಕ್ಷನ್ ಟಚ್ ಕೊಡುವ ಸಾಹಸವೂ ಮಾಡಿರುವ ಕುರುಹು ಚಿತ್ರದ ವಿರಾಮದ ನಂತರ ಕಾಣುತ್ತದೆ. ಆದರೆ, ಅದು ಸಂಪೂರ್ಣವಾಗಿ ಫಲಿಸಿದೆಯೇ? ಎಂದರು ಉತ್ತರಿಸಲಾಗದು. ಆದರೆ, ಇಡೀ ಚಿತ್ರದ ನಾಯಕನ ಮೇಲೆ ನಿಂತಿರುತ್ತದೆ. ಉಳಿದ ಪಾತ್ರಗಳು ನಾಯಕನ ಪಯಣಕ್ಕೆ ಸಾಥ್ ಕೊಡುತ್ತವೆ. 

ಇಷ್ಟಕ್ಕೂ ಕತೆ ಕುರಿತು ಹೇಳುವುದಾದರೆ ಮನೆ ಪ್ರೀತಿ- ಪ್ರೇಮ ಎಂದುಕೊಂಡು ಮನೆ ಬಿಟ್ಟು ಬಂದ ನಾಯಕಿ. ಮತ್ತೆ ಮನೆಗೆ ಹೋಗುವ ತವಕದ ಜತೆಗೆ ತಾನು ಪ್ರೀತಿಸಿದ ಹುಡುಗನ ಜತೆ ಮದುವೆ ಆಗಲೇ ಬೇಕು. ಆದರೆ, ಹೆತ್ತವರಿಗೆ ಇಷ್ಟವಿಲ್ಲ, ಖಡಕ್ ಅಪ್ಪ ಬೇರೆ. ಮನೆಯವರನ್ನು ಒಪ್ಪಿಸಿ ಒಂದಾಗುವುದು ಹೇಗೆ ಎಂದುಕೊಳ್ಳುವಾಗಲೇ ಆಕಸ್ಮಿಕವಾಗಿ ಪರಿಚವಾಗುವ ನಾಯಕ. ಈ ಪರಿಚಯವೇ ಆತನನ್ನು ನಾಯಕಿ ಮನೆವರೆಗೂ ಕರೆದುಕೊಂಡು ಹೋಗುತ್ತದೆ. ಇದಕ್ಕೆ ಬಂಗಾರದ ಕೈ ಕಡಗವೊಂದು ಸಾಥ್ ನೀಡುತ್ತದೆ. ಹೀಗೆ ಮನೆಗೆ ಬಂದವನೇ ಅಳಿಯನಾದರೆ, ನಾಯಕಿ ಪಾಲಿಗೆ ಮಾತ್ರ ತನ್ನ ಪ್ರಿಯಕರನನ್ನು ಮನೆಗೆ ಸೇರಿಸಿಕೊಳ್ಳುವುದಕ್ಕೆ ಸಹಾಯ ಮಾಡುವ ಸ್ನೇಹಿತನಂತೆ ಕಾಣುತ್ತದೆ. ನಾಯಕ
ಎಲ್ಲರ ಪ್ರೀತಿಗೆ ನಾಗುತ್ತಾನೆ. ಜತೆಗೆ ನಾಯಕಿ ಕುಟುಂಬದ ಶತ್ರು ಸಂಹಾರ ಮಾಡುವ ಮೂಲಕ ಗಂಡು ದಿಕ್ಕಾಗಿ ನಿಲ್ಲುತ್ತಾನೆ. ಈಗ ನಾಯಕಿ ಯಾರನ್ನು ವರಿಸುತ್ತಾಳೆ ಎನ್ನುವ ಸಸ್ಪೆನ್ಸ್ ಮೇಲೆ ಇಡೀ ಸಿನಿಮಾ ಸಾಗುತ್ತದೆ. 

ಚೆಂದ ಮಾತನಾಡುವ ನಟ ಗಣೇಶ್, ಮುದ್ದಾಗಿ ಕಾಣುವ ನಾಯಕಿ ಪ್ರಿಯಾ ಆನಂದ್, ನಗಿಸುವ ಸಾಧು ಕೋಕಿಲ, ರಂಗಾಯಣ ರಘು, ರವಿಚೇತನ್, ಖಡಕ್ ವ್ಯಕ್ತಿ ಅವಿನಾಶ್, ಸಿಟ್ಟಾಗುವ ದೇವ್ ಗಿಲ್, ಒಂದಿಷ್ಟು ಅನಾಥ ಜೀವಗಳು. ಇವರೆಲ್ಲ ಒಂದೇ ಮನೆಯವರು. ಎಲ್ಲರು ಒಟ್ಟಾದಾಗ ಗೋಲ್ಡನ್ ಫ್ಯಾಮಿಲಿಯಂತೆ ತೆರೆಯನ್ನು ತುಂಬಿಕೊಳ್ಳುತ್ತದೆ. ಆದರೆ, ಈ ಬಂಗಾರದಂತಹ ಕುಟುಂಬದ ಮೂಲಕ ನಿರ್ದೇಶಕರು ಹೇಳಕ್ಕೆ ಹೊರಟಿರುವ ಕತೆ ಹೇಗಿದೆ ಎಂದು ಕೇಳಿದರೆ ಗೋಲ್ಡ್ ಜತೆ ಸಿಲ್ವರ್ ನೋಡಿದಂತಾಗುತ್ತ.

 ಬಿಗಿತನ ಇಲ್ಲದ ಚಿತ್ರಕಥೆಯಿಂದ ಸಿನಿಮಾ ಒಂದೇ ಕಡೆ ನಿಂತಂತೆ ಅನಿಸುತ್ತದೆ. ಕತೆ ಕೂಡ ತೀರಾ ಹೊಸದೇನು ಅಲ್ಲ. ಕ್ಯಾರೆಕ್ಟರೈಸೇಷನ್, ಸಂಭಾಷಣೆಗಳು, ಹಾಸ್ಯದಿಂದ ಸಿನಿಮಾ ನೋಡಿಸಿಕೊಳ್ಳುತ್ತದೆ. ಎಸ್‌ಎಸ್‌ತಮನ್,
ತೆಲುಗಿನಲ್ಲಿ ಯಶಸ್ವಿ ಸಂಗೀತ ಸಂಯೋಜಕ. ಆದರೆ, ಕನ್ನಡಕ್ಕೆ ಬಂದಾಗ ಅವರ ರಾಗಗಳು ಸಪ್ಪೆ ಅನಿಸುವುದು ಯಾಕೆಂಬ ಪ್ರಶ್ನೆ ‘ಆರೆಂಜ್’ ಚಿತ್ರ ನೋಡಿದಾಗ ಹುಟ್ಟಿಕೊಳ್ಳುತ್ತದೆ. ಆದರೂ ಟೈಮ್ ಪಾಸ್‌ಗಾಗಿ ಗೋಲ್ಡನ್ ಫ್ಯಾಮಿಲಿಯ ಡ್ರಾಮಾ ಚಿತ್ರ ನೋಡಬಹುದು. 

ಚಿತ್ರ: ಆರೆಂಜ್

ತಾರಾಗಣ: ಗಣೇಶ್, ಪ್ರಿಯಾ ಆನಂದ್, ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ದೇವ್‌ಗಿಲ್, ಹರೀಶ್ ರಾಜ್, ರವಿಚೇತನ್

ನಿರ್ದೇಶನ: ಪ್ರಶಾಂತ್ ರಾಜ್

ನಿರ್ಮಾಣ: ನವೀನ್

ರೇಟಿಂಗ್: ***